ಮೈಸೂರು

ವಂಚನೆ: ವ್ಯಕ್ತಿ ವಿರುದ್ಧ ದೂರು

Published On :

ಮೈಸೂರು: ಕೆಲಸ ಕೊಡಿಸುವುದಾಗಿ ಹೇಳಿ ಹಲವು ಜನರಿಗೆ ವಂಚನೆ ಮಾಡಿರುವ ಎಲ್. ಸೋಮಣ್ಣ ಎಂಬಾತನ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಬಿಜೆಪಿ ಮುಖಂಡ ಎಂ.ಕೆ. ಪ್ರೇಮ್‌ಕುಮಾರ್ ತಿಳಿಸಿದರು.
 ಮೈಸೂರಿನ ನಿವಾಸಿ ಎಲ್. ಸೋಮಣ್ಣ ಎಂಬಾತ ಬಿಳಿಗಿರಿ ರಂಗನಬೆಟ್ಟದ ನಿವಾಸಿಗಳಾದ ಪಿ. ನಾಗೇಂದ್ರ, ಪಿ. ಬಂಗಾರು, ವಿ. ಶ್ರೀನಿವಾಸಮೂರ್ತಿ ಎಸ್. ನಿರ್ಮಲ ಹಾಗೂ ಎಚ್. ನಾಗೇಶ್ ಅವರಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಲಕ್ಷಾಂತರ ರು. ಹಣ ಪಡೆದು ವಂಚಿಸಿದ್ದಾರೆ. ಈ ಕುರಿತು ನಜರಬಾದಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಇದೇ ವ್ಯಕ್ತಿ ಈಗಾಗಲೇ ಮಾಜಿ ಸಚಿವ ಬಿ. ಶ್ರೀರಾಮಲು ತಮಗೆ ರು. 3 ಕೋಟಿ ವಂಚಿಸಿದ್ದು, ಅದನ್ನು ಕೇಳಿದರೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಅವರ ವಿರುದ್ಧ ಬಳ್ಳಾರಿಯಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದಾರೆ. ಆದರೆ ಅವರ ಬಳಿ ಇದ್ದ ಚೆಕ್ ಕದ್ದು ಅವರ ವಿರುದ್ಧವೇ ಸುಳ್ಳು ದೂರು ನೀಡಿದ್ದಾರೆ ಎಂದರು.
 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಚ್.ಡಿ. ಕೋಟೆಯಿಂದ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋಮಣ್ಣ ಸ್ಪರ್ಧಿಸಿದ್ದರು. ಮೈಸೂರು ಹಾಗೂ ಚಾಮರಾಜನಗರದಲ್ಲಿ ಇದೇ ರೀತಿ ಹಲವರಿಗೆ ಕೆಲಸ ಮಾಡಿಕೊಡುವುದಾಗಿ ಹೇಳಿಕೊಂಡು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.    

ಯುಪಿಎಗೆ ಮೋದಿಯೇ ಪರ್ಯಾಯ: ಚಂದ್ರೇಗೌಡ
ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮಿತ್ರಕೂಟವು 275 ರಿಂದ 280 ಸ್ಥಾನಗಳನ್ನು ಗೆಲ್ಲಲಿದೆ.  ದೇಶದಲ್ಲಿ ಯುಪಿಎಗೆ ಪರ್ಯಾಯ ಅಂತ ಇದ್ದರೆ ಅದು  ನರೇಂದ್ರಮೋದಿ ಮಾತ್ರ ಎಂದು ಬಿಜೆಪಿ ಸಂಸದ ಡಿ.ಬಿ. ಚಂದ್ರೇಗೌಡ ಹೇಳಿದರು. ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಈ ಬಾರಿ ಎರಡಂಕಿ ದಾಟುವುದಿಲ್ಲ ಎಂದು ತಿಳಿಸಿದರು. ಈ ಬಾರಿ ಅಧ್ಯಕ್ಷೀಯ ಮಾದರಿ ಚುನಾವಣೆ ನಡೆಯುತ್ತಿದೆ. 1971ರಲ್ಲಿ ಇಂದಿರಾ ಗಾಂಧಿ ಅವರು ಬಲಿಷ್ಠ ಪ್ರಧಾನಿಯಾಗಿದ್ದರು. ಆದರೆ, ಈಗಿನ ಮನಮೋಹನ್‌ಸಿಂಗ್ ದುರ್ಬಲ ಪ್ರಧಾನಿಯಾಗಿದ್ದಾರೆ. ಬಲಿಷ್ಠ ಭಾರತ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಮತದಾರರು ಬಿಜೆಪಿಗೆ ಮತ ನೀಡುವಂತೆ ಅವರು ಮನವಿ ಮಾಡಿದರು. ಈ ಚುನಾವಣೆಯಲ್ಲಿ 20 ಕೋಟಿ ಯುವ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ ಎಂದ ಅವರು, ಕರ್ನಾಟಕದಲ್ಲೂ ಮೋದಿ ಅಲೆ ಇದೆ. ರಾಜ್ಯದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲೂ ಜಯ ಸಾಧಿಸದರೂ ಆಶ್ಚರ್ಯ ಪಡಬೇಕಿಲ್ಲ ಎಂದರು. ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್, ಮೋಹನ್, ಮಹೇಶ್, ಶಿಂಧೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.