ದೊಡ್ಡಹೆಜ್ಜೂರಲ್ಲಿ ಕಾಡಾನೆಗಳ ಹಾವಳಿ
ಕ.ಪ್ರ. ವಾರ್ತೆ, ಹುಣಸೂರು, ಜ.15
ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ನಾಡಿಗೆ ಬಂದ ಕಾಡಾನೆಗಳು, ಹನಗೋಡು ಹೋಬಳಿಯ ದಾಸನಪುರ, ಹಿಂಡಗೊಡ್ಲು, ದೊಡ್ಡಹೆಜ್ಜೂರು, ಭರತವಾಡಿ ವೀರತಯ್ಯನ ಕೊಪ್ಪಲು ಗ್ರಾಮಗಳಲ್ಲಿ ಓಡಾಡಿ ಅಪಾರ ಬೆಳೆ ನಷ್ಟ ಉಂಟು ಮಾಡಿವೆ.
ಆನೆಗಳನ್ನು ಕಾಡಿಗಟ್ಟುವ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮೇಲೆ ಹಾರಿಸಿದ ಗುಂಡೇಟಿಗೆ ಆನೆಗಳ ಹಿಂದೆ ಬರುತ್ತಿದ ಇಬ್ಬರಿಗೆ ತಗುಲಿದ್ದು, ಒಬ್ಬ ಮೈಸೂರು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದಾನೆ. ಮತ್ತೊಬ್ಬ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾನೆ.
ಆನೆಗಳ ಕಾಲಿಗೂ ಸಹ ಗಾಯವಾಗಿದೆ. ಬುಧವಾರ ಬೆಳಗ್ಗೆ 6ಕ್ಕೆ ದಾಸನಪುರ-ಹಿಂಡಗೊಡ್ಲು ಮಧ್ಯದ ಗದ್ದೆಹಳ್ಳದಲ್ಲಿ ಕಾಣಿಸಿಕೊಂಡ ಎರಡು ಕಾಡಾನೆಗಳನ್ನು ಕಂಡ ಗ್ರಾಮಸ್ಥರು ಕಾಡಿಗಟ್ಟಲು ಓಡಿಸುತ್ತಿದ್ದಂತೆ ಪಕ್ಕದ ದೊಡ್ಡಹೆಜ್ಜೂರಿನ ರಾಮೇಗೌಡ, ಶಿವಲಿಂಗೇಗೌಡ, ಸಂಪತ್ ಅವರಿಗೆ ಸೇರಿದ ಕಬ್ಬಿನ ತೋಟಕ್ಕೆ ಸೇರಿಕೊಂಡವು.
ಆನೆಗಳನ್ನು ಓಡಿಸಲು ರೈತರು- ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿದಾಗ ಹೊರಬಂದ ಆನೆಗಳು, ದೊಡ್ಡಹೆಜ್ಜೂರಿನ ಕೆರೆ ಮೂಲಕ ವೀರತಯ್ಯನ ಕೊಪ್ಪಲು ದಾಟಿ ಭರತವಾಡಿ ಕಡೆಗೆ ಬಂದ ಆನೆಗಳನ್ನು ಕಾಡಿಗಟ್ಟಲು ಯತ್ನಿಸುವ ವೇಳೆ ನೆರೆದಿದ್ದ ನೂರಾರು ಮಂದಿ ಸುತ್ತುವರೆದಾಗ ಆನೆಗಳು ಕಾಡಿಗೆ ಹೋಗಲಾರದೆ ಕಲ್ಲೇಟು ತಿಂದವು.
ಜನಗಳ ಅಡ್ಡಿ: ಆನೆಗಳನ್ನು ಕಾಡಿನ ಕಡೆಗೆ ಓಡಿಸುತ್ತಿದ್ದರೆ, ಇತ್ತ ನೂರಾರು ಮಂದಿ ದನಗಳನ್ನು ಅಟ್ಟುವ ರೀತಿಯಲ್ಲಿ ಆನೆಗಳಿಗೆ ಕಲ್ಲು ಹೊಡೆಯುತ್ತ ಕೇಕೆ ಹಾಕುತ್ತಾ, ಪಟಾಕಿ ಸಿಡಿಸಿ ಹಿಂಬಾಲಿಸಿಕೊಂಡು ಬಂದರು. ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ರಾಜಪ್ಪ ಹಾಗೂ ಸಿಬ್ಬಂದಿ ಎಷ್ಟೇ ಮನವಿ ಮಾಡಿಕೊಂಡರೂ ಜನ ಕೇಳದೆ ಆನೆಗಳನ್ನು ಅತ್ತಿಂದಿತ್ತ ಓಡಾಡಿಸಿ ಕಾರ್ಯಾಚರಣೆಗೆ ಅಡ್ಡಿಯಾದರು.
ಆನೆಗಳನ್ನು ಕಾಡಿಗಟ್ಟುವ ಕಾರ್ಯದಲ್ಲಿ ನಿರತವಾಗಿದ್ದ ಅರಣ್ಯ ಸಿಬ್ಬಂದಿಯ ವಾಹನವನ್ನೇ ಅಟ್ಟಿಸಿಕೊಂಡು ಬಂದ ವೇಳೆ ರಕ್ಷಣೆಗಾಗಿ ಆನೆಗಳಿಗೆ ಬೆದರಿಕೆ ಗುಂಡು ಹಾರಿಸಿದರು. ಈ ಗುಂಡು ಆನೆಯ ಹಿಂದೆ ಬರುತ್ತಿದ್ದ ಭರತವಾಡಿ ಚಂದ್ರೇಗೌಡರ ಪುತ್ರ ಆನಂದ ಹಾಗೂ ಅದೇ ಗ್ರಾಮದ ಸುರೇಶನಿಗೂ ತಗುಲಿತು. ತೀವ್ರ ನಿತ್ರಾಣಗೊಂಡ ಆನಂದನನ್ನು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳು ಸುರೇಶ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರ ಕಾಟದಿಂದ ಕಾಡಿಗಟ್ಟಲಾಗದ ಆನೆಗಳನ್ನು ರಾತ್ರಿ ಕಾಡಿಗೆ ಸೇರಿಸಲಾಗುವುದೆಂದು ವಲಯ ಅರಣ್ಯಾಧಿಕಾರಿ ಎನ್.ಪಿ. ರಾಜಪ್ಪ ತಿಳಿಸಿದರು.
ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸುತ್ತುವರಿದ ಜನರಿಂದ ಕಲ್ಲೇಟು ತಿಂದು ಘಾಸಿಗೊಂಡ ಆನೆಗಳು, ಅರಣ್ಯ ಸಿಬ್ಬಂದಿಯತ್ತ ನುಗ್ಗಿ ಬಂದಿದ್ದರಿಂದ ಅನಿವಾರ್ಯವಾಗಿ ಚರೆ ಗುಂಡು ಹಾರಿಸಲಾಗಿದೆ. ಆಗ ಆನೆ ಹಿಂದೆ ಇದ್ದವರಿಗೆ ಚರೆ ಗುಂಡು ತಗುಲಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾಡಾನೆಗಳು ಹೊರ ಬಂದಾಗ ಜನರು ಇಲಾಖೆಯೊಂದಿಗೆ ಸೇರಿ ಸಹಕಾರ ನೀಡಿದ್ದಲ್ಲಿ ಆನೆಗಳನ್ನು ಕಾಡಿಗಟ್ಟಲು ಸಾಧ್ಯ ಎಂದು ನಾಗರಹೊಳೆ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಗೋಕುಲ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

