ನೆಲಕ್ಕಿಳಿದ ಗೌತಮ ಮಹಾರಥ ಚಕ್ರ
-ನಂಜನಗೂಡು ಮೋಹನ್
ನಂಜನಗೂಡು: ಪ್ರಮುಖ ಆಕರ್ಷಣೆಯಾದ ಗೌತಮ ಮಹಾರಥದ ಚಕ್ರ ನೆಲದಲ್ಲಿ ಹೂತು ಹೋದ ಪರಿಣಾಮವಾಗಿ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಶುಕ್ರವಾರ ಪುರಾಣೇತಿಹಾಸ ಪ್ರಸಿದ್ಧ ಪಂಚ ಮಹಾರಥೋತ್ಸವ ಸಂಭ್ರಮಕ್ಕೆ ಅಡಚಣೆ ಉಂಟಾಯಿತು.
ಬೆಳಗ್ಗೆ 5.20ಕ್ಕೆ ರಥಾರೋಹಣ ಸಂಪ್ರದಾಯ ನೆರವೇರಿತಾದರೂ ರಥೋತ್ಸವದ ಕೊನೆಯ ರಥವಾದ ಅಮ್ಮನವರ ರಥ ಸ್ವಸ್ಥಾನ ಸೇರುವ ಹೊತ್ತಿಗೆ ಮಧ್ಯಾಹ್ನ ನಾಲ್ಕು ಗಂಟೆ. ಶ್ರೀಕಂಠೇಶ್ವರ ಸ್ವಾಮಿ ಅವರನ್ನು ಹೊತ್ತ ಗೌತಮ ರಥದ ಬೃಹತ್ತಾದ ಎರಡು ಎಡಚಕ್ರಗಳು ಬಜಾರ್ ರಸ್ತೆಯ ವಿಜಯ ಬ್ಯಾಂಕ್ ಮಂಭಾಗದಲ್ಲಿ ಎರಡು ಬಾರಿ ನೆಲದಲ್ಲಿ ಹೂತು ಭಕ್ತರಲ್ಲಿ ತೀವ್ರ ಆತಂಕ ಉಂಟು ಮಾಡಿತು.
ಪ್ರಾರಂಭದಲ್ಲಿ ನಿರಾತಂಕವಾಗಿ ಚಲಿಸಿದ ಗೌತಮ ರಥಕ್ಕೆ ಅವಘಡ ಎದುರಾದುದ್ದೆ ಇಲ್ಲಿ. ಬೆಳಗ್ಗೆ ಸುಮಾರು 8.15ರ ಸಮಯದಲ್ಲಿ ಒಮ್ಮೆ, ನೆಲಕಚ್ಚಿದ ದೊಡ್ಡ ತೇರು ಎಂದೇ ಕರೆಯಲ್ಪಡುವ ಗೌತಮ ರಥ ಸ್ವಲ್ಪ ಸಮಯದಲ್ಲೆ ಮೇಲೆದ್ದು ಚಲಿಸಿತಾದರೂ ಕೇವಲ ಹತ್ತು ಹದಿನೈದು ಅಡಿಗಳ ದೂರದಲ್ಲಿ ಮತ್ತೊಮ್ಮೆ ನೆಲದಲ್ಲಿ ಹೂತು, ನಂತರ 4 ಗಂಟೆ ಕಾಲ ಜಪ್ಪಯ್ಯ ಎಂದರೂ ಅಲ್ಲಾಡಲಿಲ್ಲ. ಜೆಸಿಬಿ ಯಂತ್ರಗಳೂ ಉಪಯೋಗಕ್ಕೆ ಬರಲಿಲ್ಲ. ರೇಲ್ವೆ ಇಲಾಖೆಯ ಶಕ್ತಿಯುತ ಕ್ರೇನ್ ಮೈಸೂರಿನಿಂದ ಬಂದ ನಂತರವಷ್ಟೇ ಪ್ರಯತ್ನ ಫಲನೀಡಿತು. ನಂತರ ರಥ ತನ್ನ ನೆಲೆ ಸೇರುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ.
ಅಮ್ಮನವರಿಗೆ ಭಕ್ತರ ಕೊರತೆ: ಅಷ್ಟರಲ್ಲಾಗಲೆ ಬಿಸಿಲಿನ ತಾಪಕ್ಕೆ ಭಕ್ತರು ಹೈರಾಣಾಗಿದ್ದರು. ಅಮ್ಮನವರ ರಥಚಾಲನೆ ಬಾಕಿ ಉಳಿದಿತ್ತು. ಕಾದ ಹೆಂಚಿನಂತಾಗಿದ್ದ ರಸ್ತೆಯಲ್ಲಿ ರಥ ಎಳೆಯಲು ಭಕ್ತರು ಮುಂದಾಗಲಿಲ್ಲ. ಸಂಜೆ ಬಿಸಿಲಿನ ಬೇಗೆ ಕಡಿಮೆಯಾದ ನಂತರ ಅಮ್ಮನವರ ರಥಕ್ಕೆ ಚಾಲನೆ ನೀಡಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿತು. ಇದ್ದ ಜನರನ್ನೇ ಹುರಿದುಂಬಿಸಿ ರಥ ಎಳೆಯಲು ಮನ ಒಲಿಸಲಾಯಿತು. ತುಂಡಾಗಿದ್ದ ಹಗ್ಗವನ್ನೇ ಹಿಡಿದು ಭಕ್ತರು ರಥ ಎಳೆದರು. ಸಿದ್ದರಾಜು ಎಂಬ ಯುವಕನ ಕಾಲಿಗೆ ರಥದ ಹಿಂಬದಿಯ ಎತ್ತನೆ ಮರ ತಾಗಿ ಕಾಲಿಗೆ ಗಾಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

