ಮೈಸೂರು

ಸಿಡಿಲಿಗೆ ಪೆಟ್ಟು

Published On :

ದೂರ ಗ್ರಾಮ (ಮೈಸೂರು ತಾ): ಶನಿವಾರ ರಾತ್ರಿ ಸಿಡಿಲು ಬಡಿತಕ್ಕೆ ಮಹಿಳೆಯೊಬ್ಬರ ತಲೆಗೆ ತೀವ್ರ ಪೆಟ್ಟಾಗಿದ್ದು, ಮನೆಯ ಛಾವಣಿ ಮುರಿದು ಬಿದ್ದಿರುವ ಘಟನೆ ತಾಲೂಕಿನ ಜಯಪುರ ಹೋಬಳಿಯ ಮಾವಿನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾವಿನಯಳ್ಳಿಯ ತೋಟವೊಂದರಲ್ಲಿ ಚೌಡೇಗೌಡ ಮತ್ತು ಸುಬ್ಬಮ್ಮ ಎಂಬುವರು ಮನೆ ಮಾಡಿಕೊಂಡು ವಾಸವಾಗಿದ್ದರು.ರಾತ್ರಿ ಬಡಿದ ಸಿಡಿಲಿಗೆ ಸುಬ್ಬಮ್ಮ ತಲೆಗೆ ಪೆಟ್ಟು ಬಿದ್ದಿದ್ದು, 8 ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಲಾಗಿದೆ. ಭಾನುವಾರ ಬೆಳಗ್ಗೆ ಸ್ಥಳಕ್ಕೆ ತಹಸೀಲ್ದಾರ್ ನವೀನ್ ಜೋಸೆಫ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತೆಂಗು ಕಳವು: ಸೆರೆ
ಪಿರಿಯಾಪಟ್ಟಣ: ಗೋದಾಮಿನಲ್ಲಿ ಸಂಗ್ರಹಿಸಿದ್ದ ತೆಂಗಿನಕಾಯಿ ಕಳವು ಮಾಡಿದ್ದ ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ಮುತ್ತೂರು ಗ್ರಾಮದ ಸುನಿಲ್ ಬಂಧಿತ ಆರೋಪಿ. ಪಟ್ಟಣದ ಬಿ.ಎಂ. ರಸ್ತೆ ಹೊಂದಿಕೊಂಡಿರುವ ಗಾಂಧಿನಗರ ಗೋದಾಮಿನಲ್ಲಿ ಗುರುಮಲ್ಲೇಶ್ ಎಂಬವರು ಗೋದಾಮಿನಲ್ಲಿ ಚೀಲಗಳಲ್ಲಿ ತುಂಬಿಟ್ಟಿದ್ದ ರು. 11,500 ಬೆಲೆ ಬಾಳುವ ತೆಂಗಿನಕಾಯಿಗಳನ್ನು ಸುನಿಲ್ ಕಳ್ಳತನ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್‌ಐ ರಫೀಕ್, ಸಿಬ್ಬಂದಿ ಅಸ್ಲಾಂಪಾಷಾ, ಉಮೇಶ್ ಭಾಗವಹಿಸಿದ್ದರು.

ಯುವಕ ನಾಪತ್ತೆ
ಟಿ. ನರಸೀಪುರ: ತಾಲೂಕಿನ ಕಾಳಬಸವಹುಂಡಿ ಗ್ರಾಮದಲ್ಲಿ ಬುದ್ಧಿಮಾಂದ್ಯ ಯುವಕ, ಲೇಟ್ ಮಾರನಾಯಕ ಎಂಬುವರ ಪುತ್ರ ರಾಚನಾಯ್ಕ ಉರುಫ್ ಪಿರುಳ್ಳಿ ಎಂಬ  ಯುವಕ ಏ.1 ರಿಂದ ಕಾಣೆಯಾಗಿದ್ದಾನೆ. ಚಹರೆ ಇಂತಿದೆ: 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ಸಾಧಾರಾಣ ಮೈಕಟ್ಟು, ಕಪ್ಪು ಕೂದಲು ಹೊಂದಿದ್ದಾನೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ದೂ. 0821- 2520040, 08227- 273369 ತಿಳಿಸುವಂತೆ ತಲಕಾಡು ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮತದಾನ ಜಾಗೃತಿ
ಮೈಸೂರು: ಜಾತಿ ಮುಕ್ತ ದೇಶ, ಜಾತಿ ಮುಕ್ತ ಮತದಾನ ಮಾಡುವ ಸಂಬಂಧ ಕರಪತ್ರಗಳ ಮೂಲಕ ಮತದಾರರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸಮಾಜ ರಕ್ಷಣಾ ವೇದಿಕೆಯ ಅಧ್ಯಕ್ಷ ಅಯೂಬ್‌ಖಾನ್ ಹೇಳಿದರು. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಪುರಷ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಇದೆ. ಪಕ್ಷ ಮರೆತು ಒಳ್ಳೆಯ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ನಿಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಸೂಕ್ತರಲ್ಲದಿದ್ದರೇ ಕಡೆಯಲ್ಲಿರುವ ಬಟನ್ ಒತ್ತಬಹುದು. ಭ್ರಷ್ಟ ರಾಜಕಾರಣಿಗಳ ಮಾತುಗಳಿಗೆ ಬಲಿಯಾಗದೆ ಮತದಾನ ಮಾಡಬೇಕು. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಮತದಾನ ಮಾಡುವಂತೆ ಕಿವಿಮಾತು ಹೇಳಿದರು. ವೇದಿಕೆ ಪದಾಧಿಕಾರಿಗಳಾದ ರಘು, ಶ್ರೀನಿವಾಸ್, ದೇವದತ್ತ, ಅಕ್ರಂ ಪಾಷ, ಬಚ್ಚನ್ ಇದ್ದರು.

ರು. 3.99 ಲಕ್ಷ ವಶ
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರು.3.99 ಲಕ್ಷ ನಗದನ್ನು ಸೆಕ್ಟರ್ ಮ್ಯಾಜಿಸ್ಟ್ರೇಟ್  ನೇತೃತ್ವದ ತಂಡ ವಶಪಡಿಸಿಕೊಂಡಿದೆ. ಮೈಸೂರು ತಾಲೂಕಿನ ಮೈದನಹಳ್ಳಿ ಬಳಿ ತಪಾಸಣೆ ನಡೆಸಿದಾಗ ಬಸ್‌ನಲ್ಲಿದ್ದ ಕಿಶೋರ್ ಪುರೋಹಿತ್ ಎಂಬುವರ ಬಳಿ ದಾಖಲೆ ಇಲ್ಲದ ಹಣ ಸಿಕ್ಕಿದೆ. ಈ ಸಂಬಂಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಪು ಘರ್ಷಣೆ
ಮೈಸೂರು: ಚುನಾವಣಾ ಪ್ರಚಾರದ ವೇಳೆ ಕ್ಷುಲ್ಲಕ ವಿಚಾರಕ್ಕಾಗಿ ಎಸ್‌ಡಿಪಿಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಸತ್ಯನಗರದಲ್ಲಿ ಭಾನುವಾರ ಘರ್ಷಣೆ ನಡೆದಿದೆ. ಉದಯಗಿರಿ ಠಾಣೆ ವ್ಯಾಪ್ತಿಯ ಸತ್ಯನಗರದಲ್ಲಿ ಎರಡೂ ಗುಂಪಿನವರು ಬಡಿದಾಡಿಕೊಂಡಿದ್ದಾರೆ. ಪ್ರಚಾರದ ವೇಳೆ ಪರಸ್ಪರ ಆರೋಪ ಮಾಡಿದ್ದೆ ಘರ್ಷಣೆಗೆ ಕಾರಣ ಎಂದು ಹೇಳಲಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಚದುರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.