ಈಜುಗೊಳ ನಿರ್ಮಾಣ ಸೇರಿ ಹಲವು ನಿರ್ಣಯ
ಮೈಸೂರು: ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಈಜುಗೊಳ ನಿರ್ಮಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ನಗರ ಪಾಲಿಕೆಯ ಸಾಮಾನ್ಯ ಸಭೆ ಶುಕ್ರವಾರ ಕೈಗೊಂಡಿತು.
ಪಾಲಿಕೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ಬೂಟ್ ಆಧಾರದ ಮೇಲೆ ಈಜುಗೊಳ ನಿರ್ಮಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ತೀವ್ರ ಚರ್ಚೆ ನಡೆಯಿತು. ಬಳಿಕ ಬೂಟ್ ಆಧಾರದ ಮೇಲೆ ಕಾಮಗಾರಿ ಕೈಗೊಳ್ಳಬಹುದೆ ಎಂಬುದನ್ನು ಸರ್ಕಾರದಿಂದ ಸ್ಪಷ್ಟಪಡಿಸಿಕೊಂಡು ನಂತರ ಕಾಮಗಾರಿಯನ್ನು ಪಾಲಿಕೆ ವತಿಯಿಂದ ಇಲ್ಲವೆ, ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲು ಸಭೆ ತೀರ್ಮಾನಿಸಿತು. ಈ ವೇಳೆ ವಿಜಯನಗರ ಮತ್ತು ಎನ್.ಆರ್. ಮೊಹಲ್ಲಾದಲ್ಲಿಯೂ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯಿಸಿದರು.
ಪ್ರಸ್ತಾವನೆಯಲ್ಲಿ ಬೂಟ್ ಆಧಾರದ ಮೇಲೆ ಈಜುಗೊಳ ನಿರ್ಮಿಸಲು ಗ್ಲೋಬಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಮುಂದೆ ಬಂದಿದೆ ಎಂದು ನಮೂದಿಸಿದ್ದು ಚರ್ಚೆಗೆ ಗ್ರಾಸವಾಯಿತು. ಟೆಂಡರ್ ಕರೆಯದೆ ಏಕಾಏಕಿ ಯಾವುದೆ ಒಂದು ಸಂಸ್ಥೆಗೆ ಗುತ್ತಿಗೆ ನೀಡಲು ಬರುವುದಿಲ್ಲ ಎಂದು ಮಾಜಿ ಮೇಯರ್ ಅಯೂಬ್ಖಾನ್ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಮೇಯರ್ ಎಚ್.ಎನ್. ಶ್ರೀಕಂಠಯ್ಯ, ಸೂಕ್ತ ಷರತ್ತು ವಿಧಿಸಿ ಟೆಂಡರ್ ನೀಡಬೇಕು ಎಂದರು.
ವಾಣಿವಿಲಾಸ ಮೊಹಲ್ಲಾದ ಕಾಳಿದಾಸ ರಸ್ತೆಯ 20್ಢ10 ಅಡಿ ಜಾಗವನ್ನು ಕಸ್ತೂರ ಬಾ ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕಾ ಸಂಘಕ್ಕೆ ಬಾಡಿಗೆ ನೀಡಿರುವುದನ್ನು ಹಿಂದಕ್ಕೆ ಪಡೆಯಲು ಸಭೆ ತೀರ್ಮಾನಿಸಿತು. ಆ ಜಾಗದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ನಡೆಯದೆ ಐ ಕ್ಯಾಚ್ ಫ್ಯಾಷನ್ ಹೆಸರಿನ ಬಟ್ಟೆ ಅಂಗಡಿ ತೆರೆಯಲಾಗಿದೆ ಎಂದು ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯು ಛಾಯಾಚಿತ್ರ ಸಮೇತ ವರದಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಗ್ರಾಹಕರ ವೆಚ್ಚದಲ್ಲಿ ಸಂಪರ್ಕ: ನೀರು ವಿತರಣಾ ಜಾಲ ಕಾಮಗಾರಿ ಕೈಗೊಂಡಿರುವ ಜಸ್ಕೋ ಸಂಸ್ಥೆಯು ಗ್ರಾಹಕರ ಮನೆಯ ಕಾಂಪೌಂಡ್ ಬಳಿಯವರೆಗೆ ಮಾತ್ರ ನೀರಿನ ಸಂಪರ್ಕ ಕಲ್ಪಿಸಬೇಕು. ಅಲ್ಲಿಂದ ಗ್ರಾಹಕರು ತಮ್ಮ ಮನೆವರೆಗೆ ತಮ್ಮದೆ ವೆಚ್ಚದಲ್ಲಿ ಸಂಪರ್ಕ ಪಡೆಯಬೇಕು. ಆದರೆ ಗ್ರಾಹಕರು ಮಾಪಕ ತೆಗೆದು ಅಡ್ಡದಾರಿಯಲ್ಲಿ ನೀರಿನ ಸಂಪರ್ಕ ಪಡೆಯುತ್ತಿರುವುದರಿಂದ ಪಾಲಿಕೆಯಿಂದಲೆ ಪೈಪ್ಲೈನ್ ಅಳವಡಿಕೆಗೆ ಶೇ. 22.75 ಅಥವಾ ಶೇ. 7.25 ಅನುದಾನದಡಿ ಅವಕಾಶ ಕಲ್ಪಿಸಬೇಕು ಎಂಬ ಪ್ರಸ್ತಾವನೆ ತಳ್ಳಿ ಹಾಕಲಾಯಿತು.
ಅಲ್ಲದೆ ಮಾಜಿ ಸೈನಿಕರು ಮತ್ತು ಅವರ ಕುಟುಂಬದವರಿಗೆ ಆಸ್ತಿ ತೆರಿಗೆಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲು ಪಾಲಿಕೆ ತೀರ್ಮಾನಿಸಿದೆ. ಈ ಸಂಬಂಧ ಸರ್ಕಾರ ತಿದ್ದುಪಡಿ ತಂದಿರುವುದರಿಂದ ಕಳೆದ 2012ರ ಏಪ್ರಿಲ್ 28 ರಿಂದ ಅನ್ವಯವಾಗುವಂತೆ ಸರ್ಕಾರದ ಆದೇಶ ಜಾರಿಗೊಳಿಸಲಾಗಿದೆ.
ನಿರ್ಮಲ ನಗರ ಯೋಜನೆಯಡಿ ನಗರದ ಪ್ರಮುಖ ಸ್ಥಳಗಳಲ್ಲಿ ಪಾವತಿಸಿ ಉಪಯೋಗಿಸುವ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಆರೋಗ್ಯ ಸ್ಥಾಯಿ ಸಮಿತಿಗೆ ಹಿಂದಿರುಗಿಸಿ ನಗರದ ಇತರೆ ಬಡಾವಣೆಗಳಲ್ಲಿ ಅಗತ್ಯವಿರುವ ಶೌಚಗೃಹಗಳ ಸಂಖ್ಯೆಯನ್ನು ಸೇರಿಸಿ ಹೊಸ ಪಟ್ಟಿ ಸಿದ್ಧಪಡಿಸಲು ಸಭೆ ತೀರ್ಮಾನಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

