ಮೈಸೂರು

ಯುಪಿಒಆರ್ ಕಡ್ಡಾಯ ಮುಂದೂಡಿಕೆಗೆ ಆಗ್ರಹ

Published On :

ಕ.ಪ್ರ.ವಾರ್ತೆ  ಮೈಸೂರು  ಏ. 24
ಆಸ್ತಿ ಮಾರಾಟ, ಖಾತಾ ವರ್ಗಾವಣೆಗೆ ಯುಪಿಆರ್ ಕಡ್ಡಾಯಗೊಳಿಸಿರುವುದನ್ನು ಮುಂದೂಡುವಂತೆ ನಗರ ಪಾಲಿಕೆ ತೆರಿಗೆ ಹಣಕಾಸು ಮತ್ತು ಅಫೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಭೈರಪ್ಪ ಆಗ್ರಹಿಸಿದರು.
ನಗರ ಮಾಪನಾ ಯೋಜನಾಧಿಕಾರಿ ಹಾಗೂ ಭೂದಾಖಲೆಗಳ ಇಲಾಖೆಯು ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಖಾತಾ ವರ್ಗಾವಣೆ ಹಾಗೂ ಇನ್ನಿತರ ವ್ಯವಹಾರಗಳ ಪ್ರಕ್ರಿಯೆಗಳಿಗೆ ಯುಪಿಒಆರ್ ಕಾರ್ಡ್ ಕಡ್ಡಾಯಗೊಳಿಸಿರುವುದರಿಂದ ಜನರಿಗೆ ತುಂಬಾ ಅನಾನುಕೂಲವಾಗಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಆಸ್ತಿಗಳ ನಕ್ಷೆ ಮತ್ತು ಹಕ್ಕು ದಾಖಲೆಗಳನ್ನು ಸಿದ್ದಪಡಿಸುವ ಯೋಜನೆಗಳಿಗೆ 42 ಗ್ರಾಮಗಳು ಮತ್ತು ನಗರ ಪಾಲಿಕೆಯ 65 ವಾರ್ಡ್‌ಗಳ ವ್ಯಾಪ್ತಿಯಲ್ಲಿನ ಖಾತಾ ವರ್ಗಾವಣೆಗೆ ಮೇ 1 ರಿಂದ ಈ ಯೋಜನೆ ಜಾರಿಗೊಳಿಸಿರುವ ಇಲಾಖೆಯ ಉಪನಿರ್ದೇಶಕ ಪ್ರಸಾದ್ ವಿ.ಕುಲಕರ್ಣಿ  ಅವರು ಏ.23 ರಂದು ತರಾತುರಿಯಲ್ಲಿ ಹೊರಡಿಸಿರುವ ಆದೇಶ ಹಿಂಪಡೆಯಬೇಕು ಎಂದು ಹೇಳಿದರು.
ಈಗಾಗಲೇ ಆಸ್ತಿ ಮಾರಾಟ ಮಾಡಲು ಕರಾರು ಪತ್ರ ಮಾಡಿಕೊಂಡಿರುವವರು, ಮಕ್ಕಳ ಮದುವೆಗೋಸ್ಕರ, ವಿದ್ಯಾಭ್ಯಾಸಕ್ಕೆ ಹಾಗೂ ಇನ್ನಿತರೆ ತೊಂದರೆಗೋಸ್ಕರ ಮಾರಾಟ ಮಾಡಲು ಒಪ್ಪಿಗೆ ಮಾಡಿಕೊಂಡಿರುತ್ತಾರೆ. ಆದ್ದರಿಂದ ಯುಪಿಒಆರ್ ಕಡ್ಡಾಯದಿಂದ ಅವರ ಜೀವನಕ್ಕೆ ತುಂಬ ತೊಂದರೆಯಾಗಲಿದೆ ಎಂದರು.
ಆದಾಯಕ್ಕೂ ಕಂಟಕ: ಖಾತಾ ವರ್ಗಾವಣೆಗೆ ಯುಪಿಒಆರ್ ಕಡ್ಡಾಯ ಮಾಡಿರುವುದರಿಂದ ಖಾತಾ ನೋಂದಣಿಯ ಶುಲ್ಕ ಹಾಗೂ ಇನ್ನಿತರ ಆದಾಯಗಳು ಮೈಸೂರು ನಗರ ಪಾಲಿಕೆಗೆ ತತಕ್ಷಣದಿಂದ ಕುಂಠಿತವಾಗಲಿದೆ. ಈಗಾಗಲೇ ಯುಪಿಒಆರ್ ಜಾರಿಯಾಗಿ 3 ವರ್ಷಗಳಾದರೂ ಇನ್ನೂ ಸರಿಯಾಗಿ ಆಸ್ತಿ ಮಾಲೀಕರಿಗೆ ಯುಪಿಒಆರ್ ಕಾರ್ಡ್‌ನ್ನು ಕೊಟ್ಟಿಲ್ಲ ಹಾಗೂ ನಗರ ಮಾಪನಾ ಯೋಜನಾಧಿಕಾರಿಗೆ ನಗರ ಪಾಲಿಕೆಯ ಆಸ್ತಿ ವಿವರಗಳನ್ನು ಸರಿಯಾಗಿ ಪಟ್ಟಿ ಮಾಡಿ ಕೊಟ್ಟಿಲ್ಲ ಎಂದು ಅವರು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸಹ ಮಾಪನಾ ಯೋಜನಾಧಿಕಾರಿಗಳಿಗೆ ಆಸ್ತಿ ಮಾಹಿತಿಯನ್ನು ಕೊಟ್ಟಿಲ್ಲ.  ಗ್ರಾಮಠಾಣಾ, ಜನತಾ ಮನೆ, ಆಶ್ರಯ ಮನೆಗಳು ಇವುಗಳ ದಾಖಲೆಗಳನ್ನು ಯೋಜನಾಧಿಕಾರಿಗೆ ಸಲ್ಲಿಸಿಲ್ಲ. ಆದ್ದರಿಂದ ಯುಪಿಒಆರ್ ಅಳವಡಿಸುವಾಗ ನಗರದಲ್ಲಿರುವ 65 ವಾರ್ಡ್‌ಗಳಲ್ಲಿ ಒಂದೊಂದೆ ವಾರ್ಡ್‌ಗಳನ್ನು ಗಣನೆಗೆ ತೆಗೆದುಕೊಂಡು ಮಾಲೀಕರಿಂದ ಪೂರ್ಣ ಮಾಹಿತಿ ಪಡೆದುಕೊಂಡರೆ ಒಳ್ಳೆಯದು. ಇಲ್ಲದಿದ್ದರೆ ಜನರು ಆಸ್ತಿ ಮಾರಾಟ ಮಾಡಲು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.
ಪಾಲಿಕೆಗೂ ಖಾತೆಯಿಲ್ಲ: ಮೈಸೂರು ನಗರ ಪಾಲಿಕೆಯ ಮುಖ್ಯ ಕಚೇರಿ ಕಟ್ಟಡದ ಆಸ್ತಿಗೂ ಯಾವುದೇ ದಾಖಲೆಯಿಲ್ಲ. ಮಹಾರಾಜರು ಕೊಟ್ಟಿದ್ದಾರೆ ಎಂದು ಅದನ್ನು ಬಳಸಲಾಗುತ್ತಿದೆ. ಅಲ್ಲದೆ, ನಗರದ ಅನೇಕ ಹಳೆಯ ಬಡಾವಣೆಗಳ ಮಾಲೀಕರಿಗೆ ಖಾತೆಗಳನ್ನು ಹೊಂದಿರುವುದಿಲ್ಲ. ಹೀಗಿರುವಾಗ  ಯುಪಿಒಆರ್ ಕಡ್ಡಾಯಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಆವರು, ಕೂಡಲೇ ಯುಪಿಒಆರ್ ಕಡ್ಡಾಯಗೊಳಿಸುವುದನ್ನು ಮುಂದೂಡಬೇಕು ಎಂದು ಆಗ್ರಹಿಸಿದರು. ಮಾಜಿ ಮೇಯರ್ ಪುರುಷೋತ್ತಮ್, ಮುಖಂಡ ಚಂದ್ರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.