ಸಾ.ರಾ. ಮಹೇಶ್ ಸಮಸ್ತರ ಪ್ರತಿನಿಧಿಯಂತೆ ವರ್ತಿಸುತ್ತಿಲ್ಲ
ಕೆ.ಆರ್. ನಗರ: ಶಾಸಕ ಸಾ.ರಾ. ಮಹೇಶ್ ತಾಲೂಕಿನ ಸಮಸ್ತ ಜನರ ಪ್ರತಿನಿಧಿಯಂತೆ ವರ್ತಿಸದೆ ಕೇವಲ ಆಯ್ದ ಗ್ರಾಮಕ್ಕೆ ಮತ್ತು ಸೀಮಿತ ಜನಾಂಗಕ್ಕೆ ಮೀಸಲಾದವರಂತೆ ವರ್ತಿಸುತ್ತಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ ಆರೋಪಿಸಿದ್ದಾರೆ.
ತಾವು ಜವಾಬ್ದಾರಿಯುತ ಶಾಸಕರು ಎಂಬದನ್ನು ಮರೆತು, ಗ್ರಾಪಂಗಳ ಅಧಿಕಾರದಲ್ಲಿಯೂ ಹಸ್ತಕ್ಷೇಪ ಮಾಡುತ್ತಾ ಸದಾ ಪ್ರಚಾರ ಬಯಸಿ ಕೇವಲ ಫೋಟೊ ತೆಗೆಸಿಕೊಂಡು ಪಾರ್ಟ್ ಟೈಂ ಶಾಸಕರಂತೆ ನಡೆದುಕೊಳ್ಳುತ್ತಿದ್ದಾರೆ. ಶಾಸಕರಾಗಿ ಆಯ್ಕೆಯಾಗಿ 6 ವರ್ಷಗಳಾದರೂ ಈವರೆಗೆ ಪಟ್ಟಣದಲ್ಲಿ ಒಂದು ನಿವೇಶನ ಹಂಚಿಲ್ಲ. ಇದು ಅವರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ತಾಲೂಕಿನ ಹಲವು ಗ್ರಾಪಂಗಳಲ್ಲಿ ವಸತಿ ಯೋಜನೆಯ ಮನೆಗಳ ಪಟ್ಟಿಗಳು ಅನುಮೋದನೆಗೊಳ್ಳದೆ ಸ್ಥಗಿತವಾಗಿದೆ. ಇದರಿಂದ ಅರ್ಹ ಬಡವರಿಗೆ ತೊಂದರೆಯಾಗಿದೆ. ಜತೆಗೆ ಗ್ರಾಪಂ ಸದಸ್ಯರು ಸ್ವತಂತ್ರವಾಗಿ ಫಲಾನುಭವಿಗಳಿಗೆ ಮನೆ ಹಂಚಲು ಬಿಡದೆ ತಮಗಿಷ್ಟ ಬಂದ ಪಟ್ಟಿ ನೀಡಿ ತಿಂಗಳುಗಟ್ಟಲೆ ಪಟ್ಟಿ ತಡೆ ಹಿಡಿದಿದ್ದಾರೆ ಎಂದು ದೂರಿದರು. ಪಟ್ಟಣದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಮತ್ತು ನ್ಯಾಯಾಲಯದ ವಸತಿ ಗೃಹಗಳ ಕಾಮಗಾರಿ ಅತ್ಯಂತ ಕಳಪೆಯಿಂದ ಕೂಡಿದ್ದು, ಇದಕ್ಕೆ ಯಾರು ಹೊಣೆ? ಉಪನೋಂದಣಾಧಿಕಾರಿ ಕಚೇರಿ ಇಲ್ಲದೆ ಮಿನಿ ವಿಧಾನಸೌಧ ನಿರ್ಮಿಸಲಾಗಿದೆ. ಜತೆಗೆ ಸಾಕಷ್ಟು ಸರ್ಕಾರಿ ಕಚೇರಿಗಳು ಈಗಲೂ ಖಾಸಗಿ ಕಟ್ಟಡಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ. ಗಂಧನಹಳ್ಳಿ ಬೈಪಾಸ್ ರಸ್ತೆ ಕಾಮಗಾರಿ ನಿರ್ಮಾಣಕ್ಕೆ 72 ಲಕ್ಷ ಮಂಜೂರಾಗಿ ವರ್ಷಗಳೇ ಕಳೆದಿದ್ದರೂ ಈವರೆಗೆ ಯಾಕೆ ಕಾಮಗಾರಿಗೆ ಚಾಲನೆ ನೀಡಿಲ್ಲ ಎಂಬುದಕ್ಕೆ ಶಾಸಕರು ಉತ್ತರಿಸಬೇಕು. ಸಣ್ಣ-ಪುಣ್ಣ ಕಾಮಗಾರಿಗಳಿಗೆ ರಾತ್ರಿ ಬೆಳಗಾಗುವುದರೊಳಗೆ ಚಾಲನೆ ನೀಡಿ, ಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಳ್ಳುವವರಿಗೆ ಹಣ ಮಂಜೂರಾಗಿರುವ ಕಾಮಗಾರಿಗೆ ಚಾಲನೆ ನೀಡಲು ಸಮಯವಿಲ್ಲವೆ ಎಂದು ಪ್ರಶ್ನಿಸಿದರು. ಜಿಪಂ ಮಾಜಿ ಸದಸ್ಯ ಜಯರಾಮೇಗೌಡ, ಪುರಸಭಾ ಸದಸ್ಯೆ ಪಾರ್ವತಿ ನಾಗರಾಜು, ಮಾಜಿ ಸದಸ್ಯ ಅಸ್ಲಾಂ, ತಾ. ಯುವ ಕಾಂಗ್ರೆಸ್ ಕಾರ್ಯದರ್ಶಿ ಡಿ.ಆರ್. ರಮೇಶ್, ಮುಖಂಡರಾದ ಡಿ. ನಟರಾಜು, ಜಯಕುಮಾರ್, ರಾಮನಾಥ್, ಜವರಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

