20ನಿಮಿಷ 20ಸುದ್ದಿ
ಜನವರಿ ಮಾಹೆ ಪಡಿತರ ಬಿಡುಗಡೆ
ಮೈಸೂರು: ಜಿಲ್ಲೆಯ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಜನವರಿ ಮಾಹೆಗೆ ಪಡಿತರ ಧಾನ್ಯ ಬಿಡುಗಡೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡುದಾರರಿಗೆ 29 ಕೆ.ಜಿ. ಅಕ್ಕಿ, (ಪ್ರತಿ ಕೆ.ಜಿ.ಗೆ 1 ರು.) 6 ಕೆ.ಜಿ. ಗೋದಿ (ಪ್ರತಿ ಕೆ.ಜಿ.ಗೆ 1 ು.) ಬಿಪಿಎಲ್ ಏಕಸದಸ್ಯ ಪಡಿತರ ಕಾರ್ಡುದಾರರಿಗೆ 9 ಕೆ.ಜಿ. ಅಕ್ಕಿ, ದ್ವಿ ಸದಸ್ಯರಿಗ 18 ಕೆ.ಜಿ. ಅಕ್ಕಿ, ತ್ರಿ ಸದಸ್ಯ ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರಿಗೆ 27 ಕೆ.ಜಿ. ಅಕ್ಕಿ, (ಪ್ರತಿ ಕೆ.ಜಿ.ಗೆ 1 ರು.), ಏಕಸದಸ್ಯ ಕಾರ್ಡುದಾರರಿಗೆ ಗೋದಿ 1 ಕೆ.ಜಿ., ದ್ವಿಸದಸ್ಯ ಕಾರ್ಡುದಾರರಿಗೆ 2 ಕೆ.ಜಿ., ತ್ರಿ ಸದಸ್ಯ ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರಿಗೆ 3 ಕೆ.ಜಿ. ಗೋದಿ (ಪ್ರತಿ ಕೆ.ಜಿ.ಗೆ 1 ರು.), ಅಂತ್ಯೋದಯ, ಬಿಪಿಎಲ್ ಕಾರ್ಡುದಾರರಿಗೆ 1 ಕೆ.ಜಿ. ಸಕ್ಕರೆಯನ್ನು 13.50 ರು. ಸಕ್ಕರೆ ನೀಡಲಾಗುತ್ತದೆ. ಈ ಮಾಹೆಯಲ್ಲಿ ಎಪಿಎಲ್ ಪಡಿತರ ಚೀಟಿದಾರರಿಗೆ ಪಡಿತರ ಬಿಡುಗಡೆ ಮಾಡಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
10,11 ರಂದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ
ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಜ.10 ರಂದು 1 ರಿಂದ 7ನೇ ತರಗತಿ ಮಕ್ಕಳಿಗೆ ಹಾಗೂ ಜ.11 ರಂದು 8 ರಿಂದ 10ನೇ ತರಗತಿಯ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯನ್ನು ಕೃಷ್ಣಮೂರ್ತಿಪುರಂನಲ್ಲಿರುವ ಶಾರಾದ ವಿಲಾಸ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ. ಈ ಪ್ರತಿಭಾ ಕಾರಂಜಿಯಲ್ಲಿ ಚಿತ್ರಕಲೆ, ಭಾಷಣಾ, ಪ್ರಬಂಧ ಹಾಗೂ ಚರ್ಚಾ ಸ್ಪರ್ಧೆಗಳು ನಡೆಯಲಿದೆ. 14 ರಿಂದ 4ನೇ ತರಗತಿಯ ಶಾಲಾ ಮಕ್ಕಳಿಗೆ ಸಾಕು ಪ್ರಾಣಿಗಳ ವಿಷಯ ಕುರಿತು, 5 ರಿಂದ 7ನೇ ತರಗತಿಯವರಿಗೆ ಸಂತೆ ವಿಷಯ ಕುರಿತು ಹಾಗೂ 8 ರಿಂದ 10ನೇ ತರಗತಿ ಮಕ್ಕಳಿಗೆ ಉಪಗ್ರಹ ಉಡಾವಣೆ ಕುರಿತು ಚಿತ್ರಕಲಾ ಸ್ಪರ್ಧೆ ನಡೆಯಲಿದೆ. 8 ರಿಂದ 10ನೇ ತರಗತಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ಭಾಷಣಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ನಡೆಯಲಿದೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಮೈಸೂರು: 2013-14ನೇ ಸಾಲಿನ ರಾಜ್ಯ ವಲಯದ ಯೋಜನೆಯಡಿ ಪ್ರತಿಭಾವಂತ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ಷಿಕ ರು. 3 ಸಾವಿರ ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡುವ ಯೋಜನೆಗೆ ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಕ್ರೀಡಾಕೂಟ, ಮಹಿಳಾ ಕ್ರೀಡಾಕೂಟ ಮತ್ತು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಯೋಜನೆಯಡಿ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಅಥವಾ ಇವುಗಳ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯ ತಂಡ ಪ್ರತಿನಿಧಿಸಿ ಭಾಗವಹಿಸಿದ ಕ್ರೀಡಾಪಟುಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ. ಆಸಕ್ತರು ಜ.31 ರೊಳಗೆ ಅರ್ಜಿಗಳನ್ನು ಕಚೇರಿಗೆ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ದೂ. 0821- 2564179 ಸಂಪರ್ಕಿಸಬಹುದು.
ಕಲಾವಿದರಿಂದ ಅರ್ಜಿ ಆಹ್ವಾನ
ಮೈಸೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2013-14ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಂಡಗಳ ಅಸಂಘಟಿತ ಕಲಾವಿದರಿಗೆ ವಾದ್ಯಪರಿಕರ ಹಾಗೂ ವೇಷಭೂಷಣ ಖರೀದಿಸಿ ವಿತರಿಸುವ ಯೋಜನೆಗಾಗಿ ಅರ್ಹ ಅಸಂಘಟಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲಾವಿದರಿಂದ ಸ್ವ ವಿವರವುಳ್ಳ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕಲಾವಿದರು ವಾದ್ಯ ಪರಿಕರ ಹಾಗೂ ವೇಷಭೂಷಣ ಕೋರಿರುವ ಅರ್ಜಿಯೊಂದಿಗೆ ಕಲಾ ದಾಖಲೆಗಳು, ದೃಢೀಕರಿಸಿದ ಜಾತಿ ಪ್ರಮಾಣ ಪತ್ರಗಳನ್ನು ಲಗತ್ತಿಸಿ ಜ.16 ರೊಳಗೆ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಮಂದಿರ, ಮೈಸೂರು ಸಲ್ಲಿಸಬೇಕು. ಆಸಕ್ತರು ದೂ. 0821- 2513225 ಸಂಪರ್ಕಿಸಬಹುದು.
11, 12 ರಂದು ಜಿಲ್ಲಾ ಕ್ರಿಕೆಟ್ ಪಂದ್ಯಾವಳಿ
ಮೈಸೂರು: ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾವು ಜ.11 ಮತ್ತು 12 ರಂದು ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ನಗರದ ಹೊರ ವರ್ತುಲ ರಸ್ತೆ ಬಳಿಯ ಸಾ.ರಾ. ಭವನದ ಪಕ್ಕದಲ್ಲಿರುವ ಎಂಡಿಎ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ತಲಾ 2 ರಂತೆ ಒಟ್ಟು 16 ತಂಡಗಳನ್ನು ಪಂದ್ಯಾವಳಿಗೆ ಆಹ್ವಾನಿಸಿದ್ದು, ಪ್ರವೇಶ ಶುಲ್ಕ ರು. 1000 ನಿಗದಿ ಪಡಿಸಲಾಗಿದೆ ಎಂದು ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಬೋಗಾದಿ ನಂದೀಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ರಾಷ್ಟ್ರ ಮಟ್ಟದಲ್ಲಿ ವಿಜೇತರಿಗೆ ರು.1 ಲಕ್ಷ ಬಹುಮಾನ ನೀಡಲಾಗುತ್ತದೆ ಎಂದರು. ಆಸಕ್ತರು ಜ.7 ರೊಳಗೆ ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ಮೊ. 99013 11197, 99163 55557 ಇಲ್ಲಿಗೆ ಸಂಪರ್ಕಿಸಬಹುದು.
ರಾಜ್ಯ ಕ್ರೀಡಾಕೂಟ: ಬಿ.ಡಿ. ಹಳ್ಳಿ ತಂಡಕ್ಕೆ ಗೆಲುವು
ಮೈಸೂರು: ಬಿಜಿಎಸ್ ಎಜುಕೇಷನ್ ಟ್ರಸ್ಟ್ ಆಯೋಜಿಸಿರುವ 17ನೇ ರಾಜ್ಯಮಟ್ಟದ ಕ್ರೀಡಾಕೂಟದ ಪ್ರೌಢಶಾಲೆ ಬಾಲಕಿಯರ ಖೋ ಖೋ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಬಿ.ಡಿ. ಹಳ್ಳಿ ತಂಡವು ಕೊಮ್ಮರನಹಳ್ಳಿಯ ವಿಶ್ವಮಾನವ ತಂಡದ ವಿರುದ್ಧ 5 ಅಂಕಗಳಿಂದ ಜಯಗಳಿಸಿದೆ.
ಕ್ವಾರ್ಟರ್ ಫೈನಲ್ನಲ್ಲಿ ಹಿರೆಕೊಡಿಗೆ ತಂಡವನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದ್ದ ಬಿ.ಡಿ. ಹಳ್ಳಿ ತಂಡವು 7-2 ಅಂತರದಿಂದ ಜಯಗಳಿಸಿತು. ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಹಾಸನದ ಗೌರಿಕೊಪ್ಪಲು ತಂಡ ಮೈಸೂರು ತಂಡವನ್ನು 4-7 ಅಂತರದಿಂದ ಮಣಿಸಿತು. ಬಿ.ಜಿ. ನಗರ ತಂಡವು ಮಾಗಡಿ ತಂಡವನ್ನು 15-01 ಅಂತರದಿಂದ ಪರಾಭವಗೊಳಿಸಿತು. ಮಂಡ್ಯದ ಕೊಮ್ಮೆರಹಳ್ಳಿ ತಂಡವು ತಾವರೆಕೆರೆ ತಂಡವನ್ನು 7-15 ಅಂತರಿದಂದ ಸೋಲಿಸಿದರೆ, ರಾಮನಕಟ್ಟೆ ತಂಡ, ಚಿಕ್ಕಬಳ್ಳಾಪುರ ತಂಡವನ್ನು 9-1 ಅಂತರದಿಂದ ಮಣಿಸಿತು.
ಆಟೋ ಪ್ರಯಾಣ ದರ ಹೆಚ್ಚಳಕ್ಕೆ ಮಾಜಿ ಶಾಸಕರ ಆಗ್ರಹ
ಮೈಸೂರು: ಬೆಂಗಳೂರು ಮಾದರಿಯಲ್ಲಿ ಮೈಸೂರು ನಗರದಲ್ಲಿ ಆಟೋ ಪ್ರಯಾಣ ದರ ಹೆಚ್ಚಿಸಬೇಕು ಎಂದು ಮಾಜಿ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಆಗ್ರಹಿಸಿದ್ದಾರೆ.ಪ್ರಯಾಣ ದರ ಪರಿಷ್ಕರಣೆಯಲ್ಲಿ ವಿಳಂಬ ಹಾಗೂ ಎಲ್ಪಿಜಿ ಗ್ಯಾಸ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಆಟೋ ಚಾಲಕರು ಬಂದ್ಗೆ ಮುಂದಾಗಿದ್ದಾರೆ. ಇದಕ್ಕೆ ಜಿಲ್ಲಾಡಳಿತವು ಅವಕಾಶ ಮಾಡಿಕೊಡದೆ ಕೂಡಲೇ ಆಟೋ ಪ್ರಯಾಣ ದರ ಹೆಚ್ಚಿಸುವ ಸಂಬಂಧ ಜಿಲ್ಲಾಧಿಕಾರಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅಡುಗೆ ಅನಿಲ ದರ ಹೆಚ್ಚಳದಿಂದ ಮಧ್ಯಮ ಮತ್ತು ಬಡ ವರ್ಗದ ಜನರಿಗೆ ತೊಂದರೆ ಆಗುತ್ತಿದೆ. ಅದರಲ್ಲೂ ಆಟೋ ಚಾಲಕರ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಈ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿರುವುದು ಖಂಡನಿಯ. ಕೇಂದ್ರ ಸರ್ಕಾರವು ಈ ಇಂಧನಗಳ ಬೆಲೆ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಕ್ರಮ ಮರಳುಗಾರಿಕೆ;ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ
ಮೈಸೂರು: ನಂಜನಗೂಡು ತಾಲೂಕಿನ ಕಪಿಲಾನದಿ ತೀರದಲ್ಲಿ ಮೂಡಹಳ್ಳಿ ಗ್ರಾಮಕ್ಕೆ ಸೇರಿದ ಭೂಮಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ರೈತ ಸಂಘದ ಮುಖಂಡ ಎನ್.ನಂಜೇಗೌಡ, ಗ್ರಾಪಂ ಉಪಾಧ್ಯಕ್ಷ ರೇವಣ್ಣ ಜತೆ ತೆರಳಿದ ಐಎಎಸ್ ಅಧಿಕಾರಿ ಆನೀಸ್ ಸ್ಥಳ ಪರಿಶೀಲಿಸಿದರು. ಅಕ್ಕ ಪಕ್ಕದ ರೈತರಿಂದ ಹೇಳಿಕೆ ಪಡೆದರು. ಸ್ಥಳ ಪರಿಶೀಲನೆಗೆ ಅಧಿಕಾರಿಗಳು ಬರುತ್ತಾರೆ ಎಂಬ ಸುಳಿವಿನಿಂದ ಅಕ್ರಮ ಮರಳುಗಾರಿಕೆ ಮಾಡುತ್ತಿದ್ದವರು ಕಂಬಿ ಕಿತ್ತಿದ್ದರು. ಸ್ಥಳದಲ್ಲಿ 1 ಜೆಸಿಬಿ, ಹಿಟಾಚಿ, 2 ಟಿಪ್ಪರ್, 4 ನಂಬರಿಲ್ಲದ ಟ್ರ್ಯಾಕ್ಟರ್ಗಳನ್ನು ಮಹಜರಿಗೆ ಒಳಪಡಿಸಲಾಯಿತು. ಅಲ್ಲದೆ ನದಿ ಪಕ್ಕದಲ್ಲಿ ರಾಶಿ ಹಾಕಲಾಗಿದ್ದ ಮರಳನ್ನು ಅಧಿಕಾರಿಗಳು ವೀಕ್ಷಿಸಿದರು. ನದಿ ತೀರದಲ್ಲಿ ನೂರಾರು ಮರಗಳನ್ನು ಕಡಿದು ಬೇರೆಡೆಗೆ ಸಾಗಿಸುತ್ತಿದ್ದನ್ನು ಗಮನಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ.
ವ್ಯವಹಾರ ಯಶಸ್ಸಿಗೆ ಅಭ್ಯಾಸ ಅವಶ್ಯ: ಸುಹಾಸ್
ಮೈಸೂರು: ಯಾವುದೇ ವ್ಯವಹಾರದ ಯಶಸ್ಸಿಗೆ ನಿರಂತರ ಅಭ್ಯಾಸ ಅವಶ್ಯಕ ಎಂದು ಎಲ್ ಆ್ಯಂಡ್ ಟಿ ಆಡಳಿತ ವಿಭಾಗದ ಮುಖ್ಯಸ್ಥ ಜಿ.ವೈ. ಸುಹಾಸ್ ಹೇಳಿದರು. ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮೈಸೂರು ವಿಭಾಗವು ಶುಕ್ರವಾರ ಏರ್ಪಡಿಸಿದ್ದ ವ್ಯವಹಾರದ ಯಶಸ್ಸಿಗೆ ಉತ್ತಮ ಅಭ್ಯಾಸ ಎಂಬ ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಉದ್ಯಮಗಳಲ್ಲಿ ವ್ಯವಹರಿಸುವಾಗ ಅದಕ್ಕೆ ಸಂಬಂಧಿಸಿದ ಸಿದ್ಧಾಂತಗಳನ್ನು ಅರಿಯುವಂತೆ ಅದರ ಪ್ರಾಯೋಗಿಕ ವಿಧಾನದ ತಿಳಿವಳಿಕೆಯು ಸಹ ಅಗತ್ಯ. ಪ್ರಾಯೋಗಿಕ ಅನುಭವದ ಕೌಶಲ ಹೊಂದಿರುವ ಉದ್ಯಮಿಗಳು ಹೆಚ್ಚು ತಮ್ಮ ವ್ಯವಹಾರಗಳಲ್ಲಿ ಪ್ರಗತಿ ಕಾಣಬಹುದು ಎಂದರು. ಭಾರತದಲ್ಲಿ ಆರ್ಥಿಕ ಸಮಸ್ಯೆ ಎದುರಾದಾಗ ಅಂದಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ದೇಶದ ಚಿನ್ನವನ್ನು ವಿದೇಶಗಳಲ್ಲಿ ಒತ್ತೆಯಿಟ್ಟು ಆ ಪರಿಸ್ಥಿತಿಯನ್ನು ನಿಭಾಯಿಸಿದರು. ಮೊದಲಿಗೆ ಇಂತಹ ಕಾರ್ಯ ಕ್ಲಿಷ್ಟಕರವೆಂದು ಕಂಡು ಬಂದರೂ, ಅದನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದಾಗ ಅದರಲ್ಲಿ ಯಶಸ್ಸು ಸಾಧ್ಯವಾಗಲಿದೆ ಎಂದು ಅವರು ಕಿವಿಮಾತು ಹೇಳಿದರು.
ಇಂದು ಅಷ್ಟ ಲಕ್ಷ್ಮೀಯರ ಕುಂಕುಮಾರ್ಚನೆ
ಮೈಸೂರು: ಮಾಯಕಾರ ಚಾರಿಟಬಲ್ ಟ್ರಸ್ಟ್, ಮಾಯಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ, ಭಾರತೀಯ ಕಲಾ ವೇದಿಕೆ ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆಯಿಂದ ಅಷ್ಟಲಕ್ಷ್ಮೀಯರ ಸಹಸ್ರನಾಮಾವಳಿ ಕುಂಕುಮಾರ್ಚನೆ ಮಹಾಪೂಜೆಯನ್ನು ಜ.5 ರಂದು ದಟ್ಟಗಳ್ಳಿಯ ಪಿ.ಕೆ.ವಿ. ಆಚಾರ್ಯ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3ಕ್ಕೆ ನಡೆಯುವ ಮಹಾಪೂಜಾ ಕಾರ್ಯಕ್ರಮದಲ್ಲಿ ಸುತ್ತೂರು ಪಂಚಾಂಗಕರ್ತ ಡಾ.ಕೆ.ಜಿ. ಪುಟ್ಟಹೊನ್ನಯ್ಯ ಸಮ್ಮುಖ ವಹಿಸಲಿದ್ದು, ಇನ್ ಮೈಸೂರು ವಾಹಿನಿ ವ್ಯವಸ್ಥಾಪಕ ಮಹೇಶ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್, ಉದ್ಯಮಿ ಯು.ಎಸ್. ಶೇಖರ್, ಎ.ಜಿ. ಕೃಷ್ಣಮೂರ್ತಿ, ನಾಗೇಶ್, ರವಿಕುಮಾರ್ಶಾಸ್ತ್ರಿ, ಮಂಜುನಾಥ್ ಆರಾಧ್ಯ, ದಯಾನಂದ್ ಶಾಸ್ತ್ರಿ, ಚಂದ್ರಶೇಖರಯ್ಯ ಹಿರೇಮಠ, ಕುಮಾರ್ಶಾಸ್ತ್ರಿ, ರಮೇಶ್ ಭಾಗವಹಿಸುವರು ಎಂದು ಜ್ಯೋತಿಷಿ ಮಧುದೀಕ್ಷಿತ್ ಗುರೂಜಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪ ಮೇಯರ್ ಶೈಲೇಂದ್ರ ಹುಟ್ಟುಹಬ್ಬ
ಮೈಸೂರು: ಪಾಲಿಕೆ ಉಪಮೇಯರ್ ವಿ. ಶೈಲೇಂದ್ರ ಅವರ 39 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಗಳನ್ನು ಶನಿವಾರ ನಡೆಸಲಾಯಿತು. ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಶೈಲೇಂದ್ರ ಅವರ ಸ್ನೇಹಿತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ರಕ್ತದಾನ ಮಾಡಿದರು. ಅಲ್ಲದೆ ಇಲ್ಲಿನ ಒಳರೋಗಿಗಳಿಗೆ ಹಣ್ಣು ವಿತರಿಸಿದರು. ಅಶೋಕಪುರಂನ ಬಸವಲಿಂಗಪ್ಪ ವೃತ್ತದಲ್ಲಿ ನೇತ್ರದಾನ ಶಿಬಿರ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಛಾಯಾದೇವಿ ಅನಾಥಾಶ್ರಮದ ಮಕ್ಕಳಿಗೆ ನೋಟ್ಪುಸ್ತಕ, ಪೆನ್ನು ಮತ್ತು ಊಟದ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಆಟೋ ಮಾಲೀಕರು ಹಾಗೂ ಚಾಲಕರ ಸಂಘದವರು ಶೈಲೇಂದ್ರ ಅವರನ್ನು ಅಭಿನಂದಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಜರಿದ್ದರು.
ಗುರೂರಿನಲ್ಲಿ ಶಾಖಾ ಅಂಚೆ ಕಚೇರಿ
ಮೈಸೂರು: ತಾಲೂಕಿನ ಗುರೂರು ಗ್ರಾಪಂನಲ್ಲಿ ಜ.1 ರಿಂದ ಶಾಖಾ ಅಂಚೆ ಕಚೇರಿ ತೆರೆಯಲಾಗಿದೆ. ಗೂರೂರು ಸಾರ್ವಜನಿಕರು ಅಂಚೆ ಕಚೇರಿಯ ಸೇವೆಯನ್ನು ಪಡೆದುಕೊಳ್ಳಬೇಕಾಗಿ ಕೋರಲಾಗಿದೆ. ರಮಾಬಾಯಿ ನಗರ ಶಾಖಾ ಅಂಚೆ ಕಚೇರಿಯು ಡಿ.31ರ ಮಧ್ಯಾಹ್ನದಿಂದ ಜೆ.ಪಿ. ನಗರ ಅಂಚೆ ಕಚೇರಿಯೊಂದಿಗೆ ವಿಲೀನಗೊಂಡಿರುತ್ತದೆ. ರಮಾಬಾಯಿ ನಗರದ ಅಂಚೆ ಕಚೇರಿಯ ಗ್ರಾಹಕರು ಇನ್ನು ಮುಂದೆ ಅಂಚೆ ಸೇವೆಯನ್ನು ಜೆ.ಪಿ. ನಗರದ ಅಂಚೆ ಕಚೇರಿಯಲ್ಲಿ ಪಡೆಯಲು ಕೋರಲಾಗಿದೆ. ರಾಜೀವನಗರ ಶಾಖಾ ಅಂಚೆ ಕಚೇರಿಯು ಡಿ.31 ರಿಂದ ಎನ್.ಆರ್. ಮೊಹಲ್ಲಾ ಅಂಚೆ ಕಚೇರಿಯೊಂದಿಗೆ ವಿಲೀನಗೊಂಡಿರುತ್ತದೆ. ರಾಜೀವನಗರದ ಅಂಚೆ ಕಚೇರಿಯ ಗ್ರಾಹಕರು ಇನ್ನು ಮುಂದೆ ಅಂಚೆ ಸೇವೆಯನ್ನು ಎನ್.ಆರ್. ಮೊಹಲ್ಲಾ ಅಂಚೆ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

