ಮೈಸೂರು

ಕೋಳಿ ತ್ಯಾಜ್ಯಕ್ಕೆ ಕೆರೆ ಪರಿಸರ ಹಾನಿ

Published On :

ಕ.ಪ್ರ.ವಾರ್ತೆ ,  ಪಿರಿಯಾಪಟ್ಟಣ ,  ಏ. 21
ಕೋಳಿ ತ್ಯಾಜ್ಯವನ್ನು ಅಂಗಡಿಗಳ ಮಾಲೀಕರು ಕೆರೆಗೆ ಸುರಿಯುತ್ತಿರುವುದರಿಂದ ಕೆರೆ ಹಾಗೂ ಪಕ್ಕದಲ್ಲೆ ಹಾದುಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಕೋಳಿ ಅಂಗಡಿಯ ತ್ಯಾಜ್ಯ ಎಲ್ಲೆಂದರಲ್ಲಿ ಹರಡಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.
ತಾಲೂಕಿನ ಚೌಡೇನಹಳ್ಳಿ ವ್ಯಾಪ್ತಿಯ ಪಿರಿಯಾಪಟ್ಟಣಕ್ಕೆ ಸಮೀಪವಿರುವ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿರುವ ದೊಡ್ಡಕೆರೆಗೆ ಚಿಟ್ಟೇನಹಳ್ಳಿ ಗ್ರಾಪಂನಿಂದ ಪರವಾನಗಿ ಪಡೆದು ಕೋಳಿ ಮಾಂಸದ ಅಂಗಡಿ ನಡೆಸುತ್ತಿರುವ ಅಂಗಡಿ ಮಾಲೀಕರು ಕೋಳಿ ಅಂಗಡಿಯಲ್ಲಿ ತ್ಯಾಜ್ಯವನ್ನು ಪ್ರತಿನಿತ್ಯ ದೊಡ್ಡಕೆರೆಗೆ ತಂದು ಹಾಕುತ್ತಿರುವುದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ.
ಪ್ರಸ್ತುತ ಕೆರೆ ಸಂಪೂರ್ಣ ಒಣಗಿದ್ದು, ಕೆರೆಯ ಒಂದು ಬದಿಯನ್ನು ಸಂಪೂರ್ಣ ಕೋಳಿಪುಕ್ಕಗಳೆ ಆವರಿಸಿಕೊಂಡಿದ್ದು ಮುಂಬರುವ ಮಳೆಗಾಲದಲ್ಲಿ ಮಳೆ ನೀರು ಕೆರೆಯಲ್ಲಿ ಸಂಗ್ರಹವಾದಲ್ಲಿ ಕೋಳಿ ತ್ಯಾಜ್ಯದಿಂದ ಕೆರೆಯ ನೀರು ಮಲಿನವಾಗುವ ಸಾಧ್ಯತೆ ಇದೆ. ಅಲ್ಲದೆ ಕೋಳಿಪುಕ್ಕಗಳು ತಕ್ಷಣಕ್ಕೆ ಕರಗುವಂತವಲ್ಲ. ಕೆರೆಯಲ್ಲಿ ನೀರು ಸಂಗ್ರಹವಾದ ಬಳಿಕ ಕೋಳಿಪುಕ್ಕಗಳು ನೀರಿನಲ್ಲಿ ತೇಲಾಡಲು ಆರಂಭಿಸುತ್ತವೆ. ಹೀಗಾಗಿ ಜಾನುವಾರುಗಳು ನೀರು ಕುಡಿಯಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.
ಮನೆಗಳ ಮುಂದೆಯೂ ಪುಕ್ಕ: ಕೋಳಿ ಅಂಗಡಿಗಳಿರುವ ಸಮೀಪದಲ್ಲಿಯೇ ವಾಸದ ಕೆಲವು ವಾಸದ ಮನೆಗಳೂ ಇದ್ದು, ಮನೆಗಳ ಸುತ್ತಲೂ ಗಾಳಿಗೆ ಕೋಳಿಪುಕ್ಕ ತೂರಿಬಂದು ಬೀಳುತ್ತಿದ್ದು, ಮನೆಗಳಲ್ಲಿನ ನಿವಾಸಿಗಳೂ ಕೋಳಿಪುಕ್ಕದ ಕಾಟದಿಂದ ಪ್ರತಿನಿತ್ಯ ಸಮಸ್ಯೆ ಎದುರಿಸುವಂತಾಗಿದೆ.
ರಸ್ತೆ ಪಕ್ಕದಲ್ಲಿಯೆ 3 ಕೋಳಿ ಅಂಗಡಿಗಳಿರುವುದರಿಂದ ಕೋಳಿ ಅಂಗಡಿಗಳ ಅಳಿದುಳಿದ ತ್ಯಾಜ್ಯವನ್ನು ತಿನ್ನಲು ಬೀದಿನಾಯಿಗಳ ದಂಡೆ ಇಲ್ಲಿ ಬೀಡುಬಿಟ್ಟಿವೆ. ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕೋಳಿ ಅಂಗಡಿಗಳು ಇರುವುದರಿಂದ ನಾಯಿಗಳು ಸದಾಕಾಲ ರಸ್ತೆ ಬದಿಯಲ್ಲಿಯೇ ಇರುತ್ತವೆ. ರಾತ್ರಿ ವೇಳೆಯಲ್ಲಿ ವಾಹನ ಚಾಲಕರು ಅದರಲ್ಲಿಯೂ ದ್ವಿಚಕ್ರ ವಾಹನ ಚಾಲಕರು ಬೀದಿನಾಯಿಗಳ ಹಾವಳಿ ಭಯದಲ್ಲಿಯೇ ವಾಹನ ಚಲಾಯಿಸಬೇಕಿದೆ. ಕೆಲವು ಸವಾರರು ನಾಯಿ ದಾಳಿಗೆ ತುತ್ತಾಗಿ ವಾಹನದಿಂದ ಬಿದ್ದಿರುವ ಉದಾಹರಣೆಗಳೂ ಉಂಟು.
ಸಾರ್ವಜನಿಕರು ಕೋಳಿ ಅಂಗಡಿಗಳಿಂದ ಹಾಗೂ ಕೋಳಿ ಅಂಗಡಿಯ ತ್ಯಾಜ್ಯದಿಂದ ಇಷ್ಟೆಲ್ಲ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ, ಸಂಬಂಧಪಟ್ಟ ಪಂಚಾಯಿತಿಯವರು ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ಕೋಳಿ ಅಂಗಡಿ ಮಾಲೀಕರು ಅಂಗಡಿಯ ತ್ಯಾಜ್ಯವನ್ನು ಕೆರೆಗೆ ಹಾಕುವುದನ್ನು ತಪ್ಪಿಸಿ, ಕೆರೆಯ ಪರಿಸರ ರಕ್ಷಣೆಯೊಂದಿಗೆ ನಾಯಿಗಳ ಹಾವಳಿ ತಪ್ಪಿಸಲು ಮುಂದಾಗಬೇಕಿದೆ.


-ಪಿ.ಎನ್. ಸುಬ್ರಮಣ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.