ಮೈಸೂರು

'ದೇಶದ ಶೇ.86 ಜನ ನ್ಯಾಯಾಲಯಕ್ಕೆ ಬರುತ್ತಿಲ್ಲ'

Published On :

ಮೈಸೂರು: ದೇಶದಲ್ಲಿ ಶೇ.14 ಜನ ಮಾತ್ರ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಬರುತ್ತಿದ್ದಾರೆ. ಉಳಿದ ಶೇ.86 ಜನ ನ್ಯಾಯಾಲಯಕ್ಕೆ ಬರುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಡಿ.ಎಚ್. ವಘೇಲಾ ಹೇಳಿದರು.
ನಗರದ ಸಾ.ರಾ. ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಕೀಲರ ಸಂಖ್ಯೆಯೂ ಸಹ ಹೆಚ್ಚಾಗಬೇಕು: ಪ್ರಕರಣ ದಾಖಲಿಸದಿರುವುದು, ಬೇರೆ ರೀತಿಯಲ್ಲಿ ಇತ್ಯರ್ಥ ಸೇರಿದಂತೆ ವಿವಿಧ ಕಾರಣಗಳಿಂದಾಗಿ ದೇಶದ ಶೇ.86 ಜನರು ನ್ಯಾಯಾಲಯಕ್ಕೆ ಬರುತ್ತಿಲ್ಲ. ಈ ಜನರನ್ನು ಬೇರೆ ಬೇರೆ ಕಾರಣಗಳಾಗಿ ತಡೆಯಲಾಗುತ್ತಿದೆ. ಇವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಅವರು ವಿಷಾದಿಸಿದರು.
ಭಾರತದ ನ್ಯಾಯಾಂಗ ವ್ಯವಸ್ಥೆಯು ಬೆಳವಣಿಗೆ ಹಾದಿಯಲ್ಲಿದೆ. ದೇಶದ ಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕಿದೆ. ಸಾಮಾನ್ಯ ಜನರಿಗೆ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಒದಗಿಸದಿದ್ದರೇ ನ್ಯಾಯಾಂಗ ವ್ಯವಸ್ಥೆಯೇ ವಿಫಲವಾಗುತ್ತದೆ. ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೆ ನ್ಯಾಯಾಧೀಶರ, ಸಿಬ್ಬಂದಿ ನೇಮಕ, ಸೌಲಭ್ಯಗಳನ್ನು ಹೆಚ್ಚಿಸಬೇಕು. ಜೊತೆಗೆ ವಕೀಲರ ಸಂಖ್ಯೆಯೂ ಸಹ ಹೆಚ್ಚಾಗಬೇಕು ಎಂದು ಅವರು ತಿಳಿಸಿದರು.
ದೇಶದಲ್ಲಿ 15 ಸಾವಿರ ನ್ಯಾಯಾಲಯಗಳಿವೆ: ದೇಶದಲ್ಲಿ ಪ್ರಸ್ತುತ 15 ಸಾವಿರ ನ್ಯಾಯಾಲಯಗಳಿವೆ. ಇನ್ನೂ 12 ವರ್ಷಗಳಲ್ಲಿ ಇದರ ಸಂಖ್ಯೆ 75 ಸಾವಿರ ಆಗಲಿದೆ. ನ್ಯಾಯಾಲಯಗಳು ಹೆಚ್ಚಾದಂತೆ ವಕೀಲರ ಸಂಖ್ಯೆ, ಸೌಲಭ್ಯ ಸಹ ಹೆಚ್ಚಾಗಬೇಕಿದೆ. ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನ್ಯಾಯಾಲಯದೊಂದಿಗೆ ವಕೀಲರು ಸಹಕರಿಸಬೇಕಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಸುಧಾರಣೆಗಳು ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಮುಂದುವರೆದ ರಾಷ್ಟ್ರಗಳಲ್ಲಿ ನ್ಯಾಯಾಂಗ ವ್ಯವಸ್ಥೆಯು ಸಾಕಷ್ಟು ಸುಧಾರಣೆ ಆಗಿದೆ. ಅಲ್ಲಿನ ಕೆಳ ದರ್ಜೆಯಿಂದ ಮೇಲ್ದರ್ಜೆವರೆಗಿನ ನ್ಯಾಯಾಲಯಗಳು ಕಾಲ ಮಿತಿ ಹಾಕಿಕೊಂಡು ಪ್ರಕರಣಗಳನ್ನು ಇತ್ಯರ್ಥಗೊಳಿಸುತ್ತಿವೆ. ಯಾವುದೇ ಪ್ರಕರಣವಾದರೂ ಸಹ 2 ವರ್ಷಗಳಲ್ಲಿ ಇತ್ಯರ್ಥ ಮಾಡಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ವಿವಿಧ ಕಾರಣಗಳಿಗಾಗಿ ಪ್ರಕರಣಗಳ ಇತ್ಯರ್ಥವು ತುಂಬಾ ವಿಳಂಬ ಆಗುತ್ತಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ವೃತ್ತಿಪರತೆ ಹೆಚ್ಚಾಗಬೇಕು ಎಂದು ಅವರು ತಿಳಿಸಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕಿರಿಯ ವಕೀಲರ ಕಾನೂನು ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಅಕಾಡೆಮಿ ಸ್ಥಾಪಿಸುತ್ತಿದೆ. ಇದಕ್ಕೆ ಅಗತ್ಯ ಜಾಗವನ್ನು ಸರ್ಕಾರ ಒದಗಿಸಬೇಕು ಎಂದು ಅವರು ಹೇಳಿದರು.
ರಾಜ್ಯದಲ್ಲಿ 12 ಲಕ್ಷ ಪ್ರಕರಣ ಬಾಕಿ: ಕಾನೂನು ಮತ್ತು ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳು ಸೇರಿದಂತೆ ಒಟ್ಟು 12 ಲಕ್ಷ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿದೆ. ಇದರಿಂದ ಜನರಿಗೆ ನ್ಯಾಯ ದೊರೆಯುವುದರಲ್ಲಿ ವಿಳಂಬ ಆಗುತ್ತಿದೆ ಎಂದರು. ವಕೀಲರ ಪರಿಷತ್ತಿಗೆ ಅಗತ್ಯ ಜಾಗ ನೀಡಲು ಸರ್ಕಾರ ಸಿದ್ಧವಿದೆ. ಪರಿಷತ್ತಿನ ಪದಾಧಿಕಾರಿಗಳ ಜಾಗದ ವಿಚಾರದ ಬಗ್ಗೆ ಸಂಬಂಧಪಟ್ಟವರೊಂದಿಗೆ ಸಂಪರ್ಕದಲ್ಲಿ ಇರಬೇಕು. ಕಾನೂನು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ರಾಜ್ಯದ 21 ಕಾನೂನು ಕಾಲೇಜುಗಳಿಗೆ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
'ಮಹಿಳೆಯರಿಗೆ ಆರ್ಥಿಕ ಒಡೆತನ ದೊರಕಲಿ'
ಮೈಸೂರು: ಶ್ರಮಶಕ್ತಿಯಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಿದ್ದರೂ ಆರ್ಥಿಕ ಒಡೆತನ ಮಾತ್ರ ಪುರುಷನಲ್ಲಿಯೇ ಇದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು. ಸುವರ್ಣ ಮಹೋತ್ಸವ ಸಮಾರಂಭದ ಗೋಷ್ಠಿಯೊಂದರಲ್ಲಿ ಮಾತನಾಡಿದರು. ಪುರುಷರಷ್ಟೆ ಸಂಖ್ಯೆಯಲ್ಲಿ ಮಹಿಳೆಯರೂ ಇದ್ದಾರೆ. ಆದರೂ ಮಹಿಳೆಯನ್ನು ಎರಡನೇ ದರ್ಜೆಯಲ್ಲಿಟ್ಟು ನೋಡಲಾಗುತ್ತದೆ. ಅಸ್ಪೃಶ್ಯಕ್ಕೆ ಒಳಗಾದ ವ್ಯಕ್ತಿಯೂ ಸಹ ತನ್ನ ಹೆಂಡತಿಯನ್ನು ಕೆಳಮಟ್ಟದಲ್ಲಿಯೇ ನೋಡುತ್ತಾನೆ. ಶ್ರಮಶಕ್ತಿಯನ್ನು ಪುರುಷರಿಗಿಂತ ಮಹಿಳೆಯರು ಹೆಚ್ಚಿದ್ದಾರೆ. ಆದರೂ ಇಡೀ ಆರ್ಥಿಕ ಒಡೆತನ ಮಾತ್ರ ಪುರುಷನ ಕೈಯಲ್ಲಿರುವುದು ವಿಪರ್ಯಾಸ ಎಂದರು. ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಪ್ರಮಿಳಾ ನೇಸರ್ಗಿ ಮಾತನಾಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.