ಮೈಸೂರು

ಮುಡುಕುತೊರೆಯಲ್ಲಿ ಚಿಕ್ಕ ಜಾತ್ರೆ

Published On :

ಕ.ಪ್ರ.ವಾರ್ತೆ  ಟಿ.ನರಸೀಪುರ  ಏ. 28
ತಾಲೂಕಿನ ಮುಡುಕುತೊರೆಯಲ್ಲಿ ಬಟ್ಟಲು ಪೂಜೆ ಜಾತ್ರೆಯು ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ಬಟ್ಟಲು ಪೂಜೆ (ಚಿಕ್ಕ) ಜಾತ್ರೆ ನಡೆಯುವ ಹಿನ್ನೆಲೆ ಸಹಸ್ರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಜಾತ್ರೆ ಕಳೆಗಟ್ಟಿತ್ತು. ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿದ್ದರಿಂದ ಶ್ರೀ ಭ್ರಮರಾಂಬಿಕೆ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ತಿರುಪತಿಯಂತೆ ಭಕ್ತರು ಸಾಲುಗಟ್ಟಿ ನಿಂತಿದ್ದರು.
ಸೋಮಶೈಲವಾದ ಮುಡುಕುತೊರೆಯಲ್ಲಿ ಕಳೆದ ಫೆಬ್ರವರಿ ಮಾಹೆಯಲ್ಲಿ ಜರುಗುವ ಜಾತ್ರಾ ಮಹೋತ್ಸವ (ದೊಡ್ಡ ಜಾತ್ರೆ)ದ ಪರ್ವತ ಪರಿಷೆಯಲ್ಲಿ ಮಾಲೆ ಧರಿಸುವ ಬಸವನೊಂದಿಗೆ ಜಗನ್ಮಾತೆ ಶ್ರೀ ಭ್ರಮರಾಂಬಿಕೆ ದೇವರ ಗುಡ್ಡರ ತಂಡ ಆಂಧ್ರದ ಶ್ರೀಶೈಲಕ್ಕೆ ತೆರಳುತ್ತಿದ್ದಾರೆ. ಮೂವತ್ತು ದಿನಗಳ ನಂತರ ಮುಡುಕುತೊರೆಗೆ ಆಗಮಿಸಿದಾಗ ಬಟ್ಟಲು ಪೂಜೆ (ಚಿಕ್ಕ ಜಾತ್ರೆ) ನಡೆಯುವುದು ವಾಡಿಕೆಯಾಗಿದೆ.
ಕಜ್ಜಾಯ, ಬಾಳೆಹಣ್ಣನ್ನು ಸಕ್ಕರೆಯೊಂದಿಗೆ ಮಿಶ್ರಣ ಮಾಡಿ ಲೇಹ್ಯ ತಯಾರಿಸಿ, ದೇವರ ಗುಡ್ಡರಿಗೆ ಬಡಿಸುವುದು ಹಾಗೂ ಬೆಟ್ಟದ ಮೆಟ್ಟಿಲ ಮೇಲೆ ಬಾಳೆ ಹಣ್ಣು, ತಾಂಬೂಲವಿಟ್ಟು ಪೂಜೆ ಸಲ್ಲಿಸುವುದು ಜಾತ್ರೆಯ ವಿಶೇಷತೆ. ಇನ್ನುಳಿದಂತೆ ಎಲ್ಲೆಡೆ ಜಾತ್ರೆಯಲ್ಲಿ ಹರಕೆ ಹೊತ್ತವರು ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಹೆಸರು ಬೆಳೆಯನ್ನು ವಿತರಿಸಿದರು. ಬೆಟ್ಟದ ಪ್ರವೇಶ ದ್ವಾರದಲ್ಲಿ ಹಾಕಿರುವ ಚಪ್ಪರದಡಿಯಲ್ಲಿ ದೇವರ ಗುಡ್ಡರ ಬಟ್ಟಲು ಪೂಜೆ ಮಾಡುವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.
ಮುಪ್ಪಿನ ಮಲ್ಲಪ್ಪನ ಬೆಟ್ಟವೆಂದೇ ಖ್ಯಾತಿ ಪಡೆದಿರುವ ಮುಡುಕುತೊರೆಯಲ್ಲಿ ಶ್ರೀ ಭ್ರಮರಾಂಬಿಕೆ ಮಲ್ಲಿಕಾರ್ಜುನ ಸ್ವಾಮಿಗೆ ಪೌರಾಣಿಕ ಧಾರ್ಮಿಕ ಹಿನ್ನೆಲೆ ಮಹತ್ವವಿದೆ. ಯಾವುದೇ ಪ್ರಚಾರವಿಲ್ಲದಿದ್ದರೂ ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಜನರು ಸಾಗರದಂತೆ ಬಂದು ಸೇರುವುದು ಧಾರ್ಮಿಕ ಭವ್ಯ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.