ಆರೋಪಗಳ ನಡುವೆ ಪ್ರಚಾರ ಪ್ರ'ತಾಪ'
ನಂಜನಗೂಡು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ಸುಳಿಗೆ ಸಿಕ್ಕಿರುವ ಕಾಂಗ್ರೆಸ್ ಪಕ್ಷ ಹಣ ಹಾಗೂ ಜಾತಿ ಬಲದೊಂದಿಗೆ ಮತದಾರರನ್ನು ಖರೀದಿಸಲು ತಂತ್ರ ರೂಪಿಸಿದೆ ಎಂದು ಮಾಜಿ ಸಚಿವ ಎಂ.ಮಹದೇವ್ ಆರೋಪಿಸಿದರು.
ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೂ ಸೇರಿ ನಾಲ್ವರು ಸಚಿವರು ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಹಣದ ಹೊಳೆ ಹರಿಸಲು ಆಡಳಿತ ಪಕ್ಷ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಹೇಗಾದರೂ ಸೋಲಿನಿಂದ ತಪ್ಪಿಸಿಕೊಳ್ಳಬೇಕು ಎಂಬ ಇವರ ಆಟ ಫಲಿಸದು. ಮತದಾರ ಪ್ರಭುಗಳು ಇವರಿಗೆ ತಕ್ಕ ಪಾಠ ಕಲಿಸಲು ಸಿದ್ದರಿದ್ದಾರೆ ಎಂದರು.
ಜಾತಿ, ಹಣ, ಹೆಂಡಕ್ಕಿಂತ ರಾಷ್ಟ್ರದ ಭವಿಷ್ಯ ಮುಖ್ಯ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವುದು ನಿಶ್ಚಿತ. ಕಳೆದ 10 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ರೈತರ ಸಾವನ್ನೂ ಅಪಹಾಸ್ಯಕ್ಕೊಳಪಡಿಸುವ ರೈತ ವಿರೋಧಿ ಆಡಳಿತದ ಹಾಗೂ ಮುಖ್ಯಮಂತ್ರಿಗಳ ಅವಶ್ಯಕತೆ ಇಲ್ಲ. ಆತ ಸಾರಾಯಿ ಕುಡಿದೆ ಸತ್ತ ಎಂದಾದರೂ ಅದಕ್ಕೆ ಸರ್ಕಾರವೆ ಜವಾಬ್ದಾರಿ. ಯುಪಿಎ ಸರ್ಕಾರದ 10 ವರ್ಷಗಳ ಅಧಿಕಾರದ ಫಲವಾಗಿ ಪೆಟ್ರೋಲ್, ವಿದ್ಯುತ್ ಸೇರಿದಂತೆ ದಿನ ಬಳಕೆಯ ವಸ್ತುಗಳ ಬೆಲೆ ಮಿತಿ ಮೀರುತ್ತಿದೆ ಎಂದು ಆರೋಪಿಸಿದರು.
ಮಹದೇವು ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರಾದ ಶಿವನಂಜ ನಾಯಕ, ಕೆ. ನಟರಾಜು, ಸೋಮಣ್ಣ, ಶ್ರೀಕಂಠಮೂರ್ತಿ, ಮಹದೇವ ಶೆಟ್ಟಿ ಅವರು ಬಿಜೆಪಿ ಸೇರಿದರು.
ಮೋದಿ ಅಲೆ ಒಪ್ಪಿಕೊಳ್ಳದ ಕಾಂಗ್ರೆಸ್ಸಿಗರು
ಟಿ. ನರಸೀಪುರ: ದೇಶದೆಲ್ಲೆಡೆ ಮೋದಿ ಅಲೆ ಇದ್ದರೂ ಕಾಂಗ್ರೆಸ್ ನಾಯಕರು ಅದನ್ನು ಒಪ್ಪಿಕೊಳ್ಳಲಾಗದೇ ಜನರಿಗೆ ಮೋದಿ ಅಲೆ ಇಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ಹೇಳಿದರು. ಪಟ್ಟಣದ ಕಾಲೇಜು ವೃತ್ತದಲ್ಲಿ ಗುರುವಾರ ಲೋಕಸಭಾ ಚುನಾವಣೆಯ ವರುಣ ವಿಧಾನಸಭಾ ಕ್ಷೇತ್ರದ ಬಹಿರಂಗ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಗುಜರಾತ್ ಅಭೂತಪೂರ್ವ ಅಭಿವೃದ್ಧಿ ಕಂಡಿದೆ. ದೇಶದ ಜನರು ಕೇಂದ್ರದಲ್ಲಿ ಸರ್ಕಾರವನ್ನು ಬದಲಾವಣೆ ಮಾಡಿ, ನರೇಂದ್ರ ಮೋದಿ ನಾಯಕತ್ವದ ಬಿಜೆಪಿಗೆ ಅಧಿಕಾರ ನೀಡಲು ಒಲವು ವ್ಯಕ್ತಪಡಿಸುತ್ತಿದ್ದಾರೆ. ಸಮೀಕ್ಷೆಗಳ ಮೂಲಕ ಜನಾಭಿಪ್ರಾಯ ಬಹಿರಂಗಗೊಂಡರೂ ಕೈ ಪಕ್ಷದ ಮುಖಂಡರು, ಮೋದಿ ಅಲೆ ಒಪ್ಪಲು ಸಿದ್ಧರಿಲ್ಲ ಎಂದು ತಿಳಿಸಿದರು.
ವರುಣದಲ್ಲಿ ಮುಖ್ಯಮಂತ್ರಿ ಹಾಗೂ ನರಸೀಪುರದಲ್ಲಿ ಲೋಕೋಪಯೋಗಿ ಸಚಿವರೇ ಇದ್ದರೂ ಸಹ, ಎರಡೂ ಕ್ಷೇತ್ರಗಳಲ್ಲಿಯೂ ಒಂದು ರಸ್ತೆಯು ಹೊಸದಾಗಿ ಅಭಿವೃದ್ಧಿಗೊಂಡಿಲ್ಲ. ಹಿಂದಿನ ಬಿಜೆಪಿ ಸರ್ಕಾರ ನೀಡಿದ್ದ ಅನುದಾನದಲ್ಲಿ ಕಾಮಗಾರಿಗಳು ಪೂರ್ಣಗೊಂಡಿವೆ. ವರುಣ ವಿಧಾನಸಭಾ ಕ್ಷೇತ್ರದ ಜನರು ಕಳೆದ ಚುನಾವಣೆಯಲ್ಲಿ ನನ್ನನ್ನು ಶಾಸಕರನ್ನಾಗಿ ಚುನಾಯಿಸಲಿಲ್ಲ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರು ಸಂಸದರಾಗಿ ಚುನಾಯಿತರಾದರೆ, ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶವಿದೆ. ಆದ್ದರಿಂದ ಬಿಜೆಪಿ ಬೆಂಬಲಿಸಿ ಕೃಷ್ಣಮೂರ್ತಿ ಅವರನ್ನು ಚುನಾಯಿಸಬೇಕೆಂದು ಮನವಿ ಮಾಡಿದರು.
ಬ್ಲಾಕ್ಮೇಲ್: ಸಿಎಂ ಹಾಗೂ ಲೋಕೋಪಯೋಗಿ ಸಚಿವರಿಬ್ಬರ ಪುತ್ರರ ವಿರುದ್ಧ ಆರೋಪ ಮಾಡುವವರ ಮನೆಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಕೆಲವು ಕಾಂಗ್ರೆಸ್ ಮುಖಂಡರು ಪ್ರತಿಪಕ್ಷದ ಬಿಜೆಪಿ ನಾಯಕರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಕ್ರಮ, ಅನ್ಯಾಯಗಳ ವಿರುದ್ಧ ಪ್ರತಿಯೊಬ್ಬರಿಗೂ ಧ್ವನಿ ಎತ್ತುವ ಅವಕಾಶವಿದೆ. ಸಿಎಂ ಹಾಗೂ ಸಚಿವರ ಮಕ್ಕಳಿಬ್ಬರು ಮರಳು ದಂಧೆ ಹಾಗೂ ವರ್ಗಾವಣೆಯ ಬಗ್ಗೆ ಮಾಹಿತಿ ಇರುವುದರಿಂದಲೇ ಈಶ್ವರಪ್ಪ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಮುಂದಾದರೆ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕೈಕಟ್ಟಿ ಕೂರುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದರು.
ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಕಾ.ಪು. ಸಿದ್ದವೀರಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ್, ಭೈರಾಪುರ ಗ್ರಾಪಂ ಮಾಜಿ ಅಧ್ಯಕ್ಷ ಬಿ. ವೀರಭದ್ರಪ್ಪ, ವರುಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂ.ವೆಂಕಟರಮಣಶೆಟ್ಟಿ, ವೀರಶೈವ ಮಹಾಸಭಾದ ಅಧ್ಯಕ್ಷ ಕೆ.ಜಿ. ಶಿವಪ್ರಸಾದ್ ಇದ್ದರು.
ಸಂಸದ ಧ್ರುವ ಪುನರಾಯ್ಕೆಗೆ ಮನವಿ
ಸರಗೂರು: ಲೋಕಸಭಾ ಸದಸ್ಯನಿಗೆ ಇರಬೇಕಾದ ಎಲ್ಲಾ ಅರ್ಹತೆಯೂ ಸಂಸದ ಆರ್. ಧ್ರುವನಾರಾಯಣ್ ಅವರಲ್ಲಿ ಇರುವುದರಿಂದ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡಬೇಕು ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಮನವಿ ಮಾಡಿದರು. ಪಟ್ಟಣದ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಮತಯಾಚಿಸಿದರು.
ಸಂಸದರು ಅಧಿವೇಶನದಲ್ಲಿ ಎಷ್ಟು ದಿನ ಹಾಜರಾಗಿದ್ದಾರೆ. ಕ್ಷೇತ್ರದ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದಾರೆಯೇ?.ಅನುದಾನದ ಬಳಕೆ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಹೇಗೆ ಅನುಷ್ಠಾನಗೊಳಿಸಿದ್ದಾರೆ ಎನ್ನುವ ಆಧಾರದ ಮೇಲೆ ಸಂಸದರ ಕೆಲಸವನ್ನು ಲೆಕ್ಕ ಹಾಕಬಹುದು. ಈ ವಿಚಾರದಲ್ಲಿ ಸಂಸದ ಆರ್. ಧ್ರುವನಾರಾಯಣ್ ಅಧಿವೇಶನದಲ್ಲಿ ಶೇ.80 ರಷ್ಟು ಹಾಜರಾಗಿದ್ದಾರೆ. ಸುಮಾರು 600 ಪ್ರಶ್ನೆಗಳನ್ನು ಕೇಳುವ ಮತ್ತು ಲಿಖಿತ ರೂಪದಲ್ಲಿ ಕೇಂದ್ರ ಸರ್ಕಾರದ ಗಮನಕ್ಕೆ ಕ್ಷೇತ್ರದ ಸಮಸ್ಯೆಗಳನ್ನು ತಂದಿರುವುದಾಗಿ ತಿಳಿಸಿದರು.
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಸಂಸದನಾಗಿ ಆಯ್ಕೆಯಾದ ನಂತರ ಎಚ್.ಡಿ. ಕೋಟೆ ತಾಲೂಕಿಗೆ ಹೆಚ್ಚಿನ ಅನುದಾನ ಕೊಟ್ಟಿದ್ದೇನೆ. 32 ಗ್ರಾಪಂಗಳಿಗೂ ಭೇಟಿ ನೀಡಿದ್ದೇನೆ. ಕೇಂದ್ರ ಸರ್ಕಾರದ ಅನುದಾನದ ಬಳಕೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತಾಲೂಕಿಗೆ 13 ಕೋಟಿ ವೆಚ್ಚದಲ್ಲಿ ಏಕಲವ್ಯ ಶಾಲೆ ಮತ್ತು ತಂಬಾಕು ಮಂಡಳಿಗೆ 6 ಕೋಟಿ ವೆಚ್ಚದ ಹೊಸ ಫ್ಲಾಟ್ ಫಾರಂ, ಸುಮಾರು 7 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಯೋಜನೆಯಡಿ ಸರ್ಕಾರಿ ಪ್ರೌಢಶಾಲೆಗಳಿಗೆ ಶಾಲಾ ಕೊಠಡಿಗಳ ಕಾಮಗಾರಿ ಕೈಗೊಂಡಿರುವುದಾಗಿ ತಿಳಿಸಿದರು.
ಇದೆ ವೇಳೆ ನಿವೃತ್ತ ಡಿವೈಎಸ್ಪಿ ವಿಜಯಕುಮಾರ್, ಮುಖಂಡ ಚಂದ್ರು, ಬಡಗಲಪುರ ಅಶೋಕ್ ಕಾಂಗ್ರೆಸ್ಗೆ ಸೇರ್ಪಡೆಯಾದರು. ಪಟ್ಟಣದ ಮೊದಲ ಮತ್ತು ಎರಡನೆ ಮುಖ್ಯ ರಸ್ತೆಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಸಚಿವ ಎಚ್.ಎಸ್. ಮಹದೇವಪ್ರಸಾದ್ ಮತ್ತು ಆರ್. ಧ್ರುವನಾರಾಯಣ್ ಇದ್ದರು. ಮಾಜಿ ಶಾಸಕ ಚಿಕ್ಕಣ್ಣ, ಎಂಡಿಎ ಮಾಜಿ ಅಧ್ಯಕ್ಷ ಗೋವಿಂದರಾಜು, ಚಲನಚಿತ್ರ ನಿರ್ಮಾಪಕ ಚಿನ್ನೇಗೌಡ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಕೆಪಿಸಿಸಿ ಸದಸ್ಯ ಡಿ.ಸುಂದರದಾಸ್, ಜಿಪಂ ಸದಸ್ಯೆ ನಂದಿನಿ ಚಂದ್ರಶೇಖರ್ ಇದ್ದರು.
ಮೋದಿ ಅಲೆ ಮಾಧ್ಯಮ ಸೃಷ್ಟಿ
ಸರಗೂರು: ರಾಜ್ಯದಲ್ಲಿ ಮೋದಿ ಅಲೆ ಇಲ್ಲ. ಅದು ಕೇವಲ ಮಾಧ್ಯಮಗಳ ಸೃಷ್ಟಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಅತಿ ಹೆಚ್ಚು ಇದೆ. ಗುಜರಾತ್ ಅಭಿವೃದ್ಧಿ ಏನು ಎಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಕೊಟ್ಟ ಭರವಸೆಗಳಲ್ಲಿ ಶೇ.70ರಷ್ಟನ್ನು ಈಡೇರಿಸಿದೆ. ಕೇಂದ್ರ ಸರ್ಕಾರ ಚಾಮರಾಜನಗರ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಸುಮಾರು 5 ಸಾವಿರ ಕೋಟಿ ಅನುದಾನ ನೀಡಿದೆ ಎಂದರು. ಎ.ಆರ್. ಕೃಷ್ಣಮೂರ್ತಿ ಅವರ ಮೇಲೆ ಜನರಿಗೆ ಯಾವುದೆ ಅನುಕಂಪ ಇಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

