ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ
ಕ.ಪ್ರ.ವಾರ್ತೆ , ಮೈಸೂರು , ಏ. 21
ಬೇಸಿಗೆಯಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಪಂ ಸಿಇಒ ಪಿ.ಎ.ಗೋಪಾಲ್ ಹೇಳಿದ್ದಾರೆ.
ತಾಲೂಕಿನ ಜಯಪುರ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಅಂತರ್ಜಲ ಮಟ್ಟವು ತೀರಾ ಕುಸಿದಿರುವ ಕಾರಣ, ಬೋರ್ವೆಲ್ಗಳಲ್ಲಿ ನೀರು ಬತ್ತಿ ಹೋಗಿದೆ. ಈ ವ್ಯಾಪ್ತಿಯ ಒಟ್ಟು 13 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಕಪಿಲಾ ನದಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆಯಿಂದ ತಾಲೂಕಿನ 27 ಗ್ರಾಮಗಳು ಮತ್ತು ನಂಜನಗೂಡು ತಾಲೂಕಿನ ಮೂರು ಗ್ರಾಮಗಳಿಗೆ ಒಟ್ಟು 30 ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ನವೆಂಬರ್ ಅಂತ್ಯದ ಒಳಗಾಗಿ ಯೋಜನೆ ಪೂರ್ಣಗೊಳ್ಳಲಿರುವುದರಿಂದ ಈ ಯೋಜನೆಯ ಮೂಲಕ ಜಯಪುರ ಹೋಬಳಿ ವ್ಯಾಪ್ತಿಯ ಸಾಲುಂಡಿ, ಗುರೂರು, ಉದ್ಬೂರು, ಕೆಲ್ಲಹಳ್ಳಿ, ತಳೂರು, ಮುರುಡಗಳ್ಳಿ, ದೊಡ್ಡಕಾಟೂರು, ಮಾರ್ಬಳ್ಳಿ, ದೂರ, ನಗರ್ತಹಳ್ಳಿ, ಜಯಪುರ, ಕಳಲವಾಡಿ, ಧನಗಳ್ಳಿ, ದೊಡ್ಡಹುಂಡಿ, ಕೆಂಚಲಗೂಡು, ಕೋಟೆಹುಂಡಿ, ಕೆರೆಹುಂಡಿ, ದಾರಿಪುರ, ಮಾರ್ಬಳ್ಳಿಹುಂಡಿ, ಸಿಂಧುವಳ್ಳಿ, ಯಡಹಳ್ಳಿ, ಬರಡನಪುರ, ಮಾವಿನಹಳ್ಳಿ, ಗೋಪಾಲಪುರ, ಮುಳ್ಳೂರು ಮತ್ತು ದಡದಹಳ್ಳಿ ಗ್ರಾಮಗಳಲ್ಲಿ ಒಟ್ಟು 27 ಗ್ರಾಮಗಳಿಗೆ ಮತ್ತು ನಂಜನಗೂಡು ತಾಲೂಕಿನ ಕೆಂಬಾಲು, ಬಿದರಗೂಡು ಮತ್ತು ಹಳ್ಳಿಕೆರೆಹುಂಡಿ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುವುದು.
11 ಗ್ರಾಮಗಳು ಹೆಚ್ಚುವರಿ: ಈ ಯೋಜನೆಯಿಂದ ಮೈಸೂರು ತಾಲೂಕಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಹನಗಳ್ಳಿ, ತಿಬ್ಬಯ್ಯನಹುಂಡಿ, ಮೂಗನಹುಂಡಿ, ಬ್ಯಾತಹಳ್ಳಿ ಮತ್ತು ದೇವಗಳ್ಳಿ, ಹಾಗೂ ನಂಜನಗೂಡು ತಾಲೂಕಿನ ಏಚಗಳ್ಳಿ, ಹಳ್ಳಿದಿಡ್ಡಿ, ಮರಳೂರು ಮತ್ತು ಗೊದ್ದನಪುರ ಗ್ರಾಮಗಳನ್ನು ಒಟ್ಟು 11 ಗ್ರಾಮಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಕೊಂಡು, ಈ ಗ್ರಾಮಗಳಿಗೆ ಮೇಲ್ಕಂಡ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ನಂಜನಗೂಡು ತಾಲೂಕಿನ ದೊಡ್ಡಕೌಲಂದೆ ಮತ್ತು ಇತರೆ 55 ಗ್ರಾಮಗಳಿಗೆ ನೀರು ಒದಗಿಸುವ ಯೋಜನೆಯಲ್ಲಿ ಜಾಕ್ವೆಲ್ನಲ್ಲಿ ಅಳವಡಿಸಲಾಗಿದ್ದ ಮೋಟಾರ್ ದುರಸ್ತಿಗೆ ಒಳಗಾದ ಕಾರಣ, ಈ ಯೋಜನೆಯಿಂದ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ತೊಂದರೆ ಉಂಟಾಗಿದೆ.
ಬರ ಪರಿಹಾರ ಕಾರ್ಯಕ್ರಮದಲ್ಲಿ ಸರ್ಕಾರದಿಂದ ಜಿಲ್ಲಾಧಿಕಾರಿಗೆ 3 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಈ ಅನುದಾನದಲ್ಲಿ ಪೈಪ್ಲೈನ್ ಅಳವಡಿಸುವುದು ಹಾಗೂ ದುರಸ್ತಿ ಮತ್ತು ಪಂಪ್, ಮೋಟಾರ್ ಖರೀದಿ ಹಾಗೂ ಅಳವಡಿಸುವುದು, ಹೈಡ್ರೋ ಫ್ಯಾಕ್ಟರಿಂಗ್, ರೀಡ್ರಿಲ್ಲಿಂಗ್, ಫ್ಲಷಿಂಗ್ ಇನ್ನಿತರೆ ಕಾಮಗಾರಿಗಳ ಅನುಷ್ಠಾನಕ್ಕೆ ಅವಕಾಶವಿದೆ.
ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಂಟ್ರೋಲ್ ರೂಂಗಳನ್ನು ಪ್ರಾರಂಭಿಸಲಾಗಿದ್ದು, ದಿನದ 24 ಗಂಟೆಗಳೂ ನೀರಿನ ಸಮಸ್ಯೆ ಬಗ್ಗೆ ದೂರು ದಾಖಲಿಸಿಕೊಂಡು ಸಮಸ್ಯೆ ಪರಿಹರಿಸಿ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಆಗುವಂತೆ ಕ್ರಮ ವಹಿಸಲಾಗುತ್ತಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಜಿಲ್ಲೆಯ ಗಿರಿಜನ ಹಾಡಿಗಳಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಚುನಾವಣಾ ಆಯೋಗದಿಂದ ಅನುಮತಿ ಪಡೆದು ಜಿಲ್ಲೆಯ ವಿವಿಧ ಗಿರಿಜನ ಹಾಡಿಗಳಲ್ಲಿ ಕೇಂದ್ರ ಯೋಜನೆಯಡಿ ಮೂಲ ನಿವಾಸಿ ಜನಾಂಗದವರ ಅಭಿವೃದ್ಧಿ ಯೋಜನೆಯಡಿಯಲ್ಲಿ 1.30 ಕೋಟಿ ಅನುದಾನದಲ್ಲಿ 74 ಕಾಮಗಾರಿಗಳನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

