ಮೈಸೂರು

ಶಿಕ್ಷಣ ಗಟ್ಟಿತನ ಕರುಣಿಸುತ್ತಿಲ್ಲ: ಮೊರಬದ ಮಲ್ಲಿಕಾರ್ಜುನ

Published On :

ಮೈಸೂರು: ಇಂದಿನ ಶಿಕ್ಷಣ ಯುವಕರ ಬದುಕಲ್ಲಿ ಎದುರಾಗುವ ಸಮಸ್ಯೆಯನ್ನು ನೀಗಿಸುವ ಗಟ್ಟಿತನವನ್ನು ಕರುಣಿಸುತ್ತಿಲ್ಲ ಎಂದು ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮೊರಬದ ಮಲ್ಲಿಕಾರ್ಜುನ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕವು ಸೋಮವಾರ ರಾಮಾನುಜ ರಸ್ತೆಯಲ್ಲಿರುವ ವೀರಶೈವ ಅನಾಥಾಲಯದಲ್ಲಿ ಏರ್ಪಡಿಸಿದ್ದ ದತ್ತಿ ಉಪನ್ಯಾಸದಲ್ಲಿ ಯುವಕರ ಚಿತ್ತ ಎತ್ತ ಸಾಗಿದೆ ವಿಷಯ ಕುರಿತು ಅವರು ಮಾತನಾಡಿದರು.
ಪದವಿ ಎಂದಾಕ್ಷಣ ಎಂಜಿನಿಯರಿಂಗ್, ವೈದ್ಯಕೀಯದ ಕಡೆ ಗಮನ ಹರಿಸುವಂತಾಗಿದೆ. ಈ ಪದವಿಗೆ ಸೇರುವವರು ಸಮಾಜ ಸೇವೆಗಿಂತ ಹಣ ಮಾಡುವ ಮಾರ್ಗ ಕಂಡುಕೊಳ್ಳುವ ಪ್ರವೃತ್ತಿಯನ್ನು ನಾವು ಕಾಣುತ್ತಿದ್ದೇವೆ. ಈ ನಡುವೆ ಕಲಾ ವಿಭಾಗವನ್ನು ನಗಣ್ಯವನ್ನಾಗಿ ಮಾಡಲಾಗಿದೆ. ಆದ್ದರಿಂದ ಶಿಕ್ಷಣವೆಂಬುದು ಯುವಕರಲ್ಲಿ ಚೈತನ್ಯ ತುಂಬುತ್ತಿಲ್ಲ.
ಪದವಿ ಮುಗಿಸಿದ ವಿದ್ಯಾರ್ಥಿ ಸಣ್ಣ ಸಣ್ಣ ಘಟನೆಗಳನ್ನು ದೊಡ್ಡದು ಎಂದು ಭಾವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ದೇಹ ಮತ್ತು ಮನಸ್ಸನ್ನು ಏಕೀಭವಿಸುವ ಪರಿಪಾಠವನ್ನು ಯುವಜನತೆ ಮರೆತಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ತೋರಬೇಕಿದೆ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಅನಾಥಾಲಯದ ಅಧ್ಯಕ್ಷ ಎಂ.ರಾಜಶೇಖರ್, ದತ್ತಿ ದಾನಿಗಳಾದ ಗೌರಮ್ಮ ತಿಪ್ಪೇರುದ್ರಸ್ವಾಮಿ, ಶಾರದಮ್ಮ ಗುರುಬಸಪ್ಪ, ರಾಜಮ್ಮ ಶಿವಬಸಪ್ಪ, ನಿಲಯ ಪಾಲಕ ಮಾದೇಶ್, ಕಾರ್ಯದರ್ಶಿ ಡಾ.ಎಂ. ನಾಗೇಂದ್ರಮೂರ್ತಿ ಇದ್ದರು.

ವೇತನ ವಿಳಂಬ ಖಂಡಿಸಿ ನೌಕರರ ಪ್ರತಿಭಟನೆ
ಮೈಸೂರು: ನಿಗದಿತ ವೇಳೆಗೆ ವೇತನ ನೀಡಬೇಕು ಎಂದು ಆಗ್ರಹಿಸಿ ನಗರ ಪಾಲಿಕೆ ನೌಕರರು ಸೋಮವಾರ ವೆಂಕಟರಾಂ ಹಾಗೂ ಉಮೇಶ್ ಅವರ ನೇತೃತ್ವದಲ್ಲಿ ಪಾಲಿಕೆ ಎದುರು ಪ್ರತಿಭಟಿಸಿದರು.
ಕಳೆದ ಆರು ತಿಂಗಳಿಂದ ನಿಗದಿತ ವೇಳೆಗೆ ವೇತನ ಆಗುತ್ತಿಲ್ಲ. ಈ ಮುಂಚೆ ತಿಂಗಳ ಮೊದಲ ದಿನವೇ ವೇತನ ಸಿಗುತ್ತಿತ್ತು. ಆದರೆ ಈಗ 15 ದಿನ ತಡವಾಗುತ್ತಿದೆ. ಇದರಿಂದ ಪಾಲಿಕೆ ನೌಕರರು ತಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಅನೇಕ ನೌಕರರು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುತ್ತಾರೆ. ಆದರೆ ಇಲ್ಲಿ ನಮಗೆ ಸರಿಯಾದ ವೇಳೆಗೆ ವೇತನ ಸಿಗದಿದ್ದರೆ ತೊಂದರೆ ಆಗುತ್ತದೆ. ಇಂದು ತಾರೀಖು 10 ಆದರೂ ಸಂಬಳ ಆಗಿಲ್ಲ. ಅಲ್ಲದೆ ಪಾಲಿಕೆ ನೌಕರರಿಗೆ ನೀಡಬೇಕಾದ ಡಿಎ ಬಾಕಿಯನ್ನೂ ನೀಡಿಲ್ಲ ಎಂದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ನೌಕರರ ಪ್ರತಿಭಟನೆ ಇರುವ ಹಿನ್ನೆಲೆಯಲ್ಲಿ ಯಾವ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಆದ್ದರಿಂದ ಗುರುವಾರ ತಮ್ಮ ಖಾತೆಗೆ ಸಂಬಳ ಬರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಬಳಿಕ ನೌಕರರು ತಮ್ಮ ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.