ಸಿಸಿಬಿ ಪೊಲೀಸರಿಂದ ಐವರು ಡಕಾಯಿತರ ಬಂಧನ
ಮೈಸೂರು: ಆಂಧ್ರಪ್ರದೇಶ ಮೂಲದ ಕಬ್ಬಿಣದ ವ್ಯಾಪಾರಿಯಿಂದ 4 ಲಕ್ಷ ರು. ನಗದು ಮತ್ತು ಮೊಬೈಲ್‌ಗಳನ್ನು ದೋಚಿದ್ದ 5 ಮಂದಿ ಡಕಾಯಿತರನ್ನು ನಗರದ ಸಿಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೈಸೂರಿನ ಗೌಸಿಯಾನಗರ ನಿವಾಸಿಗಳಾದ ಅಸ್ಗರ್ ಖಾನ್, ರಫೀಕ್ ಖಾನ್, ಉದಯಗಿರಿಯ ರಫೀಕ್ ಖಾನ್, ರಾಜೀವ್‌ನಗರದ ಶೋಹೆಬ್ ಅಹಮ್ಮದ್ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ನಾಸೀರ್ ಷರೀಫ್ ಬಂಧಿತ ಆರೋಪಿಗಳು.
ವಿಗ್ರಹ ನೀಡುವ ನೆಪದಲ್ಲಿ ಡಕಾಯಿತಿ: ಆಂಧ್ರಪ್ರದೇಶದ ವಿಶಾಖಪಟ್ಟಣಂ ನಿವಾಸಿ ಹಾಗೂ ಕಬ್ಬಿಣದ ವ್ಯಾಪಾರಿ ರಾಘವಯ್ಯ ಮತ್ತು ಅವರ ಸ್ನೇಹಿತರಾದ ಕುಮಾರ್ ಅವರು ಬುಧವಾರ ಬೆಳಗಿನ ಜಾವ ಮೈಸೂರಿಗೆ ಬಂದಿದ್ದರು. ಮೈಸೂರು- ಬೆಂಗಳೂರು ರಸ್ತೆಯಲ್ಲಿರುವ ವೈಟ್ ಆರ್ಕಿಡ್ ರೆಸಾರ್ಟ್‌ನಲ್ಲಿ ತಂಗಿದ್ದು, ಮುಂಜಾನೆ ತಮ್ಮ ಕಾರಿನಲ್ಲಿ ಚಾಮುಂಡಿಬೆಟ್ಟಕ್ಕೆ ಹೋಗಿ ದರ್ಶನ ಮುಗಿಸಿ ವಾಪಸ್ ರೆಸಾರ್ಟ್‌ಗೆ ಬಂದಿದ್ದರು.
ರಾಘವಯ್ಯ ಅವರು ಆಂಧ್ರದಲ್ಲಿದ್ದಾಗಲೇ ತಮ್ಮ ವೆಬ್‌ಸೈಟ್‌ನಲ್ಲಿ ಪಂಚ ಲೋಹದ ವಿಗ್ರಹ ಬೇಕಾಗಿದೆ ಎಂದು ಮಾಹಿತಿ ಪ್ರಕಟಿಸಿದ್ದರು. ಇದನ್ನು ಗಮನಿಸಿದ್ದ ಮೈಸೂರಿನ ಕಲೀಂವುಲ್ಲಾ ಎಂಬಾತ ರಾಘವಯ್ಯ ಅವರ ಮೊಬೈಲ್‌ಗೆ ಕರೆ ಮಾಡಿ, ನನ್ನ ಬಳಿ ಪಂಚ ಲೋಹದ ಲಕ್ಷ್ಮಿ ದೇವರ ವಿಗ್ರಹವಿದೆ. ಅದನ್ನು 4 ಲಕ್ಷ ರು. ಮಾರಾಟ ಮಾಡುವುದಾಗಿ ಹೇಳಿದ್ದಾನೆ. ಇನ್ನೊಂದು ವಾರದಲ್ಲಿ ಮೈಸೂರಿಗೆ ಬರುವುದಾಗಿ ತಿಳಿಸಿದ್ದರು.
ಪೂರ್ವ ನಿಗದಿಯಂತೆ ರಾಘವಯ್ಯ ಅವರು ಮೈಸೂರಿಗೆ ಬಂದಿದ್ದರು. ಇದೇ ವೇಳೆ ರಾಘವಯ್ಯ ಅವರ ಮೊಬೈಲ್‌ಗೆ ಕಲೀಂವುಲ್ಲಾ, ವಿಗ್ರಹ ಮಾರಾಟ ಮಾಡುವುದಾಗಿ ನೆನಪಿಸಿದ್ದ. ರಾಘವಯ್ಯ ತಮ್ಮ ಬಳಿ ಹಣವಿಲ್ಲದಿದ್ದರಿಂದ ಐಸಿಐಸಿಐ ಬ್ಯಾಂಕಿನಿಂದ 4 ಲಕ್ಷ ರು. ಚೆಕ್ ಮೂಲಕ ಡ್ರಾ ಮಾಡಿದ್ದರು.
ನಂತರ ಬುಧವಾರ ಮಧ್ಯಾಹ್ನ ಅವರು ತಂಗಿದ್ದ ಹೊಟೇಲ್‌ನ ಕೊಠಡಿಗೆ ತಮ್ಮನ್ನು ಕಲೀಂವುಲ್ಲಾ ಕಳುಹಿಸಿರುವುದಾಗಿ 5 ಜನರ ಬಂದು, ಏಕಾಏಕಿ ಒಳಗೆ ನುಗ್ಗಿದ್ದರು. ರಾಘವಯ್ಯ ಮತ್ತು ಕುಮಾರ್ ಅವರಿಗೆ ಹೊಡೆದು, ಅವರ ಬಳಿಯಿದ್ದ 4 ಲಕ್ಷ ರು., ಚೆಕ್ ಬುಕ್ ಇದ್ದ ಬ್ಯಾಗ್ ಹಾಗೂ 2 ಮೊಬೈಲ್ ದೋಚಿ ಬಿಳಿ ಬಣ್ಣದ ಕ್ವಾಲೀಸ್ ವಾಹನದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ರಾಘವಯ್ಯ ಅವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಬಿಳಿ ಬಣ್ಣದ ಕ್ವಾಲೀಸ್ ವಾಹನ ಶ್ರೀರಂಗಪಟ್ಟಣ- ಬೆಳಗೊಳ- ಇಲವಾಲ ಮಾರ್ಗವಾಗಿ ಮಡಿಕೇರಿಯತ್ತ ಪರಾರಿಯಾಗುತ್ತಿದ್ದ 5 ಆರೋಪಿಗಳನ್ನು ಪೊಲೀಸರು ಬಂಧಿಸಿ, 4 ಲಕ್ಷ ರು., ಚೆಕ್ ಬುಕ್, 2 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕ್ವಾಲೀಸ್ ವಾಹನ ಸಹ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ಪ್ರಮುಖ ಆರೋಪಿ ಸಲೀಂ ಅ. ಕಲೀಂವುಲ್ಲಾ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಅಪರಾಧ ಮತ್ತು ಸಂಚಾರ ಡಿಸಿಪಿ ಎಂ.ಎಂ. ಮಹದೇವಯ್ಯ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳು ಬುಧವಾರ ಕೃತ್ಯ ಎಸಗಿದ ಬಳಿಕ ಶ್ರೀರಂಗಪಟ್ಟಣದ ಬಳಿ ತಂಗಿದ್ದಾರೆ. ಅವರ ದೋಚಿಕೊಂಡು ಹೋಗಿದ್ದ ಮೊಬೈಲ್‌ಗಳ ಸ್ವಿಚ್ ಆಫ್ ಆಗಿರಲಿಲ್ಲ. ಮೊಬೈಲ್ ನೆಟವರ್ಕ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣ ಮಾಸ್ಟರ್ ಮೈಂಡ್ ಸಲೀಂ ಅ. ಕಲೀಂವುಲ್ಲಾ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರೆಸಲಾಗಿದೆ ಎಂದು ಅವರು ಹೇಳಿದರು.
ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ, ಇನ್ಸ್‌ಪೆಕ್ಟರ್ ಪಿ.ಎ. ಸೂರಜ್, ಆರ್. ಜಗದೀಶ್, ಎಸ್‌ಐ ಶ್ರೀನಿವಾಸಗೌಡ, ಎಎಸ್‌ಐ ಎಂ.ಜೆ. ಜಯಶೀಲನ್, ಎಂ.ಡಿ.ಶಿವರಾಜು ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

