ಕುಪ್ಪೇಗಾಲ ಡೇರಿ; ಉಮಾಶಂಕರ್ ಬಣ ಮೇಲುಗೈ
ಮೈಸೂರು: ತಾಲೂಕಿನ ಕುಪ್ಪೇಗಾಲ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಮೈಸೂರು-ಚಾಮರಾಜನಗರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೆ. ಉಮಾಶಂಕರ್ ಬಣದ ಒಟ್ಟು 11 ಮಂದಿ ಭಾರಿ ಬಹುಮತದಿಂದ ಜಯ ಗಳಿಸಿದ್ದಾರೆ.
ಕೆ.ಉಮಾಶಂಕರ್, ಕೆ.ಪಿ.ಅನಿಲ್ಕುಮಾರ್, ನಾಗೇಂದ್ರ, ಕೃಷ್ಣೇಗೌಡ, ಕೆ.ಪಿ.ಮಂಜುನಾಥ್, ಪುಟ್ಟಸ್ವಾಮಿ, ಎಂ.ಶಿವಮೂರ್ತಿ, ಎಂ.ಚಿಕ್ಕರಾಮೇಗೌಡ, ಆರ್.ಪುಟ್ಟರಾಮು, ಗೌರಮ್ಮ, ಸುಂದರಮ್ಮ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.
ಆರ್ಟಿಇಗೆ ಏಳು ಖಾಸಗಿ ಶಾಲೆಗಳ ಒಪ್ಪಿಗೆ
ಮೈಸೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ 7 ಶಾಲೆಗಳು 2014-15ನೇ ಸಾಲಿನಲ್ಲಿ ಆರ್ಟಿಐ ಕಾಯ್ದೆಯಡಿ ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಒಪ್ಪಿದ್ದಾರೆ ಎಂದು ಡಿಡಿಪಿಐ ಎಚ್.ಆರ್.ಬಸಪ್ಪ ತಿಳಿಸಿದ್ದಾರೆ. ಈ ಕೆಳ ಕಂಡ ಶಾಲೆಗಳಿಗೆ ಶಾಲೆಯ ನೆರೆಹೊರೆಯ ಸಾರ್ವಜನಿಕರು ತಮ್ಮ ಮಕ್ಕಳನ್ನು ಪೂರ್ವ ಪ್ರಾಥಮಿಕ ಅಥವಾ 1ನೇ ತರಗತಿಗೆ ಸೇರಿಸಲು ಅರ್ಜಿ ಸಲ್ಲಿಸಬಹುದು. ಮಾನಸ ಸರೋವರ, ಪುಷ್ಕರಣಿ ವಿದ್ಯಾಶ್ರಮ, ವಿಜಯನಗರ 2ನೇ ಹಂತ, ಮೈಸೂರು ಪಬ್ಲಿಕ್ ಶಾಲೆ, ಎಚ್.ಡಿ. ಕೋಟೆ ರಸ್ತೆ, ರಾಯನಕೆರೆ ಅಂಚೆ, ಡೆಲ್ಲಿ ಪಬ್ಲಿಕ್ ಸ್ಕೂಲ್, ಭೂಗತಗಳ್ಳಿ ಪೋಸ್ಟ್, ಬನ್ನೂರು ರಸ್ತೆ, ದಿ ಆರ್ಕಿಡ್ ಎಜುಕೇಶನ್ ಸೊಸೈಟಿ, ಸ್ವಾಮಿ ವಿವೇಕಾನಂದ ರಸ್ತೆ, ರಾಮಕೃಷ್ಣನಗರ, 1ನೇ ಬ್ಲಾಕ್, ದಿ ಆರ್ಕಿಡ್ ಎಜುಕೇಷನ್ ಸೊಸೈಟಿ, ಕುಮಾರಬೀಡು, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಇಲವಾಲ, ಮೈಸೂರು ತಾ., ಶಾಂತ ಪಬ್ಲಿಕ್ ಶಾಲೆ, ಉದಯಗಿರಿ, ಮೈಸೂರು ಉತ್ತರ ವಲಯ, ಪ್ಲಾಸ್ ಕಾರ್ಮಲ್ ಕಾನ್ವೆಂಟ್, ಹಳೆಕೆಸರೆ, ಮೈಸೂರು (ಅಲ್ಪಸಂಖ್ಯಾತರ ಶಾಲೆ ಎಂದು ಇತ್ತೀಚೆಗೆ ಘೋಷಣೆಯಾಗಿದೆ).
ಸಾಮಾಜಿಕ ಆರ್ಥಿಕ ಗಣತಿ ಕರಡು ಪ್ರಕಟ
ಮೈಸೂರು: 2011ರ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯ ಮುಗಿದಿದ್ದು, ಅದರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
ಈ ಕರಡು ಪಟ್ಟಿಯಲ್ಲಿ ಪ್ರತಿ ಕುಟುಂಬದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ವಿವರಗಳನ್ನು ಹಾಗೂ ಕುಟುಂಬ
ಸದಸ್ಯರ ಉದ್ಯೋಗ, ಆದಾಯ, ಚರ, ಸ್ಥಿರ ಆಸ್ತಿಗಳ ವಿವರಗಳಿದ್ದು, ಈ ದತ್ತಾಂಶದಿಂದ ಬಡತನ ರೇಖೆಗಿಂತ ಕೆಳ ಹಂತದಲ್ಲಿರುವ ಜನರನ್ನು ಗುರುತಿಸಲಾಗುತ್ತದೆ ಎಂದಿದ್ದಾರೆ.
ಕರಡು ಪಟ್ಟಿಯನ್ನು ಸಂಬಂಧಪಟ್ಟ ಗ್ರಾಪಂ ಕಚೇರಿ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಪ್ರಕಟಿಸಲಾಗಿದೆ. ಈ ಸಂಬಂಧ ಯಾವುದೇ ಆಕ್ಷೇಪಣೆ, ತಿದ್ದುಪಡಿ ಮತ್ತು ಸೇರ್ಪಡೆಗಳಿದ್ದ ಪಕ್ಷದಲ್ಲಿ ಸಂಬಂಧಪಟ್ಟ ಗ್ರಾಪಂನಲ್ಲಿ ಎ,ಬಿ,ಸಿ,ಡಿ ನಮೂನೆ ಅರ್ಜಿ ಪಡೆದು ಪಂಚಾಯಿತಿ ಕಚೇರಿಯಲ್ಲಿ ನಿಯೋಜಿಸಿರುವ ಪಿಡಿಒ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಫೆ.24 ರೊಳಗೆ ಸಲ್ಲಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮಾ.13 ರೊಳಗೆ ಸಾರ್ವಜನಿಕರಿಂದ ಸ್ವೀಕರಿಸಿದ ಅರ್ಜಿಯನ್ನು ಪಟ್ಟಿಯಲ್ಲಿ ವಿಲೀನಗೊಳಿಸಲಾಗುವುದು. ಮಾ. 27ರೊಳಗೆ ಅಂತಿಮ ಗಣತಿ ಪಟ್ಟಿ ಪ್ರಕಟಿಸಲಾಗುವುದು. ಮತ್ತೆ 7 ದಿನಗಳ ಕಾಲಾವಕಾಶ ನೀಡಿ ಸ್ವೀಕರಿಸಿದ ಮನವಿಗಳನ್ನು ಅಂತಿಮ ಪಟ್ಟಿಗೆ ಸೇರಿಸಿ ಹೆಚ್ಚುವರಿ ಪಟ್ಟಿಯನ್ನು ಏ.15 ರೊಳಗೆ ಪ್ರಕಟಿಸಲಾಗುವುದು ಎಂದಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಬೈಲಕುಪ್ಪೆ: ಎಲ್ಲೆಡೆ ಹಂತ ಹಂತವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಡುವುದಾಗಿ ಎಂದು ಶಾಸಕ ಕೆ. ವೆಂಕಟೇಶ್ ಭರವಸೆ ನೀಡಿದರು.
ಚನ್ನಕಲ್ಕಾವಲ್ ಗ್ರಾಪಂ ವ್ಯಾಪ್ತಿಯ ಆನಂದನಗರ ಗ್ರಾಮದ ಮಸೀದಿ ಅವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರು, ಶಾಲೆ, ಆಸ್ಪತ್ರೆ, ರಸ್ತೆ, ಒಳ ಚರಂಡಿ ಸೇರಿದಂದೆ ವಿವಿಧ ಅಭಿವೃದ್ಧಿ ಕೆಲಸವನ್ನು ತಾಲೂಕಿನ 270 ಹಳ್ಳಿಗಳಿಗೂ ಅಭಿವೃದ್ಧಿ ಕೆಲಸಗಳನ್ನು ಮಾಡಿಸಲಾಗುವುದು. ಈ ಗ್ರಾಮಕ್ಕೆ ದೇವಸ್ಥಾನ ಕಟ್ಟಲು ಹಣ ಮಂಜೂರು ಮಾಡಿಸಿರುವುದಾಗಿ ತಿಳಿಸಿದರು.
ಇದೇ ವೇಳೆ ಕೆಂಪೆಗೌಡನ ಕೊಪ್ಪಲು, ಚನ್ನಕಲ್ ಕಾವಲು, ಶಾನುಭೋಗನ ಹಳ್ಳಿ, ಚನ್ನಕೇಶವಪುರ, ಆನಂದನಗರ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಜಿಪಂ ಸದಸ್ಯೆ ಕಾವೇರಿ ಶೇಖರ್, ತಾ. ಮಾಜಿ ಸದಸ್ಯ ಶೇಖರ್, ಗ್ರಾಪಂ ಅಧ್ಯಕ್ಷೆ ಬಿ.ಶಾನೂ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಜಿಪಂ ಮಾಜಿ ಸದಸ್ಯ ಕೆ.ಬಿ.ಚನ್ನಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಗಂಗಾಧರ, ಗ್ರಾಪಂ ಸದಸ್ಯರಾದ ಎಂ.ಬಿ. ಶಿವಕುಮಾರ್, ಗ್ರಾಮಸ್ಥರಾದ ವಜೀರ್, ಅಬ್ದುಲ್ ಕಯಾಂ, ನಾಸೀರ್, ಕಾಂಗ್ರೆಸ್ ಮುಂಖಂಡರಾದ ಕಲ್ಯಾಣಪ್ಪ ಹಾಗೂ ಶಿವಣ್ಣ ಇದ್ದರು.
ಹುಂಡಿ ಹಣ ದುರುಪಯೋಗ; ನ್ಯಾಯಸಮ್ಮತ ತನಿಖೆಗೆ ಆಗ್ರಹ
ಟಿ. ನರಸೀಪುರ: ಶ್ರೀ ಒಡ್ಗಲ್ ರಂಗನಾಥಸ್ವಾಮಿ ದೇವಸ್ಥಾನದ ಹುಂಡಿ ಹಣ ದುರುಪಯೋಗದ ಬಗ್ಗೆ ಯಾವುದೇ ಒತ್ತಡಕ್ಕೆ ಮಣಿಯದೆ ನ್ಯಾಯ ಸಮ್ಮತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ತಾಲೂಕಿನ ರಂಗನಾಥಸ್ವಾಮಿ ಬೆಟ್ಟದ ಆಲದ ಮರದ ಬ್ರಹ್ಮಜ್ಞಾನಿ ಆಶ್ರಮದ ಕಾರ್ಯದರ್ಶಿ ಎಚ್.ನಾಗರಾಜು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ದೇವಸ್ಥಾನದ ಹುಂಡಿ ಹಣ ದುರುಪಯೋಗದ ಬಗ್ಗೆ ಜಿಪಂ ಸಭಾಂಗಣದಲ್ಲಿ ಉಪಲೋಕಾಯುಕ್ತರಿಂದ ವಿಚಾರಣೆ ನಡೆಸಿದ್ದು, ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಬದನೆ ಬೆಳೆಗೆ ಕಾಯಿ ಕೊರಕ ಬಾಧೆ
ಮೈಸೂರು: ಬದನೆಗೆ ಟೊಂಗೆ ಮತ್ತು ಕಾಯಿ ಕೊರಕ ರೋಗಿ ಬಾಧೆ ಕಾಣಿಸಿಕೊಳ್ಳಲಿದೆ ಎಂದು ನಾಗನಹಳ್ಳಿ ಸಮಗ್ರ ಕೃಷಿ ಹವಾಮಾನ ವಿಭಾಗ ತಿಳಿಸಿದೆ. ಬದನೆಕಾಯಿ ಬಿಡುವ ಸಂದರ್ಭದಲ್ಲಿ ಟೊಂಗೆ ಮತ್ತು ಕಾಯಿ ಕೊರಕದ ನಿಯಂತ್ರಣಕ್ಕೆ ಒಣಗಿದ ಟೊಂಗೆಗಳನ್ನು ಹುಳುವಿನ ಸಮೇತ ಕಿತ್ತು ನಾಶಪಡಿಸಬೇಕು. ನಂತರ ಪ್ರತಿ ಲೀಟರ್ ನೀರಿಗೆ 4 ಗ್ರಾಂ ಕಾರ್ಬರಿಲ್ ಅಥವಾ ನಿಂಬಿಸಿಡಿನ್ 5 ಮಿ.ಲೀ. ಔಷಧ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಜಾನುವಾರು, ರೇಷ್ಮೆ ಹಾಗೂ ಕೋಳಿ ಸಾಕಣೆ ಕೊಠಡಿಯ ಉಷ್ಣಾಂಶವನ್ನು ಸ್ಥಿರತೆಯಿಂದ ಕಾಪಾಡಿಕೊಳ್ಳಬೇಕು. ಕರುಗಳಿಗೆ ಜಂತುನಾಶಕ ಔಷಧವನ್ನು ಪಶು ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕುಡಿಸಬೇಕು. ಕಟಾವು ಮಾಡಿದ ಬಿತ್ತನೆ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಅಂದರೆ ಏಕದಳ ಧಾನ್ಯಗಳು ತೇವಾಂಶ ಶೇ.11 ರಿಂದ 12, ದ್ವಿದಳ ಧಾನ್ಯಗಳ ತೇವಾಂಶ ಶೇ.9, ಎಣ್ಣೆಕಾಳುಗಳು ಶೇ.8 ಮತ್ತು ತರಕಾರಿ ಬೀಜಗಳು ಶೇ.5 ರಿಂದ 6 ರಷ್ಟಿರಬೇಕು. ಇದರಿಂದ ಹೆಚ್ಚುದಿನ ಕೆಡದಂತೆ ಬೀಜಗಳನ್ನು ಸಂರಕ್ಷಿಸಬಹುದು. ಜೊತೆಗೆ ಉಗ್ರಾಣ ಕೀಟದ ಬಾಧೆ ಕಡಿಮೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಡಾ.ಸಿ.ಗೋವಿಂದರಾಜು ಮತ್ತು ಎನ್. ನರೇಂದ್ರಬಾಬು ಅವರ ಮೊ. 8095227713 ಅಥವಾ 9343532154 ಸಂಪರ್ಕಿಸಬಹುದು.
ಮಗು ಕೊಲೆ; ದಂಪತಿ ಬಂಧನ
ಮೈಸೂರು: ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಆರೋಪದ ಮೇಲೆ ದಂಪತಿಯನ್ನು ಮೈಸೂರಿ ವಿಜಯನಗರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ. ವಿಜಯನಗರ 3ನೇ ಹಂತ ನಿವಾಸಿಗಳಾದ ಸಂಜಯ್(30) ಮತ್ತು ಇವರ ಪತ್ನಿ ರಶ್ಮಿ(28) ಬಂಧಿತರು. ಮೂಲತಃ ಹಾಸನದವನಾದ ಸಂಜಯ್ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ. ಹಾಸನದ ಚೇತನ್- ಸ್ವಪ್ನ ಎಂಬವರ ಪುತ್ರಿ ಸಿಹಿ (3) ಎಂಬ ಮಗುವನ್ನು ಕೊಲೆ ಮಾಡಿರುವ ಆರೋಪದಡಿ ಈ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸರ ಅಪಹರಣ
ಮೈಸೂರು: ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಎಗರಿಸಿಕೊಂಡು ಹೋಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.ಗಾಯತ್ರಿಪುರಂ 2ನೇ ಹಂತ ನಿವಾಸಿ ಮಹದೇವ್ ಎಂಬವರ ಪತ್ನಿ ಗೌರಮ್ಮ (53) ಸರ ಕಳೆದುಕೊಂಡವರು. ಇವರು ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿದ್ದು, ಸಂಜೆ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದಾಗ ವಿಳಾಸ ಕೇಳುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ 20 ಗ್ರಾಂ.ನ ಸರ ಎಗರಿಸಿಕೊಂಡು, ಸ್ವಲ್ಪ ದೂರದಲ್ಲೇ ಬೈಕಿನಲ್ಲಿದ್ದ ಮತ್ತೊಬ್ಬನೊಂದಿಗೆ ಸೇರಿ ಪರಾರಿಯಾಗಿದ್ದಾನೆ. ಈ ಸಂಬಂಧ ನಜರ್ಬಾದ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ನಾಪತ್ತೆ
ಮೈಸೂರು: ಜೆಪಿ ನಗರ ಡಿ ಬ್ಲಾಕ್ನ ನಿರ್ಮಾಣ ಹಂತದಲ್ಲಿರುವ ಕಟ್ಟಡ ತಾರಸಿಯ ಮೇಲೆ 35 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಡಗೈ ಉಂಗುರ ಬೆರಳು ತುಂಡಾಗಿದೆ. ಎಡತೋಳಿನಲ್ಲಿ ವಸಂತ ಎಸ್ ಎಂದು ಇಂಗ್ಲಿಷ್ನಲ್ಲಿ ಹಚ್ಚೆ ಗುರುತಿದೆ. ಕ್ರೀಮ್ ಬಣ್ಣದ ನೀಲಿ ಗೆರೆಯುಳ್ಳ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418322, 522 ಸಂಪರ್ಕಿಸಲು ವಿದ್ಯಾರಣ್ಯಪುರಂ ಠಾಣೆ ಎಸ್ಐ ಎಲ್. ಶ್ರೀನಿವಾಸ್ ಕೋರಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ಬಸವೇಶ್ವರ ನಗರ ನ್ಯೂ ಕಾಂತರಾಜ ಅರಸು ರಸ್ತೆ ನಿವಾಸಿ ಶಿವಲಿಂಗಪ್ಪ (52) ಎಂಬವರು ಡಿ.16ರಿಂದ ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ಪತಿಯನ್ನು ಪತ್ತೆ ಮಾಡಿಕೊಡುವಂತೆ ರತ್ನಮ್ಮ ದೂರು ನೀಡಿದ್ದಾರೆ. ಚಹರೆ- 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕನ್ನಡ ಮತ್ತು ಹಿಂದಿ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418123, 323 ಸಂಪರ್ಕಿಸಲು ಸರಸ್ವತಿಪುರಂ ಠಾಣೆ ಎಎಸ್ಐ ಎಚ್.ಎಸ್. ಮಂಜುಳಾ ಕೋರಿದ್ದಾರೆ.
ಕುಪ್ಪಳಿಯಲ್ಲಿ ಶಿಬಿರ
ಸಾಂಗತ್ಯ ಸಂಸ್ಥೆ ವತಿಯಿಂದ ಫೆ.15 ಮತ್ತು 16 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಚಿತ್ರ ಶಿಬಿರವನ್ನು ಹಮ್ಮಿಕೊಂಡಿದೆ. ಚಿತ್ರ ಶಿಬಿರದಲ್ಲಿ ವಿವಿಧ ಭಾಷೆಗಳ ಚಿತ್ರಗಳ ಪ್ರದರ್ಶನ, ಚರ್ಚೆ ಮತ್ತು ಸಿನೆಮಾ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ಉಪನ್ಯಾಸ, ಗುಂಪು ಚರ್ಚೆ ನಡೆಯಲಿದೆ. ಐವತ್ತು ಮಂದಿಗೆ ಮಾತ್ರ ಅವಕಾಶವಿದ್ದು, ಸಿನೆಮಾ ಮಾಧ್ಯಮವನ್ನು ಪ್ರಶಂಸೆ ಮಾಡುವ ಬಗ್ಗೆ, ಸಿನೆಮಾ ಲೇಖನಗಳನ್ನು ಬರೆಯುವ ಬಗ್ಗೆಯೂ ಮಾಹಿತಿ ಒದಗಿಸಲಾಗುವುದು. ಶಿಬಿರದಲ್ಲಿ ಭಾಗವಹಿಸಿದ್ದಕ್ಕೆ ಪ್ರಮಾಣಪತ್ರ ನೀಡಲಾಗುವುದು. ಪ್ರವೇಶ ಶುಲ್ಕ 400 ಗಳಿದ್ದು, ಊಟ-ವಸತಿ ಸೌಲಭ್ಯ ಕಲ್ಪಿಸಲಾಗುವುದು. ಇದುವರೆಗೆ ಸಾಂಗತ್ಯ ಎಂಟು ಯಶಸ್ವಿ ಶಿಬಿರಗಳನ್ನು ಸಂಘಟಿಸಿದ್ದು, ರಾಜ್ಯದ ವಿವಿಧ ಭಾಗದ ಸಿನಿಮಾಸಕ್ತರು ಪಾಲ್ಗೊಂಡಿದ್ದರು. ವಿಷಯ ತಜ್ಞರಾಗಿ ಚಿತ್ರೋದ್ಯಮದ ಕೇಸರಿ ಹರಹೂ, ಗುರುಪ್ರಸಾದ್, ಉಮಾಶಂಕರಸ್ವಾಮಿ, ರೇಖಾರಾಣಿ, ಅಶೋಕ್ ಕಶ್ಯಪ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಆಸಕ್ತರು ಮಾಹಿತಿ ಮತ್ತು ನೋಂದಣಿಗೆ ಮೊ. 94483 48517, 94805 82027, 9964022581 ಸಂಪರ್ಕಿಸಬಹುದು.
ನಾಳೆ ಚಿತ್ರಕಲಾ ಸ್ಪರ್ಧೆ
ಮೈಸೂರು: ಲಾರ್ಸನ್ ಅಂಡ್ ಟೂಬ್ರೋ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸುಂದರ ಕರ್ನಾಟಕ ವಿಷಯದ ಬಗ್ಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಫೆ.7ರ ಬೆಳಗ್ಗೆ 10ಕ್ಕೆ ಒಂಟಿಕೊಪ್ಪಲಿನ ಚೆಲುವಾಂಬ ಪಾರ್ಕ್ನಲ್ಲಿ ಆಯೋಜಿಸಲಾಗಿದೆ. ವಿವರಗಳಿಗೆ ದೂ. 2405217, 9901723458 ಸಂಪರ್ಕಿಸಬಹುದು.
ನೂತನ ಕಚೇರಿ ಉದ್ಘಾಟನೆ
ದಿ ಅಲೈಯನ್ಸ್ ಫ್ರಾಂಚೈಸಿ ಮೈಸೂರು ವಿಭಾಗದ ನೂತನ ಕಚೇರಿಯನ್ನು ಜಯಲಕ್ಷ್ಮೀಪುರಂನ ನಂ. 78/7 ಆಸ್ಪತ್ರೆ ರಸ್ತೆ, ಜಯಲಕ್ಷ್ಮೀಪುರಗೆ ಸ್ಥಳಾಂತರಿಸಲಾಗಿದೆ. ಫೆ.7ರ ಬೆಳಗ್ಗೆ 11.30ಕ್ಕೆ ಮಾಜಿ ರಾಯಭಾರಿ ಚಿರಂಜೀವಿ ಸಿಂಗ್ ಉದ್ಘಾಟಿಸುವರು.
ಎಐಎಂಎಸ್ಎಸ್ ಅಧ್ಯಕ್ಷೆ ನೇಮಕ
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ರಾಜ್ಯ ಸಮಿತಿಯ ಅಧ್ಯಕ್ಷೆಯಾಗಿ ಎಂ.ಎನ್.ಮಂಜುಳಾ ಅವರನ್ನು ನೇಮಕ ಮಾಡಲಾಗಿದೆ.
ಪರಿಹಾರ ನೀಡಲು ಆಗ್ರಹ
ಮೈಸೂರು: ಟಿ. ನರಸೀಪುರ ತಾಲೂಕು ಕೊತ್ತೇಗಾಲದ ಜೀತದಾಳು ಶಿವಕುಮಾರ್ನ ಸಾವಿಗೆ ತಾಲೂಕು ಆಡಳಿತದ ವೈಫಲ್ಯವೇ ಕಾರಣ ಎಂದು ಮೈಸೂರು ಜಿಲ್ಲಾ ನಾಯಕರ ಯುವ ವೇದಿಕೆ ಆರೋಪಿಸಿದೆ. ದಸಂಸ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ದಾಖಿಲಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನ್ಯಾಯ ಮಾಡಿದಂತಾಗಿದೆ. ಇಂಥ ಘಟನೆಯನ್ನು ವೇದಿಕೆ ಖಂಡಿಸುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಕೂಡಲೆ ತಹಸೀಲ್ದಾರ್ ಅರುಣಪ್ರಭ ಅವರನ್ನು ಅಮಾನತ್ತು ಪಡಿಸಬೇಕು ಹಾಗೂ ಜೀತದಾಳು ಶಿವಕುಮಾರ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಮಧುವನ ಚಂದ್ರು ಆಗ್ರಹಿಸಿದ್ದಾರೆ.
ಧರ್ಮೇಶ್ಗೆ ಜಾಮೀನು ಬೇಡ
ಮೈಸೂರು: ಬಂಡೀಪುರ ಓಂಕಾರ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಸಿಕ್ಕಿ ಬಿದ್ದಿರುವ ಸಿಐಡಿ ವಿಭಾಗದ ಡಿವೈಎಸ್ಪಿ ಟಿ.ಕೆ. ಧರ್ಮೇಶ್ ಮತ್ತು ಸಹಚರರಿಗೆ ಜಾಮೀನು ನೀಡಬಾರದು ಎಂದು ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನುಮೋಹನ್ ಒತ್ತಾಯಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗುವಾಗ ಸ್ಪಂದಿಸದ ಪೊಲೀಸ್ ಅಧಿಕಾರಿಗಳು ಬೇಟೆ ಮತ್ತು ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ರಾತ್ರಿ ವೇಳೆ ಕಾಡಿನಲ್ಲಿ ಇವರಿಗೇನು ಕೆಲಸ? ತಮ್ಮ ಮೋಜಿಗೆ ಪ್ರಾಣಿಯೊಂದನ್ನು ಬಲಿ ತೆಗೆದುಕೊಂಡಿದ್ದಾರೆ. ಆದ್ದರಿಂದ ನ್ಯಾಯಾಲಯವು ಧರ್ಮೇಶ್ ಮತ್ತು ಸಹಚರರಿಗೆ ಜಾಮೀನು ನೀಡಬಾರದು. ಇಂಥವರು ಅರಣ್ಯ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

