253 ಜೀತ ವಿಮುಕ್ತರ ಪುನರ್ವಸತಿಗೆ ಕ್ರಮ
ಟಿ ಅಂಶಿ ಪ್ರಸನ್ನಕುಮಾರ್
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪತ್ತೆಯಾಗಿರುವ 253 ಜೀತ ವಿಮುಕ್ತರ ಪುನರ್ವಸತಿಗೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.
ಡಾ. ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ವರದಿಯ ಪ್ರಕಾರ, ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು ಎಂಬ ಹಣೆಪಟ್ಟಿ ಇರುವ ಎಚ್.ಡಿ. ಕೋಟೆ ತಾಲೂಕಿನಲ್ಲಿ ಈ ಎಲ್ಲಾ 253 ಪ್ರಕರಣಗಳು ಪತ್ತೆಯಾಗಿವೆ. ಈ ತಾಲೂಕಿನಲ್ಲಿ ದಲಿತರು, ಗಿರಿಜನರು, ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಾರೆ. ತಾಲೂಕು 2004ರವರೆಗೆ ಪ.ಜಾತಿಯ ಮೀಸಲು ವಿಧಾನಸಭಾ ಕ್ಷೇತ್ರವಾಗಿತ್ತು. 2008ರಿಂದ ಪ. ವರ್ಗದ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಗಿದೆ.
ತಾಲೂಕಿನ ಹೆಚ್ಚು ಮಂದೆ ಜೀವನೋಪಾಯಕ್ಕಾಗಿ ಕೂಲಿ ಅರಸಿ, ಕೊಡಗು, ಪಕ್ಕದ ಕೇರಳದ ವಯನಾಡು, ಮಾನಂದವಾಡಿ ಮೊದಲಾದ ಕಡೆ ಹೋಗುತ್ತಾರೆ. ಇದರಿಂದ ಜೀತ ಸಮಸ್ಯೆ ಉಳಿದುಕೊಂಡಿದೆ.
2 ವರ್ಷ ಸಹಾಯಧನ: ಅಲ್ಲಿನ ಜೀವಿಕ(ಜೀತ ವಿಮುಕ್ತ ಕರ್ನಾಟಕ) ಸಂಘಟನೆ ಕಳೆದ ಹತ್ತಾರು ವರ್ಷಗಳಿಂದಲೂ ಈ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡುತ್ತಾ, ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆಯುತ್ತಾ ಬಂದಿದೆ.
ಜೀತ ಕಾರ್ಮಿಕರನ್ನು ಜೀತ ಪದ್ಧತಿಯಿಂದ ಬಿಡುಗಡೆಗೊಳಿಸಿದ ನಂತರ ಅವರಿಗೆ ಕನಿಷ್ಠ ಆರ್ಥಿಕ ಸವಲತ್ತು ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜೀತ ವಿಮುಕ್ತರ ಪುನರ್ವಸತಿ ಸಹಾಯಧನ ಎಂಬ ಯೋಜನೆಯನ್ನು ರೂಪಿಸಿ, 2006ರ ಜ.21ರಿಂದ ಜಾರಿ ಮಾಡಿದೆ. ಇದರ ಪ್ರಕಾರ, ಜೀತಪದ್ಧತಿಯಿಂದ ಬಿಡುಗಡೆಗೊಳಿಸುವ ರಾಜ್ಯದ ಪ್ರತಿ ಜೀತ ಕಾರ್ಮಿಕನಿಗೆ ಮಾಹೆಯಾನ 300 ರು.ನಂತೆ ಎರಡು ವರ್ಷ ಸಹಾಯಧನ ನೀಡಬೇಕಾಗುತ್ತದೆ.
18,21,600 ಬಿಡುಗಡೆ: ಹುಣಸೂರು ಉಪ ವಿಭಾಗಾಧಿಕಾರಿಯು ಎಚ್.ಡಿ. ಕೋಟೆ ತಾಲೂಕಿನಲ್ಲಿ ಸಮೀಕ್ಷೆ ನಡೆಸಿ, ನೀಡಿದ ವರದಿ ಪ್ರಕಾರ, 253 ಮಂದಿಗೆ 2011ರ ಅ.31ರಂದು ಜೀತ ವಿಮುಕ್ತ ಪತ್ರಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಗೋಪಾಲ್ ಅವರು ರಾಜ್ಯ ಸರ್ಕಾರಕ್ಕೆ ಪುನರ್ವಸತಿ ಸಹಾಯಧನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ರಾಜ್ಯ ಸರ್ಕಾರ ಪ.ಜಾತಿಯ- 176, ಪ.ವರ್ಗದ- 36 ಹಾಗೂ ಸಾಮಾನ್ಯ ವರ್ಗದ- 41 ಮಂದಿಗೆ ಎರಡು ವರ್ಷ ತಲಾ 300 ರು.ಗಳಂತೆ ಮಾಸಾಶನ ನೀಡಲು 18,21,600 ರು. ಬಿಡುಗಡೆ ಮಾಡಿದೆ.
ನಿವೇಶನ ಮಂಜೂರು: ಈ ಸಹಾಯಧನವನ್ನು ಜೀತ ವಿಮಕ್ತರಿಗೆ 2011ರ ನವೆಂಬರ್ನಿಂದ 2013ರ ಅಕ್ಟೋಬರ್ ಅವಧಿಗೆ ನೀಡಲಾಗುವುದು. ಅಲ್ಲದೇ ಆಯಾ ಗ್ರಾಪಂವತಿಯಿಂದ ತಲಾ 1000 ಕೊಡಿಸಲಾಗಿದೆ.
ಇದೀಗ ಅವರು ಮತ್ತೆ ಜೀತಕ್ಕೆ ಹೋಗದಂತೆ ತಡೆಯಲು ಅಗತ್ಯವಿರುವ ತರಬೇತಿ ನೀಡಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಸಣ್ಣಪುಟ್ಟ ವ್ಯಾಪಾರ ಮಾಡಲು ಕೇಂದ್ರ ಸರ್ಕಾರದಿಂದ ತಲಾ 20,000 ರು. ಪರಿಹಾರ ನೀಡುವಂತೆ ಶಿಫಾರಸು ಮಾಡಲಾಗಿದೆ. ನಿವೇಶನ ಇರುವವರಿಗೆ ವಿವಿಧ ವಸತಿ ಯೋಜನೆಗಳಲ್ಲಿ ಮನೆನಿರ್ಮಾಣಕ್ಕೆ ಅವಕಾಶ ನೀಡಲಾಗುವುದು. ನಿವೇಶನ ಇಲ್ಲದವರಿಗೆ ನಿವೇಶನ ಮಂಜೂರು ಮಾಡಲಾಗುವುದು ಎಂದು ಜಿಪಂ ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

