ಮೈಸೂರು

ಠಾಣೆಗೆ ಬಾಡಿಗೆದಾರರ ಬಗ್ಗೆ ವಿವರ ಕೊಡಿ

Published On :

ಮೈಸೂರು: ನಗರ ಪ್ರದೇಶದಲ್ಲಿ ಅನಾಮಧೇಯತೆಯ ಲಾಭ ಪಡೆದು ಅಪರಾಧಗಳನ್ನು ಎಸಗುವ ವ್ಯಕ್ತಿಗಳನ್ನು ಗುರುತಿಸಲು ಹಾಗೂ ಬಾಡಿಗೆ ಮನೆಗಳಲ್ಲಿ ವಾಸಿಸುವ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲು ಮೈಸೂರು ನಗರ ಪೊಲೀಸರು ಸುರಕ್ಷಾ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸುರಕ್ಷಾ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆರಂಭಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೈಗಾರೀಕರಣ, ವಾಣಿಜ್ಯ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ಮೈಸೂರಿನಲ್ಲಿ ರಾಜ್ಯದ ಹಾಗೂ ದೇಶದ ವಿವಿಧ ಪ್ರದೇಶಗಳಿಂದ ಉದ್ಯೋಗ ಅರಸಿಕೊಂಡು, ವಾಣಿಜ್ಯ ವಹಿವಾಟಿನ ಸೋಗಿನಲ್ಲಿ ಬಂದು ಬಾಡಿಗೆ ಮನೆಯಲ್ಲಿ ವಾಸವಾಗುತ್ತಾರೆ. ನಂತರ ಕಳವು, ಸುಲಿಗೆ, ದರೋಡೆ, ಅಪಹರಣ ಮುಂತಾದ ಅಪರಾಧ, ಕಾನೂನು ಬಾಹಿರ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಹ ತೊಡಗಿ ನಂತರ ಅನಾಮಧೇಯತೆಯ ಲಾಭ ಪಡೆದು ಅಪರಾಧಿಗಳು ತಲೆಮರೆಸಿಕೊಳ್ಳುತ್ತಾರೆ. ಇದರಿಂದ ಅವರನ್ನು ಪತ್ತೆಹಚ್ಚಲು ಪೊಲೀಸರು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ ಸುರಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಗರದ ಮನೆ ಮಾಲೀಕರು ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿದಾಗ, ಬಾಡಿಗೆದಾರರ ವಿವರಗಳನ್ನು ಸಂಬಂಧಪಟ್ಟ ಠಾಣೆಗೆ ಸ್ವತಃ ಹಾಜರಾಗಿ ಠಾಣೆಯಲ್ಲಿ ನೀಡಲಾಗುವ ನಿಗದಿತ ಅರ್ಜಿಯಲ್ಲಿ ಪಡೆದು, ಅದರಲ್ಲಿ ಬಾಡಿಗೆದಾರರ ವಿವರವನ್ನು ನಮೂದು ಮಾಡಿ ವಾಪಸ್ ನೀಡಬೇಕು ಎಂದರು.
ಬಾಡಿಗೆದಾರರ ವಿವರ ನೀಡಿ: ಅರ್ಜಿಯಲ್ಲಿ ಮನೆ ಮಾಲೀಕರ ಹೆಸರು, ವಿಳಾಸ ಸೇರಿದಂತೆ ಬಾಡಿಗೆದಾರರ ಭಾವಚಿತ್ರ ಒಳಗೊಂಡಂತೆ ಅವರ ಹೆಸರು ಮತ್ತು ವಿಳಾಸ, ಮೊಬೈಲ್ ಸಂಖ್ಯೆ, ಉದ್ಯೋಗ, ಕುಟುಂಬದ ಸದಸ್ಯರ ವಿವರ, ಅವರ ಸ್ವಂತ ಸ್ಥಳದ ವಿವರ ಮತ್ತು ಪೊಲೀಸ್ ಠಾಣೆ ಹೆಸರು ಹಾಗೂ ಗುರುತಿನ ಬಗ್ಗೆ ಬಾಡಿಗೆದಾರರ ಆಧಾರ್ ಕಾರ್ಡ್/ ಪಾಸ್‌ಪೋರ್ಟ್/ ಡ್ರೈವಿಂಗ್ ಲೈಸೆನ್ಸ್/ ಪಡಿತರ ಚೀಟಿ/ ಮತದಾರರ ಗುರುತಿನ ಚೀಟಿ ಅಥವಾ ಎಲ್‌ಪಿಜಿ ಸಂಪರ್ಕ ಇನ್ನು ಮುಂತಾದ ವಿವರವನ್ನು ಸಹ ಒದಗಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಈ ಮಾಹಿತಿಯನ್ನು ಠಾಣೆಯಲ್ಲಿ ಸ್ವೀಕರಿಸಿದ ನಂತರ ಬಾಡಿಗೆದಾರ/ ಅವರ ಕುಟುಂಬದವರು ಯಾವುದಾದರೂ ಅಪರಾಧ/ ಕಾನೂನುಬಾಹಿರ/ ಭಯೋತ್ಪಾದಕ ಚಟುವಟಿಕೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆಯೇ ಎಂಬ ಬಗ್ಗೆ ಅವರು ನೀಡಿರುವ ಮಾಹಿತಿಯನ್ನು ಅವರ ಸ್ವಂತ/ ಈ ಹಿಂದೆ ಇದ್ದ ಪೊಲೀಸ್ ಠಾಣೆ/ ಘಟಕದಿಂದ ಪರಿಶೀಲಿಸಲಾಗುವುದು. ಇದರಿಂದ ಅಪರಾಧ ನಿಯಂತ್ರಣ, ಕಾನೂನು ಬಾಹಿರ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು, ಅಪರಾಧಿಗಳ ಪತ್ತೆ ಹಾಗೂ ನಿಯಂತ್ರಿಸಲು ಸಹಕಾರಿಯಾಗುತ್ತದೆ ಎಂದು ಅವರು ವಿವರಿಸಿದರು.
ನಗರದ ಸಾರ್ವಜನಿಕರು ತಮ್ಮ ಮನೆಗಳನ್ನು ಬಾಡಿಗೆಗೆ ನೀಡಿದಾಗ ಸ್ವಯಂ ಪ್ರೇರಿತರಾಗಿ ಠಾಣೆಗೆ ಹಾಜರಾಗಿ, ಬಾಡಿಗೆದಾರರ ಮಾಹಿತಿ ನೀಡುವ ಮೂಲಕ ಅಪರಾಧಗಳು, ಕಾನೂನು ಬಾಹಿರ ಹಾಗೂ ಭಯೋತ್ಪಾದಕ ಚಟುವಟಿಕೆ ನಿಯಂತ್ರಣದಲ್ಲಿ ಸಹಕರಿಸಬೇಕು ಎಂದು ಕೋರಿದರು. ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಎ.ಎನ್. ರಾಜಣ್ಣ, ಅಪರಾಧ ಮತ್ತು ಸಂಚಾರ ಡಿಸಿಪಿ ಎಂ.ಎಂ. ಮಹದೇವಯ್ಯ, ಸಿಸಿಬಿ ಎಸಿಪಿ ಕೆ.ಎನ್. ಮಾದಯ್ಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.