ಮೈಸೂರು

ಅರಣ್ಯ ಸಂರಕ್ಷಣೆ ಖಾಸಗಿಯವರಿಗೆ ಬೇಡ: ವೇದಿಕೆ ಸಂಚಾಲಕ ಶ್ರೀಕಾಂತ್

Published On :

ಕ.ಪ್ರ. ವಾರ್ತೆ, ಹುಣಸೂರು, ಫೆ. 27
ನಾಗರಹೊಳೆ, ಬಂಡೀಪುರ, ಬಿ.ಆರ್. ಹಿಲ್ಸ್‌ನಂತಹ ರಕ್ಷಿತಾರಣ್ಯದ ವನ್ಯಜೀವಿಗಳ ಸಂರಕ್ಷಣೆಯ ಹೊಣೆಯನ್ನು ಸರ್ಕಾರೇತರ ಖಾಸಗಿ ಸಂಸ್ಥೆಗಳಿಗೆ ನೀಡಲು ಹೊರಟಿರುವ ರಾಜ್ಯ ಸರ್ಕಾರದ ನಿರ್ಧಾರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯ ಮೂಲ ನಿವಾಸಿ ವೇದಿಕೆಯ ಸಂಚಾಲಕ, ಡೀಡ್ ಸಂಸ್ಥೆಯ ಎಸ್. ಶ್ರೀಕಾಂತ್ ಕಿಡಿಕಾರಿದರು.
 ಬ್ರಿಟಿಷರ ಕಾಲದ ನೀತಿಯನ್ನೆ ಅನುಸರಿಸುತ್ತಿರುವ ಅರಣ್ಯ ಇಲಾಖೆ ತಲೆದಪ್ಪ, ಮೈಸಣ್ಣ ಎನ್ನುವ ಹೆಂಟೆಗೊದ್ದವಾಗಿದೆ. ಅಲ್ಲಿರುವ ಐಎಫ್‌ಎಸ್ ಅಧಿಕಾರಿಗಳು ಬಿಳಿಯಾನೆಗಳಾಗಿದ್ದಾರೆ. ಇವರನ್ನು ಕಾಡಿನೊಳಗೆ ಅಟ್ಟಿ, ಕಾಡನ್ನು ಕಾಯುವ ಕೆಲಸಕ್ಕೆ ನೇಮಿಸಬೇಕು. ಇದೆಲ್ಲವನ್ನೂ ಬಿಟ್ಟು ಸರ್ಕಾರ ವನ್ಯಜೀವಿಗಳ ಸಂರಕ್ಷಣಾ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಗೆ ವಹಿಸುತ್ತಿರುವುದು ಎಷ್ಟು ಸರಿ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
 ಸರ್ಕಾರ ಐಎಫ್‌ಎಸ್ ಅಧಿಕಾರಿಗಳ ಸಂಖ್ಯೆ, ಅವರಿಗಾಗಿ ಎಷ್ಟು ಖರ್ಚು ಮಾಡುತ್ತಿದೆ ಹಾಗೂ ಈ ಅಧಿಕಾರಿಗಳು ಮಾಡಿರುವ ಸಾಧನೆಗಳೇನೆಂಬುದರ ಕುರಿತು ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದರು.
 ನಾಗರಹೊಳೆರಾಷ್ಟ್ರೀಯ ಉದ್ಯಾನದಲ್ಲಿ 40ಕ್ಕೂ ಹೆಚ್ಚು ಕೆರೆಗಳು, ನೂರಕ್ಕೂ ಹೆಚ್ಚಿನ ಕಟ್ಟೆಹಳ್ಳ, ಹಡ್ಲುಗಳು, 5 ಹೊಳೆಗಳು ಈಗ ಜೀವಂತಿಕೆ ಕಳೆದುಕೊಂಡು ಬದುಕುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಕಾಡಲ್ಲಿದ್ದ ಬಿದಿರು ಸಂಪೂರ್ಣ ಒಣಗಿ ಹೋಗಿದೆ. ಕಾಡಿನಲ್ಲಿ ಕೇವಲ ಏಕ ಜಾತಿ ಸಸ್ಯಗಳಾದ ತೇಗ, ಅಕೇಷಿಯಾ, ನೀಲಗಿರಿ ಮರಗಳು ಕಾಡಿನ ಅರ್ಧಭಾಗವನ್ನು ಆಕ್ರಮಿಸಿವೆ.
 ಆದಿವಾಸಿಗಳನ್ನು ಕಾಡಿನಿಂದ ಹೊರಗಟ್ಟುವ ಉದ್ದೇಶದಿಂದ ಕಾಡಿನಲ್ಲಿ ಸಿಗುತ್ತಿದ್ದ ಮಾವು, ಹಲಸು, ಸೀತಾಫಲ, ರಾಮಫಲ, ಬೇಲದ ಮರಗಳನ್ನು ಕಡಿದು ಹಾಕಲಾಗಿದೆ. ಕಳೆದ ಮೂವತ್ತು ವರ್ಷಗಳಿಂದಲೂ ಅರಣ್ಯ ಇಲಾಖೆ ಅರಣ್ಯವನ್ನು ಉಳಿಸುವ ಕಾರ್ಯ ಮಾಡಿಲ್ಲ.
  ಇಂತಹ ಸ್ಥಿತಿಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗೆ ಅರಣ್ಯ ರಕ್ಷಣೆಯ ಹೊಣೆ ನೀಡಿದಲ್ಲಿ ಕಾನೂನಾತ್ಮಕ ಕ್ರಮಗಳನ್ನು ಆ ಸಂಘ ಸಂಸ್ಥೆ ಮಾಡಲು ಸಾಧ್ಯವೆ ಎಂದು ಅವರು ಪ್ರಶ್ನಿಸಿದರು. ಕೊಡಗಿನಿಂದ ಕೇರಳಕ್ಕೆ ನಿರ್ಮಿಸಲು ಉದ್ದೇಶಿಸಿರುವ ಹೈಟೆನ್ಷನ್ ವಿದ್ಯುತ್ ಮಾರ್ಗ ಪರಿಸರ ವಿರೋಧಿ ಕ್ರಮವಾಗಿದೆ, ಮಾನವನ ನರ ಮಂಡಲದಂತೆ ಇರುವ ಜಲಮೂಲಗಳನ್ನು ನಾಶ ಪಡಿಸಲು ಕೇಂದ್ರ ಸರ್ಕಾರ ಹೊರಟಿದೆ. ಪ್ರಸ್ತುತ ಕೇಂದ್ರದ ಪರಿಸರ ಮಂತ್ರಿ ರಾಜ್ಯದ ಪ್ರತಿನಿಧಿ ವೀರಪ್ಪಮೊಯ್ಲಿ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 10 ದಿನದಲ್ಲಿ 200 ಕಡತಗಳಿಗೆ ಸಹಿ ಹಾಕಿ ರೈತರ ಜೀವನವನ್ನು ವಿನಾಶಕ್ಕೆ ದೂಡಿದ್ದಾರೆ. ಇವರ ಈ ನೀತಿ ಹೀಗೆ ಮುಂದುವರೆದರೆ ಅವರ ಪ್ರತಿಕೃತಿ ದಹಿಸಿ ಪ್ರತಿಭಟಿಸಲು ಸಿದ್ಧರಾಗುತ್ತೇವೆ ಎಂದು ಎಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.