ಮೈಸೂರು

ಕೊಳಚೆ ನೀರು ನದಿ ಸೇರದಂತೆ ಕ್ರಮ

Published On :

ಹುಣಸೂರು: ಹುಣಸೂರು ಪಟ್ಟಣದ ಕೊಳಚೆ ನೀರು ಲಕ್ಷ್ಮಣತೀರ್ಥ ನದಿಗೆ ಸೇರದಂತೆ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ 50 ಕೋಟಿ ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಿ.ಬಿ. ಲಿಂಗಣ್ಣ ಹೇಳಿದರು.
ಎಇಇ ಕೆ. ಕುಬೇರಪ್ಪ ಅವರೊಂದಿಗೆ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ದಿಢೀರ್ ಭೇಟಿ ನೀಡಿ ಸ್ವಚ್ಛತೆ, ನೀರು ಸರಬರಾಜು ಕ್ರಮ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ನದಿಗೆ ಪಟ್ಟಣದ ಕೊಳಚೆ ನೀರು ಸೇರುತ್ತಿರುವ ಬಗ್ಗೆ ಲೋಕ್ ಅದಾಲತ್‌ನಲ್ಲಿ ದೂರು ಸಲ್ಲಿಕೆಯಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಯೋಜನೆ ಕಾಮಗಾರಿ ಆರಂಭವಾಗುವವರೆಗೆ ಈಗ ನದಿಗೆ ಸೇರುತ್ತಿರುವ ಕೊಳಚೆ ನೀರನ್ನು ಶುದ್ಧೀಕರಿಸಿ ಬಿಡುವ ಸಲುವಾಗಿ ಕಲ್ಕುಣಿಕೆ ಹೊಳೆ ಬೀದಿ, ಶಬ್ಬೀರ್ ನಗರ, ರಹಮತ್ ಮೊಹಲ್ಲಾ, ಚಿಕ್ಕ ಹುಣಸೂರುಗಳಲ್ಲಿ ಸಣ್ಣ ಪ್ರಮಾಣದ ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಶುದ್ಧೀಕರಿಸಿದ ನೀರನ್ನು ನದಿಗೆ ಬಿಡಲಾಗುವುದು ಎಂದು ಅವರು ತಿಳಿಸಿದರು.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹರಿಯುವ ಪಂಚವಟಿ ನದಿಗೆ ಹರಿಯುತ್ತಿರುವ ಕೊಳಚೆ ನೀರು ತಡೆಗಟ್ಟಲು ನದಿಯ ಎರಡು ಕಡೆ ಪ್ರತ್ಯೇಕವಾಗಿ ಕಾಲುವೆ ನಿರ್ಮಿಸಿರುವ ಮಾದರಿಯಲ್ಲೆ ಇಲ್ಲೂ ಕೂಡ ಪ್ರತ್ಯೇಕವಾಗಿ ಕೊಳಚೆ ನೀರನ್ನು ಹರಿಸುವ ಯೋಜನೆ ರೂಪಿಸಲಾಗಿದೆ. ಎರಡನೆ ಹಂತದಲ್ಲಿ ಒಳಚರಂಡಿ ವ್ಯವಸ್ಥೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಟ್ಯಾಂಕರ್ ಮೂಲಕ ನೀರು: ಮಂಜುನಾಥ ಬಡಾವಣೆಯ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದಾಗ ಮಾಹಿತಿ ಪಡೆದ ಅವರು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವವರೆಗೆ ಕಾವೇರಿ ನೀರನ್ನು ಟ್ಯಾಂಕರ್ ಮೂಲಕ ನಿತ್ಯ ಪೂರೈಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಮಧ್ಯಭಾಗದಲ್ಲಿರುವ ಪುರಿಭಟ್ಟಿಯಿಂದ ಪರಿಸರಕ್ಕೆ ಧಕ್ಕೆಯಾಗಿದೆ ಎಂದು ದೂರು ಬಂದಿದ್ದು, ಇವುಗಳನ್ನು ಪುರಸಭಾ ವ್ಯಾಪ್ತಿಗೆ ಸೇರಿದ ಭೂಮಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಪಟ್ಟಣದ ವಿವಿಧೆಡೆ ನಡೆಯುತ್ತಿರುವ ನಗರೋತ್ಥಾನ ಯೋಜನೆ ಕಾಮಗಾರಿಗಳನ್ನು ಶೀಘ್ರದಲ್ಲೆ ಮುಗಿಸುವಂತೆ ಎಂಜಿನೀಯರ್‌ಗಳಿಗೆ ಸೂಚಿಸಿದರು. ಹಳೆ ಸೆತುವೆ ಕೈಪಿಡಿ ಮೇಲೆ ಹಾಯ್ದು ಹೋಗುವ ಪೈಪ್‌ಲೈನ್‌ನಿಂದ ನೀರು ಹರಿದು ಹೋಗುತ್ತಿರುವುದರಿಂದ ಸೇತುವೆಗೆ ಧಕ್ಕೆ ಬಂದಿರುವ ಬಗ್ಗೆ ಗಮನ ಸೆಳೆದಾಗ ನೀರು ನಿಲ್ಲಿಸಲು ಕ್ರಮ ವಹಿಸಬೇಕೆಂದು ಪರಿಸರ ಎಂಜಿನಿಯರ್‌ಗೆ ಸೂಚಿಸಿದರು.
ಪಟ್ಟಣದ ಬಹುತೇಕ ಪ್ರತಿಷ್ಠಿತ ವ್ಯಕ್ತಿಗಳ ಲಕ್ಷಾಂತರ ರು. ಬಾಕಿ ಉಳಿಸಿಕೊಂಡಿದ್ದರೂ ವಸೂಲಿಗೆ ಕ್ರಮ ವಹಿಸದ ಪ್ರಶ್ನೆಗೆ, ತಕ್ಷಣವೇ ನೋಟಿಸ್ ನೀಡಿ ಬಾಕಿ ಹಣ ವಸೂಲಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಪಟ್ಟಣದ ಪಂಪ್‌ಹೌಸ್, ಮಂಜುನಾಥ ಬಡಾವಣೆ, ಗೋಕುಲ ಬಡಾವಣೆ, ಚಿಕ್ಕ ಹುಣಸೂರು ಕೆರೆ, ಕಾಲೇಜು ಆವರಣದಲ್ಲಿನ ಹಂದಿ ಸಾಕಾಣೆ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಿದ್ದರು. ಪರಿಸರ ಎಂಜಿನಿಯರ್ ರವಿಕುಮಾರ್, ಆರೋಗ್ಯಾಧಿಕಾರಿಗಳಾದ ಸತೀಶ್, ಹರೀಶ್, ವ್ಯವಸ್ಥಾಪಕ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.