ಮೈಸೂರು

ಅಬಾಕಸ್ ಮಾದರಿಯಿಂದ ಏಕಾಗ್ರತೆ ವೃದ್ಧಿ'

Published On :

ನಂಜನಗೂಡು: ಶತಮಾನಗಳ ಹಿಂದೆ ಜೀವಿಸಿದ್ದ ಗಣಿತ ತಜ್ಞ ಅಬಾಕಸ್ ಅನುಸರಿಸುತ್ತಿದ್ದ ಲೆಕ್ಕ ಮಾದರಿ ಮಕ್ಕಳಲ್ಲಿನ ಏಕಾಗ್ರತೆ ಮತ್ತ ಆಲಿಸುವ ಕೌಶಲ್ಯವನ್ನು ಹೆಚ್ಚಿಸುವಂತಿತ್ತು ಎಂದು ಎನ್‌ಇಎಲ್‌ಪಿ ಸಮಾಲೋಚಕ ಡಾ.ಎನ್.ಎನ್. ಪ್ರಹ್ಲಾದ್ ಹೇಳಿದರು.
ಬ್ರೈನ್ ಜಿಮ್ ಎಜುಕೇಷನಲ್ ಇನ್‌ಸ್ಟಿಟ್ಯೂಷನ್‌ನಿಂದ ಪಟ್ಟಣದ ಶ್ರಾವಣ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಬ್ರೈನ್ ಜಿಮ್ ಫೆಸ್ಟ್‌ನಲ್ಲಿ ಮಾತನಾಡಿ, ಅಬಾಕಸ್ ಹೇಳಿಕೊಟ್ಟ ಲೆಕ್ಕವನ್ನೇ ವ್ಯಾಪಾರಸ್ಥರು, ಲೆಕ್ಕಾಧಿಕಾರಿಗಳು ಬಳಸಿದರು. ಅದನ್ನು ಮಕ್ಕಳಿಗೂ ಹೇಳಿಕೊಡಬೇಕು ಎಂದರು.
ನಗರ ಹಾಗೂ ಗ್ರಾಮಾಂತರ ವಿದ್ಯಾರ್ಥಿಗಳು ಸಮಾನ ಜ್ಞಾನಿಗಳಾಗಿದ್ದಾರೆ. ಯಾರೂ ಮೇಲಲ್ಲ, ಕೀಳಲ್ಲ. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ವಿಶ್ವಕ್ಕೆ ಕೊಡುಗೆಯನ್ನಾಗಿ ನೀಡಬೇಕು. ಸ್ಮರಣಶಕ್ತಿ, ಕಲ್ಪನಾಶಕ್ತಿ, ವೇಗ ಮತ್ತು ಕಾತುರತೆ, ಕಲಿಕೆಯಲ್ಲಿ ತೊಡಗುವಂತೆ ನೋಡಿಕೊಳ್ಳಬೇಕು ಎಂದರು. ಹಿಲ್ ವ್ಯೂ ಅಕಾಡೆಮಿ ಶಾಲೆಯ ಕಾರ್ಯದರ್ಶಿ ಎಚ್.ವಿ. ರಾಜೀವ್, ಚಾಮರಾಜನಗರ ಡಿಡಿಪಿಐ ಡಾ.ಎನ್. ಚಂದ್ರೇಗೌಡ, ಬಿಇಒ ಪುರುಷೋತ್ತಮ್, ಸಂಸ್ಥೆಯ ಕಾರ್ಯದರ್ಶಿ ಉಷಾ ಮಂಜುನಾಥ್ ಇದ್ದರು.
ಮಕ್ಕಳು ದೇಶದ ಸಂಪತ್ತು: ರಾಜೇಶ್ವರಿ
ಮೈಸೂರು: ಮಕ್ಕಳು ದೇಶದ ಸಂಪತ್ತು ಎಂದು ಮೇಯರ್ ಎನ್.ಎಂ. ರಾಜೇಶ್ವರಿ ಹೇಳಿದರು.
ವೈಶಾಲಿ ಶಿಕ್ಷಣ ಸಂಸ್ಥೆಯು ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ಏರ್ಪಡಿಸಿದ್ದ 35ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ದಿಸೆಯಲ್ಲಿ ವ್ಯಾಸಂಗ ಸಮಯದಲ್ಲಿ ಸೋಮಾರಿಗಳಾಗದೆ ಪರಿಶ್ರಮ ವಹಿಸಿ ವಿದ್ಯೆ ಕಲಿಯಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ಪಠ್ಯದ ಜತೆಗೆ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ತೋರಿರುವ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು.
ನಗರ ಪಾಲಿಕೆ ಸದಸ್ಯೆ ಸಿ.ಎಸ್. ರಜನಿ ಅಣ್ಣಯ್ಯ, ಆದರ್ಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಯಲಕ್ಷ್ಮೀ ಮುಖ್ಯ ಅತಿಥಿಯಾಗಿದ್ದರು. ಶಿಕ್ಷಕಿಯರಾದ ನಂದಿನಿ ಸ್ವಾಗತಿಸಿದರು. ವನಿತಾ ವರದಿ ಮಂಡಿಸಿದರು. ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಿದ್ಧಾರ್ಥನಗರ, ಕುಂಬಾರ ಕೊಪ್ಪಲು, ಮಂಚೇಗೌಡನ ಕೊಪ್ಪಲು ಹಾಗೂ ಜಯನಗರದಲ್ಲಿರುವ ವೈಶಾಲಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸೆಸ್ಕ್ ಕಚೇರಿ ಎದುರು ಜಯ ಕರ್ನಾಟಕ ಪ್ರತಿಭಟನೆ
ಟಿ. ನರಸೀಪುರ: ರೈತರ ಪಂಪ್‌ಸೆಟ್‌ಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು ಸೆಸ್ಕ್ ಕಚೇರಿ ಎದುರು ಪ್ರತಿಭಟಿಸಿದರು.
ಪಟ್ಟಣದ ಸೆಸ್ಕ್ ಕಚೇರಿ ಎದುರು ಜಮಾವಣೆಗೊಂಡ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಹಾಗೂ ರೈತರು ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಸುತ್ತಮುತ್ತಲು ಇರುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತಯವಾಗುತ್ತಿರುವುದರಿಂದ ಜಮೀನಿನಲ್ಲಿ ಬೆಳೆದ ಫಸಲಿಗೆ ನೀರಿಲ್ಲದಂತಾಗಿದೆ ಎಂದು ಆರೋಪಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸಲು ನಿರಂತರ ಜ್ಯೋತಿ ವಿದ್ಯುತ್‌ನ್ನು ತಡೆಹಿಡಿಯಬೇಕೆಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಘು ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಯಕರ್ನಾಟಕ ಸಂಘಟನೆ ತಾ. ಅಧ್ಯಕ್ಷ ಆರ್.ಸಿ. ವೆಂಕಟೇಶ್, ಟೌನ್ ಅಧ್ಯಕ್ಷ ಕೆಂಪಯ್ಯನಹುಂಡಿ ಗಂಗಾಧರ, ಕಾರ್ಯದರ್ಶಿ ರವಿಕುಮಾರ, ಯುವ ಅಧ್ಯಕ್ಷ ನವೀನ್‌ಕುಮಾರ್, ಮುಖಂಡರಾದ ನಿಂಗರಾಜು, ನಾಗೇಂದ್ರ, ದೇವರಾಜು, ಶ್ರೀನಿವಾಸ್, ಸಿದ್ದರಾಮು ಹಾಗೂ ರೈತರು ಭಾಗವಹಿಸಿದ್ದರು.
ಮೈಸೂರು ಸಂಸದರ ಸಾಧನೆ ಏನು?: ವಿಜಯಶಂಕರ್
ಪಿರಿಯಾಪಟ್ಟಣ: ಕಳೆದ ನಾಲ್ಕುವರೇ ವರ್ಷಗಳಲ್ಲಿ ಹಾಲಿ ಸಂಸದರ ಕೊಡುಗೆ ಜಿಲ್ಲೆಗೆ ಏನು ಎಂಬುದನ್ನು ಜನತೆ ಅರಿತು, ಈ ಬಾರಿ ಮೋದಿ ಪ್ರಧಾನಿ ಆಗಲು ಬಿಜೆಪಿಗೆ ಮತದಾನ ಮಾಡಲು ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಮನವಿ ಮಾಡಿದರು.
ತಾಲೂಕಿನಲ್ಲಿ ಮೂರು ದಿನಗಳ ಕಾಲ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರವಾಸದಲ್ಲಿ ಸೂಳೆಕೋಟೆ ಗ್ರಾಮದಲ್ಲಿ ನಮೋ ಬ್ರಿಗೇಡ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಲ್ಲೆಯ ಗ್ರಾಮ್ ಸಡಕ್ ರಸ್ತೆ, ತಂಬಾಕು ಬೆಳೆ, ಇತರೆ ಯಾವುದೇ ಬೆಳೆಗಳು ಕಾಣದೆ ಸ್ಥಗಿತವಾಗಿವೆ. ದೇಶದಲ್ಲಿ ಆರ್ಥಿಕ ದಿವಾಳಿತನ ಎದುರಾಗುವ ಲಕ್ಷಣಗಳು ಗೋಚರಿಸುತ್ತಿದೆ. ನರೇಂದ್ರ ಮೋದಿಯವರ ಗುಜರಾತಿನಲ್ಲಿನ ಸಾಧನೆ ದೇಶಕ್ಕೆ ಮಾದರಿಯಾಗಿದೆ ಎಂದರು.
ಬಿಜೆಪಿ ಮುಖಂಡರಾದ ಅರುಣ್ ಹಿಂದೂಸ್ಥಾನ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಕೃಷ್ಣೇಗೌಡ, ತಾ. ಅಧ್ಯಕ್ಷ ಆರ್.ಟಿ. ಸತೀಶ್, ಜಿಲ್ಲಾ ಹಿಂದುಳಿದ ಅಧ್ಯಕ್ಷ ಎಂ.ಎಂ. ರಾಜೇಗೌಡ, ಪ್ರಧಾನ ಕಾರ್ಯದರ್ಶಿ ಲೋಕಪಾಲ್, ಪುಟ್ಟಸ್ವಾಮಿ, ಮುಖಂಡರಾದ ಸುಂದರ್ ಶೆಟ್ಟರ್, ಪಿ.ಜಿ. ರವಿ, ಕೆ.ಕೆ. ಶಶಿ, ಮಹದೇವ್, ರವಿ, ರಾಮೇಗೌಡ, ಸ್ವಾಮಿಗೌಡ, ರವಿ, ಗುರಪ್ಪಶೆಟ್ಟರ್, ಧನಪಾಲ್ ಇದ್ದರು.
ಪಡಿತರ ವಿತರಣೆ ಲೋಪ: ಅಧಿಕಾರಿಗಳಿಗೆ ತರಾಟೆ
ಮೈಸೂರು: ಮೈಸೂರು ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಂಗನವಾಡಿಗಳಿಗೆ ಹುಳು ಮಿಶ್ರಿತ ಗೋಧಿ ಪೂರೈಕೆ, ಸಭೆಗೆ ಅಧಿಕಾರಿಗಳ ಗೈರು, ಪಡಿತರ ವಿತರಣೆಯಲ್ಲಿ ಬಯೋವುಟ್ರಿಕ್ ಯಂತ್ರಗಳನ್ನು ಬಳಸದಿರುವುದು ತಾಪಂ ಅಧ್ಯಕ್ಷೆ ನಿರ್ಮಲಾ ಹೊನ್ನಪ್ಪ ಹಾಗೂ ಉಪಾಧ್ಯಕ್ಷ ಸಿದ್ದಯ್ಯ ಅವರ ಕೋಪಕ್ಕೆ ಕಾರಣವಾಯಿತು. ಬಯೋವುಟ್ರಿಕ್ ಯಂತ್ರ ಬಳಸದಿರುವ ಬಗ್ಗೆ ಉಪಾಧ್ಯಕ್ಷ ಸಿದ್ದಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂಗನವಾಡಿ ಕೇಂದ್ರಗಳಿಗೆ ವಿತರಣೆ ಆಗುತ್ತಿರುವ ಗೋಧಿಯಲ್ಲಿ ಹುಳುವಿದೆ. ಕೂಡಲೇ ಈ ಬಗ್ಗೆ ಗಮನ ಹರಿಸಿ ಗುಣಮಟ್ಟದ ಆಹಾರ ಧಾನ್ಯ ಪೂರೈಸಬೇಕು ಎಂದು ಅಧ್ಯಕ್ಷೆ ನಿರ್ಮಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ತಾಕೀತು ಮಾಡಿದರು.
ಸಂಗೀತ ಉತ್ತಮ ನಾಗರಿಕರನ್ನಾಗಿಸುತ್ತದೆ: ಶ್ರೀಲತಾ
ಮೈಸೂರು: ಸಂಗೀತ ಉತ್ತಮ ನಾಗರೀಕರನ್ನಾಗಿಸುತ್ತದೆ ಎಂದು ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಎನ್. ಶ್ರೀಲತಾ ಹೇಳಿದರು.
ನಾದಬ್ರಹ್ಮ ಸಂಗೀತಸಭಾದಲ್ಲಿ ಸೋಮವಾರ ಸಮರ್ಪಣಾ ಸಂಸ್ಥೆ ಆಯೋಜಿಸಿದ್ದ ಸಂಗೀತೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂಗೀತ ನಮ್ಮನ್ನು ಉತ್ತಮ ನಾಗರಿಕರನ್ನಾಗಿಸುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ತಂದೆ ತಾಯಿಯರೂ ತಮ್ಮ ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದಾರೆ. ಸಂಗೀತ ಮಕ್ಕಳಲ್ಲಿನ ಒತ್ತಡ ನಿವಾರಿಸಿ, ಒಳ್ಳೆಯ ಪ್ರಜೆಯನ್ನಾಗಿಸುತ್ತದೆ ಎಂದರು. ಖ್ಯಾತ ಮೃದಂಗ ವಾದಕ ವಿದ್ವಾನ್ ವಿ.ನಾಗಭೂಷಣಾಚಾರ್ ಅವರಿಗೆ ಸಮರ್ಪಣಾ ಸಂಗೀತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸ್ಥೆ ಅಧ್ಯಕ್ಷ ಎನ್.ವಿ. ಫಣೀಶ್, ಸುಧಾ ಫಣೀಶ್ ಇದ್ದರು.
ಗರ್ಭಕೋಶದ ಕ್ಯಾನ್ಸರ್ ಜಾಗೃತಿ ಶಿಬಿರ
ಮೈಸೂರು: ಪ್ರೇರಣ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ ಕ್ಲಿನಿಕ್ ವತಿಯಿಂದ ಜ.10ರ ಬೆಳಗ್ಗೆ 10ರಿಂದ 4ರವರೆಗೆ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಕಣ್ಣನ್ ಪೆಥಾಲಜಿ ಲ್ಯಾಬ್‌ಪಕ್ಕದಲ್ಲಿ ಗರ್ಭಕೋಶದ ಕ್ಯಾನ್ಸರ್ ಜಾಗೃತಿ ಮತ್ತು ಸ್ಕ್ರೀನಿಂಗ್ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9008498553 ಸಂಪರ್ಕಿಸಬಹುದು.
ಭಗವದ್ಗೀತೆ ಕುರಿತು ನಾಳೆ ಉಪನ್ಯಾಸ
ಗೋಕುಲಂ 3ನೇ ಹಂತದ ಶ್ರೀ ಕೃಷ್ಣ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಜ.10ರ ಸಂಜೆ 5.30ಕ್ಕೆ ಶ್ರೀಕೃಷ್ಣ ದೇವಸ್ಥಾನದ ಆವರಣದ ಚೈತನ್ಯ ಭವನದಲ್ಲಿ ಶ್ರೀಮದ್ ಭಗವದ್ಗೀತಾ ಕುರಿತು ಶ್ರ ರಾಮಕೃಷ್ಣಾಶ್ರಮದ ಸ್ವಾಮಿ ಕರುಣಾಕರಾನಂಜಿ ಉಪನ್ಯಾಸ ನೀಡುವರು.
ನಾಳೆ ನೇತ್ರ
ತಪಾಸಣಾ ಶಿಬಿರ
ಭಗವಾನ್ ಮಹಾವೀರ್ ದರ್ಶನ್ ಕಣ್ಣಿನ ಆಸ್ಪತ್ರೆ ವತಿಯಿಂದ ಜ.10ರ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಚಾಮರಾಜನಗರ ತಾಲೂಕಿನ ಮೇಲಾಜಿಪುರದ ಹಾಲು ಉತ್ಪಾದಕ ಸಹಕಾರ ಸಂಘದ ವತಿಯಿಂದ ಉಚಿತವಾಗಿ ಕಣ್ಣಿನ ಪೊರೆ ತಪಾಸಣಾ ಶಿಬಿರ ಆಯೋಜಿಸಿದೆ.
ತಾಂತ್ರಿಕ
ಉಪನ್ಯಾಸ
ಎಂಜಿನಿಯರುಗಳ ಸಂಸ್ಥೆಯಲ್ಲಿ ಜ.10ರ ಸಂಜೆ 6ಕ್ಕೆ ಗ್ರಾಮೀಣ ಕುಡಿಯುವ ನೀರು ನಿರ್ವಹಣೆ ಕುರಿತು ತಾಂತ್ರಿಕ ಉಪನ್ಯಾಸ ಏರ್ಪಡಿಸಿದ್ದು, ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ಸಿ.ಎನ್. ಬಾಬು ಉಪನ್ಯಾಸ ನೀಡುವರು.
ಪರಿವರ್ತನ
ಕಾರ್ಯಕ್ರಮ
44ನೇ ರೋಟರಿ ಜಿಲ್ಲಾ ಸಮ್ಮೇಳನ ಅಂಗವಾಗಿ ಪರಿವರ್ತನ ಕಾರ್ಯಕ್ರಮವು ಜ.10ರಿಂದ 12ರವರೆಗೆ ಹುಣಸೂರು ರಸ್ತೆಯಲ್ಲಿರುವ ಸೈಲೆಂಟ್ ಶೋರ್ಸ್ ರೆಸ್ಸಾರ್ಟ್‌ನಲ್ಲಿ ನಡೆಯಲಿದ್ದು, ಸುಮಾರು 2500 ಮಂದಿ ರೋಟರಿ ಸದಸ್ಯರು ಭಾಗವಹಿಸುವರು. ಜಿಲ್ಲಾ ಗೌರ್ನರ್ ಗುರುರಾಜ್ ಅಧ್ಯಕ್ಷತೆ ವಹಿಸಲಿದ್ದು, ಸ್ವಾಮಿ ಬ್ರಹ್ಮಾನಂದಜಿ ಉದ್ಘಾಟಿಸುವರು.
ಕೆಂಪೇಗೌಡ ಯುವ ಬಳಗಕ್ಕೆ ಆಯ್ಕೆ
ಕೆ.ಆರ್. ನಗರ: ತಾಲೂಕು ಕೆಂಪೇಗೌಡ ಯುವ ಬಳಗವನ್ನು ನೂತನವಾಗಿ ರಚಿಸಲಾಗಿದ್ದು, ಬಳಗದ ಪದಾಧಿಕಾರಿಗಳಾಗಿ ಗೋವಿಂದಗೌಡ (ಗೌರವಾಧ್ಯಕ್ಷರು), ಅನಿಲ್‌ಗೌಡ (ಅಧ್ಯಕ್ಷರು),  ಹರಿಚಿಂದಬರ, ರಾಮಾಚಾರಿ (ಉಪಾಧ್ಯಕ್ಷರು), ಶ್ರೀನಿವಾಸ್ (ಪ್ರಧಾನ ಕಾರ್ಯದರ್ಶಿ), ಕೆ.ಆರ್. ಸಂತೋಷ್, ವಿವೇಕ್‌ಗೌಡ (ಸಹ ಕಾರ್ಯದರ್ಶಿ), ಸಚಿನ್ (ಖಜಾಂಚಿ), ಹೇಮಂತ್‌ಗೌಡ, ಸಂಜಯ್, ಮಂಜುನಾಥ್, ಶರತ್‌ಗೌಡ, ಅರುಣ್‌ಗೌಡ, ರಾಮುಗೌಡ, ವಿಜಯ್‌ಕುಮಾರ್ (ಸಂಘಟನಾ ಕಾರ್ಯದರ್ಶಿಗಳು), ಜೆ.ಪಿ. ಚಂದ್ರಶೇಖರ್ (ಕಾನೂನು ಸಲಹೆಗಾರರು), ರಾಕೇಶ್‌ಗೌಡ, ಜಗದೀಶ್, ಮನು, ಸಂತೋಷ್, ಉಮಾಶಂಕರ್, ಅರುಣ್‌ಗೌಡ, ಹಿತೇಶ್, ಸಚಿನ್, ಅಮೃತ್‌ಗೌಡ, ಸಂದೇಶ್‌ಗೌಡ, ಆನಂದ್, ದಿನೇಶ್, ಶಿವಕುಮಾರ್ (ನಿರ್ದೇಶಕರು) ನೇಮಕ ಮಾಡಲಾಗಿದೆ.
ಅಮರಶಿಲ್ಪಿ ವೇದಿಕೆ ಇಂದು ಉದ್ಘಾಟನೆ
ಮೈಸೂರು: ಅಮರ ಶಿಲ್ಪಿ ವೇದಿಕೆಯ ಉದ್ಘಾಟನಾ ಕಾರ್ಯಕ್ರಮವು ವಿಜಯನಗರ ಯೋಗಾನರಸಿಂಹಸ್ವಾವು ದೇವಸ್ಥಾನದಲ್ಲಿ ಜ.9 ರಂದು ನಡೆಯಲಿದೆ.
ರಾಜಕೀಯ ಮೀಸಲಾತಿಗೆ ಒತ್ತಾಯಿಸುವುದು, ವಿಶ್ವಕರ್ಮ ಸಮಾಜದ ಕರಕುಶಲ ಕಲೆಗಳಾದ ಶಿಲ್ಪಕಲೆ, ಲೋಹದ ಕೆತ್ತನೆ ಮತ್ತಿತರ ಕಲೆಗಳಲ್ಲಿನ ವೃತ್ತಿನಿರತ ಕರ್ಮಿಗಳನ್ನು ಗುರುತಿಸಿ ಅವರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವುದು ಈ ಸಂಘಟನೆ ಉದ್ದೇಶ ಎಂದು ವೇದಿಕೆ ಅಧ್ಯಕ್ಷ ಎ.ಗೋಪಾಲಾಚಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಗ್ಗೆ 9ಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಉದ್ಘಾಟಿಸುವರು. ಪ್ರೊ.ಭಾಷ್ಯಂ ಸಾನ್ನಿಧ್ಯ ವಹಿಸುವರು. ವಿಶ್ವಕರ್ಮ ಸಮಾಜದ ಕೆ.ಆರ್. ನಗರದ ತಾಲೂಕು ಅಧ್ಯಕ್ಷ ಕೆ.ಎಸ್. ರೇವಣ್ಣ ಅಧ್ಯಕ್ಷತೆ ವಹಿಸುವರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.