ಮೈಸೂರು

ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ  ಟಿ.ನರಸೀಪುರ  ಏ. 29
ಕುಡಿಯುವ ನೀರಿಗೆ ಆಗ್ರಹಿಸಿ ಮೇಗಳಕೊಪ್ಪಲು ಗ್ರಾಮಸ್ಥರು ಮಂಗಳವಾರ ತಾಪಂ ಕಚೇರಿ ಎದುರು ಖಾಲಿ ಕೊಡೆಗಳನ್ನು ಹಿಡಿದು ಪ್ರತಿಭಟಿಸಿದರು.
ತಾಪಂ ಕಚೇರಿಗೆ ಮುತ್ತಿಗೆ ಹಾಕಿದ ತಾಲೂಕಿನ ಮೇಗಳಕೊಪ್ಪಲು ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹತ್ತು ದಿನಗಳಿಗೊಮ್ಮೆ ಕೊಡುವ ಕುಡಿಯುವ ನೀರನ್ನು ಸಮರ್ಪಕವಾಗಿ ನಿತ್ಯವೂ ಪೂರೈಸಬೇಕೆಂದು ಒತ್ತಾಯಿಸಿ, ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಂಕರ್ ಮಾತನಾಡಿ, ತಾಲೂಕಿನಲ್ಲಿ ಕಾವೇರಿ ನದಿ ಹರಿದರೂ ಮೇಗಳಕೊಪ್ಪಲು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಸಿಎಂ ಮತ್ತು ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲಿ ಕುಡಿಯುವ ನೀರಿಗಾಗಿ ಹಾಗೂ ಜನ ಜಾನುವಾರುಗಳು ಪರದಾಡಬೇಕಿದೆ. ಕುಡಿಯುವ ನೀರಿಗೆ ಸರ್ಕಾರ ಕೋಟಿ ಕೋಟಿ ಅನುದಾನ ನೀಡಿದರೂ ಸ್ಥಳೀಯ ಗ್ರಾಪಂ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ರಾಮಪ್ಪ ಹಾಗೂ ತಾಪಂ ಇಒ ಜೈಕೃಷ್ಣ ಅವರು ಸ್ಥಳಕ್ಕಾಗಮಿಸಿ, ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವ ಎದುರಾಗಿದೆ. ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ವಾರದೊಳಗೆ ಮೇಗಳಕೊಪ್ಪಲು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜು, ರೈತ ಮುಖಂಡರಾದ ನಾರಾಯಣ, ಮಾದಾಪುರ ಶಿವಣ್ಣ, ಬಿ.ಪಿ.ಪರಶಿವಮೂರ್ತಿ, ಸಿದ್ದೇಶ್, ಸುರೇಶ್, ಪುರುಷೋತ್ತಮ್, ರಂಗಸ್ವಾಮಿ, ಡಿ. ಮಂಟೇಸ್ವಾಮಿ, ಕುಚೇಲ, ಪುಟ್ಟಮ್ಮ, ನಾಗಮ್ಮ, ಶಶಿ, ರೇಣುಕ, ಗೌರಮ್ಮ, ಉಮಾ, ಮಂಜುಳ, ಮಮತಾ, ಶಾಲಿನಿ, ಬೆಟ್ಟಮ್ಮ, ಚಿಕ್ಕತಾಯಮ್ಮ, ನಿಂಗಮ್ಮ ಸೇರಿದಂತೆ ಮೇಗಳಕೊಪ್ಪಲು ಸುತ್ತಮುತ್ತಲಿನ ನಿವಾಸಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.