ಮೈಸೂರು

ಓವಲ್ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ

Published On :

ಮೈಸೂರು: ಈ ಬಾರಿ ಜ.26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಮೈಸೂರು ವಿವಿ ಓವಲ್ ಮೈದಾನದಲ್ಲಿ ನಡೆಯಲಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಜೆ ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಓವಲ್ ಮೈದಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಅಂದು ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಧ್ವಜಾರೋಹಣ ನೆರವೇರಿಸುವರು. ನಂತರ ವಿವಿಧ ಪೊಲೀಸ್ ತುಕಡಿ ಮತ್ತು ವಿದ್ಯಾರ್ಥಿಗಳಿಂದ ಶಿಸ್ತುಬದ್ಧ ಪಥಸಂಚಲನ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಗನ್ಮೋಹನ ಅರಮನೆ ಅಥವಾ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲು ಸ್ಥಳ ಪರಿಶೀಲಿಸಲು ನಿರ್ಧರಿಸಲಾಯಿತು.
ಗಣರಾಜ್ಯೋತ್ಸವ ಆಚರಣೆಗಾಗಿ ಬೆಳಗಿನ ಪಥಸಂಚಲನ ಮತ್ತು ಸಾಂಸ್ಕೃತಿಕ ಉಪಸಮಿತಿ, ಸಾರಿಗೆ ಉಪ ಸಮಿತಿ, ಸ್ವಾಗತ ಸಮಿತಿ, ಪಥಸಂಚಲನ ಬಹುಮಾನ ಆಯ್ಕೆ ಸಮಿತಿ, ಸನ್ಮಾನ ಉಪ ಸಮಿತಿಗಳನ್ನು ರಚಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಯಿತು.
ಆಚರಣೆಗೆ ವಂತಿಗೆ: ಗಣರಾಜ್ಯೋತ್ಸವ ಆಚರಣೆಗಾಗಿ ಜಿಪಂ 20,000, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ 15,000, ಕಬಿನಿ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ತಲಾ 10,000 ವಂತಿಗೆ ನೀಡಿದೆ. ಪ್ಲಾಸ್ಟಿಕ್ ಧ್ವಜ ನಿಷೇಧಿಸಲು ಶಾಲಾ, ಕಾಲೇಜುಗಳಿಗೆ ಸೂಚಿಸಬೇಕು. ವಾರ್ತಾ ಇಲಾಖೆಯವರು ಈ ಬಗ್ಗೆ ಪ್ರಚಾರ ಕೈಗೊಳ್ಳಬೇಕು.ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರಿ ಅಧಿಕಾರಿ ಮತ್ತು ನೌಕರರ ಹಾಜರಾತಿ ಕಡ್ಡಾಯವಾಗಿದ್ದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಕಚೇರಿ ತೆರೆದು ಹಾಜರಾತಿ ಪಡೆಯಲು ತೀರ್ಮಾನಿಸಲಾಯಿತು.
ಇತರೆ ಯೋಧರನ್ನು ಸನ್ಮಾನಿಸಿ: ನಿವೃತ್ತ ಸೈನಿಕ ಕಾರ್ಗಿಲ್ ಮಾದಪ್ಪ ಮಾತನಾಡಿ, ಭಾರತೀಯ ಸೇನೆ ಮಾತ್ರವಲ್ಲದೆ ಬಿಎಸ್‌ಎಫ್, ಎಸ್‌ಟಿಎಫ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ ಯೋಧರನ್ನು ಸನ್ಮಾನಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಸಿ. ಶಿಖಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಉಪ ವಿಭಾಗಾಧಿಕಾರಿ ಬಸವರಾಜು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಉಪ ನಿರ್ದೇಶಕ ಡಾ.ಕಾ. ರಾಮೇಶ್ವರಪ್ಪ, ನಿರ್ಮಲಾ ಮಠಪತಿ, ಎಸಿಪಿ ಸಿ.ಡಿ. ಜಗದೀಶ್, ಡಿವೈಎಸ್ಪಿ ಶಿವಕುಮಾರಯ್ಯ, ಕನ್ನಡಪರ ಹೋರಾಟಗಾರರಾದ ಎಂ.ಬಿ. ವಿಶ್ವನಾಥ್, ತಾಯೂರು ವಿಠ್ಠಲಮೂರ್ತಿ, ಪಾಲಹಳ್ಳಿ ರಾಮಕೃಷ್ಣ, ಎಂ. ಮೋಹನ್‌ಕುಮಾರ್ ಗೌಡ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಪ್ರಗತಿ ಗೋಪಾಲಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.