ಬೀದಿ ದೀಪ, ನೀರಿನ ಸ್ಥಾವರಕ್ಕೆ ಮೀಟರ್
ಕ.ಪ್ರ.ವಾರ್ತೆ ಮೈಸೂರು ಏ. 23
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳು ಸ್ವಂತ ಕಟ್ಟಡಗಳು, ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಸ್ಥಾವರಗಳಿಗೆ ಮೀಟರ್ ಅಳವಡಿಸಿ, ಆರ್.ಆರ್. ಸಂಖ್ಯೆ ಪಡೆಯುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ವಿದ್ಯುತ್ ಕಂಪನಿಗಳು (ಎಸ್ಕಾಂಗಳು) ಗ್ರಾಪಂಗಳಿಗೆ ಇಡಗಂಟು ಆಧಾರದ ಮೇಲೆ ವಿದ್ಯುತ್ ಬಿಲ್ ನೀಡುತ್ತಿರುವುದು, ಗ್ರಾಪಂಗಳಿಗೆ ಘಟಕವಾರು ವಿದ್ಯುತ್ ಬಿಲ್ ನೀಡದಿರುವುದು. ಕೆಲವು ಸಂದರ್ಭಗಳಲ್ಲಿ ನಿಷ್ಕ್ರಿಯವಾಗಿರುವ ಬೀದಿ ದೀಪಗಳಿಗೂ ಸಹ ಬಿಲ್ಗಳನ್ನು ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಕೆ. ಯಾಲಕ್ಕಿಗೌಡ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ.
ಗ್ರಾಪಂಗಳಲ್ಲಿ ಬೀದಿ ದೀಪಗಳನ್ನು ನಿರ್ವಹಣೆ ಮಾಡದಿರುವುದು, ಸಾಮಗ್ರಿಗಳ ಖರೀದಿ ಲೆಕ್ಕ ಸಿಗದೆ ಇರುವುದು, ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸದಿರುವುದು ಹಾಗೂ ಬಿಲ್ ಪಾವತಿಸಿರುವ ಬಗ್ಗೆ ಸರಿಯಾದ ಮಾಹಿತಿ ದೊರಕದಿರುವುದರಿಂದ ಹೆಚ್ಚಿನ ಗ್ರಾಪಂಗಳಲ್ಲಿ ವಿದ್ಯುತ್ ಬಿಲ್ ಪಾವತಿ ಮೊತ್ತ ಹಾಗೂ ಈ ಮೊತ್ತಕ್ಕೆ ತಗಲುವ ಬಡ್ಡಿಯ ಮೊತ್ತವನ್ನು ಗ್ರಾಪಂಗಳ ಸಂಪನ್ಮೂಲಗಳಿಂದ ಭರಿಸಲಾಗದೆ ಹೊರೆಯಾಗಿ ಪರಿಣಿಮಿಸಿರುವುದರಿಂದ ಈ ಮಾಹಿತಿಗಳ ಕ್ರೋಢೀಕರಣ ಅಗತ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ.
ಸರ್ಕಾರವು ಗ್ರಾಪಂಗಳಿಗೆ ಪ್ರತಿ ವರ್ಷ ನಾಲ್ಕು ಕಂತುಗಳಲ್ಲಿ ಶಾಸನಬದ್ಧ ಅನುದಾನ ನೀಡುತ್ತದೆ. ಆದರೆ ಈ ಅನುದಾನದಲ್ಲಿ ಶೇ.60 ರಷ್ಟು ಹಣವನ್ನು ಗ್ರಾಪಂಗಳ ವಿದ್ಯುತ್ ಬಿಲ್ಗಳಿಗೆ ಕಡಿತ ಮಾಡಿ, ಉಳಿಕೆ ಶೇ.40 ರಷ್ಟು ಅನುದಾನವನ್ನು ಮಾತ್ರ ನೀಡಲಾಗುತ್ತದೆ. ಗ್ರಾಪಂ ಬಳಸುವ ವಿದ್ಯುತ್ಗೆ ಯಾವುದೇ ಲೆಕ್ಕ ಸಿಗುತ್ತಿಲ್ಲವಾದ್ದರಿಂದ ಮೀಟರ್ ಅಳವಡಿಸಲು ಸೂಚಿಸಲಾಗಿದೆ. ಆ ಮೂಲಕ ಶೇ.60 ರಷ್ಟು ಶಾಸನಬದ್ಧ ಅನುದಾನ ಗ್ರಾಪಂಗಳಿಗೆ ತಲುಪದೇ ಅಪವ್ಯಯವಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಿ: ಗ್ರಾಪಂಗಳಲ್ಲಿನ ಬೀದಿ ದೀಪಗಳ ನಿರ್ವಹಣೆಯ ಸಮಗ್ರ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ಅಳವಡಿಸಲು ಅವಕಾಶ ಕಲ್ಪಿಸಿದ್ದು, ಸದರಿ ಮಾಹಿತಿಯನ್ನು ಏ. 25 ರೊಳಗೆ ಅಳವಡಿಸಲು ಗ್ರಾಪಂಗಳ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದ್ದಾರೆ. ಗ್ರಾಪಂಗಳು ತೆರಿಗೆ ವಸೂಲಾತಿ ಮಾಡಿರುವ ಮತ್ತು ನೀರಿನ ಕರ ಮಾಹಿತಿಯನ್ನು ಪಂಚತಂತ್ರ ತಂತ್ರಾಂಶದಲ್ಲಿ ತಾಲೂಕುವಾರು ಮತ್ತು ಗ್ರಾಪಂವಾರು ಅಪ್ಲೋಡ್ ಮಾಡುವಂತೆಯೂ ತಿಳಿಸಲಾಗಿದೆ. ಪ.ಜಾತಿ, ಪಂಗಡದ ಕಲ್ಯಾಣಕ್ಕಾಗಿ ಶೇ. 25 ರಷ್ಟು ಹಣವನ್ನು ಖರ್ಚು ಮಾಡಿದ ಪ್ರಗತಿ ವಿವರವನ್ನು ಪ್ರತಿ ತಿಂಗಳು 5ರೊಳಗೆ ಪಂಚತಂತ್ರದಲ್ಲಿ ಅಳವಡಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

