ಲಾರಿ ಮುಷ್ಕರ: ಮಾಲೀಕರ ನಡುವೆ ಬಿರುಕು
ಟಿ. ನರಸೀಪುರ: ರಾಜ್ಯಾದ್ಯಂತ ನಡೆಯುತ್ತಿರುವ ಲಾರಿಗಳ ಮುಷ್ಕರಕ್ಕೆ ತಾಲೂಕು ಟಿಪ್ಪರ್ ಮತ್ತು ಲೈಲ್ಯಾಂಡ್ ಲಾರಿ ಮಾಲೀಕರ ಸಂಘ ಸಂಪೂರ್ಣ ಬೆಂಬಲ ನೀಡಿದೆ ಎಂದು ಟಿಪ್ಪರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ. ಪರಶಿವಮೂರ್ತಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ತಾ. ಟಿಪ್ಪರ್ ಹಾಗೂ ಲೈಲ್ಯಾಂಡ್ ಲಾರಿ ಮಾಲೀಕರ ಸಭೆಯಲ್ಲಿ ಮಾತನಾಡಿದ ಅವರು, ಲಾರಿ ಮಾಲೀಕರು ಮತ್ತು ಚಾಲಕರ ಮೇಲಿನ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯುವುದು, ಏಕರೂಪ ಮರಳು ನೀತಿಯಡಿ ಮರಳು ಸಾಗಾಣಿಕೆಗೆ ಪ್ರತಿನಿತ್ಯ ಒಂದು ಪರ್ಮಿಟ್ ನೀಡುವುದು ಹಾಗೂ ಅಕ್ರಮ ಮರಳು ಸಾಗಾಣಿಕೆ ಮಾಡುವ ಲಾರಿಗೆ ಕಡಮೆ ಪ್ರಮಾಣದ ದಂಡ ವಿಧಿಸುವುದು ಸೇರಿದಂತೆ, ರಾಜ್ಯ ಲಾರಿ ಮಾಲೀಕರ ಸಂಘದ ಎಲ್ಲ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಸರ್ಕಾರದ ಕಠಿಣ ಕ್ರಮಗಳು ಜೀವನ ನಿರ್ವಹಣೆಗೆ ಲಾರಿ ಚಾಲನೆಯ ಉದ್ಯೋಗ ಅವಲಂಬಿಸಿರುವ ಕುಟುಂಬಗಳಿಗೆ ಕಂಟಕವಾಗುತ್ತಿವೆ. ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಷಣ್ಮುಗಪ್ಪ ನೇತೃತ್ವದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಕಳೆದ ಹದಿನೈದು ದಿನಗಳಿಂದ ಹೋರಾಟ ನಡೆಸಲಾಗುತ್ತಿದೆ. ಕೆಲವರು ಪ್ರತ್ಯೇಕ ಹೇಳಿಕೆ ನೀಡುವ ಮೂಲಕ ಲಾರಿ ಮಾಲೀಕರ ನಡುವೆ ಒಗ್ಗಟ್ಟು ಇಲ್ಲ ಎಂಬುದನ್ನು ಹೇಳಿಕೊಂಡಂತಿದೆ. ರಾಜ್ಯ ಸಂಘದ ನಿರ್ಧಾರವನ್ನು ನಾವೆಲ್ಲ ಬೆಂಬಲಿಸಿ ಮುಷ್ಕರದಲ್ಲಿ ಭಾಗವಹಿಸುತ್ತೇವೆ ಎಂದು ಅವರು ತಿಳಿಸಿದರು.
ಲೈಲ್ಯಾಂಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಲ್. ರವಿ, ಲಾರಿ ಮಾಲೀಕ, ಉದ್ಯಮಿ ಸುರೇಶ್ ಮಾತನಾಡಿದರು. ಸಭೆಯಲ್ಲಿ ಟಿಪ್ಪರ್ ಹಾಗೂ ಲೈಲ್ಯಾಂಡ್ ಲಾರಿ ಮಾಲೀಕರಾದ ರವಿಕುಮಾರ್, ಲಿಂಗರಾಜು, ಜಯಶೀಲಪ್ಪ, ಗಿರೀಶ್, ಶಿವಕುಮಾರ್, ದೊರೆಸ್ವಾಮಿ, ಪುಟ್ಟು, ಮಂಜು, ಮುದ್ದುಮಲ್ಲು ಭಾಗವಹಿಸಿದ್ದರು.
ಹೋರಾಟದಲ್ಲಿ ಭಾಗವಹಿಸಲ್ಲ, ಬೆಂಬಲ ನೀಡಲ್ಲ
ಟಿ. ನರಸೀಪುರ: ರಾಜ್ಯದಲ್ಲಿ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ. ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಅಧ್ಯಕ್ಷ ಎಂ. ಪುಟ್ಟಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ತಾಲೂಕು ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಸೋಮವಾರದಿಂದಲೇ ಸ್ಥಳೀಯ ಲಾರಿಗಳು ಪರ್ಮಿಟ್ ಪಡೆದುಕೊಂಡೆ ಮರಳು ಸಾಗಾಣಿಕೆ ಮಾಡುತ್ತೇವೆ. ಚಾಲಕರು ಮತ್ತು ಮಾಲೀಕರಿಗೆ ಯಾವುದೇ ತೊಂದರೆಯಾದರೂ ಜಿಲ್ಲಾಡಳಿತವನ್ನೇ ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.
ಕಳೆದ 2011ರ ಸೆಪ್ಟೆಂಬರ್‌ನಲ್ಲಿ ಹಿಂದಿನ ಸರ್ಕಾರ ಜಾರಿಗೆ ತಂದ ಮರಳು ನೀತಿಯಂತೆ ಅಕ್ರಮ ಮರಳು ಸಾಗಾಣಿಕೆ ಮಾಡಿದರೆ 25 ಸಾವಿರ ದಂಡ, ಎರಡು ವರ್ಷ ಜೈಲು ಶಿಕ್ಷೆ ಎಂದು ಹೇಳಲಾಗಿತ್ತು. ರಾಜ್ಯದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡಿದ್ದಕ್ಕೆ ಇದುವರೆಗೂ 26 ಕೋಟಿ ದಂಡ ವಸೂಲಾಗಿದೆ. ಸಮರ್ಪಕವಾಗಿ ತನಿಖಾ ವರದಿಯನ್ನು ಸಲ್ಲಿಸದ್ದಕ್ಕೆ ಯಾಬೊಬ್ಬರನ್ನೂ ಜೈಲಿಗೆ ಕಳುಹಿಸಿಲ್ಲವಾದರೂ ಮುಷ್ಕರದ ಅನಿವಾರ್ಯವಿಲ್ಲವೆಂದು ಅಭಿಪ್ರಾಯಪಟ್ಟರು.
ಮೈಸೂರಿನ ಗ್ರಾಹಕರಿಗೆ ನಿಗದಿತ ಸೇಫ್ಟಿ ಮರಳು ನೀಡಲು ಸಾಧ್ಯವಿಲ್ಲದಿರುವಾಗ ಬೆಂಗಳೂರಿಗೆ ಮರಳು ಪೂರೈಕೆ ಮಾಡಬೇಕು ಎಂದರು.
ಸಭೆಯಲ್ಲಿ ಲಾರಿ ಮಾಲೀಕರಾದ ಸಮಿವುಲ್ಲ, ಏಜಾಜ್ ಷರೀಫ್, ನಾಜಿಮ್, ಹರ್ಷದ್, ಮುನ್ನಾದಾದ, ಜಾಹೀರ್, ಅಬ್ಬಾಸ್, ನಾಸಿರ್, ಮುದಾಸಿರ್, ಜಬಿ, ಅಬ್ದುಲ್ಲಾ, ರೇವಣ್ಣ, ಶಿವಕುಮಾರ್ ಭಾಗವಹಿಸಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

