ವಿವಿಧೆಡೆ ವಿವೇಕಾನಂದ ಜಯಂತಿ ಆಚರಣೆ
ಕ.ಪ್ರ.ವಾರ್ತೆ , ಮೈಸೂರು , ಜ. 12
ಸಮಾಜ ತಿದ್ದುವ ಮುನ್ನ ನಾವು ಸಚರಿತ್ರರಾಗಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ವಿಶ್ವಹಿಂದೂ ಧರ್ಮಸಂರಕ್ಷಣಾ ವೇದಿಕೆಯು ಯಾದವಗಿರಿಯ ಚೆಲುವಾಂಬ ಉದ್ಯಾನವನದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಮತ್ತು ರಾಷ್ಟ್ರೀಯ ಯುವದಿನ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶಕ್ಕಾಗಿ ನಮ್ಮನ್ನು ಮುಡಿಪಾಗಿಡಬೇಕು. ಸಮಾಜದಲ್ಲಿ ಎಲ್ಲರನ್ನೂ ತಿದ್ದುವ ಮುನ್ನ ನಾವು ಸಚರಿತ್ರರಾಗಬೇಕು. ವಿವೇಕಾನಂದ, ಗಾಂಧಿ ಮುಂತಾದ ಮಹಾಪುರುಷರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಶ್ರೀಗಳು ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ನಿರ್ಮಾಣ ಕಿರು ಹೊತ್ತಿಗೆ ವಿತರಿಸಿದರು. ವೇದಿಕೆ ಪದಾಧಿಕಾರಿಗಳು ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.
ಭಾನುಪ್ರಕಾಶ್ ಶರ್ಮ, ಆದಿತ್ಯ ಆಸ್ಪತ್ರೆಯ ಡಾ. ಚಂದ್ರಶೇಖರ್, ವೇದಿಕೆ ಅಧ್ಯಕ್ಷ ಬಿ.ಎನ್. ಸ್ವಾಮಿಗೌಡ, ಸ್ವಾಮಿ, ಅರುಣ್ಗೌಡ ಇದ್ದರು.
ವಿಜಯ ವಿಠಲದಲ್ಲಿ...
ಸರಸ್ವತಿಪುರಂನಲ್ಲಿರುವ ವಿಜಯ ವಿಠಲ ಸಂಯುಕ್ತ ಪಿಯು ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಎಚ್.ಎಸ್.ಸತ್ಯಪ್ರಸಾದ್ ಮಾತನಾಡಿ, ವಿವೇಕಾನಂದರು ಪ್ರತಿಭಾಶಾಲಿ ಮಹಾನ್ ವ್ಯಕ್ತಿ. ತಮ್ಮ ಅತ್ಯಲ್ಪ ಜೀವಿತಾವಧಿಯಲ್ಲಿ ಪ್ರಪಂಚದ ಮೇಲೆ ಪ್ರಭಾವ ಬೀರಿದ ಮಹಾನ್ ಚೇತನ. ಅವರ ಹೆಸರಿಗೆ ತಕ್ಕಂತೆ ವಿವೇಕದಿಂದ ಆನಂದವನ್ನು ಪ್ರಪಂಚಕ್ಕೆ ನೀಡಿದರು. ನಾಸ್ತಿಕತೆ ವಿಜೃಂಭಿಸಿ, ಹಿಂದೂ ಧರ್ಮ ನಶಿಸಿ ಹೋಗುತ್ತಿದ್ದ ಸಂದರ್ಭದಲ್ಲಿ ಜನಸಿದ ಅವರು ವಿಶ್ವಧರ್ಮ ಸ್ಥಾಪಿಸಲು ನಾವೆಲ್ಲ ಮುಂದಾಗಬೇಕು ಎಂದರು ಕರೆ ನೀಡಿದರು ಎಂದು ಸ್ಮರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಎಸ್.ಎಸ್.ರಮೇಶ್ ಇದ್ದರು.
ಸಾಮೂಹಿಕ ಓಟ ಯಶಸ್ವಿ
ಜಿಲ್ಲಾಡಳಿತದ ವತಿಯಿಂದ ಭಾನುವಾರ ಈದ್ಮಿಲಾದ್, ಸಂಕ್ರಾಂತಿ ಮತ್ತು ಸ್ವಾಮಿ ವಿವೇಕಾನಂದರ ಜನ್ಮದಿನ ಅಂಗವಾಗಿ ಸಾಮೂಹಿಕ ಓಟ ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ, ನೆಹರು ಯುವಕೇಂದ್ರ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಈ ಸಾಮೂಹಿಕ ಓಟ ಆಯೋಜಿಸಲಾಗಿತ್ತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ಆರಂಭವಾದ ಈ ಓಟವು ಹಳೆ ಪ್ರತಿಮೆ ವೃತ್ತ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಸಮೀಪದ ಓವೆಲ್ ಮೈದಾನದಲ್ಲಿ ಅಂತ್ಯಗೊಂಡಿತು. ಶಾಸಕ ವಾಸು ಅವರು ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಈದ್ಮಿಲಾದ್, ಸ್ವಾಮಿ ವಿವೇಕಾನಂದರ ಜನ್ಮದಿನ ಹಾಗೂ ಸಂಕ್ರಾಂತಿ ಅಂಗವಾಗಿ ಆಯೋಜಿಸಿದ್ದ ಈ ಓಟದಲ್ಲಿ ವಿವಿಧ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಗರ ಪಾಲಿಕೆ ಆಯುಕ್ತ ಪಿ.ಜಿ.ರಮೇಶ್, ಡಿಡಿಪಿಯು ಕೆ.ಎಂ.ಪುಟ್ಟು, ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್.ನಟರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

