ಸಿಬ್ಬಂದಿ ವಿಳಂಬಕ್ಕೆ ಡಿಡಿಪಿಐ ತರಾಟೆ
ಕೆ.ಆರ್. ನಗರ: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಶುಕ್ರವಾರ ಬೆಳಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಆರ್. ಬಸಪ್ಪ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ 8 ಮಂದಿ ಗೈರು ಹಾಜರಾಗಿದ್ದು ಕಂಡು ಬಂದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಉಪನಿರ್ದೇಶಕರು ಹಾಜರಾತಿ ಪುಸ್ತಕಕ್ಕೆ ಎಲ್ಲರಿಗೂ ಗೈರು ಹಾಜರಿ ನಮೂದಿಸಿದರಲ್ಲದೆ, ತಡವಾಗಿ 11 ಗಂಟೆಗೆ ಬಂದ ವ್ಯವಸ್ಥಾಪಕ ಬಸವರಾಜು ಮತ್ತು ಪ್ರಥಮ ದರ್ಜೆ ಸಹಾಯಕಿ ರಂಗಮ್ಮಣ್ಣಿ ಅವರನ್ನು ತರಾಟೆಗೆ ತೆಗೆಕೊಂಡು ಸಂಜೆವರೆಗೆ ಸಂಬಳ ರಹಿತವಾಗಿ ಕಾರ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.
ಬೆಳಗ್ಗೆ 10.05ಕ್ಕೆ ಉಪನಿರ್ದೇಶಕ ಎಚ್.ಆರ್. ಬಸಪ್ಪ ಭೇಟಿ ನೀಡಿದಾಗ, ಕಚೇರಿ ಸಿಬ್ಬಂದಿ ಲಕ್ಷ್ಮಣ್ ಮತ್ತು ಲೋಕೇಶ್ ಹೊರತುಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಜವರೇಗೌಡ ಸೇರಿದಂತೆ ವ್ಯವಸ್ಥಾಪಕ ಬಸವರಾಜು, ಪ್ರಥಮ ದರ್ಜೆ ಸಹಾಯಕರಾದ ನಟೇಶ್, ವತ್ಸಲಾ, ರಂಗಮ್ಮಣ್ಣಿ, ಪ್ರಸನ್ನ ಸೇರಿದಂತೆ ಇತರ ಸಿಬ್ಬಂದಿ ಗೈರಾಗಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೈಸೂರು ಜಿಪಂಗೆ ಸಭೆಗೆ ಹೋಗಿದ್ದಾರೆ ಎಂದು ಕಚೇರಿಯ ಸಿಬ್ಬಂದಿ ಉತ್ತರಿಸಿದಾಗ, ಕೆಂಡಾಮಂಡಲರಾದ ಅವರು ಉಪನಿರ್ದೇಶಕನಾದ ನನ್ನ ಗಮನಕ್ಕೆ ತಾರದೆ ಯಾವ ಸಭೆಗೆ ಹೋಗಿದ್ದಾರೆ? ಅಸಲಿಗೆ ಇಂದು ಜಿಪಂನಲ್ಲಿ ಯಾವ ಸಭೆಯೂ ಇಲ್ಲ ಎಂದು ಗದರಿದರು.
ಸಮಯಕ್ಕೆ ಸರಿಯಾಗಿ ಹಾಜರಾಗದೆ ಕರ್ತವ್ಯ ಲೋಪ ಎಸಗಿರುವವರಿಗೆ ನೋಟಿಸ್ ನೀಡಿ, ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ. ಕಚೇರಿ ಕೆಲಸಕ್ಕೆ ಬರುವ ಶಿಕ್ಷಕರನ್ನು ಅನಗತ್ಯವಾಗಿ ಅಲೆಸುವ ಬಗ್ಗೆಯೂ ವ್ಯಾಪಕ ದೂರುಗಳು ಕೇಳಿ ಬಂದಿದ್ದು, ಈ ಬಗ್ಗೆ ಇಲಾಖಾ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಅಕ್ರಮದ ವಿರುದ್ಧ ಕ್ರಮ: ಪಟ್ಟಣದ ಲಯನ್ಸ್ ಶಾಲೆಯಲ್ಲಿ ಫೆ. 8ರಂದು ನಡೆದ ನವೋದಯ ಪರೀಕ್ಷೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸೇರಿದಂತೆ ಇತರರು ಅಕ್ರಮ ಎಸಗಿದ್ದು, ಕೊಠಡಿ ಮೇಲ್ವಿಚಾರಕರನ್ನು ಹೊರಗೆ ಕಳುಹಿಸಿ ಬೇರೊಬ್ಬರಿಂದ ಆಯ್ದ ಮಕ್ಕಳಿಗೆ ಉತ್ತರ ಹೇಳಿ ಬರೆಸಿದ್ದಾರೆ ಎಂದು ಪೋಷಕರಿಂದ ಲಿಖಿತ ದೂರು ಬಂದಿದೆ. ಈ ಬಗ್ಗೆಯೂ ವರದಿ ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರಿಗೆ ಪ್ರತಿ ತಿಂಗಳು 3ನೇ ದಿನಾಂಕದೊಳಗೆ ಸಂಬಳ ನೀಡಲು ಗಮನ ಹರಿಸಲಾಗುತ್ತದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಯದಂತೆ ವಿಶೇಷ ನಿಗಾ ವಹಿಸಲಿದ್ದು, ಜಾಗೃತ ದಳ ನೇಮಕ ಮಾಡಲಾಗುವುದು ಎಂದರು.
ಇಬ್ಬರ ಅಮಾನತು: ತಾಲೂಕಿನ ಹೆಬ್ಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನವೋದಯ ಪರೀಕ್ಷೆಯಿಂದ ವಂಚಿತರಾಗಲು ಕಾರಣರಾದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಬಿ.ಡಿ. ನಾಗೇಶ್ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಆರ್. ಬಸಪ್ಪ ಆದೇಶಿಸಿದ್ದಾರೆ.
ಶಾಲೆಯ ಮುಖ್ಯ ಶಿಕ್ಷಕರು ಸೆಪ್ಟೆಂಬರ್ 2013ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ರವಾನೆ ವಿಭಾಗಕ್ಕೆ ನವೋದಯ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳ ಪಟ್ಟಿ ರವಾನಿಸಿದ್ದರು.
ಅವುಗಳನ್ನು ರವಾನೆ ಸಹಾಯಕರಿಂದ ಸ್ವೀಕರಿಸಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸದೆ ಕರ್ತವ್ಯ ಲೋಪ ಎಸಗಿರುವುದು ದೃಢಪಟ್ಟಿರುವುದರಿಂದ, ನಾಗೇಶ್ ಅವರ ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಲಾಗಿದೆ ಎಂದು ಉಪನಿರ್ದೇಶಕರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

