ವಿದ್ಯುತ್ ದರ ಹೆಚ್ಚಳ ಪ್ರಸ್ತಾವಕ್ಕೆ ವಿರೋಧ
ಕ.ಪ್ರ.ವಾರ್ತೆ , ಮೈಸೂರು , ಏ. 22
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತವು (ಸೆಸ್ಕ್) ಗ್ರಾಹಕರಿಂದ ಬರಬೇಕಿರುವ ಬಾಕಿ ಹಣ ಹಾಗೂ ನಿರ್ವಹಣಾ ವೆಚ್ಚವನ್ನು ಸರಿದೂಗಿಸುವ ಸಲುವಾಗಿ 2014-15ರ ಸಾಲಿನಿಂದ ವಿದ್ಯುತ್ ದರ ಹೆಚ್ಚಳದ ನಿರ್ಧಾರಕ್ಕೆ ಗ್ರಾಹಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸೆಸ್ಕ್ ಸೇರಿದಂತೆ ರಾಜ್ಯದ ಇತರೆ ವಿದ್ಯುತ್ ಕಂಪನಿಗಳು ಪ್ರತಿ ಯೂನಿಟ್ಗೆ 66 ಪೈಸೆ ಹೆಚ್ಚಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದವು. ಕಂಪನಿಗಳ ಒತ್ತಾಯದ ಮೇರೆಗೆ ಗ್ರಾಹಕರಿಂದ ಅಭಿಪ್ರಾಯ ಪಡೆಯಲು ನಿಶ್ಚಯಿಸಿದ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು.
ಸೆಸ್ಕ್ ವ್ಯಾಪ್ತಿಗೊಳಪಡುವ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ಗ್ರಾಹಕರು, ಕೈಗಾರಿಕಾ ಒಕ್ಕೂಟದ ಪದಾಧಿಕಾರಿಗಳು, ಕಾಫಿ ಬೆಳೆಗಾರರು ಹಾಗೂ ವಕೀಲರು ಭಾಗವಹಿಸಿ ತಮ್ಮ ವಿರೋಧ ವ್ಯಕ್ತಪಡಿಸಿದರು. ಸೆಸ್ಕ್ ವಿದ್ಯುತ್ ಸರಬರಾಜಿನಿಂದ ಗಳಿಸುತ್ತಿರುವ ಲಾಭ ಹಾಗೂ ನಷ್ಟವನ್ನು ಜನರಿಗೆ ತಿಳಿಸಬೇಕು. ಒಂದು ವೇಳೆ ಹಣ ಸೋರಿಕೆಯಾಗುತ್ತಿದ್ದರೆ ಅದಕ್ಕೆ ಮಿತಿ ಹೇರಬೇಕೆ ವಿನಃ ಅದರ ಹೊರೆಯನ್ನು ಜನರ ಮೇಲೆ ಹೇರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಭೆಯಲ್ಲಿ ಕೇಳಿಬಂದಿತು.
ಮೊದಲಿಗೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಿ.ಕಿರಣ್ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ವಿದ್ಯುತ್ ಖರೀದಿಯಲ್ಲಿ ಪ್ರತಿ ಯೂನಿಟ್ನಲ್ಲಿ 38 ಪೈಸೆ ವ್ಯತ್ಯಾಸ ಕಂಡುಬರುತ್ತಿದೆ. ಅಲ್ಲದೇ ಸರ್ಕಾರದಿಂದ ಸೆಸ್ಕ್ ವಿಭಾಗಕ್ಕೆ ಬರಬೇಕಾದ 268 ಕೋಟಿ ಸಬ್ಸಿಡಿ ಹಣ ಬಾಕಿ ಇದೆ. ಕೈಗಾರಿಕಾ ಸಂಸ್ಥೆಗಳಿಂದ 1,400 ಕೋಟಿ ಬಾಕಿ ಬರಬೇಕಿದೆ. ಇದ್ನು ಸರಿದೂಗಿಸಲು ಈ ಬಾರಿ ಪ್ರತಿ ಯೂನಿಟ್ಗೆ 66 ಪೈಸೆ ಹೆಚ್ಚಿಸುವ ಅನಿವಾರ್ಯವಿದೆ ಎಂದು ಹೇಳಿದರು.
ಬೀದಿ ದೀಪಗಳೇ ಇಲ್ಲ: ನಂತರ ಕೊಡಗು ಜಿಲ್ಲೆಯ ಆರ್ಟಿಐ ಕಾರ್ಯಕರ್ತ ಸಿ.ಎ.ಸುಬ್ಬಯ್ಯ ಮಾತನಾಡಿ, ಎಂಡಿ ಕಿರಣ್ ಮಂಡಿಸಿರುವ ವರದಿಯನ್ನು ನೋಡಿದರೆ ನಾನು ಸುಳ್ಳು ಹೇಳುವುದಿಲ್ಲ. ಆದರೆ, ನನ್ನ ಮನೆ ದೇವರು ಸುಳ್ಳು ಎಂಬಂತಾಗಿದೆ. ಮಲೆನಾಡು ಪ್ರದೇಶದಲ್ಲಿ ಸರಿಯಾಗಿ ಬೀದಿ ದೀಪಗಳನ್ನು ಅಳವಡಿಸಿಲ್ಲ. ನಮ್ಮಲ್ಲಿನ ಗ್ರಾಪಂಗಳನ್ನು ಕೇಳಿದರೆ 290 ಬೀದಿ ದೀಪಗಳನ್ನು ಅಳವಡಿಸಿದ್ದೇವೆ ಎಂದು ಮಾಹಿತಿ ನೀಡುತ್ತಾರೆ. ಅದೇ ಸೆಸ್ಕ್ ಕೇಳಿದರೆ ಕೇವಲ 56 ಎಂಬ ಮಾಹಿತಿ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಕಾಫಿ ಬೆಳೆಗಾರರ ಒಕ್ಕೂಟದ ತೀರ್ಥ ಮಲ್ಲೇಶ್ ಮಾತನಾಡಿ, ಎಲ್ಟಿ4 ಎ ವ್ಯಾಪ್ತಿಗೆ ಕೃಷಿಯನ್ನು ಸೇರಿಸಿರುವ ಸೆಸ್ಕ್ ಅದರಿಂದ ಕಾಫಿ ಬೆಳೆಗಾರರನ್ನು ಹೊರಗಿಟ್ಟಿದೆ. ಕಾಫಿ ಬೆಳೆಗಾರರಿಗೆ 10ಎಚ್ಪಿ ಅಥವಾ ಅದಕ್ಕಿಂತ ಕಡಿಮೆ ವಿದ್ಯುತ್ ನೀಡುತ್ತಾರೆ. ಅದೇ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು 10 ಎಕರೆ ಪ್ರದೇಶದಲ್ಲಿ ಅಡಕೆ ಬೆಳೆದರೆ 10ಎಚ್ಪಿಗಿಂತ ಹೆಚ್ಚು ವಿದ್ಯುತ್ ನೀಡುತ್ತಾರೆ. ಒಬ್ಬ ಬಡ ಕಾಫಿ ಬೆಳೆಗಾರ 1 ಹೆಕ್ಟೇರ್ನಲ್ಲಿ ಕಾಫಿ ಬೆಳೆದರೆ ಕಡಿಮೆ ವಿದ್ಯುತ್ ನೀಡುತ್ತಾರೆ. ಈ ಸಮಸ್ಯೆ 2002 ರಿಂದ ಉದ್ಭವವಾಗಿದ್ದರೂ ಬಗೆಹರಿಸಿಲ್ಲ ಎಂದು ಆರೋಪಿಸಿದರು.
ಸಭೆಯಲ್ಲಿ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ಸದಸ್ಯರಾದ ಎಚ್.ಡಿ. ಅರುಣ್ಕುಮಾರ್, ಡಿ.ಬಿ. ಮಣಿವೇಲ್ ರಾಜು, ಕಾರ್ಯದರ್ಶಿ ಎನ್.ಶ್ರೀರಾಮನ್, ನಿರ್ದೇಶಕ ವಿ.ಜಿ. ಪಂಡಿತ್ ಹಾಗೂ ಸೆಸ್ಕ್ ಅಧಿಕಾರಿಗಳು ಭಾಗವಹಿಸಿದ್ದರು.
ಗುಜರಾತ್ ರಾಜ್ಯದಲ್ಲಿ ತ್ರಿ ಫೇಸ್ನಲ್ಲಿ ದಿನದ 24 ಗಂಟೆ ವಿದ್ಯುತ್ ಪೂರೈಸುತ್ತಾರೆ. ಅದೇ ಕರ್ನಾಟಕದಲ್ಲಿ ಯಾಕೆ ಆಗುವುದಿಲ್ಲ. ಕೆಲವು ಕಡೆ ಟ್ರಾನ್ಸ್ಫಾರ್ಮರ್ ಹೋಗಿದ್ದರು ಯಾರೂ ತಲೆಕೆಡಿಸಿಕೊಂಡಿಲ್ಲ. ಸಾರ್ವಜನಿಕರಿಗೆ ಸರಿಯಾದ ಸೇವೆ ನೀಡದ ಇವರು ಸುಖಾಸುಮ್ಮನೆ ದರ ಹೆಚ್ಚಳ ಮಾಡಬಾರದು.
ಸವಿತಾ ರಂಗನಾಥ್, ಆರ್ಟಿಐ ಕಾರ್ಯಕರ್ತೆ
ನಮ್ಮೂರಿನಲ್ಲಿ ಸೆಸ್ಕ್ನವರು ಸರಿಯಾಗಿ ಬಿಲ್ ನೀಡುವುದಿಲ್ಲ. ಒಂದೊಂದು ಸಾರಿ ನಾಲ್ಕು ತಿಂಗಳಿಗೂ ಒಟ್ಟಿಗೆ ಸೇರಿ ನೀಡುತ್ತಾರೆ. ಈ ರೀತಿ ಮಾಡಿದರೆ ಅವರಿಗೂ ಸಮಸ್ಯೆ, ನಮಗೂ ಸಮಸ್ಯೆ. ಮಧುವನಹಳ್ಳಿಗೆ ನಿರಂತರ ಜ್ಯೋತಿ ಕಲ್ಪಿಸಿದ್ದು, 10 ದಿನ ಕಳೆದಿದ್ದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಲ್ಲಿಗೆ ಅಳವಡಿಸಿರುವ ವಿದ್ಯುತ್ ತಂತಿ ಮಳೆಗೆ ಬಿದ್ದು ಹೋಗಿವೆ.
ರವೀಂದ್ರನಾಥ್, ಕೊಳ್ಳೇಗಾಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

