ಫಲ ನೀಡಲಿದೆ ಸ್ವೀಪ್ ಜಾಗೃತಿ!
ಕ.ಪ್ರ.ವಾರ್ತೆ ಮೈಸೂರು ಏ. 16
ಮತದಾರರ ಶಿಕ್ಷಣ ಹಾಗೂ ಜಾಗೃತಿ ಸಮಿತಿ (ಸ್ವೀಪ್) ಮೂಲಕ ಜಿಲ್ಲೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತ ಚಲಾವಣೆಯ ಬಗ್ಗೆ ಅರಿವು ಮೂಡಿಸಲಾಗಿದ್ದು, ಮತದಾರರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬ ವಿಶ್ವಾಸವನ್ನು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಪಿ.ಎ. ಗೋಪಾಲ್ ವ್ಯಕ್ತಪಡಿಸಿದರು.
ಸ್ವೀಪ್ ಸಮಿತಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಸಂಯುಕ್ತವಾಗಿ ಏರ್ಪಡಿಸಿದ ಜಾಗೃತಿ ಜಾಥಾಕ್ಕೆ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, 2008ರ ವಿಧಾನಸಭಾ ಚುನಾವಣೆಯಲ್ಲಿ ಶೇ. 67ರಷ್ಟು ಇದ್ದ ಮತದಾನ ಪ್ರಮಾಣ, 2013ರ ಚುನಾವಣೆಯಲ್ಲಿ ಶೇ. 73ಕ್ಕೆ ಹೆಚ್ಚಿದ್ದು, ಈ ಚುನಾವಣೆಯಲ್ಲಿ ಶೇಕಡವಾರು ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಿಂದಿನ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ಪ್ರದೇಶಗಳನ್ನು ಗುರುತಿಸಿ, ಅಂತಹ ಕಡೆಗಳಲ್ಲಿ ವಿಶೇಷವಾಗಿ ಜಾಗೃತಿ ಉಂಟು ಮಾಡಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸ್ವೀಪ್ ಸಮಿತಿ ರಚಿಸಲಾಗಿದೆ.
ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸುವ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಲು ನಗರದ ಎಲ್ಲ ಕಾಲೇಜುಗಳಲ್ಲಿ ಜಾಗೃತಿ ಉಂಟು ಮಾಡಲಾಯಿತು. ಅಲ್ಲದೆ 2014ರ ಮಾ. 8 ರಂದು ಈ ಬಗ್ಗೆ ನಗರದ ಮುಖ್ಯ ಬೀದಿಗಳಲ್ಲಿ ಕಲಾ ತಂಡಗಳೊಡನೆ ಜಾಥಾ ನಡೆಸಲಾಯಿತು ಎಂದು ಅವರು ಹೇಳಿದರು.
ಸಮಿತಿಯ ವತಿಯಿಂದ ಚುನಾವಣಾ ಆಯೋಗ ನಿಗದಿಪಡಿಸಿರುವ ಘೋಷಣೆಗಳನ್ನು ಒಳಗೊಂಡ 6 ಸಾವಿರ ಭಿತ್ತಿ ಪತ್ರಗಳನ್ನು ಹಾಗೂ ಒಂದು ಲಕ್ಷ ಕರಪತ್ರಗಳನ್ನು ಮುದ್ರಿಸಿ, ಎಲ್ಲ ತಾಲೂಕು ಸಮಿತಿಗಳಿಗೆ ಹಾಗೂ ವಿವಿಧ ಇಲಾಖೆಗಳಿಗೆ ಸರಬರಾಜು ಮಾಡಲಾಗಿದೆ. ಭಿತ್ತಿ ಪತ್ರಗಳನ್ನು ಜಿಲ್ಲೆಯ ಎಲ್ಲ ಬ್ಯಾಂಕ್ಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಶಾಲಾ, ಕಾಲೇಜುಗಳಲ್ಲಿ, ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮತ್ತು ಬಸ್ ನಿಲ್ದಾಣಗಳಲ್ಲಿ, ಆಸ್ಪತ್ರೆಗಳಲ್ಲಿ, ರೈಲು ಮತ್ತು ರೇಲ್ವೆ ನಿಲ್ದಾಣಗಳಲ್ಲಿ ಹಾಗೂ ಸಾರ್ವಜನಿಕರು ಸಾಮಾನ್ಯವಾಗಿ ಗಮನಿಸುವಂತ ಎಲ್ಲ ಸ್ಥಳಗಳಲ್ಲಿ ಪ್ರಚುರಪಡಿಸಲಾಗಿದೆ ಎಂದು ಅವರು ವಿವರಿಸಿದರು.
ವಿದ್ಯುತ್ ಅಲಂಕಾರ ವಿಶೇಷ: ಕರಪತ್ರಗಳನ್ನು ಜಿಲ್ಲೆಯ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ವಿತರಿಸಿ ಮತದಾನದ ಬಗ್ಗೆ ಜಾಗೃತಿ ಉಂಟು ಮಾಡಲಾಗಿದೆ. ಚಾಮುಂಡಿಬೆಟ್ಟದ ಮೇಲೆ ದಸರಾ ಮಹೋತ್ಸವ ವೇಳೆ ವಿದ್ಯುತ್ ಬಲ್ಬ್ಗಳ ಮುಖೇನ ಸುಸ್ವಾಗತ ಎಂದು ಅಳವಡಿಸಿದ ಮಾದರಿಯಲ್ಲಿ ನಿಮ್ಮ ಮತ, ನಿಮ್ಮ ಹಕ್ಕು ಎಂಬ ಸ್ವೀಪ್ ಸಂದೇಶವನ್ನು ಏ. 2 ರಿಂದ ಪ್ರದರ್ಶಿಸುತ್ತಿರುವುದು ಈ ಬಾರಿಯ ಆಕರ್ಷಣೆಯಾಗಿದೆ.
ಜಿಲ್ಲಾ ಸ್ವೀಪ್ ಸಮಿತಿಯ ಅಧಿಕಾರಿಗಳು ನಂಜನಗೂಡು, ಹುಣಸೂರು ಹಾಗೂ ಎಚ್.ಡಿ. ಕೋಟೆ ತಾಲೂಕಿನ ಗಿರಿಜನರು ವಾಸಿಸುವ ಹಾಡಿಗಳಿಗೆ ಭೇಟಿ ನೀಡಿ, ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ತಾಲೂಕು ಮಟ್ಟದ ಸ್ವೀಪ್ ಸಮಿತಿ ವತಿಯಿಂದ ಎಲ್ಲ ತಾಲೂಕುಗಳ ಪಟ್ಟಣ ಪ್ರದೇಶಗಳಲ್ಲಿ ಗ್ರಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖಾ ವತಿಯಿಂದ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಮತದಾನದ ಜಾಗೃತಿ ಬಗ್ಗೆ ಜಾಥಾಗಳನ್ನು, ಮನೆ ಮನೆ ಭೇಟಿ, ಸಹಿ ಸಂಗ್ರಹಣೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಸ್ವೀಪ್ ಸಮಿತಿಯಿಂದ ಕಡ್ಡಾಯ ಮತದಾನದ ಬಗ್ಗೆ ಒಂದು ಲಕ್ಷ ಪ್ರತಿಜ್ಞಾವಿಧಿ ಪತ್ರಗಳನ್ನು ಮುದ್ರಿಸಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿತರಿಸಿ, ಅವರ ಪೋಷಕರ ಸಹಿ ಪಡೆದು ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಈವರೆಗೆ ಸುಮಾರು 95 ಸಾವಿರಕ್ಕಿಂತಲೂ ಹೆಚ್ಚು ಪ್ರತಿಜ್ಞಾ ವಿಧಿಗಳು ಪೋಷಕರಿಂದ ಸಹಿಯಾಗಿ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಾಜು 3.50 ಲಕ್ಷಕ್ಕೂ ಹೆಚ್ಚು ಜನರಿಗೆ ಮತದಾನದ ಬಗ್ಗೆ ಜಾಗೃತಿ ಉಂಟು ಮಾಡಲಾಗಿದೆ. ಜಿಲ್ಲೆಯ ನಗರ, ಪಟ್ಟಣ, ಗ್ರಾಮಾಂತರ ಪ್ರದೇಶಗಳಲ್ಲಿ ಸ್ವೀಪ್ ಘೋಷಣೆಗಳನ್ನು ಒಳಗೊಂಡ 150ಕ್ಕೂ ಹೆಚ್ಚು ಬೃಹತ್ ಹೆದ್ದಾರಿ ಫಲಕಗಳನ್ನು ಅಳವಡಿಸಿದೆ.
ಜಿಲ್ಲೆಯ ಎಲ್ಲ ಕಾಲೇಜು ವಿದ್ಯಾರ್ಥಿಗಳು ಮತ್ತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖಾ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಡ್ಡಾಯ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವಂತೆ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಅಲ್ಲದೆ ಸರ್ಕಾರಿ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತದಾರರಿಗೆ ಅರಿವು ಮೂಡಿಸುವ ಬಗ್ಗೆ ನಗರದ ಒಂಟಿಕೊಪ್ಪಲ್ ಮತ್ತು ಕುವೆಂಪುನಗರದ ಬೀದಿಗಳಲ್ಲಿ ಜಾಥಾ ಹಾಗೂ ಮೇಣದ ಬತ್ತಿಯೊಂದಿಗೆ ಮಾನವ ಸರಪಳಿ ಮುಂತಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಚುನಾವಣಾ ಆಯೋಗ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖಾ ವತಿಯಿಂದ ಜಿಲ್ಲೆಯಾದ್ಯಂತ ಎರಡು ಬೀದಿ ನಾಟಕ ತಂಡಗಳು ಅನೇಕ ಗಿರಿಜನ ಹಾಡಿಗಳಲ್ಲಿ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಉಂಟು ಮಾಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಟ್ಟಣ ಪ್ರದೇಶದಲ್ಲಿ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸಿದೆ. ಜಿಲ್ಲೆಯ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮತದಾನದ ಜಾಗೃತಿ ಬಗ್ಗೆ ಪೋಸ್ಟರ್ಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೆ ಡಿಜಿಟಲ್ ಡಿಸ್ಪ್ಲೇ ಇರುವಂತಹ ಬಸ್ ನಿಲ್ದಾಣಗಳಲ್ಲಿ ಮತದಾನದ ಜಾಗೃತಿ ಸಂದೇಶಗಳು ಪದೇ ಪದೇ ಪ್ರದರ್ಶನವಾಗುವಂತೆ ಕ್ರಮವಹಿಸಲಾಗಿದೆ. ಚುನಾವಣಾ ಆಯೋಗದಿಂದ ಮತದಾನದ ಜಾಗೃತಿ ಬಗ್ಗೆ ಸರಬರಾಜಾದ ಆಡಿಯೋ, ವಿಡಿಯೋ ಕ್ಲಿಪಿಂಗ್ಗಳನ್ನು ನಗರದ ಕೇಂದ್ರ ಬಸ್ನಿಲ್ದಾಣದಲ್ಲಿ ಮತ್ತು ರೇಲ್ವೆ ನಿಲ್ದಾಣದಲ್ಲಿ ಇರುವ ಆಡಿಯೋ, ವಿಡಿಯೋ ಮಾಧ್ಯಮದಲ್ಲಿ ಪ್ರತಿ 15 ನಿಮಿಷಗಳಿಗೆ ಒಮ್ಮೆಯಂತೆ ಪ್ರದರ್ಶಿಸಲಾಗುತ್ತಿದೆ. ಆಡಿಯೋ ಸೌಲಭ್ಯ ಇರುವ ರೇಲ್ವೆ ನಿಲ್ದಾಣಗಳಲ್ಲಿಯೂ ಮತದಾರರ ಜಾಗೃತಿ ಬಗ್ಗೆ ಸಂದೇಶಗಳನ್ನು ಬಿತ್ತರಿಸಲಾಗುತ್ತಿದೆ ಎಂದು ಹೇಳಿದರು.
ನಗರ ಸಾರಿಗೆ ಬಸ್ಗಳಲ್ಲಿ ನೀಡಲಾಗುವ ಬಸ್ ಟಿಕೆಟ್ಗಳಲ್ಲಿ ಮತದಾನ ನಮ್ಮ ಹಕ್ಕು ತಪ್ಪದೇ ಮತಹಾಕಿ ಎಂಬ ಸಂದೇಶವನ್ನು ಮುದ್ರಿಸಿ ಪ್ರಚುರ ಪಡಿಸಲಾಗುತ್ತಿದೆ.
ಜಿಲ್ಲಾ ಸ್ವೀಪ್ ಸಮಿತಿ, ಯುವ ಸಬಲೀಕರಣ ಇಲಾಖೆ, ಪೋಲಿಸ್ ಇಲಾಖೆ ಮತ್ತು ಇತರ ಇಲಾಖೆಗಳ ಸಹಯೋಗದೊಂದಿಗೆ ಮತದಾರರ ಜಾಗೃತಿ ಬಗ್ಗೆ ಕಲಾ ತಂಡ ಮತ್ತು ಯುವ ಕ್ರೀಡಾ ಪಟುಗಳಿಂದ ನಗರದಲ್ಲಿ ಅರಮನೆ ಉತ್ತರ ದ್ವಾರದಿಂದ ಹೊರಟು ಪ್ರಮುಖ ಬೀದಿಗಳಲ್ಲಿ ಕಲಾ ಜಾಥಾ ನಡೆಸಿ, ನಂತರ ನಗರದ ಹೃದಯ ಭಾಗವಾದ ಕೆ.ಆರ್. ಸರ್ಕಲ್ನಲ್ಲಿ ಆಕರ್ಷಕ ಪಂಜಿನ ಮೆರವಣಿಗೆ ನಡೆಸಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಜಿಲ್ಲೆಯ ಗ್ರಾಪಂಗಳ ಸಹಯೋಗದೊಂದಿಗೆ ಸ್ವ ಸಹಾಯ ಸಂಘಗಳ ಸದಸ್ಯರೊಂದಿಗೆ ಮತದಾನದ ಜಾಗೃತಿ ಬಗ್ಗೆ ವಿವಿಧ ಕ್ರೀಡೆಗಳನ್ನು ಹಾಗೂ ಜಾಥಾಗಳನ್ನು ಆಯೋಜಿಸಿದೆ. ಜಿಲ್ಲೆಯ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳಾದ ವಿ-ಲೀಡ್, ಡೀಡ್, ಒಡಿಪಿ, ವಾಲೆಂಟರಿ ಆರ್ಗನೈಸೇಷನ್ ಆಫ್ ಇಂಡಿಯಾ ಇತ್ಯಾದಿ ಸಂಸ್ಥೆಗಳಿಂದ ಮತದಾನದ ಜಾಗೃತಿ ಬಗ್ಗೆ ಕಲಾ ಜಾಥಾಗಳು, ಬೀದಿ ನಾಟಕಗಳು, ಚರ್ಚಾ ಸ್ಪರ್ಧೆಗಳು, ಕ್ರೀಡೆಗಳು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು. ಎಂಡಿಎ ಆಯುಕ್ತ ಪಾಲಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಕೆ. ರಾಮು, ಕಾರ್ಯದರ್ಶಿ ಡಾ.ಕೆ. ಶಂಕರೇಗೌಡ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

