ಗಂಗಾಮತಸ್ಥರ ಸಂಘದ ಪದಾಧಿಕಾರಿಗಳ ಆಯ್ಕೆ
ಮೈಸೂರು: ಜಿಲ್ಲಾ ಗಂಗಾ ಮತಸ್ಥರ ಸಂಘದ ವಿಶೇಷ ಸಭೆಯನ್ನು ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸಮಾಜದ ಸಂಘಟನೆಗಾಗಿ ಮತ್ತು ಸಮಾಜದ ಖಾಲಿ ನಿವೇಶನದಲ್ಲಿ ಬಡ ಮಕ್ಕಳಿಗಾಗಿ ವಿದ್ಯಾರ್ಥಿನಿಲಯದ ಕಟ್ಟಡ ನಿರ್ಮಿಸುವ ಸಂಬಂಧ ಸುದೀರ್ಘ ಚರ್ಚೆ ನಡೆಯಿತು. ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರಾಗಿ ಪಿ.ಶ್ರೀನಿವಾಸ್, ಅಧ್ಯಕ್ಷರಾಗಿ ಪ್ರೊ.ವಸಂತಮ್ಮ ನೀಲಿಸಿದ್ದಯ್ಯ, ಉಪಾಧ್ಯಕ್ಷರಾಗಿ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಪಿ. ಮಾಲತೇಶ, ಖಜಾಂಚಿಯಾಗಿ ನಾರಾಯಣ, ಸಂಘಟನಾ ಕಾರ್ಯದರ್ಶಿಯಾಗಿ ಶಿವಮಲ್ಲು ಆಯ್ಕೆಯಾದರು.
ಸಮಾಜದ ಮುಖಂಡ ಜೆ.ಶ್ರೀನಿವಾಸನ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಸಿ.ಪಿ. ಸಿದ್ಧಾಶ್ರಮ, ಡಾ.ಪೂರ್ಣಾನಂದ, ಮುಖಂಡರಾದ ಟಿ. ನಾಗರಾಜು, ಶ್ರೀನಿವಾಸ ಮಿತ್ರ, ಪ್ರೊ.ನೀಲಿಸಿದ್ದಯ್ಯ, ಟಿ.ಸಿ. ಹೊನ್ನಪ್ಪ, ಬೋರಪ್ಪ, ಎಂ.ಸಿ. ಮಹದೇವಯ್ಯ, ಮಾದಯ್ಯ, ವೆಂಕಟೇಶ್, ಮಾರನಾಯಕ, ಮಹದೇವ, ಎಂ.ಡಿ. ಕುಮಾರ್, ರಾಮಚಂದ್ರಪ್ಪ, ಸುನಂದಮ್ಮ ಇದ್ದರು.
ಸದ್ಗುಣಿಗಳಾಗಲು ಅವರಲ್ಲಿನ ವಿವೇಕ ಜಾಗೃತಗೊಳ್ಳಬೇಕು
ಮೈಸೂರು: ಮಕ್ಕಳು ಸದ್ಗುಣರಾಗಬೇಕಿದ್ದರೆ ಅವರಲ್ಲಿನ ವಿವೇಕ ಜಾಗೃತಗೊಳ್ಳಬೇಕು ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಹೇಳಿದರು. ಲಕ್ಷ್ಮೀಪುರಂನ ಗೋಪಾಲಸ್ವಾಮಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯು ಸಂಸ್ಥೆ ಆವರಣದ ಸ್ವಾಮಿ ವಿವೇಕಾನಂದ ರಂಗಮಂಟಪದಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ- 2014 ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ವಿದ್ಯಾವಂತರೆ ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗುತ್ತಿದ್ದಾರೆ. ಶಿಕ್ಷಿತರು ಅನಕ್ಷರಸ್ಥರಿಗಿಂತ ಹೆಚ್ಚು ಸ್ವಾರ್ಥಿಗಳಾಗಿದ್ದಾರೆ. ಮಕ್ಕಳು ವಿವೇಚನಾ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.ದಕ್ಷಿಣ ವಲಯ ಬಿಇಒ ಬಿ.ಎನ್. ಶಿವರಾಮೇಗೌಡ, ಎನ್.ಸಿ. ಶಲ್ಲಪುಳ್ಳೆ, ಎನ್.ಆರ್. ಮಂಜುನಾಥ್, ಡಾ.ಡಿ.ಎಸ್. ಗುರು, ಡಾ.ಟಿ. ವಾಸುದೇವ್ ಮುಖ್ಯ ಅತಿಥಿಗಳಾಗಿದ್ದರು.
ಪತ್ರಿಕೆಗಳು ಸಕಾರಾತ್ಮಕ ಸುದ್ದಿಗೆ ಆದ್ಯತೆ ನೀಡಲಿ: ಎಂ.ಎ. ಸಲೀಂ
ಮೈಸೂರು: ಪತ್ರಿಕೆಗಳಲ್ಲಿ ಸಕಾರಾತ್ಮಕ ಸುದ್ದಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು.
ಜೆಎಲ್ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೀಡಿಯಾ ಮಾಹಿತಿ ಕನ್ನಡ ಸಂಜೆ ದಿನಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ರೋಚಕತೆ, ಭ್ರಷ್ಟಾಚಾರ, ಕೊಲೆ, ಸುಲಿಗೆ ಮುಂತಾದ ಸುದ್ದಿಗಳಿಗಿಂತ ಹೆಚ್ಚಾಗಿ ಸಕಾರಾತ್ಮಕ ಪರಿಣಾಮ ಬೀರುವ ಸುದ್ದಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕೇವಲ ರೋಚಕತೆ ಸುದ್ದಿಗಳು ಕ್ಷಣಿಕವಷ್ಟೆ. ಸಕಾರಾತ್ಮಕ ಸುದ್ದಿಗಳನ್ನು ಓದುವ ವರ್ಗವೂ ಒಂದಿದೆ ಎಂಬುದನ್ನು ಮರೆಯಬಾರದು ಎಂದರು.
ಬದ್ಧತೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಯಶಸ್ಸು ಸಾಧ್ಯ. ಎಂದು ಅವರು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ದೀಪಕ್, ಸಮಾಜ ಸೇವಕ ಕೆ.ರಘುರಾಂ, ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ವಿದ್ಯಾರಣ್ಯ ಆಸ್ಪತ್ರೆಯ ಡಾ.ಮಂಜುನಾಥ್, ಮೀಡಿಯಾ ಮಾಹಿತಿಯ ನಂಜುಂಡಸ್ವಾಮಿ ಇದ್ದರು.
ಹೆಬ್ಬಾವು ದತ್ತು ಸ್ವೀಕಾರ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೈಸೂರಿನ ಪಿ. ಶ್ರೀಕಂಠಪ್ರಸಾದ್ ಅವರು ಹೆಬ್ಬಾವನ್ನು ದತ್ತು ಪಡೆದಿದ್ದಾರೆ. ಕೊಯಮತ್ತೂರಿನ ಮೃದುಲಾ ಅಶ್ವಿನ್ ಅವರು ಕಂದು ಗೂಬೆಯನ್ನೂ, ಮಹಾರಾಷ್ಟ್ರದ ಕೊಲ್ಲಾಪುರದ ರಸಿಯ ಶೇಖರ್ ಪದಾಲ್ಕರ್ ಕಾಕ್ಟೈಲ್ನ್ನು, ಮೈಸೂರಿನ ಪರಿಣಿತ ಮತ್ತು ರೋಹನ್ ಅವರು ಲವ್ ಬರ್ಡ್ಗಳನ್ನು ದತ್ತು ಸ್ವೀಕರಿಸಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
ಪತ್ರಕರ್ತರಿಗೆ ದಂತ ತಪಾಸಣೆ
ಮನುಷ್ಯನ ದೇಹದ ಅಂಗಗಳಲ್ಲಿ ಒಂದಾದ ದಂತದ ಬಗ್ಗೆ ನಿರ್ಲಕ್ಷ್ಯೆ ಸಲ್ಲದು ಎಂದು ಜೆಎಸ್ಎಸ್ ದಂತ ಕಾಲೇಜಿನ ಪ್ರಾಂಶುಪಾಲ ಡಾ.ನಂದಲಾಲ್ ಹೇಳಿದರು. ಜಿಲ್ಲಾ ಪತ್ರಕರ್ತರ ಸಂಘವು, ಜೆಎಸ್ಎಸ್ ದಂತ ವೈದ್ಯಕೀಯ ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಶುಕ್ರವಾರ ಆಯೋಜಿಸಿದ್ದ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ದಂತ ಚಿಕಿತ್ಸೆಗೆ ಒಳಗಾದರೆ ಇತರೆ ಅನೇಕ ಕಾಯಿಲೆಗಳು ಪತ್ತೆ ಆಗುತ್ತದೆ ಎಂದರು. 50ಕ್ಕೂ ಹೆಚ್ಚು ಮಂದಿಗೆ ದಂತ ತಪಾಸಣೆ ಮಾಡಲಾಯಿತು. ಜೆಎಸ್ಎಸ್ ಸಾರ್ವಜನಿಕ ಆರೋಗ್ಯ ಕೇಂದ್ರದ ಮುಖ್ಯಸ್ಥೆ ಡಾ.ಸುನೀತಾ, ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್ ಇದ್ದರು.
ವ್ಯಕಿತ್ವ ವಿಕಸನ ತರಬೇತಿ
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ವತಿಯಿಂದ ಸ್ಟಡಿ ಸರ್ಕಲ್ ಯೋಜನೆಯಡಿ ನುರಿತ ಉಪನ್ಯಾಸಕರಿಂದ ಜ.20 ರಿಂದ 29 ರವರೆಗೆ ಮಧ್ಯಾಹ್ನ 1.30 ರಿಂದ ಸಂಜೆ 5.30ರವರೆಗೆ ವ್ಯಕಿತ್ವ ವಿಕಸನ ತರಬೇತಿ ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕರ್ನಾಟಕ ಗೃಹ ಮಂಡಳಿ ಕಟ್ಟಡ, ಮೊದಲನೆ ಮಹಡಿ, ಒಂದನೇ ಕ್ರಾಸ್, ಸರಸ್ವತಿಪುರಂ, ಮೈಸೂರು. ಈ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ಮಾಹಿತಿಗಾಗಿ ದೂ. 2489972 ಸಂಪರ್ಕಿಸುವುದು.
ಇವರ ಪತ್ತೆ ಗೊತ್ತೆ?
ಎನ್.ಆರ್. ಮೊಹಲ್ಲಾ ಬಜಾರ್ ರಸ್ತೆ ನಿವಾಸಿ ನಂದಕುಮಾರ್ ಕಾಣೆಯಾಗಿದ್ದಾರೆ. ಬಜಾರ್ರಸ್ತೆಯ ನಂ. 4444 ನಿವಾಸಿ ಸತ್ಯಮೂರ್ತಿ ಅವರ ಸಹೋದರ ನಂದಕುಮಾರ್ (45) ಕಾಣೆಯಾದವರು. 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ, ಕನ್ನಡ ಮತ್ತು ತಮಿಳು ಮಾತನಾಡುವ ಇವರು ಸುಳಿವು ದೊರೆತರೆ ಕೂಡಲೆ ಎನ್.ಆರ್. ಮೊಹಲ್ಲಾ ಪೊಲೀಸ್ ಠಾಣೆ ದೂ. 0821- 2418112, 2148312 ಸಂಪರ್ಕಿಸಬಹುದು.
ಶಿಕ್ಷಿತರು ಹೆಚ್ಚಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ
ಕೆ.ಆರ್. ನಗರ: ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಇದರಿಂದ ಭವಿಷ್ಯದಲ್ಲಿ ಶಿಕ್ಷಿತರ ಸಂಖ್ಯೆ ಹೆಚ್ಚಾಗಿ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ಸರ್ಕಾರಿ ಪ್ರೌಡಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಅವರು, ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಹುದ್ದೆ ಅಲಂಕರಿಸಿದ್ದು, ಖಾಸಗಿ ಶಾಲೆಗಳ ವ್ಯಾಮೋಹವನ್ನು ಎಲ್ಲರೂ ಬಿಡಬೇಕು ಎಂದು ತಿಳಿಸಿದರು.
ನಿವೃತ್ತ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ಗೌಡ, ಎಪಿಎಂಸಿ ಅಧ್ಯಕ್ಷ ಎಂ. ರಮೇಶ್, ಮುಖಂಡ ಸತೀಶ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ಮಹದೇವ್, ಮಾಜಿ ಅಧ್ಯಕ್ಷೆ ಪ್ರೇಮಮ್ಮ ರಾಮೇಗೌಡ, ತಾಪಂ ಸದಸ್ಯೆ ರಮ್ಯಸತೀಶ್, ಮುಖ್ಯ ಶಿಕ್ಷಕ ಸಿದ್ದರಾಜು, ಸಿಆರ್ಪಿ ಕೃಷ್ಣಸ್ವಾಮಿ, ಎಸ್ಡಿಎಂಸಿ ಅಧ್ಯಕ್ಷ ರಮೇಶ್, ಬಲರಾಮೇಗೌಡ, ವೀರಭದ್ರ, ಆನಂದರಾಜು, ಬಲರಾಮೇಗೌಡ, ಚಿಕ್ಕೇಗೌಡ, ಶಂಕರದೇವ್, ಶಿಕ್ಷಕರಾದ ಮಂಜೇಗೌಡ, ರಾಜೇಗೌಡ, ಗೋವಿಂದ, ಬೋರಯ್ಯ, ರೇಖಾ, ಕನ್ಯಕುಮಾರಿ, ಕುಮಾರ್ ಇದ್ದರು.
ವಿಜ್ಞಾನ ಪ್ರತಿಭಾ ಪರೀಕ್ಷೆ: ಟಿ.ಎಂ. ಸಚಿನ್ಗೆ ಪ್ರಥಮ
ಕೆ.ಆರ್. ನಗರ: ತಾಲೂಕಿನ ಮಾವತ್ತೂರು ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಿಜ್ಞಾನ ಪ್ರತಿಭಾ ಪರೀಕ್ಷೆಯಲ್ಲಿ ಪಟ್ಟಣದ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿ ಟಿ.ಎಂ. ಸಚಿನ್ ಪ್ರಥಮ ಸ್ಥಾನ ಗಳಿಸಿದ್ದಾನೆ. ಈ ಪರೀಕ್ಷೆ ಎರಡು ಹಂತಗಳಲ್ಲಿ ನಡೆದಿದ್ದು, ಮೊದಲನೆಯದು ವಿಜ್ಞಾನ ಪ್ರತಿಭಾ ಪರೀಕ್ಷೆ ಹಾಗೂ ಎರಡನೆಯದು ವಿಜ್ಞಾನ ರಸಪ್ರಶ್ನೆ ಸ್ಫರ್ಧೆ. ಈ ಎರಡೂ ಸ್ಫರ್ಧೆಗಳಲ್ಲೂ ಸಚಿನ್ ಭಾಗವಹಿಸಿ ಪ್ರತಿಭಾ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾನೆ. ವಿದ್ಯಾರ್ಥಿಯ ಸಾಧನೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬುದ್ದಿಸಾಗರ್, ಕಾರ್ಯದರ್ಶಿ ಕೆ.ಸಿ. ಲೋಕೇಶ್, ಖಜಾಂಚಿ ಎಚ್.ಸಿ. ಮಹದೇವಯ್ಯ, ವ್ಯವಸ್ಥಾಪಕ ಎಸ್. ಸದಾಶಿವ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

