ಸುದ್ದಿ ಸಂಕ್ಷೇಪ
ಭುವನೇಶ್ವರಿ ಭರತನಾಟ್ಯ ರಂಗಪ್ರವೇಶ
ಮೈಸೂರು: ಮೈಸೂರಿನ ಭರತಾಂಜಲಿ ಸ್ಕೂಲ್ ಆಫ್ ಡ್ಸಾನ್ಸ್ ವಿದ್ಯಾರ್ಥಿನಿ ಹಾಗೂ ರುಕ್ಮಿಣಿ- ಸದಾಶಿವಂ ಪುತ್ರಿ ಎಸ್. ಭುವನೇಶ್ವರಿ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಭಾನುವಾರ ಸಂಜೆ ನೆರವೇರಿತು. ಭುವನೇಶ್ವರಿ ರಂಗಪ್ರವೇಶಕ್ಕೆ ಗುರು ಡಾ. ಶೀಲಾ ಶ್ರೀಧರ್ ನಟುವಾಂಗ, ವಿದುಷಿ ರಾಜೇಶ್ವರಿ ಪಂಡಿತ್ ಗಾಯನ, ಎಚ್.ಎಲ್. ಶಿವಶಂಕರಸ್ವಾಮಿ ಮೃದಂಗ, ರಾಜೇಶ್ ಕೊಳಲು, ತಾಂಡವ ಮೂರ್ತಿ ವಯೋಲಿನ್ ಸಾಥ್ ನೀಡಿದರು. ಕಾನೂನು ತಜ್ಞ ಡಾ.ಸಿ.ಕೆ.ಎನ್. ರಾಜ ಕಾರ್ಯಕ್ರಮ ಉದ್ಘಾಟಿಸಿದರು. ಸಿ.ಪಿ. ವೆಂಕಟೇಶ್, ಡಾ. ಗುರುರಾಜ ಯೇರಿ, ವಿ. ಜನಾರ್ದನನ್, ಎನ್ಐಇ ಕಾಲೇಜು ಖಜಾಂಚಿ ಲಕ್ಷ್ಮಿನಾರಾಯಣ ಇದ್ದರು.
ಸಹಸ್ರನಾಮಾವಳಿ ಕುಂಕುಮಾರ್ಚನೆ
ಅಷ್ಟಲಕ್ಷ್ಮಿಯರ ಸಹಸ್ರನಾಮಾವಳಿ ಕುಂಕುಮಾರ್ಚನೆ ಮಹಾಪೂಜೆಯು ಕನಕದಾಸನಗರದ ಪಿ.ಕೆ.ವಿ ಆಚಾರ್ಯ ಸಭಾ ಭವನದಲ್ಲಿ ಭಾನುವಾರ ನೆರವೇರಿತು. ಶ್ರೀಮಾಯಕಾರ ಚಾರಿಟಬಲ್ ಟ್ರಸ್ಟ್, ಮಾಯಕಾರ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರ, ಭಾರತೀಯ ಕಲಾ ವೇದಿಕೆ ಮತ್ತು ವೀರಶೈವ ಲಿಂಗಾಯತ ಯುವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮವನ್ನು ಆರ್.ಎಂ. ಮಧುದೀಕ್ಷಿತ್ ನೆರವೇರಿಸಿಕೊಟ್ಟರು. ಮೈಸೂರು ಮತ್ತು ಸುತ್ತ-ಮುತ್ತಲ ಗ್ರಾಮಗಳ ನೂರಾರು ಮಂದಿ ಮಹಿಳೆಯರು ಪೂಜೆಯಲ್ಲಿ ಭಾಗವಹಿಸಿದ್ದರು. ಕಿರುತೆರೆ ಕಲಾವಿದರೂ ಪೂಜೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಶಿವರಾತ್ರೀಶ್ವರ ಪಂಚಾಂಗಕರ್ತೃ ಡಾ.ಕೆ.ಜಿ. ಪುಟ್ಟಹೊನ್ನಯ್ಯ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.ಕಿರುಕುಳ; ದೂರು
ವರದಕ್ಷಿಣೆ ಕಿರುಕುಳದಿಂದ ಮನನೊಂದ ಮಹಿಳೆಯೊಬ್ಬರು ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಪಡುವಾರಹಳ್ಳಿ ನಿವಾಸಿ ಮಹದೇವ್ ಎಂಬವರ ಪತ್ನಿ ಪ್ರತಿಮಾ ವರದಕ್ಷಿಣೆ ಕಿರುಕುಳಕ್ಕೆ ಒಳಗಾದವರು. ಅತ್ತೆ ಮತ್ತು ಅತ್ತಿಗೆಯರು ಇವರಿಗೆ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ಹುಣಸೂರು ತಾಲೂಕು ಮೂಡಲಕೊಪ್ಪಲು ನಿವಾಸಿ ಬೋರೇಗೌಡ- ರೇವಮ್ಮ ಪುತ್ರಿ ಪ್ರತಿಮಾ ಹಾಗೂ ಮೈಸೂರಿನ ಪಡುವಾರಹಳ್ಳಿ ಬೋರಯ್ಯ-ಸಾವಿತ್ರಮ್ಮ ಪುತ್ರ ಮಹದೇವ್ ವಿವಾಹವಾಗಿ 7 ವರ್ಷಗಳಾಗಿದೆ. ಮದುವೆ ಸಂದರ್ಭದಲ್ಲಿ ಸಾಕಷ್ಟು ವರದಕ್ಷಿಣೆ ಪಡೆದಿದ್ದರು. ಈ ದಂಪತಿ ಅನೋನ್ಯವಾಗಿಯೇ ಸಂಸಾರ ಸಾಗಿಸುತ್ತಿದ್ದರು. ಆದರೆ, ಮಹದೇವ್ ತಾಯಿ ಸಾವಿತ್ರಮ್ಮ, ಅಕ್ಕಂದಿರಾದ ಮಂಜುಳಾ ಮತ್ತು ಭಾಗ್ಯ ಸೇರಿಕೊಂಡು ಪ್ರತಿಮಾ ಅವರಿಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ, ಮನೆಯಿಂದ ಹೊರ ಹಾಕಿದ್ದಾರೆ. ಪ್ರತಿಮಾ ತನ್ನ ಇಬ್ಬರು ಮಕ್ಕಳನ್ನು ತವರಿಗೆ ಬಿಟ್ಟು, ಅತ್ತೆ ಮತ್ತು ಅತ್ತಿಗೆಯರ ವಿರುದ್ಧ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ನಡುವೆ ಪ್ರತಿಮಾ ಪತಿ ಮಹದೇವ್ ಸಹ ಒಂದು ತಿಂಗಳಿಂದ ನಾಪತ್ತೆಯಾಗಿದ್ದಾರೆ. ಮೈಸೂರಿನ ಮಹಿಳಾಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಡಿಕ್ಕಿ: ಚಾಲಕ ಸಾವು
ರಸ್ತೆಬದಿ ನಿಂತಿದ್ದ ಗೂಡ್ಸ್ ಆಟೋಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ, ಚಾಲಕನೊಬ್ಬ ಮೃತಪಟ್ಟಿರುವ ಘಟನೆ ಮೇಟಗಳ್ಳಿ- ಹೆಬ್ಬಾಳು ಮುಖ್ಯರಸ್ತೆಯಲ್ಲಿ ನಡೆದಿದೆ. ಕುಂಬಾರಕೊಪ್ಪಲು ನಿವಾಸಿ ಕಾಳಂಕಯ್ಯ ಎಂಬುವರ ಪುತ್ರ, ಗೂಡ್ಸ್ ಆಟೋ ಚಾಲಕ ರಾಜು (31) ಮೃತಪಟ್ಟವರು. ಈತ ಮೇಟಗಳ್ಳಿ- ಹೆಬ್ಬಾಳು ಮುಖ್ಯರಸ್ತೆಯ ಬದಿಯಲ್ಲಿ ಗೂಡ್ಸ್ ಆಟೋ ನಿಲ್ಲಿಸಿಕೊಂಡು ಕಬ್ಬಿಣ ತುಂಬುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಮಿನಿ ಲಾರಿ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಎರಡು ಅಂಗಡಿ ಸಹ ಜಖಂಗೊಂಡಿದೆ. ಗಾಯಾಳು ರಾಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

