ಮೈಸೂರು

ಕೃಷ್ಣರಾಜ ಕ್ಷೇತ್ರದಲ್ಲಿ ಮತ

Published On :

ಕ.ಪ್ರ.ವಾರ್ತೆ ಮೈಸೂರು ಏ. 17
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಾಂತಿಯುತ ಮತದಾನ ನಡೆಯಿತು.
ಆಲನಹಳ್ಳಿ, ಸಿದ್ದಾರ್ಥನಗರ, ಕುರುಬಾರಹಳ್ಳಿ, ನಜರ್‌ಬಾದ್, ಅಗ್ರಹಾರ, ಕುವೆಂಪುನಗರ, ವಿದ್ಯಾರಣ್ಯಪುರಂ, ಅಶೋಕಪುರಂ, ಶ್ರೀರಾಂಪುರ, ದೇವಯ್ಯನಹುಂಡಿ ಮುಂತಾದ ಪ್ರದೇಶಗಳಲ್ಲಿ ಸಾರ್ವಜನಿಕರು ಸಾಲುಗಟ್ಟಿ ನಿಂತು ಮತ ಚಲಾಯಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಸಚಿವ ಎಸ್.ಎ. ರಾಮದಾಸ್, ಸಾಹಿತಿ ಡಾ.ಎಸ್.ಎಲ್. ಭೈರಪ್ಪ, ಪ್ರಮೋದಾದೇವಿ ಒಡೆಯರ್ ಮುಂತಾದ ಗಣ್ಯರು ಕೃಷ್ಣರಾಜ ಕ್ಷೇತ್ರದ ವಿವಿಧ ಮತಕೇಂದ್ರಗಳಲ್ಲಿ ಮತ ಚಲಾಯಿಸಿದರು.
ಬೆಳಗ್ಗೆಯಿಂದಲೇ ಸಾರ್ವಜನಿಕರು ಮತಕೇಂದ್ರಗಳತ್ತ ಬರುತ್ತಿದ್ದದ್ದು ಸಾಮಾನ್ಯವಾಗಿತ್ತು. ಎಲ್ಲರೂ ತಮ್ಮ ತಮ್ಮ ವಾಹನಗಳಲ್ಲಿ ಬಂದು ನಿಗದಿತ ಸ್ಥಳಗಳಲ್ಲಿ ವಾಹನ ನಿಲ್ಲಿಸಿ, ವಿವಿಧ ಪಕ್ಷಗಳ ಏಜೆಂಟರು ನೀಡುತ್ತಿದ್ದ ಚೀಟಿಗಳನ್ನು ಪಡೆದು ಬೂತ್‌ಗಳಿಗೆ ತೆರಳಿ ಮತ ಚಲಾಯಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಆದರೆ ಪ್ರತಿಬಾರಿಯಂತೆ ಈ ಬಾರಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟಿರುವುದು, ಬೂತ್ ಬದಲಾಗಿರುವುದು, ಬದುಕಿರುವವರ ಹೆಸರು ಇಲ್ಲದೆ, ಮೃತಪಟ್ಟವರ ಹೆಸರು ಇರುವುದು ಸಾಮಾನ್ಯವಾಗಿತ್ತು.
ಭದ್ರತಾ ಪಡೆ ನಿಯೋಜನೆ: ಮತಗಟ್ಟೆಯ 200 ಮೀ. ದೂರದಲ್ಲಿ ವಿವಿಧ ಪಕ್ಷದ ಕಾರ್ಯಕರ್ತರು ಕಡೆಬಾರಿ ಎಂಬಂತೆ ಮತ ಚಲಾವಣೆಯ ಚೀಟಿಗಳನ್ನು ವಿತರಿಸುತ್ತ ತಮ್ಮ ತಮ್ಮ ಪಕ್ಷದ ಚಿಹ್ನೆಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದರು. ಕೆಲವು ಸೂಕ್ಷ್ಮ ಮತಗಟ್ಟೆಗಳ ಬಳಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ನಿಯೋಜಿಸಲಾಗಿತ್ತು.
ಶ್ರೀರಾಂಪುರ ಸಮೀಪದ ದೇವಯ್ಯನಹುಂಡಿ ಮತಗಟ್ಟೆಯಲ್ಲಿ ಸಾರ್ವಜನಿಕರು ಮತ ಚಲಾವಣೆಗೆ ಕಿಕ್ಕಿರಿದು ತುಂಬಿದ್ದರು. ಮತದಾರರ ನಿಯಂತ್ರಣವೆ ಕಷ್ಟ ಎನಿಸುವಷ್ಟು ಮಂದಿ ಬಂದು ಮತ ಚಲಾಯಿಸಿದರು.
ಈ ನಡುವೆ ಶ್ರೀರಾಂಪುರ 2ನೇ ಹಂತದ ನಿವಾಸಿ 81 ವರ್ಷದ ಶಾರದಮ್ಮ ತಮ್ಮ ಮಗಳ ಸಹಾಯದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಶ್ರೀರಾಂಪುರ 1ನೇ ಹಂತ ಬಿಜಿಎಸ್ ಶಾಲೆಯಲ್ಲಿ ಪೂರ್ಣಿಮಾ ಎಂಬ ಯುವತಿ ಮೊದಲ ಬಾರಿಗೆ ಮತದಾನ ಮಾಡಿ ಸಂತಸ ಹಂಚಿಕೊಂಡರು. ಜ್ಞಾನಗಂಗಾ ಶಾಲೆಯಲ್ಲಿ ಮಧ್ಯಾಹ್ನದ ವೇಳೆ ಚುನಾವಣಾ ಸಿಬ್ಬಂದಿ ಊಟಕ್ಕೆ ಬಿಡುವು ಪಡೆದಿದ್ದರಿಂದ ಕೆಲಕಾಲ ಮತದಾರರು ಹೊರಕ್ಕೆ ಕಾಯಬೇಕಾಯಿತು.
ಒಟ್ಟಾರೆ ಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.35ರಷ್ಟು ಮತದಾನ ನಡೆದಿತ್ತು. ಆಲನಹಳ್ಳಿ ಬಡಾವಣೆಯ ಮತಗಟ್ಟೆ ಸಂಖ್ಯೆ 207 ರಲ್ಲಿ ಬೆಳಗ್ಗೆ 9ಕ್ಕೆ ಒಟ್ಟು 815 ಮತದಾರರ ಪೈಕಿ 86 ಮಂದಿ, ಮತಗಟ್ಟೆ ಸಂಖ್ಯೆ 221ರಲ್ಲಿ 556 ಮಂದಿಗೆ 59 ಮಂದಿ, ಮತಗಟ್ಟೆ ಸಂಖ್ಯೆ 222 ರಲ್ಲಿ 149 ಮಂದಿಗೆ 54 ಮಂದಿ ಮತ ಚಲಾಯಿಸಿದ್ದರು.
ಬೆಳಗ್ಗೆ 9.30ಕ್ಕೆ ಕುರುಬಾರಹಳ್ಳಿ ಶಾಲೆಯ ಮತಗಟ್ಟೆಯಲ್ಲಿ ಒಟ್ಟು 1347 ಮತದಾರರ ಪೈಕಿ 120 ಮಂದಿ ಮತ ಚಲಾಯಿಸಿದ್ದರು. ಶ್ರೀರಾಂಪುರ ಬಿಜಿಎಸ್ ಶಾಲೆಯ 50ನೇ ಮತಗಟ್ಟೆಯಲ್ಲಿ ಮಧ್ಯಾಹ್ನ 12ರ ಸುಮಾರಿಗೆ 683 ಮಂದಿಯ ಪೈಕಿ 227 ಮಂದಿ ಮತದಾರರು ಮತಚಲಾಯಿಸಿದ್ದರು.

ಕೋಟೆ ಶಿವಣ್ಣ ನಾಪತ್ತೆ ಗಾಳಿಸುದ್ದಿ
ಮೈಸೂರು: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಎಂ.ಶಿವಣ್ಣ ನಾಪತ್ತೆಯಾಗಿದ್ದಾರೆ ಎಂಬ ವಿಷಯ ಇಡಿ ತಾಲೂಕಿನಾದ್ಯಂತ ಕೆಲಕಾಲ ಹರಿದಾಡಿತು. ಇದರಿಂದ ಪಕ್ಷದ ಪರ ದುಡಿಯುತ್ತಿದ್ದ ಕಾರ್ಯಕರ್ತರಿಗೂ ದಿಗಿಲು ಬಡಿದಂತಾಗಿತ್ತು. ಕೆಲವರು ತಮಗೆ ಪರಿಚಯವಿರುವವರಿಗೆ ಫೋನ್ ಕರೆ ಮಾಡಿ ನಾಪತ್ತೆ ವಿಚಾರಿಸುತ್ತಿದ್ದರೆ, ಮತ್ತೆ ಕೆಲವರು ಆತಂಕಕ್ಕೆ ಒಳಗಾಗಿದ್ದರು. ಪಟ್ಟಣದ ಶಾಂತಿಪುರದಲ್ಲಿ ಇದೇ ದಿಗಿಲಿನಿಂದ ಮತ ಚಲಾಯಿಸುತ್ತಿದ್ದು ಕಂಡುಬಂದಿತು. ಶಾಂತಿಪುರದ ಮತಗಟ್ಟೆಯಲ್ಲಿ ಸಂಜೆ 4 ಗಂಟೆ ಹೊತ್ತಿಗೆ 619 ರಲ್ಲಿ 349 ಮತಗಳು ಚಲಾವಣೆಯಾಗಿದ್ದವು.

ಹೈರಿಗೆ ಗ್ರಾಮದಲ್ಲಿ ಶಾಂತಿ
ಎಚ್.ಡಿ. ಕೋಟೆ ಶಾಸಕ ಎಚ್. ಚಿಕ್ಕಮಾದು ಅವರ ಪುತ್ರ ಒಂದು ಸಮಾಜವನ್ನು ಗುರಿ ಮಾಡಿ ನಿಂದಿಸಿದರು ಎಂಬ ಕಾರಣಕ್ಕೆ ಹೈರಿಗೆ ಗ್ರಾಮದಲ್ಲಿ ಮೂರು ದಿನಗಳಿಂದಲೂ ಪ್ರಕ್ಷುಬ್ಧ ಸ್ಥಿತಿ ಇತ್ತು. ಆದರೆ, ಮತದಾನ ದಿನವಾದ ಗುರುವಾರ ಯಾವುದೇ ಗಲಭೆ, ಅಹಿತಕರ ಘಟನೆ ನಡೆಯದೆ ಶಾಂತಿಯುತ ಮತದಾನ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.