ಮೈಸೂರು

ಮಾಧವಮಂತ್ರಿ ಅಣೆಕಟ್ಟೆ ಮರು ನಿರ್ಮಾಣ

Published On :

ಕ.ಪ್ರ.ವಾರ್ತೆ ಟಿ. ನರಸೀಪುರ ಫೆ. 10
ಮಾಧವಮಂತ್ರಿ ಅಣೆಕಟ್ಟೆಯನ್ನು ಸುಮಾರು 500 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಬೃಹತ್ ವಿನೂತನ ಯೋಜನೆಯೊಂದನ್ನು ರೂಪಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ತಾಲೂಕಿನ ತಲಕಾಡು ಬಳಿ ಕಾವೇರಿ ನದಿಗೆ ಎಂಟು ನೂರು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದ್ದ ಮಾಧವಮಂತ್ರಿ ಅಣೆಕಟ್ಟೆ ಒಡೆದು, ನೀರಿಲ್ಲದಿರುವುದನ್ನು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಹಾಗೂ ರೈತರೊಂದಿಗೆ ಪರಿಶೀಲಿಸಿ  ಮಾತನಾಡಿದ ಅವರು, ಅಣೆಕಟ್ಟೆ ಮರು ನಿರ್ಮಾಣಕ್ಕೆ ಯೋಜನಾ ವರದಿ ವಿವರ ತಯಾರಿಸಲಾಗುತ್ತಿದೆ ಎಂದರು.
ತಲಕಾಡು ಭಾಗದ ಜನರ ಬದುಕು ಸುಧಾರಣೆಯಾಗಬೇಕು. ಎಂಟು ಶತಮಾನಗಳ ಪಾರಂಪರಿಕ ಹಿನ್ನೆಲೆಯಿರುವ ಅಣೆಕಟ್ಟೆಯ ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಮರು ನಿರ್ಮಾಣದ ಯೋಜನೆಗೆ ತಜ್‌ಞರ ಸಲಹೆಯನ್ನು ಪಡೆಯಲಾಗುವುದು. ಕಾಮಗಾರಿಗೆ ಕನಿಷ್ಟವೆಂದರೂ ಮೂರು ವರ್ಷಗಳ ಕಾಲಾವಕಾಶ ಬೇಕು. ರೈತರ ಬೆಳೆಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.  
ತೋಡುಗಾಲುವೆ ನಿರ್ಮಾಣ: ಮಾಧವಮಂತ್ರಿ ನಾಲೆಯ ಕುಕ್ಕೂರು ಬ್ರಾಂಚ್‌ನ್ನು ಆಧುನಿಕರಣಗೊಳಿಸಿ, ಉಪನಾಲೆ ವ್ಯಾಪ್ತಿಯಲ್ಲಿ ತೋಡುಗಾಲುವೆಗಳನ್ನು ನಿರ್ಮಾಣ ಮಾಡಿ, ವಿಜಾಪುರ ಸುತ್ತಮುತ್ತಲಿನ ಅಚ್ಚುಕಟ್ಟು ಪ್ರದೇಶಕ್ಕೂ ವರ್ಷದಲ್ಲಿ ಎರಡು ಫಸಲು ಬೆಳೆಯಲು ನೀರು ಹರಿಸುವುದಾಗಿ ಸಚಿವರು ಭರವಸೆ ನೀಡಿದರು.
ತಲಕಾಡಿನಲ್ಲಿ ದ್ವಿಪಥ ರಸ್ತೆ: ವೈದ್ಯನಾಥೇಶ್ವರ ದೇವಾಲಯ ಹಾಗೂ ಕಾವೇರಿ ನದಿ ತೀರಕ್ಕೆ ಸಂಪರ್ಕ ಕಲ್ಪಿಸುವ ತಲಕಾಡು ಗ್ರಾಮದೊಳಗಿನ ರಸ್ತೆಯನ್ನು ವಿಸ್ತರಿಸಿ ದ್ವಿಪಥ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ, ಮಾಜಿ ಶಾಸಕ ಎಸ್. ಕೃಷ್ಣಪ್ಪ, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ತಲಕಾಡು ಗ್ರಾಪಂ ಅಧ್ಯಕ್ಷ ಚಿಕ್ಕಮಾದನಾಯ್ಕ, ಎಸ್ಟಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೊನ್ನನಾಯ್ಕ, ಡಿಸಿಸಿ ಸದಸ್ಯ ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್. ಮಂಜುನಾಥ್, ಲೋಕೋಪಯೋಗಿ ಅಧೀಕ್ಷಕ ಸತ್ಯನಾರಾಯಣ ಇದ್ದರು.

ಕೆನರಾ ಬ್ಯಾಂಕ್‌ನಿಂದ ಭದ್ರತೆ ರಹಿತ ಸಾಲ
ಸರಗೂರು: ಮೂರು ಲಕ್ಷ ಜನರಿಗೆ ಭದ್ರತೆ ರಹಿತ ಸಾಲ ನೀಡಿರುವುದಾಗಿ ಕೆನರಾ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಟಿ.ರಾಮಚಂದ್ರ ಹೇಳಿದರು.  ಪಟ್ಟಣದ ವರ್ತಕ ಮಂಡಳಿಯಲ್ಲಿ ನಡೆದ ಕೆನರಾ ಬ್ಯಾಂಕ್ ಶಾಖೆಯ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಣ್ಣಪುಟ್ಟ ವ್ಯಾಪಾರಿಯು ಹೊರಗಡೆ ಹೆಚ್ಚಿನ ಬಡ್ಡಿ ತೆಗೆದುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅವರ ವ್ಯವಹಾರ ನೋಡಿ ಸಾಲ ನೀಡಿದ್ದೇವೆ ಎಂದು ಫೆ.15 ರೊಳಗೆ ಪಟ್ಟಣದ ಬಸ್ ನಿಲ್ದಾಣದ ಮುಂಭಾಗ ಕೆನರಾಬ್ಯಾಂಕ್ ಶಾಖೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು. ಈ ತಿಂಗಳಲ್ಲಿ ಒಟ್ಟು 6 ಶಾಖೆಗಳು ಪ್ರಾರಂಭವಾಗುತ್ತದೆ. ಮೈಸೂರಿನಲ್ಲಿ ಎರಡು ಶಾಖೆ, ಮಂಡ್ಯದಲ್ಲಿ 2, ಸರಗೂರು ಒಂದು, ಗುಂಡ್ಲುಪೇಟೆಯಲ್ಲಿ ಒಂದು ಶಾಖೆ ಪ್ರಾರಂಭವಾಗಲಿದೆ ಎಂದರು. ಎಸ್‌ವೈಡಾ.ಎಂ.ಎ. ಬಾಲಸುಬ್ರಹ್ಮಣ್ಯ ಮಾತನಾಡಿದರು. ವರ್ತಕ ಮಂಡಳಿ ಅಧ್ಯಕ್ಷ ಲಕ್ಷ್ಮಣೇಗೌಡ ಅಧ್ಯಕ್ಷತೆ ವಹಿಸಿದ್ದರು. ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್. ಶ್ರೀಕಂಠಸ್ವಾಮಿ ಕೆನರಾ ಬ್ಯಾಂಕಿನ ಶಾಖೆ ಪ್ರಾರಂಭ ಆಗುತ್ತಿರುವುದಕ್ಕೆ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.