ಮೈಸೂರು

ಗ್ರಾಹಕರ ಸಭೆಯಲ್ಲಿ ಸಂಚಾರ ಸಮಸ್ಯೆ ಚರ್ಚೆ

Published On :

ಮೈಸೂರು: ಮೈಸೂರು ಗ್ರಾಹಕರ ಪರಿಷತ್‌ನ ಮಾಸಿಕ ಸಭೆಯಲ್ಲಿ ನಗರದ ವಾಹನ ಸಂಚಾರದ ಸಮಸ್ಯೆ ಕುರಿತು ಚರ್ಚಿಸಲಾಯಿತು.
ಭಾನುವಾರ ಪರಿಷತ್ ಆವರಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಕೆಸ್ಸಾರ್ಟಿಸಿ ವಿಭಾಗೀಯ ಸಾರಿಗೆ ಅಧಿಕಾರಿ ಮಸೂದ್ ಅಹಮದ್ ಮಾತನಾಡಿ, ನಗರ ಪಾಲಿಕೆಯು ಅನಗತ್ಯ ಕಡೆಗಳಲ್ಲಿ ಮತ್ತು ಅವೈಜ್ಞಾನಿಕವಾಗಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಿದೆ. ಆದರೆ ಸಾರ್ವಜನಿಕರು ನಾವು ನಿರ್ಮಿಸಿರುವ ಬಸ್ ಶೆಲ್ಟರ್ ಎಂದು ತಿಳಿದಿದ್ದಾರೆ. ಅಲ್ಲದೆ ಪಾದಚಾರಿಗಳಿಗೆ ಮೀಸಲಿಟ್ಟ ಸ್ಥಳದಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ ಎಂದರು.
ಪಾಲಿಕೆಯ ನಗರ ಯೋಜನೆ ಸಹಾಯಕ ನಿರ್ದೇಶಕಿ ಆಶಾ ಭರತ್ ಮಾತನಾಡಿ, ಶಾಸಕರು ಮತ್ತು ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಶೆಲ್ಟರ್ ನಿರ್ಮಿಸಲು ಏಜೆನ್ಸಿ ಒಂದಕ್ಕೆ ಗುತ್ತಿಗೆ ನೀಡಲಾಗಿತ್ತು ಎಂದು ತಿಳಿಸಿದರು.
ಕೇರಳ ಆಟೋ ಸಂಚಾರ: ಎಆರ್‌ಟಿಒ ರಾಮಕೃಷ್ಣ ಐಯ್ಯಂಗಾರ್ ಮಾತನಾಡಿ, ಮೈಸೂರಿನಲ್ಲಿ ಸಂಚರಿಸುವ ಆಟೋಗಳಲ್ಲಿ ಮೀಟರ್ ಅಳವಡಿಕೆ ತಪಾಸಣೆ ನಡೆಸಬೇಕಾದ ಕೆಲಸ ಅಳತೆ ಮತ್ತು ತೂಕದ ಇಲಾಖೆಗೆ ಸೇರಿದ್ದು. ಆದರೆ ಕೇರಳ ನೋಂದಣಿಯ ಆಟೋಗಳು ಮೈಸೂರಿನಲ್ಲಿ ಸಂಚರಿಸುತ್ತಿವೆ. ವಾಹನ ಕಾಯ್ದೆ ಅನ್ವಯ ಅವು ಸ್ಥಳೀಯವಾಗಿ ನೋಂದಣಿ ಆಗಿರುತ್ತದೆ ಎಂದು ವಿವರಿಸಿದರು.
ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮಾತನಾಡಿ, ಮೈಸೂರಿನಲ್ಲಿ ಇತ್ತೀಚೆಗೆ ಸಂಚಾರಿ ನಿಯಮಗಳನ್ನು ಬಿಗಿಗೊಳಿಸಲಾಗಿದೆ. ಹೆಲ್ಮೆಟ್ ಕಡ್ಡಾಯಗೊಳಿಸಿ ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಸಂಚಾರ ಅಪಘಾತ ತಡೆಗಟ್ಟಲು ಬೆಂಗಳೂರಿನಲ್ಲಿ ಇರುವಂತೆ ಟ್ರಾಫಿಕ್ ಟಾಸ್ಕ್ ಫೋರ್ಸ್ ಬೇಕು. ಅಲ್ಲದೆ ಆರ್‌ಟಿಒ, ಕೆಸ್ಸಾರ್ಟಿಸಿ, ಪಾಲಿಕೆ ಮತ್ತು ಪೊಲೀಸ್ ನಡುವೆ ಸಮನ್ವಯತೆ ಇರಬೇಕು ಎಂದರು.
ಗ್ರಾಹಕರ ಪರಿಷತ್ ಅಧ್ಯಕ್ಷ ಆರ್. ಚಂದ್ರಪ್ರಕಾಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.