ಮೈಸೂರು

ಯಕ್ಷಗಾನವನ್ನು ರಾಷ್ಟ್ರೀಯ ಕಲೆ ಎಂದು ಪರಿಗಣಿಸಿ: ಜಿ.ಎಸ್. ಭಟ್ಟ

Published On :

ಮೈಸೂರು: ಯಕ್ಷಗಾನಕ್ಕೆ ರಾಷ್ಟ್ರೀಯ ಕಲೆಯ ಮನ್ನಣೆ ದೊರಕಬೇಕು ಎಂದು ಅಖಿಲ ಭಾರತ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ಎಸ್. ಭಟ್ಟ ಹೇಳಿದರು.
ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನವು ಕರಾವಳಿ ಮೂಲದ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿರುವ ಮೂರು ದಿನಗಳ 9ನೇ ಅಖಿಲ ಭಾರತ ಯಕ್ಷಗಾನ - ಬಯಲಾಟ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಹಾಗೂ ಸುಂದರ ಕಲೆಯಾಗಿರುವ ಯಕ್ಷಗಾನ ಕೇವಲ ನಮ್ಮ ನಾಡಿಗೆ ಮಾತ್ರ ಸೀಮಿತವಾಗಬಾರದು. ಇದರ ಮಹತ್ವ ವಿದೇಶಗಳಿಗೂ ಹರಡಿ ಯುನೆಸ್ಕೋ ಮನ್ನಣೆ ಲಭಿಸಬೇಕು. ಸರ್ಕಾರ ಈ ಕಲೆಯನ್ನು ರಾಷ್ಟ್ರೀಯ ಕಲೆಯೆಂದು ಮಾನತ್ಯೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಗಾನ ಪ್ರಸಂಗಕರ್ತರಿಗೆ ಸಾಕಷ್ಟು ಪ್ರಾತಿನಿಧ್ಯ ದೊರಕುತ್ತಿಲ್ಲ. ಕಡಲತೀರದ ಭಾರ್ಗವ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಯಕ್ಷಗಾನದಲ್ಲಿ ಆಳವಾದ ಅಧ್ಯಯನ, ಸಂಶೋಧನೆ ಹಾಗೂ ಪ್ರಸಂಗ ನಡೆಸುವ ಮೂಲಕ  ಯಕ್ಷಗಾನಕ್ಕೆ ಕಾಯಕಲ್ಪ ನೀಡಿರುವುದು ಅವಿಸ್ಮರಣೀಯ. ಈ ಹಿಂದೆ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗಳು ಒಂದೇ ಆಗಿದ್ದಾಗ ಜಾನಪದಶ್ರೀ ಪ್ರಶಸ್ತಿ ಇತ್ತು. ಈಗ ಯಕ್ಷಗಾನ ಕಲಾವಿದರಿಗೆ ಪ್ರತ್ಯೇಕವಾಗಿ 5 ಲಕ್ಷ ಮೌಲ್ಯದ ಯಕ್ಷಶ್ರೀ ಪ್ರಶಸ್ತಿ ಸ್ಥಾಪಿಸಬೇಕು. ಕರ್ನಾಟಕ ರತ್ನ, ಭಾರತ ರತ್ನ ಪುರಸ್ಕಾರಕ್ಕೂ ಈ ಕಲಾವಿದರನ್ನು ಪರಿಗಣಿಸಬೇಕು. ಯಕ್ಷಗಾನ ಪತ್ರಿಕೆಗಳಿಗೂ ಸರ್ಕಾರ ಉದಾರವಾಗಿ ಜಾಹೀರಾತು ನೀಡಬೇಕು ಎಂದು ಒತ್ತಾಯಿಸಿದರು.      
ಯಕ್ಷಗಾನ ಬಯಲಾಟ ಪುಸ್ತಕ ಹಾಗೂ ಸ್ಮರಣ ಸಂಚಿಕೆಯನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಉದ್ಘಾಟಿಸಿದರು. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಆಶಯ ನುಡಿಗಳಾಡಿದರು. ಉದ್ಯಮಿ ಕೃಷ್ಣ ಸಂಪಿಗೆತ್ತಾಯ ಹಾಗೂ ಪತ್ರಕರ್ತ ಅಂಜನಪ್ಪ, ಪ್ರತಿಷ್ಠಾನದ ಅಧ್ಯಕ್ಷ ಎಸ್.ಎನ್.ಪಂಜಾಂಜೆ ಇದ್ದರು. ಪಿ.ವಿ. ಪರಮೇಶ್ ಸ್ವಾಗತಿಸಿದರು. ನಂತರ ಮೈಸೂರಿನ ಕೃಪಾ ಪಡ್ಕೆ ಮತ್ತು ಪ್ರದೀಪ ಸಾಮಗ ತಂಡ ಭರತ ಯಕ್ಷ ನಾಟ್ಯ ವೈಭವ ನಡೆಸಿಕೊಟ್ಟರು.
ಮೆರವಣಿಗೆ: ಅರಮನೆ ಜಯಮಾರ್ತಾಂಡ ದ್ವಾರದ ಮುಂಭಾಗದಿಂದ ವಿವಿಧ ಕಲಾತಂಡಗಳೊಂದಿಗೆ ಸಮ್ಮೇಳಾನಧ್ಯಕ್ಷ ಜಿ.ಎಸ್. ಭಟ್ಟ ಅವರನ್ನು ಮೆರವಣಿಗೆಯಲ್ಲಿ ಸಭಾ ಭವನಕ್ಕೆ ಕರೆತರಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.