ಮೈಸೂರು

ಬನ್ನೂರಿನಲ್ಲಿ ಬಿಎಸ್ಪಿ ಮತಯಾಚನೆ

Published On :

ಟಿ. ನರಸೀಪುರ: ಬನ್ನೂರಿನಲ್ಲಿ ಬಿಎಸ್ಪಿ ಪದಾಧಿಕಾರಿಗಳು ಪಾದಯಾತ್ರೆ ನಡೆಸಿ ಚಾಮರಾಜನಗರ ಲೋಕಸಭೆ ಬಿಎಸ್ಪಿ ಅಭ್ಯರ್ಥಿ ಎನ್. ಶಿವಮಲ್ಲು ಪರ ಮತಯಾಚಿಸಿದರು. ಪಟ್ಟಣದ ಜೈ ಭೀಮ್ ನಗರದಿಂದ ಪಾದಯಾತ್ರೆ ಆರಂಭಿಸಿದ ಬಿಎಸ್ಪಿ ಪದಾಧಿಕಾರಿಗಳು ತ್ಯಾಗರಾಜ ನಗರ, ಕಾವೇರಿ ವೃತ್ತ ಹಾಗೂ ಶ್ರೀರಂಗಪಟ್ಟಣ ಮುಖ್ಯ ರಸ್ತೆಯಲ್ಲಿ ಪಾದಯಾತ್ರೆ ನಡೆಸಿ ಸ್ಥಳೀಯ ನಿವಾಸಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಗೆ ಕರಪತ್ರ ವಿತರಿಸಿ, ಮತಯಾಚಿಸಿದರು.

ವಿದ್ಯಾರ್ಥಿಗಳಿಂದ ಮತ ಜಾಗೃತಿ
ಹುಣಸೂರು: ಲೋಕಸಭಾ ಚುನಾವಣೆ ಅಂಗವಾಗಿ ಪಟ್ಟಣದ ಡಿ.ದೇವರಾಜ ಅರಸು ಕಾಲೇಜಿನ  ವಿದ್ಯಾರ್ಥಿಗಳು ಭಾನುವಾರ ಸೈಕಲ್ ರ್ಯಾಲಿ ಮೂಲಕ ಜನರಲ್ಲಿ ಮತದಾನ ಜಾಗೃತಿ ಮೂಡಿಸಿದರು. ಹುಣಸೂರಿನಿಂದ ಮಡಿಕೇರಿಯವರೆಗೆ 150 ಕಿಮೀ ಸೈಕಲ್ ಚಾರಣದಿಂದ ಮತದಾನ ಜಾಗೃತಿ ಉದ್ದೇಶದನ್ವಯ ಭಾರತ್ ಸ್ಕೌಟ್ಸ್ ಸಹಯೋಗದೊಂದಿಗೆ  ತೆರಳಿದರು. ಪ್ರಾಂಶುಪಾಲ ಲೋಹಿತಾಶ್ವ ಚಾಲನೆ ನೀಡಿದರು. ಹುಣಸೂರಿಂದ ಪಿರಿಯಾಪಟ್ಟಣ, ಕುಶಾಲನಗರ, ಸುಂಟಿಕೊಪ್ಪ ಮೂಲಕ ಮಡಿಕೇರಿ ತಲುಪಿತು.

ಎಆರ್‌ಕೆ ಬೆಂಬಲಿಸಲು ಮನವಿ
ನಂಜನಗೂಡು: ಸಂತೇಮರಳ್ಳಿ ಕ್ಷೇತ್ರದಿಂದ ಕೇವಲ ಒಂದು ಮತದ ಅಂತರದಿಂದ ಸೋತಿರುವ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಅವರಿಗೆ ಈ ಬಾರಿ ಹೆಚ್ಚಿನ ಮತ ನೀಡುವಂತೆ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಎಸ್. ಮಹದೇವಯ್ಯ ಮನವಿ ಮಾಡಿದರು. ತಾಲೂಕಿನ ಬದನವಾಳು ಗ್ರಾಪಂ ವ್ಯಾಪ್ತಿಯ ದೇವರಸನಹಳ್ಳಿ, ಉಪ್ಪನಹಳ್ಳಿ, ಹೊಸೂರು, ಹೊಸಪುರ, ಸಿಂಗಾರಿಪುರ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿದರು.

'ರಮ್ಯಾ ಗೆಲವಿಗೆ ಕಾಂಗ್ರೆಸ್ ಸಾಧನೆಯೇ ಬೆಂಬಲ'
ಕೆ.ಆರ್. ನಗರ:  ರಾಜ್ಯ ಸರ್ಕಾರ ಬಡವರ ಪರವಾದ ಯೋಜನೆಗಳನ್ನು ಜಾರಿಗೊಳಿಸಿದ್ದು ಇದರಿಂದ ಬಡ ಜನರಿಗೆ ಆಹಾರ ಸಮಸ್ಯೆ ನೀಗಿಸಿದಂತಾಗಿದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಗೆಲವು ಖಚಿತ ಎಂದು ಎಪಿಎಂಸಿ ಉಪಾಧ್ಯಕ್ಷ ತೋಟಪ್ಪ ನಾಯಕ ಹೇಳಿದರು. ತಾಲೂಕಿನ ಮಳಲಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಪರ ಮತಯಾಚಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಸರ್ಕಾರ ಪ.ಜಾತಿ, ಪ.ವರ್ಗದ ಸಮಾಜದವರು ಪಡೆದಿರುವ ಸಾಲ ಮನ್ನಾ ಮಾಡಿದ್ದು, ಇದರಿಂದ ರಾಜ್ಯದ ಜನತೆ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ ಎಂದರು. ತಾಲೂಕು ನಾಯಕ ಸಮಾಜದ ಮುಖಂಡ ಸುರೇಶ್ ನಾಯಕ, ಕೃಷ್ಣ ನಾಯಕ, ಯಶೋಧಮ್ಮ, ರಮೇಶ್, ಹೆಬ್ಬಾಳು ಸೋಮಶೇಖರ್, ದೊಡ್ಡೇಕೊಪ್ಪಲು ಮಹದೇವ ನಾಯಕ ಇದ್ದರು.

ಮತದಾನ ಜಾಗೃತಿ
ಮೈಸೂರು: ಜಾತಿ ಮುಕ್ತ ದೇಶ, ಜಾತಿ ಮುಕ್ತ ಮತದಾನ ಮಾಡುವ ಸಂಬಂಧ ಕರಪತ್ರಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸಮಾಜ ರಕ್ಷಣಾ ವೇದಿಕೆಯ ಅಧ್ಯಕ್ಷ ಅಯೂಬ್‌ಖಾನ್ ಹೇಳಿದರು. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಪುರಷ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಇದೆ. ಪಕ್ಷ ಮರೆತು ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಸೂಕ್ತರಲ್ಲದಿದ್ದರೇ ಕಡೆಯಲ್ಲಿರುವ ಬಟನ್ ಒತ್ತಬಹುದು. ಭ್ರಷ್ಟ ರಾಜಕಾರಣಿಗಳ ಮಾತುಗಳಿಗೆ ಬಲಿಯಾಗದೆ ಮತದಾನ ಮಾಡಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡುವಂತೆ ಕಿವಿಮಾತು ಹೇಳಿದರು. ವೇದಿಕೆ ಪದಾಧಿಕಾರಿಗಳಾದ ರಘು, ಶ್ರೀನಿವಾಸ್, ದೇವದತ್ತ, ಅಕ್ರಂ ಪಾಷ, ಬಚ್ಚನ್ ಇದ್ದರು.

ರು. 3.99 ಲಕ್ಷ ವಶ
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರು.3.99 ಲಕ್ಷ ನಗದನ್ನು ಸೆಕ್ಟರ್ ಮ್ಯಾಜಿಸ್ಟ್ರೇಟ್  ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಮೈಸೂರು ತಾಲೂಕಿನ ಮೈದನಹಳ್ಳಿ ಬಳಿ ತಪಾಸಣೆ ನಡೆಸಿದಾಗ ಬಸ್‌ನಲ್ಲಿದ್ದ ಕಿಶೋರ್ ಪುರೋಹಿತ್ ಎಂಬುವರ ಬಳಿ ದಾಖಲೆ ಇಲ್ಲದ ಹಣ ಸಿಕ್ಕಿದೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಪು ಘರ್ಷಣೆ
ಮೈಸೂರು: ಚುನಾವಣಾ ಪ್ರಚಾರದ ವೇಳೆ ಕ್ಷುಲ್ಲಕ ವಿಚಾರಕ್ಕಾಗಿ ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸತ್ಯನಗರದಲ್ಲಿ ಭಾನುವಾರ ಘರ್ಷಣೆ ನಡೆದಿದೆ. ಉದಯಗಿರಿ ಠಾಣೆ ವ್ಯಾಪ್ತಿಯ ಸತ್ಯನಗರದಲ್ಲಿ ಎರಡೂ ಗುಂಪಿನವರು ಬಡಿದಾಡಿಕೊಂಡಿದ್ದಾರೆ. ಪ್ರಚಾರದ ವೇಳೆ ಪರಸ್ಪರ ಆರೋಪ ಮಾಡಿದ್ದೆ ಘರ್ಷಣೆಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಚದುರಿಸಿದ್ದಾರೆ.

ವ್ಯಕ್ತಿಗೆ ಇರಿತ
ಮೈಸೂರು: ಕೇಬಲ್ ವಿಚಾರದಲ್ಲಿ ಉಂಟಾದ ಗಲಾಟೆಯಲ್ಲಿ ಒಂದು ಗುಂಪಿನವರು ಮತ್ತೊಂದು ಗುಂಪಿನ ವ್ಯಕ್ತಿಗೆ ಚಾಕುವಿನಿಂದ ಇರಿದಿರುವ ಘಟನೆ ಇಟ್ಟಿಗೆಗೂಡಿನಲ್ಲಿ ಭಾನುವಾರ ನಡೆದಿದೆ. ಸಂತೋಷ್ ಎಂಬಾತ ಚಾಕುವಿನಿಂದ ಇರಿತಕ್ಕೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೆಎಸ್‌ಎಸ್ ಬಡಾವಣೆಯಲ್ಲಿ ಸಂತೋಷ್ ಕೇಬಲ್ ನಿರ್ವಹಣೆ ಮಾಡುತ್ತಿದ್ದರು. ಸಂತೋಷ್‌ಗೆ ಸೇರುವ ವ್ಯಾಪ್ತಿಯಲ್ಲಿ ಕೇಬಲ್ ಎಳೆದಿದ್ದು ಈ ಘರ್ಷಣೆಗೆ ಕಾರಣ ಎನ್ನಲಾಗಿದೆ. ಮಹದೇವ, ಲಿಂಗಣ್ಣ, ಶಂಕರ ಮತ್ತು ಮೂರ್ತಿ ಎಂಬುವರೇ ಘಟನೆಗೆ ಕಾರಣ ಎಂದು ಸಂತೋಷ್ ಕುಟುಂಬ ದೂರು ನೀಡಿದೆ. ನಜರ್‌ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.