ಮೈಸೂರು

ಜಾತಿ ಆಧಾರಿತ ಮೀಸಲಾತಿ: ದ್ವಿವೇದಿ ಹೇಳಿಕೆಗೆ ಖಂಡನೆ

Published On :

ಮೈಸೂರು: ಜಾತಿ ಆಧಾರಿತ ಮೀಸಲಾತಿ ಕೊನೆಗೊಳ್ಳಲಿ ಎಂಬ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ ಸಚಿವ ದ್ವಿವೇದಿ ಹೇಳಿಕೆ ದಲಿತರ ಬಗ್ಗೆ ಕಾಂಗ್ರೆಸ್‌ಗಿರುವ ಮನಸ್ಥಿತಿಯ ಪ್ರತೀಕವಷ್ಟೆ ಎಂದು ಜಿಪಂ ಮಾಜಿ ಸದಸ್ಯ ಎಚ್.ಸಿ. ಲಕ್ಷ್ಮಣ್ ಟೀಕಿಸಿದ್ದಾರೆ.
ದಲಿತರನ್ನು ವೋಟ್ ಬ್ಯಾಂಕ್ ರಾಜಕಾರಣಕಷ್ಟೆ ಬಳಿಸಿಕೊಳ್ಳುತ್ತಿರುವ ಕಾಂಗ್ರೆಸ್‌ನಿಂದ ಇಂಥ ಹೇಳಿಕೆಯಲ್ಲದೆ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಪರಿಕಲ್ಪನೆಯ ಅಂದಿನ ಮೀಸಲಾತಿ ದಲಿತರನ್ನು ಸಾಮಾಜಿಕ, ಶೈಕ್ಷಣಿಕ ಏಳಿಗೆಗೆ ಮುನ್ನಡಿ ಬರೆದದ್ದಷ್ಟೆ. 10 ವರ್ಷಗಳ ಕಾಲಮಿತಿಯನ್ನು ಅವರೆ ವಿಧಿಸಿದ್ದರು. ಅಂದಿಗೂ- ಇಂದಿಗೂ ದಲಿತರ ಸಾಮಾಜಿಕ ಸುಧಾರಣೆ ಏನಾದರೂ ಆಗಿದಿಯೆ ಹಳ್ಳಿಗಳ ಸ್ಥಿತಿ ಗತಿ ನೋಡಿದರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ದೇವಸ್ಥಾನ, ಹೊಟೇಲ್‌ಗಳು, ಕೆರೆ ಕಟ್ಟೆಗಳಿಗೆ ದಲಿತರ ಪ್ರವೇಶಕ್ಕೆ ಈಗಲೂ ನಿರಾಕರಣೆ ಇದೆ. ದಲಿತರು ಆರ್ಥಿಕವಾಗಿ ಸ್ಥಿತಿವಂತರಾದರೂ ಜಾತಿಯ ಕಾರಣಕ್ಕೆ ಅವರನ್ನು ದೂರವಿಡಲಾಗುತ್ತಿದೆ. ಇಷ್ಟಕ್ಕೂ ದ್ವಿವೇದಿ ಅವರು ಪ್ರತಿಪಾದಿಸುತ್ತಿರುವ ಆರ್ಥಿಕ ಆಧಾರಿತ ಮೀಸಲಾತಿ ಎಂದರೆ ಹೇಗೆ ಯಾವುದು ಆರ್ಥಿಕ ಸ್ವಾವಲಂಬನೆ ಅಥವಾ ಸುಧಾರಣೆ ಎನ್ನಲು ಬಳಸುವ ಮಾನದಂಡ ಯಾವುದು, ದಲಿತರು ಶೇ. 90ರಷ್ಟು ಕೃಷಿ ಕಾರ್ಮಿಕರು ಅಥವಾ ಕೃಷಿ ಅವಲಂಬಿತರು. ಕೃಷಿ ಆಧಾರಿತ ಆದಾಯ ಪರಿಗಣನೆ, ಪರಿಣಾಮಕಾರಿ ಆರ್ಥಿಕ ಮಾನದಂಡ ಆಗಬಹುದೆ ಎಂದು ಅವರು ಕೇಳಿದ್ದಾರೆ.
ಸಮಾನ ಶಿಕ್ಷಣ ವ್ಯವಸ್ಥೆ ಅಥವಾ ಏಕರೂಪ ಶಿಕ್ಷಣ ವ್ಯವಸ್ಥೆ ಇಡೀ ದೇಶದಲ್ಲಿ ಜಾರಿಯಾಗುವವರೆಗೂ ಮೀಸಲಾತಿ ವ್ಯವಸ್ಥೆ ಇರಬೇಕು. ದಲಿತರಷ್ಟೆ ಹಿಂದುಳಿದಿರುವ ಇತರೆ ವರ್ಗದವರಿಗೂ ಮೀಸಲಾತಿ ವ್ಯವಸ್ಥೆ ವಿಸ್ತರಣೆ ಆಗಬೇಕು. ದ್ವಿವೇದಿಯಂತಹ ಗೊಂದಲ ಮನಸ್ಸಿನ ಕಾಂಗ್ರೆಸ್‌ನವರು ಆರ್ಥಿಕ ಸಮಾನತೆ ಮತ್ತು ಸಾಮಾಜಿಕ ಸಮಾನತೆಗಳಲ್ಲಿ ವ್ಯತ್ಯಾಸ ಗುರುತಿಸಲು ತಮ್ಮ ಗಮನ ಕೊಡಲಿ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.