ಮೈಸೂರು

ಕೆ.ಆರ್. ನಗರದಲ್ಲಿ ಸಂಚಾರ ಸಮಸ್ಯೆ; ದೂರು

Published On :

ಕೆ.ಆರ್. ನಗರ: ಪಟ್ಟಣದ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಿ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಮತ್ತು ವಾಹನ ಚಾಲಕರಿಗೆ ತೊಂದರೆಯಾಗಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಮುಖಂಡ ಹರ್ಷಕುಮಾರಗೌಡ ಆರೋಪಿಸಿದರು.
ಗ್ರಾಮಾಂತರ ಪ್ರದೇಶದಿಂದ ಬರುವ ವಾಹನ ಚಾಲಕರಿಗೆ ನೋ ಪಾರ್ಕಿಂಗ್ ನೆಪದಲ್ಲಿ ಪೊಲೀಸರು ಅನಗತ್ಯವಾಗಿ ದಂಡ ವಿಧಿಸುತ್ತಿದ್ದು, ಇದರಿಂದ ತೊಂದರೆಯಾಗಿದೆ. ಜತೆಗೆ ಪಾರ್ಕಿಂಗ್ ಸ್ಥಳವನ್ನೇ ನಿಗದಿ ಮಾಡದೆ ದಂಡ ವಿಧಿಸುವ ಕೆಲಸಕ್ಕೆ ಪೊಲೀಸರು ಮುಂದಾಗಿದ್ದು, ಇದು ನಿಯಮಬಾಹಿರ ಎಂದು ಅವರು ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಂಚಾರ ನಿಯಮ ಜಾರಿಗೆ ತರುವವರು ಯಾರು ಮತ್ತು ಜನರಿಗೆ ಸುಗಮ ಸಂಚಾರದ ಮಾರ್ಗದರ್ಶನ ನೀಡುವ ಇಲಾಖೆ ಯಾವುದು ಎಂದು ಪ್ರಶ್ನಿಸುವಂತಾಗಿದ್ದು, ಇಲ್ಲಿನ ಬಜಾರ್ ರಸ್ತೆ, ಗಿರಿ ಮೆಡಿಕಲ್ ರಸ್ತೆಯಲ್ಲಿ ಸಂಚಾರದ ಒತ್ತಡವಿದ್ದು, ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಆದರೂ ಯಾರೂ ಕೇಳುವವರೇ ಇಲ್ಲ ಎಂದು ತಿಳಿಸಿದರು.
ತಾಲೂಕಿನಾದ್ಯಂತ ಬಾರ್ ಮತ್ತು ರೆಸ್ಟೋರೆಂಟ್‌ಗಳು ನಿಯಮಬಾಹಿರವಾಗಿ ತಮಗಿಷ್ಟ ಬಂದ ಸಮಯದಲ್ಲಿ ಬಾಗಿಲು ತೆರೆದಿರುತ್ತವೆ. ಅವುಗಳ ಬಗ್ಗೆ ಪೊಲೀಸರು ಗಮನ ಹರಿಸುವುದಿಲ್ಲ. ಕೂಡಲೇ ಈ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು. ಹೊಸೂರು ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಆರ್.ಮಧುಚಂದ್ರ ಇದ್ದರು.
ಸಂಚಾರ ನಿಯಮ ಪಾಲಿಸಿದಲ್ಲಿ ಅಪಘಾತ ನಿಯಂತ್ರಣ
ಹುಣಸೂರು: ಅತಿವೇಗದ ಚಾಲನೆ ಬಿಟ್ಟು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಅಪಘಾತಗಳನ್ನು ನಿಯಂತ್ರಿಸಬಹುದು ಎಂದು ಬಿಳಿಕೆರೆ ಠಾಣೆಯ ಎಸ್‌ಐ ಉದಯರವಿ ಹೇಳಿದರು. ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಬಿಳಿಕೆರೆ ವ್ಯಾಪ್ತಿಯಲ್ಲಿರುವ ಆಟೋ ಚಾಲಕರಿಗೆ ಸಂಚಾರ ನಿಯಮಗಳು ಪಾಲನೆ ಕುರಿತ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ರಸ್ತೆಯಲ್ಲಿ ಸಂಭವಿಸುವ ಅಪಘಾತಗಳಿಗೆ ಕೇವಲ ರಸ್ತೆಯಲ್ಲಿನ ಹಳ್ಳಕೊಳ್ಳಗಳು ಮಾತ್ರ ಕಾರಣವೆನ್ನವುದು ಎಲ್ಲ ಚಾಲಕರ ಸಹಜ ಮಾತು. ಆದರೆ ಚಾಲನೆ ಸಂದರ್ಭದಲ್ಲಿ ಚಾಲಕರು ತಮ್ಮಿಂದಾಗುವ ತಪ್ಪುಗಳನ್ನು ತಿದ್ದಿಕೊಂಡರೆ ಸಂಭವಿಸಬಹುದಾದ ಅಪಘಾತಗಳನ್ನು ತಡೆದಂತಾಗುತ್ತದೆ. ಇದರಿಂದ ಅಮಾಯಕರ ಪ್ರಾಣ ಉಳಿಯುತ್ತದೆ ಎಂದರು. ಇದೇ ವೇಳೆ ಮುಖ್ಯರಸ್ತೆಗಳಲ್ಲಿ ಸಂಚರಿಸುವಾಗ ಪಾಲಿಸಬೇಕಾದ ಸಂಚಾರ ನಿಯಮಗಳ ಕುರಿತು ಠಾಣೆಯ ಮುಂಭಾಗದ ವಿಶಾಲ ಮೈದಾನದಲ್ಲಿ ಅರಿವು ಮೂಡಿಸಲಾಯಿತು. ಠಾಣೆಯ ಸಿಬ್ಬಂದಿ, ಆಟೋ ಮಾಲೀಕರು ಹಾಗೂ ಚಾಲಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.