ದೊಡ್ಡಹೆಜ್ಜೂರು: ರಾಮಾಂಜನೇಯ ಜಾತ್ರೆ
ಹುಣಸೂರು: ಇತಿಹಾಸ ಪ್ರಸಿದ್ಧ ದೊಡ್ಡಹೆಜ್ಜೂರು ಶ್ರೀ ರಾಮಾಂಜನೇಯ ಸ್ವಾಮಿಯ ಜಾತ್ರೆಯು ಸಾಂಪ್ರದಾಯಿಕವಾಗಿ ಸಂಕ್ರಾಂತಿ ಹಬ್ಬದ ಮಾರನೇ ದಿನ ರಥೋತ್ಸವ ಆರಂಭವಾಗಿ, ನಾಲ್ಕು ದಿನಗಳು ನಡೆಯಲಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಲಕ್ಷ್ಮಣತೀರ್ಥ ನದಿ ಬಳಿ ಇರುವ ಹನಗೋಡು ಸಮೀಪದ ದೊಡ್ಡಹೆಜ್ಜೂರಿನಲ್ಲಿ ವಿರಾಜಮಾನನಾಗಿರುವ ಶ್ರೀ ರಾಮಾಂಜನೇಯಸ್ವಾಮಿಯ ರಥೋತ್ಸವಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಭಕ್ತಾದಿಗಳು ಭಾಗವಹಿಸುತ್ತಾರೆ.
ದೊಡ್ಡಹೆಜ್ಜೂರು ಗ್ರಾಮವು ಈ ಹಿಂದೆ ಸಂಪೂರ್ಣ ದಟ್ಟ ಅರಣ್ಯ ಪ್ರದೇಶದಲ್ಲಿತ್ತು. ಆಗ ಪ್ಲೇಗಿನಿಂದ ಭೀತಿಗೊಂಡ ಜನ ಗ್ರಾಮ ತೊರೆದು ಎಲ್ಲೆಂದರಲ್ಲಿ ವಾಸಿಸತೊಡಗಿದರು. ಈಗಿರುವ ದೇವಾಲಯದ ಸ್ಥಳದಲ್ಲಿ ದೊಡ್ಡ ಪೊದೆಯೊಳಗೆ ಹಸುವೊಂದು ನಿತ್ಯ ಹಾಲಿನ ಅಭಿಷೇಕ ಮಾಡುತ್ತಿತ್ತು ಎಂಬ ಪ್ರತೀತಿ ಇದೆ. ಈ ಬಗ್ಗೆ ಕುತೂಹಲದಿಂದ ಜನ ವೀಕ್ಷಿಸಿದಾಗ ಸ್ಥಳದಲ್ಲೇ ಆಂಜನೇಯನ ವಿಗ್ರಹ ಗೋಚರಿಸಿದೆ. ಆಗ ಗ್ರಾಮದ ಜನತೆ ಅಲ್ಲಿಯೇ ದೇವಾಲಯ ನಿರ್ಮಿಸಿ, ಪೂಜೆ ಆರಂಭಿಸಿದರು. ಈಗ್ಗೆ 52 ವರ್ಷಗಳ ಹಿಂದಷ್ಟೆ ರಾಮ, ಸೀತೆ, ಲಕ್ಷ್ಮಣರ ವಿಗ್ರಹವನ್ನು ದೇವಾಲಯದಲ್ಲಿ ಸ್ಥಾಪಿಸಲಾಗಿದ್ದು, ನಂತರ ರಥೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಜಾತ್ರೆ ಮಾಡಲು ಜವಾಬ್ದಾರಿ: ಈ ದೇವಾಲಯದ ಸುತ್ತಮುತ್ತಲಿನ 16 ಹಳ್ಳಿಗಳು ಸೇರಿದ್ದು, ಜಾತ್ರೆ ನಡೆಸಲು ಗ್ರಾಮಗಳು ಒಂದೊಂದು ಜವಾಬ್ದಾರಿ ಹೊರುವುದು ಇಲ್ಲಿನ ವಿಶೇಷ. ಭರತವಾಡಿ, ವೀರತ್ತಯ್ಯನಕೊಪ್ಪಲಿನವರು ಸುಣ್ಣಬಣ್ಣ ಬಳಿದು ದೇವಾಲಯ ಅಣಿಗೊಳಿಸುವುದು, ಮುದುಗನೂರಿನವರು ರಥ ನಿಯಂತ್ರಣಕ್ಕೆ ಗೊದಮ ತಯಾರು ಮಾಡುವುದು, ಹಿಂಡುಗುಡ್ಲಿನವರು ರಥ ಎಳೆಯುವ ಹಗ್ಗದ ಜವಾಬ್ದಾರಿ, ದಾಸನಪುರದವರು ಹೂವಿನ ಚಪ್ಪರ ನಿರ್ಮಿಸುವುದು, ದೊಡ್ಡಹೆಜ್ಜೂರಿನವರು ಜಾತ್ರಾ ಉಸ್ತುವಾರಿ ನೋಡಿಕೊಳ್ಳುವುದು, ಹನಗೋಡು, ಕಿರಂಗೂರು, ಹರಳಹಳ್ಳಿ, ಚಿಕ್ಕಹೆಜ್ಜೂರು, ಅಬ್ಬೂರು, ನೇಗತ್ತೂರು, ಕೋಣನಹೊಸಹಳ್ಳಿ ಸೇರಿದಂತೆ ಇತರೆ ಜವಾಬ್ದಾರಿ ನೋಡಿಕೊಂಡು ಜಾತ್ರೆಗೆ ಸಹಕಾರ ನೀಡಲಿದೆ.
ಎಚ್.ಡಿ. ಕೋಟೆ ಹಾಗೂ ಹುಣಸೂರು ತಾಲೂಕಿನ ಜನರು ಆಗಮಿಸಿ, ಮೂರ್ನಾಲ್ಕು ದಿನ ಇದ್ದು, ಪರ ನಡೆಸಿ ಮುಡಿ ಕೊಡುತ್ತಾರೆ. ರಥೋತ್ಸವದ ಮಾರನೇ ದಿನ ರಾಸುಗಳನ್ನು ದೇವಾಲಯದ ಸುತ್ತ ಮೆರವಣಿಗೆ, ಪಂಜಿನ ಸೇವೆ ನಡೆಸಿ ರೋಗ ರುಜಿನಗಳು ಬಾರದಂತೆ ಪ್ರಾರ್ಥಿಸುತ್ತಾರೆ.
ಹನಗೋಡು ಹೋಬಳಿಯಲ್ಲಿ 35ಕ್ಕೂ ಹೆಚ್ಚು ಹಾಡಿಗಳಲ್ಲಿ ಗಿರಿಜನರೇ ನೆಲೆಸಿರುವುದರಿಂದ, ಸುತ್ತಮುತ್ತಲಿನ ಹಾಡಿಗಳ ಜನರು ಈ ಹಿಂದೆ ರಥೋತ್ಸವದಂದು ಮದುವೆಯಾಗಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದರು. ಈಗಲೂ ಗಿರಿಜನರೇ ಅತಿ ಹೆಚ್ಚಾಗಿ ಆಗಮಿಸುತ್ತಿರುವುದು ಜಾತ್ರೆಗೆ ಮೆರಗು ತಂದಿದೆ.
ಜಾತ್ರೆ ಸಮಿತಿಯವರು ಜಾತ್ರಾ ಮಾಳವನ್ನು ಸಿಂಗರಿಸಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಕಟಕಟೆ ನಿಲ್ಲಿಸಿದ್ದಾರೆ. ಇಡೀ ಜಾತ್ರೆಗೆ ಸಿಹಿ ತಿಂಡಿಗಳ ಅಂಗಡಿಯೇ ದೊಡ್ಡ ಕಳೆ ತರುತ್ತಿದ್ದು, ಜಾತ್ರೆಗೆ ಬರುವ ಬಹುತೇಕ ಭಕ್ತಾದಿಗಳು ಮನೆಯಿಂದಲೇ ಬುತ್ತಿ ತಂದು ಲಕ್ಷ್ಮಣತೀರ್ಥ ನದಿ ದಂಡೆಯಲ್ಲಿ ಸಾಮೂಹಿಕ ಭೋಜನದಲ್ಲಿ ಭಾಗವಹಿಸುವುದು ವಿಶೇಷ.
ಜಾತ್ರೆಯ ಮಾಹಿತಿ
ದೊಡ್ಡಹೆಜ್ಜೂರು ಶ್ರೀ ಆಂಜನೇಯ ಸ್ವಾಮಿ ಜಾತ್ರೆ ಜ.15 ರಿಂದ 18ರವರೆಗೆ ನಡೆಯಲಿದೆ. ಜ.15ರ ಸಂಜೆ 4.30ಕ್ಕೆ ಕಳಸ ಪೂಜೆ, ರಾತ್ರಿ 8ಕ್ಕೆ ಗರುಡ ಪೂಜೆ. ಜ.16ರ ಮಧ್ಯಾಹ್ನ 12.30 ರಿಂದ 1.30ರೊಳಗೆ ರಥೋತ್ಸವ ಹಾಗೂ ವಿಶೇಷ ಪೂಜೆಗಳು ನೆರವೇರಲಿವೆ. ಜ.17ರ ಸಂಜೆ ಪಂಜಿನ ಮೆರವಣಿಗೆ ಹಾಗೂ 7.30ಕ್ಕೆ ಪಾರುಪಟೆ ಉತ್ಸವ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜ. 18ರಂದು ವಿಶೇಷ ಪೂಜೆಗಳು ಹಾಗೂ ಸಂಜೆ 7.30ಕ್ಕೆ ಲಕ್ಷ್ಮಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.
ಬರುವ ಮಾರ್ಗ ವ್ಯವಸ್ಥೆ
ಹುಣಸೂರಿನಿಂದ ಹನಗೋಡು ಮಾರ್ಗ ಭಾರತವಾಡಿ ಹಾಗೂ ಪಾಲ ಪೆಂಜಳ್ಳಿ ಹರಳಹಳ್ಳಿ ಮಾರ್ಗ ಬರಬಹುದು. ಜಾತ್ರೆಗೆ ಸಾರಿಗೆ ಸಂಸ್ಥೆಯು ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿರುತ್ತದೆ. ಭಕ್ತರು ಸದುಪಯೋಗ ಪಡಿಸಿಕೊಳ್ಳುವಂತೆ ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜು ಕೋರಿದ್ದಾರೆ.
-ಧರ್ಮಾಪುರ ನಾರಾಯಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

