ಮೈಸೂರು

ಬಾಡೂಟ ವ್ಯವಸ್ಥೆ ಮಾಡಿದ್ದ ವಿಶ್ವನಾಥ್

Published On :

ಹುಣಸೂರು: ಸಂಸದ ಎಚ್. ವಿಶ್ವನಾಥ್ ಅವರು ಚುನಾವಣೆಗೂ ಮುನ್ನ ದೇವರಿಗೆ ಕುಟುಂಬದವರು ಹೊತ್ತಿದ್ದ ಹರಕೆ ತೀರಿಸಲು ಬಲಿ ಪೂಜೆ ನೀಡಿ, ಸಾವಿರಾರು ಮಂದಿಗೆ ಬಾಡೂಟ ಮಾಡಿದ್ದರು. ಹುಣಸೂರು ತಾ.ನ ಹನಗೋಡು ಬಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದೊಳಗಿರುವ ಹಂದಿಕೆರೆ ಚೌಡಮ್ಮರಿಗೆ ಮಂಗಳವಾರ ಮಧ್ಯಾಹ್ನ ಶಾಸಕ ಎಚ್.ಪಿ. ಮಂಜುನಾಥ್ ಹಾಗೂ ಕುಟುಂಬ ಸದಸ್ಯರೊಂದಿಗೆ ತೆರಳಿ ದೇವಿಗೆ ಬಲಿ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ನಂತರ ಉದ್ಯಾನದಂಚಿನ ನೇರಳಕುಪ್ಪೆ ಗೇಟ್ ಬಳಿಯ ಹೊಲವೊಂದರಲ್ಲಿ ಹಾಕಲಾಗಿದ್ದ ಬೃಹತ್ ಪೆಂಡಾಲ್‌ನಲ್ಲಿ ಸುಮಾರು 4 ರಿಂದ 5 ಸಾವಿರ ಮಂದಿ ಬಾಡೂಟ ವ್ಯವಸ್ಥೆ ಮಾಡಿದ್ದರು. ಇನ್ನೇನು ಸಂಸತ್ ಚುನಾವಣೆ ಸಮೀಪಿಸುತ್ತಿರುವುದರಿಂದಲೇ ಸಂಸದರು ಎಲ್ಲಡೆ ಬಾಡೂಟದ ವ್ಯವಸ್ಥೆ  ಕಲ್ಪಿಸುತ್ತಿದ್ದಾರೆಂದು ವ್ಯಾಪಕ ಮಾತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ.
ಸಿದ್ದರಾಮೇಶ್ವರ ಜಯಂತಿ ನಾಳೆ
ಜಿಲ್ಲಾಡಳಿತ ಮತ್ತು ಶಿವಯೋಗಿ ಸಿದ್ದರಾಮೇಶ್ವರ ಬೋವಿ ಜನಾಂಗ ಹಿತರಕ್ಷಣಾ ಸಮಿತಿ ಸಂಯುಕ್ತವಾಗಿ ಫೆ.6 ರಂದು ಶಿವಯೋಗಿ ಸಿದ್ದರಾಮೇಶ್ವರ 841ನೇ ಜಯಂತಿ ಮಹೋತ್ಸವ ಆಯೋಜಿಸಿದೆ. ಅಂದು ಬೆಳಗ್ಗೆ 9ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಜಯಂತಿ ಅಂಗವಾಗಿ ನಡೆಯುವ ಮೆರವಣಿಗೆಗೆ ಮೇಯರ್ ಎನ್.ಎಂ. ರಾಜೇಶ್ವರಿ ಚಾಲನೆ ನೀಡುವರು. ಮೆರವಣಿಗೆಯು ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಮೂಲಕ ಸಾಗಿ ಎಂಜಿನಯರುಗಳ ಸಂಸ್ಥೆ ಬಳಿ ಅಂತ್ಯಗೊಳ್ಳಲಿದೆ ಎಂದು ಸಮಿತಿಯ ಸದಸ್ಯ ಹಾಗೂ ಕಾಂಗ್ರೆಸ್ ವಕ್ತಾರ ಜಿ.ವಿ. ಸೀತಾರಾಂ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಂತರ ಬೆಳಗ್ಗೆ 11ಕ್ಕೆ ಎಂಜಿನಿಯರುಗಳ ಸಂಸ್ಥೆಯ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯುವ ಜಯಂತಿಯನ್ನು ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಉದ್ಘಾಟಿಸುವರು. ಸಿದ್ದರಾಮೇಶ್ವರ ಬೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ವಾಸು ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಣ್ಣ ನೀರಾವರಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿ ಹಾಗೂ ಸ್ಥಳೀಯ ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಅತಿಥಿಗಳಾಗಿ ಭಾಗವಹಿಸುವರು ಎಂದರು. ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ನವೀನ್ ಮತ್ತು ತಂಡದವರಿಂದ ವಚನ ಗಾಯನ ಏರ್ಪಡಿಸಲಾಗಿದೆ. ಈ ಜಯಂತಿಯಲ್ಲಿ ಬೋವಿ ಸಮಾಜದವರು, ಸಾರ್ವಜನಿಕರು, ಸಂಘ ಸಂಸ್ಥೆಯವರು ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋರಿದರು. ಪಾಲಿಕೆ ಮಾಜಿ ಸದಸ್ಯ ಜಿ. ನಾಗರಾಜ್, ಮುಖಂಡರಾದ ಗೋಪಾಲ್, ಮಲ್ಲಣ್ಣ, ಗಿರಿಸ್ವಾಮಿ, ಬಿ. ಮಾರಪ್ಪ ಇದ್ದರು.
ಡಿಎಚ್‌ಒ ಅಧಿಕಾರ ಸ್ವೀಕಾರ
ಮೈಸೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಡಾ.ಎಚ್.ಟಿ. ಪುಟ್ಟಸ್ವಾಮಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದರು. ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸುವಂತೆ ಅವರು ಕೋರಿದ್ದಾರೆ.
9ಕ್ಕೆ ಸಾಮೂಹಿಕ ಸೂರ್ಯ ನಮಸ್ಕಾರ
ಮೈಸೂರು: ಮೈಸೂರು ಯೋಗ ಅಸೋಸಿಯೇಷನ್ ರಥಸಪ್ತಮಿ ಅಂಗವಾಗಿ ವಿಶ್ವ ಕಲ್ಯಾಣಕ್ಕಾಗಿ ಫೆ.9ರ ಬೆಳಗ್ಗೆ 6.15 ರಿಂದ 7.45 ರವರೆಗೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ 108 ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಿದೆ. ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಯೋಗಾನರಸಿಂಹಸ್ವಾವು ದೇವಸ್ಥಾನದ ಸಂಸ್ಥಾಪಕ ಭಾಷ್ಯಂ, ಜಿಎಸ್‌ಎಸ್ ಸಂಸ್ಥೆಯ ಶ್ರೀಹರಿ ಅತಿಥಿಗಳಾಗುವರು ಎಂದು ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಬಿ. ಧನ್ಯಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮೊ. 99456 14565 ಸಂಪರ್ಕಿಸಬಹುದು.
ಆಪ್ತ ಸಮಾಲೋಚಕರ ಬೇಡಿಕೆ ಈಡೇರಿಕೆಗೆ ಆಗ್ರಹ
ಮೈಸೂರು: ಕೆಎಸ್‌ಎಪಿಎಸ್ ಆಪ್ತ ಸಮಾಲೋಚಕರ ವಿವಿಧ ಬೇಡಿಕೆಗಳನ್ನು ಈಡೇರಿಸಿ, ಎಚ್‌ಐವಿ ಪೀಡಿತರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ವಿವಿಧ ಸಂಘಟನೆಯವರು ಆಗ್ರಹಿಸಿದ್ದಾರೆ. ಆಪ್ತ ಸಮಾಲೋಚಕರ ಮುಷ್ಕರದಿಂದಾಗಿ ಒಂದು ವಾರದಿಂದ ನಮ್ಮ ಸಮುದಾಯದವರಿಗೆ ಅದರಲ್ಲೂ ಎಚ್‌ಐವಿ ಬಾಧಿತರಿಗೆ ತುಂಬಾ ತೊಂದರೆಯಾಗಿದೆ. ಯಾವುದೇ ರೀತಿಯ ಚಿಕಿತ್ಸೆ, ಔಷಧ ದೊರೆಯುತ್ತಿಲ್ಲ. ಹೀಗಾಗಿ ಆಪ್ತ ಸಮಾಲೋಚಕರ ಬೇಡಿಕೆ ಈಡೇರಿಸಿ, ಎಚ್‌ಐವಿ ಬಾಧಿತರಿಗೆ ಸೇವೆ ಮುಂದುವರಿಸಬೇಕು ಎಂದು ಆಶೋದಯ ಸಮಿತಿ, ಆದರ್ಶ, ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ಆನಂದ ಜ್ಯೋತಿ ನೆಟ್‌ವರ್ಕ್ ಸಂಘಟನೆಯವರು ಒತ್ತಾಯಿಸಿದ್ದಾರೆ.
ಜೆಡಿಎಸ್ ಅಲ್ಪಸಂಖ್ಯಾತರ ಜಾಗೃತಿಗೆ ಫಂಕ್ಷನ್ ಹಾಲ್‌ನಲ್ಲಿ ಇಂದು ಸಭೆ
ಮೈಸೂರು: ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ವಿಭಾಗದಿಂದ ಫೆ.5ರ ಬೆಳಗ್ಗೆ 11ಕ್ಕೆ ಎನ್.ಆರ್. ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಎಆರ್‌ಕೆ ಫಂಕ್ಷನ್ ಹಾಲ್‌ನಲ್ಲಿ ಜಾಗೃತಿ ಸಭೆ ನಡೆಯಲಿದೆ. ಈ ಸಭೆಯನ್ನು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಮುಹಿಬ್ ಅಲ್ತಾಪ್ ಉದ್ಘಾಟಿಸುವರು. ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎಸ್. ಚಿಕ್ಕಮಾದು, ನಗರಾಧ್ಯಕ್ಷ ರಾಜಣ್ಣ ಭಾಗವಹಿಸುವರು ಎಂದು ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗ ಜಿಲ್ಲಾಧ್ಯಕ್ಷ ಅಜೀಜುಲ್ಲಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಾಗೃತಿ ಜಾಥಾವು ಬೆಂಗಳೂರು, ರಾಮನಗರ, ಮಂಡ್ಯದಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಜಾಗೃತಿ ಸಭೆಯನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿದೆ ಎಂದರು.
ಆನೆ ಮರಿಗಳ ದತ್ತು ಸ್ವೀಕಾರ
ಮೈಸೂರು: ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಬೆಂಗಳೂರಿನ ಶ್ರೀವಳ್ಳಿ ಹಾಗೂ ಹಂಸಿನಿ ಅವರು ಶ್ರೀ ಚಾಮರಾಜೇಂದ್ರ ಮೃಗಾಲಯದ ಮಾದೇಶ ಮತ್ತು ಐಶ್ವರ್ಯ ಎಂಬ ಎರಡು ಆನೆ ಮರಿಗಳನ್ನು 60 ಸಾವಿರಕ್ಕೆ ದತ್ತು ಸ್ವೀಕರಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ನಾಳೆ ರಥಸಪ್ತಮಿ ಪೂಜೆ
ಮೈಸೂರು: ಅರಮನೆ ಆವರಣದ ದೇವಾಲಯಗಳ ಉತ್ಸವ ಮೂರ್ತಿಯನ್ನು ಫೆ.6 ರಂದು ರಥಸಪ್ತಮಿ ಅಂಗವಾಗಿ ಬಿಜಯ ಮಾಡಿಸಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂದು ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ ಅರಮನೆಯ ಎಲ್ಲಾ ಪ್ರವೇಶ ದ್ವಾರಗಳಿಂದ ಭಕ್ತರಿಗೆ ಪ್ರವೇಶ ಇರುತ್ತದೆ. ಭಕ್ತರು ಭಾಗವಹಿಸಬೇಕು ಎಂದು ಅರಮನೆ ಮುಜರಾಯಿ ಸಂಸ್ಥೆ ವ್ಯವಸ್ಥಾಪಕರು ಕೋರಿದ್ದಾರೆ.
ಘನತ್ಯಾಜ್ಯ ಘಟಕ: ಸಾಮರ್ಥ್ಯ ಹೆಚ್ಚಳಕ್ಕೆ ತೀರ್ಮಾನ
ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂ ಸಮೀಪದ ಘನತ್ಯಾಜ್ಯ ನಿರ್ವಹಣಾ ಘಟಕದ ಸಾಮರ್ಥ್ಯ ಹೆಚ್ಚಳಕ್ಕೆ ನಗರ ಪಾಲಿಕೆಯ ಕಲಾಪ ಸಲಹಾ ಸಮಿತಿ ತೀರ್ಮಾನಿಸಿದೆ. ಮಂಗಳವಾರ ಪಾಲಿಕೆಯಲ್ಲಿ ನಡೆದ ಸಭೆಯಲ್ಲಿ ವಿದ್ಯಾರಣ್ಯಪುರಂನಲ್ಲಿರುವ 200 ಟನ್ ಸಾಮರ್ಥ್ಯದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು 350 ಟನ್‌ಗೆ ವಿಸ್ತರಿಸಲು ಸಭೆ ತೀರ್ಮಾನಿಸಿತು. ಅಲ್ಲದೆ ಕಸವನ್ನು ಮೂಲದಲ್ಲಿಯೇ ಬೇರ್ಪಡಿಸಲು ನಗರದ 1.70 ಲಕ್ಷ ಮನೆಗಳಿಗೆ ಎರಡು ಬಕೆಟ್ (ಒಣ ಕಸ ಮತ್ತು ಹಸಿ ಕಸ) ನೀಡಲು ಸಭೆ ತೀರ್ಮಾನಿಸಿತು.
ಅಲ್ಲದೆ ಆಯಾ ವಲಯ ಕಚೇರಿ ಅಧಿಕಾರಿಗಳ ಮೂಲಕ ಕಸ ಬೇರ್ಪಡಿಸುವ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಕೆಸರೆ ಸಮೀಪದಲ್ಲಿರುವ ಶೂನ್ಯ ಘನತ್ಯಾಜ್ಯ ನಿರ್ವಹಣಾ ಘಟಕವನ್ನು 200 ಟನ್ ಸಾಮರ್ಥ್ಯಕ್ಕೆ ವಿಸ್ತರಿಸಲು ಸಭೆ ನಿರ್ಣಯಿಸಿತು. ಮೇಯರ್ ಎನ್.ಎಂ.ರಾಜೇಶ್ವರಿ, ಉಪ ಮೇಯರ್ ಶೈಲೇಂದ್ರ, ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಮಾಜಿ ಮೇಯರ್‌ಗಳಾದ ಸಂದೇಶ್‌ಸ್ವಾಮಿ, ಅಯೂಬ್‌ಖಾನ್, ಆಡಳಿತ ಪಕ್ಷದ ನಾಯಕ ಕೆ.ವಿ. ಮಲ್ಲೇಶ್, ಪ್ರತಿಪಕ್ಷ ನಾಯಕ ಡಿ. ನಾಗಭೂಷಣ್ ಸಭೆಯಲ್ಲಿ ಭಾಗವಹಿಸಿದ್ದರು.
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು: ದೆಹಲಿಯಲ್ಲಿ ಈಶಾನ್ಯ ರಾಜ್ಯದ ವಿದ್ಯಾರ್ಥಿಯೊಬ್ಬನನ್ನು ಕೊಲೆ ಮಾಡಿರುವುದನ್ನು ಖಂಡಿಸಿ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟಿಸಿದರು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿಯಿಂದ ಮೆರವಣಿಗೆ ಹೊರಟ ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಗಾಂಧಿ ಚೌಕ, ಚಿಕ್ಕಗಡಿಯಾರ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ಯುವಕನ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು. ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಓದುತ್ತಿರುವ ಹಾಗೂ ಉದ್ಯೋಗದಲ್ಲಿರುವ ಈಶಾನ್ಯ ರಾಜ್ಯದವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.ಇದೇ ವೇಳೆ ನಗರದ ವಿವಿಧ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಮೇಣದ ಬತ್ತಿ ಹಚ್ಚುವ ಮೂಲಕ ಮೃತ ಯುವಕನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಈಶಾನ್ಯ ರಾಜ್ಯಗಳ ವಿದ್ಯಾರ್ಥಿ ಮುಖಂಡ ತೌಬಿನ್ ನೇತೃತ್ವ ವಹಿಸಿದ್ದರು.
ಹಾಸ್ಟೆಲ್ ಸಮಸ್ಯೆಗೆ ಮುಕ್ತಿ: ವಿದ್ಯಾರ್ಥಿಗಳ ಧರಣಿ ಹಿಂದಕ್ಕೆ
ಮೈಸೂರು: ಹಾಸ್ಟೆಲ್ ಸಮಸ್ಯೆ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿಗಳು ಹಾಗೂ ಪದವಿ ವಿದ್ಯಾರ್ಥಿನಿಯರು ನಡೆಸಿದ ಪ್ರತಿಭಟನೆಗೆ ಅಧಿಕಾರಿಗಳು ಮಣಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಎದುರು ಹಾಸ್ಟೆಲ್ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಜಿಪಂ ಸಿಇಒ ಪಿ.ಎ.ಗೋಪಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಸಮಾಜ ಕಲ್ಯಾಣಾಧಿಕಾರಿಗಳನ್ನು ಕರೆಸಿ, ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಸೂಚಿಸಿದರು. ಈ ಹಿನ್ನೆಲೆಯಲ್ಲಿ ವಿವಿ ಮೊಹಲ್ಲಾ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಪದವಿ ಓದುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿನಿಯರು ಉಳಿದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಬೋಗಾದಿ ಬ್ಯಾಂಕ್ ನೌಕರರ ಬಡಾವಣೆಯಲ್ಲಿರುವ ವರ್ಗೀಕೃತ ಬಾಲಕರ ಕಾನೂನು ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಿಗೆ 10 ದಿನದೊಳಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ಕಾನೂನು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಇಂದು ನೀರು ಪೂರೈಕೆ ವ್ಯತ್ಯಯ
ಮೈಸೂರು: ಕಡಕೊಳ ವಿದ್ಯುತ್ ಸೇವಾ ಠಾಣೆಯಲ್ಲಿ ಫೆ.5ರ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಕಬಿನಿ ಮೂಲಸ್ಥಾವರದ ಪಂಪಿಂಗ್ ಸ್ಟೇಷನ್‌ಗೆ ವಿದ್ಯುತ್ ನಿಲುಗಡೆಯಾಗಲಿದೆ. ಆದ್ದರಿಂದ ನಗರಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜಿನ ಕಾರ್ಯಪಾಲಕ ಎಂಜಿನಿಯರ್ ಹೇಳಿದ್ದಾರೆ. ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ವಾರ್ಡ್‌ಗಳು- ವಾರ್ಡ್ ನಂ. 2 ರಿಂದ 9, 11 ರಿಂದ 18 ಹಾಗೂ 21 ಮತ್ತು 22. ದಟ್ಟಗಳ್ಳಿ 3ನೇ ಹಂತ ಮತ್ತು ಹೂಟಗಳ್ಳಿ.
ಇಂದು ವಿದ್ಯುತ್ ಪೂರೈಕೆ ವ್ಯತ್ಯಯ
ದಕ್ಷಿಣಾ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಇಂಡಸ್ಟ್ರಿಯಲ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.5ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ವಿಶ್ವೇಶ್ವರನಗರ, ಇಂಡಸ್ಟ್ರೀಯಲ್ ಸಬರ್ಬನ್ 1ನೇ ಮತ್ತು 2ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಹೇಳಿದ್ದಾರೆ.
ಇಂದು, ನಾಳೆ ವಿದ್ಯುತ್ ನಿಲುಗಡೆ: ಜ್ಯೋತಿನಗರದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲು ಕೇಬಲ್ ಜೋಡಿಸುವ ಕಾಮಗಾರಿಯನ್ನು ಫೆ.5 ಮತ್ತು 6 ರಂದು ಹಮ್ಮಿಕೊಂಡಿರುವುದರಿಂದ ಆ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಈ ವ್ಯಾಪ್ತಿಗೆ ಒಳಪಡುವ ಉದಯಗಿರಿ, ಪಿ ಆ್ಯಂಡ್ ಟಿ ಕಾಲೋನಿ, ಸತ್ಯನಗರ, ಗಣೇಶನಗರ ಹಾಗೂ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ನರಸಿಂಹರಾಜ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಇಂದಿನಿಂದ ಯೋಗ ಶಿಬಿರ
ಡಿ.ಜೆ. ಚಾರಿಟಬಲ್ ಟ್ರಸ್ಟ್ ಕನಕದಾಸನಗರ ಕೆಬಿಇ ವೃತ್ತದ ಬಳಿಯ ಯೋಗ ಶಾಲೆಯಲ್ಲಿ ಫೆ.5 ರಿಂದ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಯೋಗ, ಅಕ್ಯೂಪ್ರೆಷರ್ ಹಾಗೂ ಮ್ಯಾಗ್ನೆಟಿಕ್ ಶಿಬಿರ ಆಯೋಜಿಸಿದೆ. ಬಿ.ಪಿ, ಗ್ಯಾಸ್ ಟ್ರಬಲ್, ಅಸ್ತಮಾ, ಮಧುಮೇಹ, ಅಲ್ಸರ್ ಮುಂತಾದ ಹಲವು ರೋಗಗಳಿಗೆ ಅಕ್ಯೂಪ್ರೆಷರ್ ಹಾಗೂ ಆಯಸ್ಕಾಂತ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ. 9980697475 ಅಥವಾ 9591197350 ಸಂಪರ್ಕಿಸಿ
ಕೆರೆಗೆ ಬಿದ್ದು ಮಹಿಳೆ ಆತ್ಮಹತ್ಯೆ
ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಮನನೊಂದ ಮಹಿಳೆ ವರುಣ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಮೈಸೂರು ತಾಲೂಕು ಲಲಿತಾದ್ರಿಪುರ ನಿವಾಸಿ ಲೇ. ಬಸವಣ್ಣ ಎಂಬವರ ಪತ್ನಿ ಮಹದೇವಮ್ಮ (36) ಆತ್ಮಹತ್ಯೆ ಮಾಡಿಕೊಂಡವರು. ಇವರ ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಇವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದಾರೆ. ಪತಿ ನಿಧನ ನಂತರ ಮಕ್ಕಳನ್ನು ಸಾಕುವುದು ಹೇಗೆ? ಎಂಬ ಚಿಂತನೆಯಲ್ಲಿದ್ದರು. ಇದರಿಂದ ಮನನೊಂದಿದ್ದ ಮಹದೇವಮ್ಮ ವರುಣ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುದ್ಧಿಮಾಂದ್ಯ ಯುವಕ ನಾಪತ್ತೆ
ನಂಜನಗೂಡು ತಾಲೂಕು ಕಪ್ಪಸೋಗೆ ಗ್ರಾಮ ನಿವಾಸಿ ಲೇ. ಮಹೇಶ್ ಮತ್ತು ನಾಗರತ್ನ ಎಂಬವರ ಪುತ್ರ ಹಾಗೂ ಬುದ್ಧಿಮಾಂದ್ಯ ನವೀನ್ (22) ನಾಪತ್ತೆಯಾಗಿದ್ದಾರೆ. ತಮ್ಮ ಅಳಿಯ ಮಹೇಶ್ ನಿಧನರಾದ ಬಳಿಕ ಮೊಮ್ಮಗ ನವೀನ್‌ನನ್ನು  ಸಾಕಿಕೊಂಡಿದ್ದೆ. ಆತ ಬುದ್ಧಿಮಾಂದ್ಯನಾಗಿದ್ದು, ಜ.19 ರಿಂದ ಕಾಣೆಯಾಗಿದ್ದಾನೆ. ಆತನನ್ನು ಪತ್ತೆ ಮಾಡಿಕೊಡುವಂತೆ ಸಾಕಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.1 ಅಡಿ ಎತ್ತರ, ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ.0821- 2418319, 519 ಕೆ.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
ಮುಳ್ಳೂರು ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಸರಗೂರು: ಸಮೀಪದ ಮುಳ್ಳೂರು ಗ್ರಾಪಂ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ಸಿ. ಮಹದೇವನಾಯಕ ಆಯ್ಕೆಯಾಗಿದ್ದಾರೆ. ಮುಳ್ಳೂರು ಗ್ರಾಪಂ ಅಧ್ಯಕ್ಷ ಸ್ಥಾನವು ಪ. ಜಾತಿ ಮತ್ತು ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಪುಟ್ಟಸ್ವಾಮಿ, ಉಪಾಧ್ಯಕ್ಷರ ಸ್ಥಾನಕ್ಕೆ ಸಿ.ಮಹದೇವನಾಯಕ ಮತ್ತು ಗೋವಿಂದನಾಯಕ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸಿ.ಮಹದೇವನಾಯಕ 7 ಮತಗಳು ಮತ್ತು ಗೋವಿಂದನಾಯಕ ಅವರಿಗೆ 5 ಮತಗಳು ಬಂದವು. ಎರಡು ಮತಗಳು ತಿರಸ್ಕೃತವಾದವು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ. ನಾಗೇಂದ್ರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸದಸ್ಯ ಸಿಂಗೇಗೌಡ, ಭಾಗ್ಯ, ನಾಗರತ್ನಮ್ಮ, ಎಂ.ಡಿ. ಮಂಜುನಾಥ್, ಪುಟ್ಟಮ್ಮ, ಶಶಿ, ಗೌರಮ್ಮ, ಶ್ರೀಕಂಠಪ್ಪ, ಕುಮಾರಿ, ಶಿವಮ್ಮ, ಶಂಕರ್ ಎಲ್ಲ ಸದಸ್ಯರು ಇದ್ದರು. ಮುಳ್ಳೂರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹೇಶ್, ಸಹಾಯಕ ಮಂಜು, ಎಸ್‌ಐ ಅರುಣ್ ಇದ್ದರು.
ಅನಕ್ಷರಸ್ಥರಿಗೆ ಅಕ್ಷರ ಕಲಿಸಿ ಮುಖ್ಯವಾಹಿನಿಗೆ ತನ್ನಿ
ಕೆ.ಆರ್. ನಗರ: ಗ್ರಾಮೀಣ ಪ್ರದೇಶದ ಎಲ್ಲ ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಲಿಂಗಮೂರ್ತಿ ಹೇಳಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಲೋಕಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಸಾಕ್ಷರ ಭಾರತ ಮುಖ್ಯ ತರಬೇತಿದಾರರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಕಡ್ಡಾಯ ಶಿಕ್ಷಣವಿದೆ. ಕಡ್ಡಾಯ ಶಿಕ್ಷಣದಿಂದ ಹೊರತಾದ 15 ರಿಂದ 40 ವರ್ಷದ ಕಲಿಕಾರ್ಥಿಗಳಿಗೆ ಅಕ್ಷರ ಕಲಿಸುವ ಕೆಲಸ ಮಾಡುವಂತೆ ಸ್ವಯಂ ಸೇವಕರಿಗೆ ಪ್ರೇರಣೆ ನೀಡಬೇಕೆಂದು ತಿಳಿಸಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಕೆ.ಶಂಕರೇಗೌಡ, ಜಿಲ್ಲಾ ಸಂಯೋಜಕ ತೇಸಿ ವಿಶ್ವೇಶ್ವರಯ್ಯ, ಸಂಪನ್ಮೂಲ ವ್ಯಕ್ತಿ ರಮಾಮಣಿ, ಮಾಲತಿಬಾಯಿ, ಎಂ.ಮಂಜುನಾಥ್, ತಾಲೂಕು ಸಂಯೋಜಕರಾದ ಬಿ.ಎಸ್. ಸುಬ್ಬೇಗೌಡ, ಎಚ್.ಎಸ್. ಮಂಜುನಾಥ್ ಇದ್ದರು.
ಹೆಗ್ಗನೂರು ಗ್ರಾಪಂ: ಮಂಗಳಮ್ಮ ಅಧ್ಯಕ್ಷೆ
ಸರಗೂರು: ಸಮೀಪ ಹೆಗ್ಗನೂರು ಗ್ರಾಪಂ ಅಧ್ಯಕ್ಷರಾಗಿ ಮಂಗಳಮ್ಮ ನಿಂಗರಾಜು ಮತ್ತು ಉಪಾಧ್ಯಕ್ಷರಾಗಿ ಸುಧಾ ಮಹದೇವಗೌಡ ಅವಿರೋಧ ಆಯ್ಕೆಯಾದರು. ಚುನಾವಣಾ ಅಧಿಕಾರಿ ಎಇಇ ಮೋಹನ್‌ಕುಮಾರ್, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಕೃಷ್ಣದಾಸಯ್ಯ, ಮಂಜು ಇದ್ದರು. ಹೆಗ್ಗನೂರು ಗ್ರಾಪಂ ಸದಸ್ಯ ಶಿವರುದ್ರಪ್ಪ, ಪ್ರಭಾಕರ್, ಶಾಂತಮಲ್ಲು, ಸಿದ್ದರಾಜು, ಚಲುವಮ್ಮ ನಾಗರಾಜಶೆಟ್ಟಿ, ಭಾಗ್ಯಮ್ಮ ನಾಗೇಂದ್ರ, ಕಿರಣ್‌ಕುಮಾರ್, ಮಾರಯ್ಯ, ಶಿವಣ್ಣ, ಜಯಮ್ಮ ಚಲುವಚಾರಿ, ಮಂಗಳಮ್ಮ ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.