ಮೈಸೂರು

ಮಠಗಳ ವಿಷಯ ಬಿಡಿ, ಜ್ವಲಂತ ಸಮಸ್ಯೆ ಬಗೆಹರಿಸಿ: ಎಚ್ಡಿಕೆ

Published On :

ಮೈಸೂರು: ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಬೆಟ್ಟದಷ್ಟಿವೆ. ಅದು ಬಿಟ್ಟು ಸರ್ಕಾರ ಮಠಗಳ ವಿಚಾರ ಕೈಗೆತ್ತಿಕೊಂಡಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಬುಧವಾರ ಚಾಮುಂಡಿಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಆದರೂ ಮಠಗಳನ್ನು ನಿಯಂತ್ರಿಸುವುದು, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ. ಎತ್ತಿನಹೊಳೆ ಯೋಜನೆಗೆ ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕು. ಆದರೆ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗುತ್ತಿದೆ. ಅದನ್ನು ತಪ್ಪಿಸಲು ರಾಜ್ಯದ ಜನತೆಗೆ ಈಗ ಸುಸಂದರ್ಭ ಒದಗಿ ಬಂದಿದೆ. ಯುವಕರ ಉದ್ಯೋಗ ಮತ್ತು ವಲಸೆ ಬಗ್ಗೆ ತಲೆ ಕೆಡಸಿಕೊಳ್ಳದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈಗ ಯುವಕರ ಬಗೆಗಿನ ಜಾಹೀರಾತು ನೀಡತೊಡಗಿದೆ. ಕಳೆದೊಂದು ದಶಕದಿಂದ ಕೇಂದ್ರದ ಕಾಂಗ್ರೆಸ್ ಸರ್ಕಾರ ದೇಶದ ಭ್ರಷ್ಟತೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ಕಾಂಗ್ರೆಸ್ನ ಘೋಷಣೆಯಿಂದ ದೇಶಕ್ಕೆ ಒಳಿತಾಗಿಲ್ಲ ಎಂದರು.
ಮೋದಿ ಕಾಣದ ಭ್ರಷ್ಟಚಾರ: ಮತ್ತೊಂದೆಡೆ ಬಿಜೆಪಿ ನರೇಂದ್ರ ಮೋದಿ ಅಲೆಯನ್ನು ಎಬ್ಬಿಸುತ್ತಿದೆ. ಕಾಂಗ್ರೆಸ್ನ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮೋದಿಗೆ ಬಿಜೆಪಿಯ ಭ್ರಷ್ಟಾಚಾರ ಕಾಣಿಸುತ್ತಿಲ್ಲ. ಗುಜರಾತ್ ನರಮೇಧವನ್ನು ಅವರು ಮರೆತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು. ಇವರ ನಡವಳಿಕೆ ದೇಶಕ್ಕೆ ಮಾರಕವಾಗಿದೆ. ಆದ್ದರಿಂದ ಪ್ರಾದೇಶಿಕ ಪಕ್ಷಗಳು ಈಗ ಹೆಚ್ಚು ಜನಮನ್ನಣೆ ಗಳಿಸಲಾರಂಭಿಸಿವೆ ಎಂದರು.
ಈ ವೇಳೆ ಶಾಸಕ ಜಿ.ಟಿ. ದೇವೇಗೌಡ, ಮಾಜಿ ಶಾಸಕಿ ಸುನೀತ ವೀರಪ್ಪಗೌಡ, ಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್ ಇದ್ದರು.



ಜೆಡಿಎಸ್ನಿಂದ ಬೃಹತ್ ಬೈಕ್ ರ್ಯಾಲಿ

ಜೆಡಿಎಸ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಯುವ ಚೇತನ ಸಮಾವೇಶದ ಅಂಗವಾಗಿ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದ ತಂಡ ಬುಧವಾರ ಮೈಸೂರಿನಿಂದ ಬೆಂಗಳೂರಿಗೆ ಬೃಹತ್ ಬೈಕ್ ರ್ಯಾಲಿ ನಡೆಸಿತು.
ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ನಂತರ ಈ ರ್ಯಾಲಿಗೆ ಚಾಲನೆ ನೀಡಲಾಯಿತು. ಸುಮಾರು 600ಕ್ಕೂ ಹೆಚ್ಚು ಬೈಕ್ಗಳಲ್ಲಿ ಸಾವಿರಾರು ಕಾರ್ಯಕರ್ತರು ಜೆಡಿಎಸ್ ಪರ ಜಯ ಘೋಷ ಮೊಳಗಿಸಿದರು. ಬೆಳಗ್ಗೆ 6ಕ್ಕೆ ಆರಂಭವಾಗಬೇಕಿದ್ದ ರ್ಯಾಲಿ ಮೂರು ಗಂಟೆ ತಡವಾಗಿ ಆರಂಭವಾಯಿತು. ಬೆಳಗ್ಗೆ 9ರ ಸುಮಾರಿಗೆ ಕುಮಾರಸ್ವಾಮಿ ಅವರನ್ನು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಕಡೆಗೆ ಬೈಕ್ನಲ್ಲಿ ಕರೆ ತರಲಾಯಿತು.
ರ್ಯಾಲಿಯ ವೇಳೆ ಡೊಳ್ಳು ಕುಣಿತದ ಸದ್ದಿಗೆ ಮಹಿಳೆಯರೂ ಸೇರಿದಂತೆ ಹಲವು ಜೆಡಿಎಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.