ಮೈಸೂರು

ವೀರಪ್ಪನ್ ಸಹಚರರಿಗೆ ಜೀವದಾನ; ಅಸಮಾಧಾನ

Published On :

ಮೈಸೂರು: ಪಾಲಾರ್ ನೆಲಬಾಂಬ್ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸುತ್ತಿರುವ ವೀರಪ್ಪನ್ ಸಹಚರರಿಗೆ ಜೀವದಾನ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರ ಕೂಡಲೇ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ವೀರಪ್ಪನ್ನಿಂದ ಹತ್ಯೆಯಾಗಿದ್ದ ಎಸ್ಐ ಶಕೀಲ್ ಅಹಮ್ಮದ್ ಅವರ ಸಹೋದರ ಜಮೀಲ್ ಅಹಮ್ಮದ್ ಒತ್ತಾಯಿಸಿದ್ದಾರೆ.
ವಿವಿಧ ಪ್ರಕರಣಗಳಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ಹದಿನೈದು ಮಂದಿ ಅಪರಾಧಿಗಳ ಕ್ಷಮಾದಾನ ಅರ್ಜಿ ಸಕಾಲದಲ್ಲಿ ವಿಲೇವಾರಿಯಾಗಿಲ್ಲ ಎಂಬ ಕಾರಣಕ್ಕೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇದರಲ್ಲಿ ವೀರಪ್ಪನ್ ಸಹಚರರಾದ ಮೀಸೆಕಾರ ಮಾದಯ್ಯ, ಬಿಲ್ವೆಂದ್ರ, ಜ್ಞಾನ ಪ್ರಕಾಶ್, ಸೈಮನ್ ಅವರಿಗೆ ಜೀವದಾನ ನೀಡಿರುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಇಲ್ಲದವರಿಗೆ ಅನುಕಂಪ ನೀಡಬಾರದು. ಪಾಲಾರ್ ನೆಲಬಾಂಬ್ ಸ್ಫೋಟದಲ್ಲಿ ಅಸುನೀಗಿದ ಸುಮಾರು 20ಕ್ಕೂ ಹೆಚ್ಚು ಮಂದಿ ಪೊಲೀಸರು, ವೀರಪ್ಪನ್ನಿಂದ ಹತ್ಯೆಯಾದ ದಕ್ಷ, ನಿಷ್ಠಾವಂತ ಅಧಿಕಾರಿಗಳ ಕುಟುಂಬಗಳಿಗೆ ಈ ತೀರ್ಪು ಅನ್ಯಾಯ ಮಾಡಿದೆ. ರಾಜ್ಯದ ಹಿತಾಸಕ್ತಿಯಿಂದ ಸರ್ಕಾರಗಳು ಕೂಡಲೇ ಅಫಿಡವಿಟ್ ಸಲ್ಲಿಸಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ವರ್ಷ ಪಂಜಾಬ್ನ ಬುಲ್ಲಾರ್ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕ್ಷಮಾದಾನ ಅರ್ಜಿ ವಿಳಂಬವಾಗಿದೆ ಎಂಬ ಕಾರಣಕ್ಕೆ ಜೀವದಾನ ನೀಡಲು ಸಾಧ್ಯವಿಲ್ಲ ಎಂದಿತ್ತು. ಈಗ ವೀರಪ್ಪನ್ ಸಹಚರರಿಗೆ ಜೀವದಾನ ನೀಡುವ ಮೂಲಕ ಇಬ್ಬಂದಿ ನೀತಿ ಅನುಸರಿಸಿದೆ. ಜೈಲುವಾಸ ಅನುಭವಿಸುತ್ತಿರುವವರೆಲ್ಲ ಎಷ್ಟೆಲ್ಲ ಕಷ್ಟ ನೀಡಿದ್ದಾರೆ ಎಂಬುದು ನಮ್ಮಂತವರಿಗೆ ಗೊತ್ತು. ನಮ್ಮ ಸಹೋದರನನ್ನು ಕಳೆದುಕೊಂಡಿರುವ ನಾವು ನೋವು ತುಂಬಾ ಅನುಭವಿಸಿದ್ದೇವೆ. ಆದ್ದರಿಂದ ಯಾವುದೇ ಕಾರಣಕ್ಕೂ ಅನುಕಂಪ ತೋರಿಸಬಾರದು ಎಂದೂ ಅವರು ಮನವಿ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.