ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಿ
ಮೈಸೂರು: ಜೀತದಾಳುಗಳಿಗೆ ಸ್ಥಳದಲ್ಲಿಯೇ ಬಿಡುಗಡೆ ಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು.
ಹುಣಸೂರು ಉಪ ವಿಭಾಗದಲ್ಲಿ ಯಾವುದೇ ಜೀತದಾಳುಗಳು ಇಲ್ಲವೆಂದು ಉಪ ವಿಭಾಗಾಧಿಕಾರಿ ವಿನುತಾಪ್ರಿಯಾ ಅವರು ನೀಡಿರುವ ವರದಿಯನ್ನು ಹರಿದು ಎಸೆಯಬೇಕು. ಜೀತ ಕಾನೂನು ಮತ್ತು ಎಸ್.ಆರ್. ಶಂಕರನ್ ಮಾರ್ಗದರ್ಶನದಲ್ಲಿ ಎಚ್.ಡಿ. ಕೋಟೆ ಮತ್ತು ಹುಣಸೂರು ತಾಲೂಕಿನ ಪ್ರತಿ ಹಳ್ಳಿಗಳಿಗೂ ತೆರಳಿ ಗ್ರಾಮಸ್ಥರ ಸಮಕ್ಷಮದಲ್ಲಿ ತನಿಖೆ ನಡೆಸಿರುವ ವರದಿಯನ್ನು ಅಂತಿಮವೆಂದು ಪರಿಗಣಿಸಬೇಕು ಎಂದು ಅವರು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.
ಜೀತ ಕಾನೂನಿನ ಪ್ರಕಾರ ಎಸಿ ಅವರು ವರದಿಯನ್ನು ಅಂತಿಮಗೊಳಿಸಬೇಕಾದರೆ ಜಾಗೃತ ಸಮಿತಿ ಸಭೆ ಕರೆದು ಚರ್ಚಿಸಿ ನಂತರ ತೀರ್ಮಾನಿಸಬೇಕಿತ್ತು. ಆದರೆ, ಇವರು ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಜೀತ ಕಾನೂನು ಉಲ್ಲಂಘನೆಯಾಗಿದೆ. ಎಸಿ ವಿನುತಪ್ರಿಯಾ ಅವರು ಮಾಲೀಕರ ಆಮಿಷಕ್ಕೊಳಗಾಗಿ ಅವರ ಪರವಾದ ನ್ಯಾಯ ಸಮ್ಮತವಲ್ಲದ ವರದಿ ನೀಡಿದ್ದಾರೆ ಎಂದು ದೂರಿದರು.
ಜೀತ ಪದ್ಧತಿ ಜೀವಂತವಿರಲು ವಿನುತಪ್ರಿಯಾ ಅವರು ಪರೋಕ್ಷವಾಗಿ ಕೆಲಸ ಮಾಡಿದ್ದಾರೆ. ಅವರು ನೀಡಿರುವ ವರದಿ ಪರಿಗಣಿಸಬಾರದು. ತನಿಖಾ ತಂಡದ ವರದಿಯನ್ನೇ ಅಂತಿಮ ಎಂದು ಪರಿಗಣಿಸಿ ಕೂಡಲೇ ಎಚ್.ಡಿ. ಕೋಟೆಯ 356 ಮತ್ತು ಹುಣಸೂರಿನ 162 ಮಂದಿಗೆ ಬಿಡುಗಡೆ ಪತ್ರ ನೀಡಬೇಕು. ಜಿಲ್ಲೆಯಾದ್ಯಂತ ಮರು ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೆಲವು ಗ್ರಾಮಗಳಲ್ಲಿ ಜಿತದಾಳುಗಳ ತನಿಖೆಯಲ್ಲಿ ಈಗಾಗಲೇ 28 ಮಂದಿ ಜೀತದಾಳು ಎಂಬುದು ದೃಢಪಟ್ಟಿದೆ. ಇವರಿಗೂ ಕೂಡಲೇ ಬಿಡುಗಡೆ ಪತ್ರ ನೀಡಿ, ತಾಲೂಕಿನಾದ್ಯಂತ ಸಮಗ್ರ ತನಿಖೆ ಮಾಡಬೇಕು. ಕೆ.ಆರ್. ನಗರ ತಾಲೂಕಿನಲ್ಲೂ ಜಿತದಾಳುಗಳ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಜೀವಿಕ ರಾಜ್ಯ ಸಂಘಟನಾ ಸಂಚಾಲಕ ಉಮೇಶ್, ಜಿಲ್ಲಾ ಸಂಚಾಲಕ ಬಸವರಾಜು, ತಾಲೂಕು ಸಂಚಾಲಕ ಚಂದ್ರಶೇಖರಮೂರ್ತಿ, ಶಿವಣ್ಣ, ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ, ಮುಖಂಡರಾದ ಶಿವರಾಜು, ಮಹದೇವ್, ವೆಂಕಟೇಶ್, ಶಿವಣ್ಣ, ನಾಗಮ್ಮ, ಕೆಂಪಮಣಿ, ಸಿದ್ದರಾಜು, ಸಿದ್ದರಾಮಯ್ಯ, ಗೋಪಾಲಯ್ಯ, ಜಯಮ್ಮ, ತೋಳಸಮ್ಮ ಇದ್ದರು.
ಸುತ್ತೂರು ಜಾತ್ರೆ: ಪ್ಲೆಕ್ಸ್ಗಳಿಗೆ ನಿರ್ಬಂಧ
ಸುತ್ತೂರು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.27 ರಿಂದ ಫೆ.1 ರವರೆಗೆ ನಡೆಯುವ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಜಾತ್ರೆಗೆ ಸಂಬಂಧಿಸಿದ ಪ್ಲೆಕ್ಸ್ಗಳನ್ನು ಮಾತ್ರ ಹಾಕಬೇಕೆಂದು ಜಾತ್ರಾ ಮಹೋತ್ಸವ ಸಮಿತಿಯ ಸಂಚಾಲಕ ಎನ್.ಶಿವಕುಮಾರಸ್ವಾಮಿ ಹೇಳಿದ್ದಾರೆ. ಶುಭಾಶಯ ಕೋರುವ ಅಥವಾ ವ್ಯಕ್ತಿಗಳ ಭಾವಚಿತ್ರಗಳನ್ನೊಳಗೊಂಡ ಫ್ಲೆಕ್ಸ್ಗಳನ್ನು ಹಾಕುವುದು ಸೂಕ್ತವಲ್ಲವೆಂದು ಸಮಿತಿ ತೀರ್ಮಾನಿಸಿದೆ.
ಪ್ರತಿಭಟನಾಕಾರರಿಗೆ ಮನವಿ
ಮೈಸೂರು: ನಿತ್ಯಾನಂದ ಸ್ವಾಮೀಜಿ ವಿರುದ್ಧ ಜ. 27ರ ಬೆಳಗ್ಗೆ 11ಕ್ಕೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳ ಬಯಸುವ ಕನ್ನಡ ಹೋರಾಟಗಾರರಿಗೆ ರಾಮನಗರಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಿದ್ದು, ಅಂದು ಬೆಳಗ್ಗೆ 9ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸೇರುವಂತೆ ಕರ್ನಾಟಕ ಜನಪರ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷೆ ಆರ್. ಮಧುಮತಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

