ಜನಮನ ಸೆಳೆದ ಮನುಷ್ಯಜಾತಿ ತಾನೊಂದೇ ವಲಂ
ಮೈಸೂರು: ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ.. ಎಂದನಾ ಸರ್ವಜ್ಞ, ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ... ಎಂದ ಕನಕದಾಸ, ಸೋರುತಿಹುದು ಮನೆಯ ಮಾಳಗಿ ಅಜ್ಞಾನದಿಂದ... ಎಂದ ಶಿಶುನಾಳ ಷರೀಫ, ನಾನು, ನೀನು, ಅವನು, ಅವಳು ಎಂದು ಭೇದವೆಣಿಸೋದೆ ತಪ್ಪು... ಮನುಜ ಮಥದಿಂದ ವಿಶ್ವಪಥಕ್ಕೆ ಎಂದ ಕುವೆಂಪು ಸಾಲುಗಳು ಜಾತಿಯ ವಿರುದ್ಧ ಸಾರಿದ ಬೆಂಕಿಯುಂಡೆಗಳಾಗಿವೆ.
ಅನಾದಿ ಕಾಲದಿಂದಲೂ ಜಾತಿಯನ್ನು ತೊಡೆದು ಹಾಕಲು ಹೋರಾಟ ನಡೆಸಿದ ಅನೇಕ ದಾರ್ಶನಿಕರನ್ನು ಪರಿಚಯಿಸಿ ಜಾತಿಯನ್ನು ಹೋಗಲಾಡಿಸಲು ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮವಾದ ಮನುಷ್ಯಜಾತಿ ತಾನೊಂದೆ ವಲಂ ಎಂಬ ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಜನಮನವನ್ನು ಸೂರೆಗೊಂಡಿತು.
ವಾರ್ತಾ ಇಲಾಖೆಯ ಪ್ರಾಯೋಜಕತ್ವದಡಿ ರೂಪಿಸಿರುವ ವಿಶಿಷ್ಟ ಧ್ವನಿ ಬೆಳಕು ದೃಶ್ಯ ವೈಭವ ಕುವೆಂಪು ಅವರ ಕನಸಿನ ಕೂಸಾದ ಗಂಗೋತ್ರಿಯ ವನಮಡಿಲಲ್ಲಿ ಮೈದಳೆದಿತ್ತು. ಬಣ್ಣ ಬಣ್ಣದ ಬೆಳಕಿನ ನಡುವೆ ಇತಿಹಾಸ ಸಾರುವ ಪ್ರತಿಮೆಗಳು ಬಂದು ಹೋಗುತ್ತಿದ್ದವು. ವಿಶೇಷ ಪೋಷಾಕಿನೊಂದಿಗೆ ಅನಾವರಣಗೊಳ್ಳುತ್ತಿದ್ದ ದೃಶ್ಯಾವಳಿಗಳು ಈ ಜಗತ್ತಲ್ಲಿ ಮನುಷ್ಯ, ಮಾನವೀಯತೆಗಿಂತ ಮಿಗಿಲಾದದು ಯಾವುದೂ ಇಲ್ಲ. ಜಾತಿಗಳು ಇವೆ ಎಂದು ಒಪ್ಪಿಕೊಂಡರೂ ಅದು ಅಪದ್ಧವಾಗುತ್ತದೆ. ಜಾತಿಗಳಿಲ್ಲ, ಇರುವುದೊಂದೆ ಮನುಷ್ಯಜಾತಿ ಎಂಬ ಸಂದೇಶವನ್ನು ಸಾರಲಾಯಿತು.
ಅಂತರ್ಜಾತಿಯ ವಿವಾಹದ ಮೂಲಕ ಜಾತಿಯ ಅಂತರಂಗವನ್ನು, ಸಹಭೋಜನದ ಮೂಲಕ ಜಾತಿಯ ಬಹಿರಂಗವನ್ನು ಮಾನವೀಕರಿಸುವ ಮಾರ್ಗವನ್ನು ಮಹನೀಯರು ಶೋಧಿಸಿದ್ದಾರೆ. ಜಾತಿ ಭೇದವೆಣಿಸದೆ ಎಲ್ಲರೂ ತಾಯಿಬೇರಿಗೆ ಮರಳಬೇಕೆನ್ನುವ ವಿವೇಕವನ್ನು ಸಮಾಜದಲ್ಲಿ ಮೂಡಿಸಲು ಅವಿರತವಾಗಿ ಪ್ರಯತ್ನಿಸಿದ್ದಾರೆ ಎಂದು ತೋರಿಸಲಾಯಿತು.
ಪ್ರಸ್ತುತ ಈ ಧ್ವನಿ- ಬೆಳಕು, ಸಂಗೀತ- ದೃಶ್ಯ ವೈಭವಗಳ ಕಾರ್ಯಕ್ರಮವು ಸುಮಾರು ಎರಡು ಸಾವಿರ ವರ್ಷಗಳಿಂದ ಜಾತಿಪದ್ಧತಿಯ ವಿರುದ್ಧ ಅವಿರತವಾಗಿ ಹೋರಾಟ ನಡೆಸುತ್ತಾ ಬಂದಿರುವ ಕನ್ನಡದ ಸಂವೇದನೆಯ ಭವ್ಯ ಪರಂಪರೆಯನ್ನು ನಿರ್ದಿಷ್ಟವಾಗಿ ಗುರುತಿಸುವ ಹಾಗೂ ನಿಚ್ಚಳವಾಗಿ ಬಿಂಬಿಸುವ ಪ್ರಯತ್ನವಾಗಿದೆ. ಹಾಗೆಯೇ ಸರ್ವರೂ ಜಾತಿಮತ ತೊರೆದು ಒಂದುಗೂಡಬೇಕೆನ್ನುವ ಸಾಮಾಜಿಕ ವಿವೇಕವನ್ನು ನಮ್ಮ ಆಧುನಿಕ ವರ್ತಮಾನಕ್ಕೆ ಮರುಪೂರಣ ಮಾಡುವ ಆಶಯವನ್ನು ಈ ಕಾರ್ಯಕ್ರಮ ಒತ್ತಿ ಹೇಳಿತು.
ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವನ್ನು ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ನಿರ್ದೇಶಿಸಿದ್ದು, ಡಾ.ಕೆ.ವೈ. ನಾರಾಯಣಸ್ವಾಮಿ ಗೀತರಚನೆ, ಹಂಸಲೇಖ ಸಂಗೀತ ಸಂಯೋಜಿಸಿದ್ದು, ವಾರ್ತಾ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಿಂದ ಮೂಡಿಬಂದಿದೆ.
ಇದಕ್ಕೂ ಮೊದಲು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ) ನೇತೃತ್ವದ ಜನಮನ ತಂಡದವರು ಜಾನಪದ ಗೀತೆ ಮತ್ತು ತತ್ವಪದಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಜನ್ನಿ ಅವರು ನಾಗಲಿಂಗ ಯೋಗಿ ತಾನು ತಿರುಗೋದು ಯಾತಕೆ, ಬಿದಿರು ನಾನಾರಿಗಲ್ಲದವಳು, ದೇವಾನಂದ ವರಪ್ರಸಾದ್ ಶರಣಯ್ಯ ಶರಣು, ಶರಣಯ್ಯ ಶರಣು..., ಶುಭ ರಾಘವೇಂದ್ರ ಅವರು ಉತ್ನಳ್ಳಿ ಮಾರವ್ವ ಮುಂತಾದ ಗೀತೆಗಳನ್ನು ಪ್ರಸ್ತುತಪಡಿಸಿದರು. ಪುರುಷೋತ್ತಮ್ ಕೀಬೋರ್ಡ್, ರೋಷನ್, ಸುಮುಖ್ ತಬಲಾದಲ್ಲಿ ಸಾಥ್ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

