ಮೈಸೂರು

ಗ್ರಾಮೀಣ ಸೊಗಡು ಸಾರುವ ಚಿಣ್ಣರ ಮೇಳ

Published On :

ಮಾ. ವೆಂಕಟೇಶ್
ಕ.ಪ್ರ.ವಾರ್ತೆ ಮೈಸೂರು ಏ. 20
ಇದು ಕೇವಲ ಬೇಸಿಗೆಯ ಶಿಬಿರ ಮಾತ್ರವಲ್ಲ. ಅಥವಾ ಮಕ್ಕಳಿಗೆ ಕಲೆಯನ್ನೋ, ಸಂಗೀತವನ್ನೋ ಕಲಿಸುವುದಕ್ಕೆ ಮಾತ್ರವೇ ಸೀಮಿತವೂ ಅಲ್ಲ. ಇಂದಿನ ಸಮಾಜದಲ್ಲಿ ಮನುಷ್ಯನಾಗಿ ಬದುಕುವ ಕಲೆಯನ್ನು ಕಲಿಸುವ ಮಹತ್ತರವಾದ ಉದ್ದೇಶ ಹೊಂದಿರುವ ವಿಕಾಸ ಕೇಂದ್ರವೂ ಹೌದು.
ಇದು ರಂಗಾಯಣ ಆಯೋಜಿಸಿರುವ ಒಂದು ತಿಂಗಳ ಚಿಣ್ಣರ ಮೇಳದ ಪ್ರಮುಖ ಆಶಯ. ಈ ಆವರಣವನ್ನು ಪ್ರವೇಶಿಸುತ್ತಿದ್ದಂತೆ ಒಂದು ಪುಟ್ಟ ಹಳ್ಳಿಯೇ ಇಲ್ಲಿ ಗೋಚರವಾಗಲಿದೆ. ಅಲ್ಲಲ್ಲಿ ನಿಮ್ಮನ್ನು ಆಕರ್ಷಿಸುವ ವಿವಿಧ ಮಾದರಿಯ ಬೊಂಬೆಗಳು ನಮ್ಮ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಸಾರಲಿದೆ.
ರಾಷ್ಟ್ರಕವಿ ಕುವೆಂಪು ಅವರ ಸ್ಫೂರ್ತಿಯ ತಾಣವೂ ಆಗಿದ್ದ ಕುಕ್ಕರಹಳ್ಳಿ ಕೆರೆಗೆ ಹೊಂದಿಕೊಂಡಿರುವ ಈ ಸುಂದರ ಮರಗಿಡಗಳ ಹಚ್ಚ ಹಸಿರಿನ ಆವರಣದಲ್ಲಿ ಹತ್ತು ಕುಟೀರಗಳನ್ನು ನಿರ್ಮಿಸಲಾಗಿದೆ. ಪ್ರತಿಯೊಂದು ಕುಟೀರಕ್ಕೂ ಒಂದೊಂದು ವಿಶೇಷ ಹೆಸರಿಡಲಾಗಿದೆ. ಕರುಣೆ, ಪ್ರೀತಿ, ಪ್ರಜ್ಞೆ, ಮೈತ್ರಿ, ತಾಳ್ಮೆ, ಶೀಲ, ಸತ್ಯ, ತ್ಯಾಗ, ಸಂಕಲ್ಪ ಹಾಗೂ ಏಕಾಗ್ರತೆ ಎಂದು ಹೆಸರಿಡಲಾಗಿದೆ. ಇದು ಬುದ್ಧನ ತತ್ವಗಳ ಸಂದೇಶ ವಾಕ್ಯವೂ ಆಗಿದೆ.
ಪರಸ್ಪರ ಮನುಷ್ಯರ ನಡುವೆ ಪ್ರೀತಿ ಮರೆಯಾಗುತ್ತಿರುವ ಕಾರಣ ಎಲ್ಲರನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಬಗ್ಗೆಯೂ ಕರುಣೆ ತೋರಬೇಕು. ನಡೆಸುವ ಕಾರ್ಯದಲ್ಲಿ ಸದಾ ಪ್ರಜ್ಞಾವಂತರಾಗಿರಬೇಕು. ಯಾವುದೇ ಸಂದರ್ಭದಲ್ಲಿಯೂ ತಾಳ್ಮೆ ಕಳೆದುಕೊಳ್ಳಬಾರದು, ಶೀಲವಂತನಾಗಿ ಬದುಕಬೇಕು. ಸತ್ಯವನ್ನು ಎಂದಿಗೂ ಬಿಡಬಾರದು. ಸಾಧನೆಗೆ ಏಕಾಗ್ರತೆ ರೂಢಿಸಿಕೊಳ್ಳಬೇಕು. ಇತರರಿಗೆ ಸಹಾಯ ಮಾಡುವಲ್ಲಿ ತ್ಯಾಗ ಮನೋಭಾವ ಹೊಂದಿರಬೇಕು. ಇಂತಹ ಸದ್ಗುಣಗಳನ್ನು ಬಾಲ್ಯದಿಂದಲೇ ಮಕ್ಕಳಿಗೆ ಕಲಿಸುವ ಸಲುವಾಗಿ ಶಿಬಿರದಲ್ಲಿನ ಪ್ರತಿಯೊಂದು ತಂಡಕ್ಕೂ ಇಂತಹ ಹೆಸರಿಡಲಾಗಿದೆ.
ಕಾಂಕ್ರಿಟ್ ನಗರ ಹಾಗೂ ಟೈಲ್ಸ್‌ಗಳ ಗೃಹಗಳಲ್ಲಿನ ವಾತಾವರಣದಲ್ಲಿ ಬದುಕುತ್ತಿರುವ ಇಂದಿನ ಮಕ್ಕಳಿಗೆ ಮಣ್ಣಿನ ನಂಟು ಕಳೆದು ಹೋಗುತ್ತಿರುವುದು ಆ ಮಣ್ಣಿನ ಆರೋಗ್ಯಕರ ಮಹತ್ವ ತಿಳಿಸುವ ಸಲುವಾಗಿ ಮಣ್ಣಿನೊಡನೆ ಆಟಗಳನ್ನು ಆಡುವುದಕ್ಕೆ ಇಲ್ಲಿ ಪ್ರಾಶಸ್ತ್ಯ. ಅಲ್ಲದೆ ಗ್ರಾಮೀಣ ಕ್ರೀಡೆಗಳಾದ ಬುಗುರಿ, ಚಿನ್ನಿದಾಂಡು, ಲಗೋರಿ ಹಾಗೂ ಚೆಂಡಾಟಗಳತ್ತ ಚಿಣ್ಣರನ್ನು ಸೆಳೆಯಲಾಗಿದೆ.
ಪ್ರತಿಯೊಂದು ತಂಡವೂ ಬುದ್ಧದೇವನ ಜಾತಕದ ಕಥೆಗಳನ್ನು ನಾಟಕವಾಗಿ ಅಭಿನಯಿಸಲಿದೆ. ಇದರಲ್ಲಿ ಸಂಪೂರ್ಣವಾಗಿ ಮಕ್ಕಳೆ ಅಭಿನಯಿಸುವರು. ಅಲ್ಲದೆ ತಮ್ಮ ಕುಟೀರದ ಸುತ್ತಲೂ ತಾವೇ ಚಿತ್ರಕಲೆಯ ಚಿತ್ತಾರ ಮೂಡಿಸಿದ್ದಾರೆ. ಇಲ್ಲಿನ ನಿಸರ್ಗದಲ್ಲಿ ಸಿಗುವ ಗಿಡ ಮರದ ಎಲೆಗಳು, ಕಡ್ಡಿ ಕಸಗಳನ್ನು ಸಂಗ್ರಹಿಸಿ ಅದರಿಂದ ಬೃಹತ್ ಬೋಧಿ ವೃಕ್ಷವನ್ನು ತಯಾರಿಸುವಲ್ಲಿಯೂ ತೊಡಗಿರುವುದು ವಿಶೇಷ. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಅವರ ಮಾರ್ಗದರ್ಶನದಲ್ಲಿ ಶಿಬಿರದ ನಿರ್ದೇಶಕ ಮೈಮ್ ರಮೇಶ್ ನಿರ್ವಹಿಸುತ್ತಿರುವ ಈ ಮೇಳದಲ್ಲಿ ಸುಮಾರು 375 ಮಕ್ಕಳು ಭಾಗವಹಿಸಿದ್ದಾರೆ.  

ಬೇಸಿಗೆ ರಜೆಗೆ ಮೈಸೂರಿನ ಅಜ್ಜಿ ಮನೆಗೆ ಬರುತ್ತೇವೆ. ಏನಾದರೂ ಕಲಿಯಬೇಕೆಂಬ ಆಸೆಯಿಂದ ಈ ಶಿಬಿರಕ್ಕೆ ಸೇರಿದ್ದೇನೆ. ನನ್ನಕ್ಕ ಕಳೆದ ಮೂರು ವರ್ಷದಿಂದ ಶಿಬಿರಕ್ಕೆ ಬರುತ್ತಿದ್ದಾಳೆ. ಇಲ್ಲಿಗೆ ಬರುವುದೆಂದರೆ ನನಗೆ ತುಂಬ ಇಷ್ಟ.
 ಚಿನ್ಮಯಿ, 3ನೇ ತರಗತಿ, ಸಹ್ಯಾದ್ರಿ ಶಾಲೆ, ತೀರ್ಥಹಳ್ಳಿ, ಶಿವಮೊಗ್ಗ.

ಇದೇ ಮೊದಲ ಬಾರಿಗೆ ಶಿಬಿರಕ್ಕೆ ಸೇರಿದ್ದೇನೆ. ಚಿತ್ರಕಲೆ ಹಾಗೂ ಕಥೆ ಕೇಳುವುದು ತುಂಬ ಇಷ್ಟ. ಇಲ್ಲಿ ಹೆಚ್ಚು ಸ್ನೇಹಿತರಿದ್ದು, ಅವರೊಂದಿಗೆ ಆಟವಾಡುವುದೆಂದರೆ ಬಲು ಇಷ್ಟ.
 ಸರಹ, 4ನೇ ತರಗತಿ, ಪಿಪಿಎಸ್ ಶಾಲೆ, ರಾಜೀವನಗರ, ಮೈಸೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.