ಹುಟ್ಟಿದ ದಿನವನ್ನೇ ತಿದ್ದಿ ನಿವೃತ್ತಿ ಮುಂದೂಡಿದ್ದ ವಿಜ್ಞಾನಿ ದಿವಾಕರ್ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ದಾಖಲಿಸಿದರೂ ಸಿಗದ ಜಯಕಾರ
ಮೈಸೂರು: ತಮ್ಮ ಜನ್ಮ ದಿನಾಂಕ ವಿವಾದಕ್ಕೆ ಸಿಲುಕಿರುವುದು 'ಕನ್ನಡಪ್ರಭ'ದಲ್ಲಿ ವರದಿಯಾದ ಪರಿಣಾಮ ಸಿಐಎಸ್ಆರ್ ನಿವೃತ್ತಿಗೊಳಿಸಿದ್ದನ್ನು ಪ್ರಶ್ನಿಸಿ ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (ಸಿಎಫ್ಟಿಆರ್ಐ) ಮುಖ್ಯ ವಿಜ್ಞಾನಿ ಡಾ.ಎಸ್. ದಿವಾಕರ್ ಅವರು ರಾಜ್ಯ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ರಿಟ್ ವಜಾ ಆಗಿದೆ.
ಸಿಎಫ್ಟಿಆರ್ಐನ ಫರ್ಮೆಂಟೇಷನ್ ಟೆಕ್ನಾಲಜಿ ಮತ್ತು ಬಯೋ ಎಂಜಿನಿಯರಿಂಗ್ (ಎಫ್ಟಿಬಿಇ) ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಎಸ್. ದಿವಾಕರ್ ಅವರ ಜನ್ಮದಿನಾಂಕ 12.09.1950. ಹೀಗಾಗಿ ಅವರು 2010ರ ಸೆಪ್ಟೆಂಬರ್ನಲ್ಲಿಯೇ ನಿವೃತ್ತರಾಗಬೇಕಿತ್ತು. ಆದರೆ ಜನ್ಮದಿನಾಂಕ 12.9.1953 ಎಂದು ಹೇಳಿಕೊಂಡು ಹುದ್ದೆಯಲ್ಲಿ ಮುಂದುವರಿದಿದ್ದರು. ಈ ಸಂಬಂಧ 2012ರ ಮಾ.2ರ 'ಕನ್ನಡಪ್ರಭ'ದಲ್ಲಿ ಬಂದ ವರದಿಯ ಹಿನ್ನೆಲೆಯಲ್ಲಿ ಸಿಎಸ್ಐಆರ್ ಆದೇಶದ ಮೇರೆಗೆ ಡಾ.ಎಸ್. ದಿವಾಕರ್ ಅವರನ್ನು 2012ರ ಮಾ.30 ರಂದು ಪೂರ್ವಾಹ್ನ ನಿವೃತ್ತಿಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಡಾ.ದಿವಾಕರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಅವರ ರಿಟ್ ಅರ್ಜಿ ವಜಾ ಆಗಿತ್ತು. ನಂತರ ಕೇಂದ್ರ ನ್ಯಾಯಾಧೀಕರಣದ (ಸಿಎಟಿ) ಮೊರೆ ಹೋಗಿದ್ದರು.
ಸಿಎಟಿ 2012ರ ಸೆ.3 ರಂದು ಡಾ.ಎಸ್. ದಿವಾಕರ್ ಅವರ ನಿವೃತ್ತಿಯನ್ನು ಎತ್ತಿ ಹಿಡಿದಿತ್ತು. ಈ ಆದೇಶ ರದ್ದು ಮಾಡುವಂತೆ ಅವರು ಮತ್ತೆ ಹೈಕೋರ್ಟ್ ಮೊರೆ ಹೋಗಿದ್ದರು. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಿಎಫ್ಟಿಆರ್ಐ ಅನ್ನು ಪ್ರತಿವಾದಿಗಳಾಗಿ ಹೆಸರಿಸಿದ್ದರು. ದಿವಾಕರ್ ಪರ ಜಿ.ಸುಕುಮಾರನ್, ಕೇಂದ್ರದ ಪರ ಎಂ.ವಾಸುದೇವ ರಾವ್ ವಕಾಲತ್ತು ಹಾಕಿದ್ದರು.
ನ್ಯಾಯಮೂರ್ತಿ ಮೋಹನ ಎಂ.ಶಾಂತನಗೌಡರ್ ಮತ್ತು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಹೈಕೋರ್ಟ್ ಪೀಠವು ವಿಚಾರಣೆ ನಡೆಸಿತು.
1987ರಲ್ಲಿ ಸೇರ್ಪಡೆ: ಡಾ.ದಿವಾಕರ್ 1987ರ ಮಾ.21 ರಂದು ಸಿಎಫ್ಟಿಆರ್ಐಗೆ ವಿಜ್ಞಾನಿ- ಸಿ ಎಂದು ಸೇರ್ಪಡೆಯಾಗಿದ್ದರು. ಆಗ ಸಲ್ಲಿಸಿದ್ದ ಅರ್ಜಿಯ ಪ್ರಕಾರ ಅವರ ಜನ್ಮದಿನಾಂಕ 12.9.1950. ಆದರೆ ತಮ್ಮ ಸರಿಯಾದ ಜನ್ಮದಿನಾಂಕ 12.9.1953 ಎಂದು ದಿವಾಕರ್ ಹೇಳಿಕೊಂಡಿದ್ದರು. ಆದರೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮತ್ತು ಸೇವೆಗೆ ಸೇರಿದಾಗ ನೀಡಿದ ಅರ್ಜಿಯಲ್ಲಿ ನಮೂದಿಸಿರುವ ಪ್ರಕಾರ, ಅವರ ಜನ್ಮದಿನಾಂಕ 12.9.1950. ಹೀಗಾಗಿ ಅವರು 12.9.2010 ರಂದು ವಯೋನಿವೃತ್ತಿ ಆಗಬೇಕಿತ್ತು. ಆದರೆ ಸಿಎಫ್ಟಿಆರ್ಐನ ಸೆಕ್ಷನ್ ಅಧಿಕಾರಿಯ ಮೂಲಕ 1988ರ ನ.21 ರಂದು ಜನ್ಮದಿನಾಂಕ ತಿದ್ದುಪಡಿ ಮಾಡಿಸಿದ್ದರಿಂದ ತಮ್ಮ ವಯೋನಿವೃತ್ತಿಯು 12.9.2013 ಎಂಬುದು ಅವರ ವಾದವಾಗಿತ್ತು. ಆದರೆ ಇದನ್ನು ಸಕ್ಷಮ ಪ್ರಾಧಿಕಾರ ಹಾಗೂ ಸಿಎಟಿ ತಿರಸ್ಕರಿಸಿದ್ದವು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಡಾ.ದಿವಾಕರ್ ಅವರ ಜನ್ಮದಿನಾಂಕ ಪರಿಷ್ಕರಣೆ ಕ್ರಮಬದ್ಧವಾಗಿ ಆಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿತು. ನಿಯಮಾವಳಿಯ ಪ್ರಕಾರ, ಡಾ.ದಿವಾಕರ್ ಅವರು ಜನ್ಮದಿನಾಂಕ ತಿದ್ದುಪಡಿಗೆ ಕೇಂದ್ರ ಸರ್ಕಾರದಿಂದ ಅಥವಾ ಸಕ್ಷಮ ಪ್ರಾದಿಕಾರದಿಂದ ಅನುಮತಿ ಪಡೆದಿರಲಿಲ್ಲ. ಈ ವಿಷಯದಲ್ಲಿ ಸಂಬಂಧಪಟ್ಟ ಸೆಕ್ಷನ್ ಅಧಿಕಾರಿಯ ನಡತೆಯೂ ಸರಿಯಲ್ಲ. ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಧೀಶರು ರಿಟ್ ಅರ್ಜಿಯನ್ನು ಇತ್ತೀಚೆಗೆ ವಜಾ ಮಾಡಿದ್ದಾರೆ.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

