ಸೋನಿಯಾಗಾಂಧಿ ಧೈರ್ಯ ಮೆಚ್ಚಿ ಮತ ನೀಡಿ: ಸರೋಜಮ್ಮ ದಾಸಪ್ಪ
ಮೈಸೂರು: ಸ್ವಾತಂತ್ರ್ಯ ತಂದುಕೊಡುವಲ್ಲಿ ಪರಿಶ್ರಮಪಟ್ಟ ಕಾಂಗ್ರೆಸ್ ಪಕ್ಷವನ್ನು ಕಾಪಾಡಲು ಸೋನಿಯಾಗಾಂಧಿ ಕಷ್ಟಪಡುತ್ತಿದ್ದಾರೆ. ಅವರ ಧೈರ್ಯ ಮೆಚ್ಚಿ ನಾವೆಲ್ಲ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಮಾಜಿ ಸಂಸದ ದಿ. ಎಚ್.ಡಿ. ತುಳಸಿದಾಸ್ ದಾಸ್ ಅವರ ಪತ್ನಿ ಸರೋಜಮ್ಮ ದಾಸಪ್ಪ ಮನವಿ ಮಾಡಿದರು.
ನೆಹರು ಅವರ ಕುಟುಂಬದಿಂದ ಬಂದ ಸೋನಿಯಾಗಾಂಧಿ ದೇಶಕ್ಕಾಗಿ ತನ್ನ ಅತ್ತೆ, ಗಂಡನನ್ನು ಕಳೆದುಕೊಂಡರು. ಎಷ್ಟೋ ಪಕ್ಷಗಳು ಅವರಿಗೆ ತೊಂದರೆ ನೀಡಿದರೂ ಸಹ ದಿಟ್ಟ ಹೆಜ್ಜೆ ಇಟ್ಟು ಪಕ್ಷ ಕಟ್ಟುತ್ತಿದ್ದಾರೆ. ಮಗನಿಗೂ ತೊಂದರೆಯಾಗಬಹುದು ಎಂಬ ಅರಿವಿದ್ದರೂ ಮುಂದೆ ಬಂದಿದ್ದಾರೆ. ಅವರ ಧೈರ್ಯವನ್ನು ಮೆಚ್ಚಿ, ಈ ನಾಡಿನ ಸಮೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಈಗ ಏನಾದರೂ ಗಾಂಧಿ ತತ್ವ ಉಳಿದಿದೆ ಎನ್ನುವುದಾದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ. ದೇಶದಲ್ಲಿ ಕಾಂಗ್ರೆಸ್ ಅಲ್ಲದೇ ಬೇರೆ ಯಾವ ಪಕ್ಷ ಬಂದರೂ ದುರಂತ ಸಂಭವಿಸುತ್ತದೆ. ಮತದಾರರು ಈ ಬಾರಿ ತುಂಬಾ ಯೋಚನೆ ಮಾಡಿ ತಮ್ಮ ಮತವನ್ನು ಕಾಂಗ್ರೆಸ್‌ಗೆ ನೀಡಿದರೆ ಶಾಂತಿ ನೆಲೆಸುತ್ತದೆ. ಕಳೆದ ವರ್ಷಗಳಿಂದ ಸಂಸತ್ತಿನ ಮೈಸೂರಿನ ಬಗ್ಗೆ ದನಿ ಎತ್ತಿರುವ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕು. ಅವರಿಗೆ 40 ವರ್ಷಗಳ ಅನುಭವವಿದೆ. ಹೊಸ ಅಭ್ಯರ್ಥಿಗೆ ಮತ ನೀಡಿದರೆ ಸಮಯ ವ್ಯರ್ಥವಾಗುತ್ತದೆ ಎಂದರು.
ತಮ್ಮ ಪತಿ ತುಳಸಿದಾಸ್ ದಾಸಪ್ಪ ಅವರು ಚುನಾವಣೆ ನಿಂತಿದ್ದಾಗ ನಮ್ಮ ಮನೆಯಲ್ಲಿ 1 ಲಕ್ಷ ಕರಪತ್ರದ ಬಂಡಲ್ ಇತ್ತು. ಆಗ ಮನೆಗೆ ಬಂದ ವಿಶ್ವನಾಥ್ ಅಷ್ಟೂ ಪತ್ರಗಳನ್ನು ತೆಗೆದುಕೊಂಡು ಹೋಗಿ ಕೆ.ಆರ್. ನಗರ ಸಂತೆಯಲ್ಲಿ ಹಂಚಿದ್ದರು. ಅವರ ಊರಲ್ಲಿ ಸಾಮೂಹಿಕ ವಿವಾಹ ಮಾಡಿರುವುದು ನನಗೆ ಮೆಚ್ಚುಗೆಯಾಗಿದೆ. ಕಡು ಬಡತನದಲ್ಲಿ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ, ಕ್ಷೀರಭಾಗ್ಯ ತಂದು ನಾಡಿನ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ. ಅವರು ಮೈಸೂರಿನವರಾಗಿರುವುದರಿಂದ ನಮಗೆಲ್ಲ ಹೆಮ್ಮೆ ಇರಬೇಕು. ಮೈಸೂರನ್ನು ಗೆಲ್ಲಿಸಿ ಅವರ ಕಿರೀಟಕ್ಕೆ ಗರಿಯನ್ನಾಗಿ ಕೊಡುಗೆ ನೀಡಬೇಕು ಎಂದು ಕೋರಿದರು.
ಬಿಜೆಪಿಯವರು ಗೋಡ್ಸೆ ವಂಶದವರು: ಮಾಜಿ ಮೇಯರ್ ಬಿ.ಕೆ. ಪ್ರಕಾಶ್ ಮಾತನಾಡಿ, ಭ್ರಷ್ಟಾಚಾರ ಎಂಬುದು ಕಾಂಗ್ರೆಸ್ ಅವರ ವಂಶದಲ್ಲಿದೆ ಎಂದು ಮೋದಿ ಹೇಳಿದ್ದಾರೆ. ಅದು ಸುಳ್ಳು. ಕಾಂಗ್ರೆಸ್ ವಂಶವಾಹಿನಿಯಲ್ಲಿ ಗಾಂಧೀಜಿ, ನೆಹರು ಅವರ ಚಹರೆ ಇದೆ. ಅದೇ ಬಿಜೆಪಿಯಲ್ಲಿ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಯ ವಂಶವಾಹಿ ಇದೆ. ಆರ್‌ಎಸ್‌ಎಸ್‌ನಲ್ಲಿ ತುಂಬಾ ಕ್ರೌರ್ಯ ತುಂಬಿದೆ ಎಂದು ಜರಿದರು. ಮೈಸೂರು- ಕೊಡಗು ಒಕ್ಕಲಿಗರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಎಂ. ಲಕ್ಷ್ಮಣ್, ಮಾಜಿ ಮೇಯರ್ ಮೋದಾಮಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

