ಮೈಸೂರು

ಕಾರ್ಮಿಕ ನಿಧಿ ಸ್ಥಾಪಿಸಿ, ಅಭಿವೃದ್ಧಿ ಹೊಂದಿ

Published On :

ಕ.ಪ್ರ.ವಾರ್ತೆ    ಮೈಸೂರು    ಫೆ. 2
ಕಟ್ಟಡ ಕಾರ್ಮಿಕರು ತಮ್ಮದೆ ಆದ ನಿಧಿ ಸ್ಥಾಪಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ತನ್ವೀರ್ಸೇಠ್ ಸಲಹೆ ನೀಡಿದರು.
ಜೆ.ಕೆ. ಮೈದಾನದ ವೈದ್ಯಕೀಯ ಕಾಲೇಜು ಅಮೃತ ಮಹೋತ್ಸವ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಭಾರತ ಮಾತಾ ಕಟ್ಟಡ ಕಾರ್ಮಿಕರ ಸಂಘ ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತಮಗೆ ಇಎಸ್ಐ ಸೌಲಭ್ಯ ದೊರಕುತ್ತದೆ ಎಂಬ ಸುಳ್ಳು ಭರವಸೆಯನ್ನು ನೀಡುವುದಿಲ್ಲ. ಇಎಸ್ಐ ಸೌಲಭ್ಯ ದೊರೆಯಲು ಕಾರ್ಮಿಕ ಇಲಾಖೆಯಲ್ಲಿ ನಿಗದಿತ ಕಟ್ಟುಪಾಡುಗಳಿವೆ. ಅದಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಆದರೆ ರಾಷ್ಟ್ರೀಯ ವಿಮಾ ಯೋಜನೆಯಡಿ ತಮಗೆ ಉಚಿತ ವೈದ್ಯಕೀಯ ಸೌಲಭ್ಯ ದೊರೆಯಲು ಅವಕಾಶ ಇದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಕೂಡಲೇ ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ಬಯೋವುಟ್ರಿಕ್ ಕಾರ್ಡ್ಗಳನ್ನು ನೀಡಬೇಕು ಎಂದು ಕೋರಿದರು.
ಕಾರ್ಮಿಕರು ತಮ್ಮದೆ ಆದ ನಿಧಿ ಸ್ಥಾಪಿಸಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಹೊಂದಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರವು ಕಾರ್ಮಿಕರ ಪರವಾದ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದನ್ನು ತಾವು ಸದುಪಯೋಗ ಮಾಡಿಕೊಳ್ಳಬೇಕು. ಕಾರ್ಮಿಕ ಇಲಾಖೆಯಲ್ಲಿ ಸುಮಾರು 2480 ಕೋಟಿ ಇದೆ. ಅದರ ಮೂಲಕ ಎಲ್ಲಾ ಜಿಲ್ಲೆಗಳಲ್ಲೂ ತಾಂತ್ರಿಕ ತರಬೇತಿ ಕೇಂದ್ರ ತೆರೆಯಲು ಸರ್ಕಾರ ಚಿಂತಿಸಿದೆ. ಪ್ರತಿ ಜಿಲ್ಲೆಯಲ್ಲಿ ತಲಾ 2 ಕೋಟಿ ವೆಚ್ಚದಲ್ಲಿ ವಸತಿ ಶಾಲೆ ತೆರೆಯಲಾಗುತ್ತಿದೆ ಎಂದರು.
ದೂರು ದಾಖಲು ಕೇಂದ್ರ ಬೇಕು: ಮಹಿಳಾ ಕಾರ್ಮಿಕರಿಗೆ ಭದ್ರತೆ ಒದಗಿಸಬೇಕು. ಮಹಾನಗರ ಪಾಲಿಕೆಯಲ್ಲಿ ಮಹಿಳಾ ದೂರು ದಾಖಲು ಕೇಂದ್ರ ತೆರೆಯಬೇಕು ಎಂದ ಅವರು, ಕುರಿಮಂಡಿಯಲ್ಲಿ ಪಾಳುಬಿದ್ದ ಸಮುದಾಯ ಭವನವನ್ನು ಕಟ್ಟಡ ಕಾರ್ಮಿಕರ ಸಂಘಕ್ಕೆ ಹಸ್ತಾಂತರಿಸುವ ಕುರಿತು ಪಾಲಿಕೆಯೊಂದಿಗೆ ಚರ್ಚಿಸುವುದಾಗಿ ಹೇಳಿದರು.
ಸಂಸದ ಎಚ್. ವಿಶ್ವನಾಥ್ ಮಾತನಾಡಿ, ಸರ್ಕಾರ ಕಟ್ಟಡ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿದೆ. ಆದರೆ ಅದನ್ನು ಫಲಾನುಭವಿಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಕಟ್ಟಡ ಕಾರ್ಮಿಕರ ನೋಂದಣಿಗೆ ಅಗತ್ಯವಿರುವ ಕಂಪ್ಯೂಟರ್ ಮತ್ತು ಒಬ್ಬರು ನೌಕರರನ್ನು ನಮ್ಮ ಕಚೇರಿಯಿಂದ ನೀಡುತ್ತೇನೆ. ಅದನ್ನು ಬಳಸಿಕೊಳ್ಳಿ. ಮುಂದಿನ ದಿನಗಳಲ್ಲಿ ಕಾರ್ಮಿಕರ ದಿನಾಚರಣೆಯಂದು ಸಂಸದರ ಅಂಗಳ ಕಾರ್ಯಕ್ರಮ ರೂಪಿಸಿ ಕಾರ್ಮಿಕರನ್ನು ಸನ್ಮಾನಿಸುವುದಾಗಿ ಭರವಸೆ ನೀಡಿದರು.
ಕಟ್ಟಡ ಕಾರ್ಮಿಕರಿಗೆ ವಸತಿ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣ, ಉಚಿತ ಬಸ್ ಪಾಸ್ ಸೌಲಭ್ಯ, ಮಹಿಳಾ ಕಟ್ಟಡ ಕಾರ್ಮಿಕರಿಗೆ ಪ್ರತ್ಯೇಕ ಸೌಲಭ್ಯ, ಕಟ್ಟಡ ಕಾರ್ಮಿಕರ ಭದ್ರತಾ ಮಂಡಳಿ ರಚಿಸುವಂತೆ ಮನವಿ ಸಲ್ಲಿಸಿದರು. ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ವೆಂಕಟೇಶ್, ಡಿಡಿಪಿಐ ಬಸಪ್ಪ, ಪಾಲಿಕೆ ಎಡಿಸಿ ರಾಜು, ಕಾಂಗ್ರೆಸ್ ಮುಖಂಡ ಮಂಜುನಾಥ್, ಕಾರ್ಮಿಕರ ಸಂಘದ ಅಧ್ಯಕ್ಷ ಜಿ. ಸಿದ್ದರಾಜು, ಡಿ. ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಮಂಟೇಲಿಂಗ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.