ಮೈಸೂರು

ರಾಮ್ ರಾಜಶೇಖರನ್ ವಿರುದ್ಧ ಪ್ರತಿಭಟನೆ

Published On :

ಮೈಸೂರು: ಸಿಎಫ್‌ಟಿಆರ್‌ಐ ನಿರ್ದೇಶಕ ರಾಮ್ ರಾಜಶೇಖರನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿರುವ ರಾಮ್ ರಾಜಶೇಖರನ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಕನ್ನಡ ವಿರೋಧಿ ಚಟುವಟಿಕೆ ನಡೆಸುತ್ತಿರುವ ರಾಮ್ ರಾಜಶೇಖರನ್ ವಿರುದ್ಧ ಜಿಲ್ಲಾಡಳಿತವಾಗಲಿ ಅಥವಾ ಸರ್ಕಾರವಾಗಲಿ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲದಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು. ಕೂಡಲೆ ಸಿಎಫ್‌ಟಿಆರ್‌ಐ ನಿರ್ದೇಶಕರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು. ತಪ್ಪಿದರೆ ಉಗ್ರ ಹೋರಾಟ ನಡೆಸುವುದಾಗಿ ವೇದಿಕೆಯು ಎಚ್ಚರಿಸಿದೆ.
ಪ್ರತಿಭಟನೆಯಲ್ಲಿ ವೇದಿಕೆಯ ಪ್ರವೀಣ್ ಕುಮಾರ್, ಕಿರಣ್‌ಗೌಡ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.
2.5 ಲಕ್ಷ ಮೌಲ್ಯದ ರಕ್ತ ಚಂದನ ವಶ
ಮೈಸೂರು: ಸಾಮಿಲ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ರಕ್ತ ಚಂದನ ಮರವನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಂಡಿ ಮೊಹಲ್ಲಾದಲ್ಲಿ ನಡೆದಿದೆ. ಮಂಡಿಮೊಹಲ್ಲಾದ ಸಬಿ ಸಾಮಿಲ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸುಮಾರು 2.5 ಲಕ್ಷ ಮೌಲ್ಯದ ರಕ್ತ ಚಂದನದ ಮರದ ತುಂಡನ್ನು ವಶಪಡಿಸಿಕೊಂಡು, ಹನುಮಂತನಗರ ನಿವಾಸಿ ಸೈಯದ್ ಖಾಸೀಫ್ ಅಹ್ಮದ್(24)ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಡಿಸಿಪಿ ಎಂ.ಎಂ. ಮಹದೇವಯ್ಯ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಕೆ.ಎನ್. ಮಾದಯ್ಯ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಪಿ.ಎ. ಸೂರಜ್, ಆರ್. ಜಗದೀಶ್, ಪಿಎಸ್‌ಐ ಶ್ರೀನಿವಾಸಗೌಡ, ಎಎಸ್‌ಐ ಎಂ.ಜೆ. ಜಯಶೀಲನ್, ಎಂ.ಡಿ. ಶಿವರಾಜು ಮತ್ತು ಸಿಬ್ಬಂದಿ ದಾಳಿ ಕಾರ್ಯದಲ್ಲಿ ಭಾಗವಹಿಸಿದ್ದರು.
ಗೋ ಪೂಜೆ
ಮೈಸೂರು: ನಗರದ ಚಾಮುಂಡಿಬೆಟ್ಟದ ಪಾದದ ಬಳಿ ಇರುವ ಪಿಂಜ್ರಾಪೋಲ್‌ನಲ್ಲಿ ಗೋ ಸೇವಾ ಸಂಭ್ರಮ ಟ್ರಸ್ಟ್ ವತಿಯಿಂದ ಜ.15ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಗೋ ಪೂಜೆಯನ್ನು ಏರ್ಪಡಿಸಿದೆ.
ಕಲಿ ತರಬೇತಿ
ಇಂದಿರಾಗಾಂಧಿ ರಾಷ್ಟ್ರೀಯ ಮಾನವ ಸಂಗ್ರಹಾಲಯವು ಮ್ಯೂಸಿಯಂನ ಶೈಕ್ಷಣಿಕ ಕಾರ್ಯಕ್ರಮ ಮಾಡು ಮತ್ತು ಕಲಿ ಸರಣಿಯಲ್ಲಿ ಗುಜರಾತ್ ಮುತುವ ಕಲೆ (ಮೋತಿ ವರ್ಕ್) ತರಬೇತಿ ಕಾರ್ಯಕ್ರಮವನ್ನು ಜ.15 ರಿಂದ 24 ರವರೆಗೆ ಏರ್ಪಡಿಸಿದೆ.  ಮಾಹಿತಿಗಾಗಿ ದೂ. 2448231 ಸಂಪರ್ಕಿಸಬಹುದು.
ಸಾಬಿರ್-ಎ-ಪಾಕ್ ಆಚರಣೆ
ನಗರದ ಮೇಟಗಳ್ಳಿಯ ಕೆಆರ್‌ಎಸ್ ರಸ್ತೆಯಲ್ಲಿರುವ ಎಲೈಟ್ ಕೊಕೊನಟ್ ಪ್ರಾಡಕ್ಟ್ಸ್‌ನಲ್ಲಿ ಜ.15ರ ಬೆಳಗ್ಗೆ 10ಕ್ಕೆ ಜಶ್ನೆ ಉರುಸ್ ಮಕ್ದೂಮ್ ಸಾಬಿರ್- ಎ- ಪಾಕ್ ಆಚರಿಸಲಿದೆ. ಹೆಚ್ಚಿನ ವಿವರಗಳಿಗಾಗಿ ಅಯೂಬ್, ಮೊ.9480438672 ಸಂಪರ್ಕಿಸಿರಿ.
ಪ್ರಶಸ್ತಿ ಪ್ರದಾನ
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 2014ನೇ ಸಾಲಿನ ಬಾಲಶ್ರೀ ಪ್ರಶಸ್ತಿ, ಯುವ ಶ್ರೀ ಪ್ರಶಸ್ತೀ, ಸಾಧನಶ್ರೀ ಪ್ರಶಸ್ತಿ ಪ್ರದಾನ ಹಾಗೂ ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ. ಸಾಧನೆಯ ಸಂಪೂರ್ಣ ವಿವರಗಳನ್ನು, ಜ.15ರೊಳಗೆ ಎಂ.ಬಿ. ಸಂತೋಷ್, 13, ಮೊದಲನೆ ಮಹಡಿ, ಬ್ಲಾಕ್ ನಂ 5, ಶ್ರೀರಾಂಪುರ 2ನೇ ಹಂತ, ಮೈಸೂರು ಈ ವಿಳಾಸಕ್ಕೆ ತಲುಪಿಸುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9886341957 ಸಂಪರ್ಕಿಸಬಹುದು.
ಮರಳು ಲಾರಿಗೆ ಬೆಂಗಾವಲು
ಟಿ. ನರಸೀಪುರ: ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಸೋಮವಾರ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು. ಒಂದೆಡೆ ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ಮುಷ್ಕರ ನಡೆಸುತ್ತಿದ್ದರೆ, ಮತ್ತೊಂದೆಡೆ ಪರ್ಮಿಟ್ ಪಡೆದುಕೊಂಡಿದ್ದ ಲಾರಿಗಳು ಮರಳು ಸಾಗಾಣಿಕೆ ಮಾಡಲು ನಿರತವಾಗಿದ್ದವು. ಮುಷ್ಕರ ನಿರತರಿಂದ ಮರಳು ಸಾಗಾಣಿಕೆ ಮಾಡುವ ಲಾರಿಗಳಿಗೆ ವಿರೋಧ ವ್ಯಕ್ತವಾಗಿ ಘರ್ಷಣೆ ನಡೆಯುವುದನ್ನು ಅರಿತು ಪೊಲೀಸ್ ವಾಹನಗಳ ರಕ್ಷಣೆ ನೀಡಲಾಗಿತ್ತು. ಎಸ್ಕಾರ್ಟ್ ಮಾದರಿಯಲ್ಲಿ ಮರಳು ಲಾರಿ ಮುಂದೆ ಹಾಗೂ ಹಿಂಭಾಗ ಪೊಲೀಸ್ ವಾಹನಗಳು ಸಂಚರಿಸುತ್ತಿದ್ದವು. ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳು ಹಾಗೂ ಪೊಲೀಸರು ಖುದ್ದಾಗಿ ನಿಂತು ಯಾರ್ಡ್‌ಗಳಲ್ಲಿ ಮರಳು ಲೋಡ್ ಮಾಡಿಸುತ್ತಿದ್ದರು.
ಕಣಗಾಲಿನಲ್ಲಿ ಅಕ್ರಮ ಗಣಿಗಾರಿಕೆ
ಪಿರಿಯಾಪ್ಟಣ: ತಾಲೂಕಿನ ಕಣಗಾಲು ಗ್ರಾಮದಲ್ಲಿ ಅಕ್ರಮ ಕರಿಕಲ್ಲು ಗಣಿಗಾರಿಗೆ ನಡೆಯುತ್ತಿದ್ದು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಕೆ.ಸಿ. ಹೇಮಂತ್‌ಕುಮಾರ್ ಆರೋಪಿಸಿದರು. ಕಣಗಾಲು ಗ್ರಾಮದಲ್ಲಿ 1.20 ಗುಂಟೆ ಜಾಗವನ್ನು ಕರಿಕಲ್ಲು ಗಣಿಗಾರಿಕೆಗಾಗಿ ಸಂಬಂಧಪಟ್ಟ ಇಲಾಖೆಗೆ ತೋರಿಸಿದ್ದಾರೆ. ಆದರೆ ಅದರೊಂದಿಗೆ ಹೆಚ್ಚಿನ ಸರ್ಕಾರಿ ಜಾಗದಲ್ಲಿಯೂ ಗಣಿಗಾರಿಗೆ ನಡೆಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು. ಕೂಡಲೇ ಸಬಂಧಪಟ್ಟ ಭೂ ಮತ್ತು ಗಣಿಗಾರಿಕೆ ಇಲಾಖೆ ಮತ್ತು ತಾಲೂಕು ಮಟ್ಟದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದಸಂಸ ಸಮಿತಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಬೆಟ್ಟದತುಂಗ ಶಾಲೆ ವಾರ್ಷಿಕೋತ್ಸವ
ಪಿರಿಯಾಪಟ್ಟಣ: ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವ ಮೂಲಕ ಪ್ರತಿಷ್ಠಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಮೀರಿಸುವ ಸಾಧನೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದು ನಾಗರಾಜ್ ಹೇಳಿದರು. ತಾಲೂಕಿನ ಬೆಟ್ಟದತುಂಗ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಲೋಕೇಶ್, ಸದಸ್ಯರಾದ ರಾಜು, ಯಶೋಧರ್, ರಾಮೇಗೌಡ, ಗೋಪಾಲ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ್, ರೈತ ಸಂಘದ ತಾ. ಅಧ್ಯಕ್ಷ ಪ್ರಕಾಶ್‌ರಾಜೇ ಅರಸ್, ಶಿಕ್ಷಕರಾದ ಉದಯಶಂಕರ್, ವಿಜಯನಾಯಕ್, ಗೀರೀಶ್, ವಾಸು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.