ಮೈಸೂರು

ಕೆರೆ ಸಂರಕ್ಷಣೆ ಯುವಶಕ್ತಿ ಹೊಣೆ

Published On :

ಕ.ಪ್ರ.ವಾರ್ತೆ  ಮೈಸೂರು  ಜ. 5
ನಗರದಲ್ಲಿ ನಶಿಸಿ ಹೋಗುತ್ತಿರುವ ಕೆರೆಗಳ ಸಂರಕ್ಷಣೆಯ ಜವಾಬ್ದಾರಿ ಯುವಕರ ಕೈಯಲ್ಲಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದರು.
ಚಾಮರಾಜೇಂದ್ರ ಮೃಗಾಲಯ ಭಾನುವಾರ ಆಯೋಜಿಸಿದ್ದ ಯುವ ಸಂಘಟನೆ- 2013 ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಯುವ ಸಂಘಟನೆ ಶಿಬಿರದಲ್ಲಿ ಭಾಗವಹಿಸಿದ ಬಳಿಕ ನಿಮ್ಮ ಜವಾಬ್ದಾರಿ ಹೆಚ್ಚಿದೆ. ಈಗ ತಾವೆಲ್ಲರೂ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಬೆಳೆಸಿಕೊಂಡಿದ್ದೀರಿ. ಈ ಶಿಬಿರದಲ್ಲಿ ವನ್ಯಜೀವಿಗಳ ಬಗ್ಗೆ ತಿಳಿದುಕೊಂಡ ಮಾತ್ರಕ್ಕೆ ಹೊರಗೆ ಹುಲಿ, ಆನೆ ಇಲ್ಲವಲ್ಲ ಎಂದು ಕೈಕಟ್ಟಿ ಕೂರಬಾರದು. ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ನಗರದಲ್ಲಿ ನಶಿಸಿ ಹೋಗುತ್ತಿರುವ ಸುಮಾರು 13 ಕೆರೆಗಳನ್ನು ರಕ್ಷಿಸಲು ತಾವೆಲ್ಲ ಮುಂದಾಗಬೇಕು. ಆ ಮೂಲಕ ನಗರದ ಜಲ ಸಂಪನ್ಮೂಲವನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಚೀಲಗಳು, ಕುಡಿಯುವ ನೀರಿನ ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಬೀಸಾಡಬಾರದು. ಅವುಗಳು ನಾವು ಬಳಸುವ ನೀರಿಗೆ ಸೇರುವುದರಿಂದ ಅವುಗಳನ್ನು ವಿಲೇವಾರಿ ಮಾಡಬೇಕು. ಮೃಗಾಲಯವು ಇಂತಹ ಮಹತ್ವದ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ನಾವೆಲ್ಲ ಓದುವಾಗ ಪ್ರಾಣಿಗಳ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೆವು. ಆದರೆ ನಿಮಗೆ ಪ್ರಾಣಿಗಳನ್ನು ನೇರವಾಗಿ ನೋಡಿ, ಅವುಗಳ ಜೀವನ ಶೈಲಿಯನ್ನು ಅಧ್ಯಯನ ಮಾಡುವ ಅವಕಾಶ ದೊರಕಿದೆ. ಭಾರತದಲ್ಲಿಯೇ ಅತ್ಯುತ್ತಮ ಮೃಗಾಲಯ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರು ಮೃಗಾಲಯದ ಶಿಬಿರದಲ್ಲಿ ಭಾಗವಹಿಸಿರುವ ತಾವು  ಪುಣ್ಯವಂತರು ಎಂದರು.
ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಮಾತನಾಡಿ, ವನ್ಯಜೀವಿಗಳ ಬಗ್ಗೆ ಕಾಡಂಚಿನ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳು ಹೆಚ್ಚು ಕಾಣಿಸಿಕೊಳ್ಳುವುದರಿಂದ ಅಲ್ಲಿನ ನಿವಾಸಿಗಳಿಗೆ ಅರಿವು ಮೂಡಿಸಬೇಕು. ಎಲ್ಲಾ ಹುಲಿಗಳೂ ನರಭಕ್ಷಕವಲ್ಲ ಎಂಬುದನ್ನು ತಿಳಿಸಿಕೊಡಬೇಕು ಎಂದ ಅವರು ಸುಮಾರು 97 ಜಾತಿಯ ಪಕ್ಷಿಗಳು ಕಾರಂಜಿ ಕೆರೆಗೆ ವಲಸೆ ಬರುತ್ತಿವೆ. ಪ್ರತಿ ವರ್ಷ ಮೃಗಾಲಯ ಮತ್ತು ಕಾರಂಜಿಕೆರೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದರು. ಶಿಬಿರಾರ್ಥಿ ಸಂಜಯ್ ಭಾರದ್ವಾಜ್‌ಗೆ ಉತ್ತಮ ಶಿಬಿರಾರ್ಥಿ ಬಹುಮಾನ ನೀಡಲಾಯಿತು. ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್. ಸುರೇಶ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.